ಬುಧವಾರ, ಆಗಸ್ಟ್ 12, 2020
21 °C

ವಿಶ್ಲೇಷಣೆ | ಸಾಹಿತ್ಯ ಪತ್ರಿಕೆ: ಬೇಡವಾದ ಕೂಸು

ಜಫ್ರಿ ಮುದಾಸ್ಸಿರ್‌ ನೊಫಿಲ್‌ Updated:

ಅಕ್ಷರ ಗಾತ್ರ : | |

Prajavani

ಅತ್ಯುತ್ಕೃಷ್ಟ ಹೂರಣ ಹೊಂದಿರುವ ಸಾಹಿತ್ಯ ಪತ್ರಿಕೆಗಳು ದೇಶದಲ್ಲೀಗ ಯಾರಿಗೂ ಬೇಡವಾದಂತಿದೆ. ನಿರಂತರವಾಗಿ ಅವುಗಳ ಬೇಡಿಕೆಯ ಪ್ರಮಾಣ ಕುಸಿಯುತ್ತಿದ್ದು, ಕೆಲವೇ ಕೆಲವು ಪತ್ರಿಕೆಗಳನ್ನು ಹೊರತುಪಡಿಸಿ ಮಿಕ್ಕವು ಸದ್ದಿಲ್ಲದೆ ಕಣ್ಮುಚ್ಚುತ್ತಿವೆ.

‘ಸಾಹಿತ್ಯ ಪತ್ರಿಕೆಗಳಿಗೆ ಚಂದಾದಾರರಾಗಲು ಬಹುತೇಕರು ಮನಸ್ಸು ಮಾಡುವುದೇ ಇಲ್ಲ. ಜಗತ್ತಿನಲ್ಲಿ ಈಗ ಶರವೇಗದಲ್ಲಿ ಕಣ್ಮರೆಯಾಗುತ್ತಿರುವ ಪತ್ರಿಕೆಗಳು ಇವಾಗಿವೆ. ಕೆಲವು ಪತ್ರಿಕೆಗಳಿಗೆ ನೂರು ವರ್ಷಗಳ ಇತಿಹಾಸವೇ ಇರಬಹುದು. ಆದರೆ, ಅವುಗಳು ಈಗ ಯಾರಿಗೂ ಬೇಡವಾಗಿವೆ’ ಎನ್ನುತ್ತಾರೆ ಲೇಖಕ ತಬೀಶ್‌ ಖೈರ್‌.

ಖೈರ್‌ ಅವರ ಈ ವಾದವನ್ನು ಹಿರಿಯ ಪತ್ರಕರ್ತ ಭಾಸ್ಕರ್‌ ರಾಯ್‌ ಅವರು ಒಪ್ಪುವುದಿಲ್ಲ. ‘ಸಾಹಿತ್ಯ ಪತ್ರಿಕೆಗಳಿಗೆ ಮತ್ತೆ ಉಜ್ವಲ ಭವಿಷ್ಯ ಸೃಷ್ಟಿಯಾಗುತ್ತಿದೆ. ಗಟ್ಟಿ ಹೂರಣವಿದ್ದರೆ ಅಂತಹ ಪತ್ರಿಕೆಗಳಿಗೆ ಬೇಡಿಕೆ ಇದ್ದೇ ಇದೆ. ನಮ್ಮ ‘ದಿ ಇಕ್ವೇಟರ್‌ ಲೈನ್‌’ ಪತ್ರಿಕೆಯೇ ಇದಕ್ಕೆ ಉದಾಹರಣೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

‘ಎಂಟು ವರ್ಷಗಳ ಹಿಂದೆ, ಅಂದರೆ 2012ರಲ್ಲಿ ಶುರುವಾದ ಈ ಪತ್ರಿಕೆಗೆ, ಆರಂಭದಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ, ಬೆಂಬಲ ಸಿಕ್ಕಿದೆ. ಯುವ ಮನಸ್ಸುಗಳ ಅಭಿವ್ಯಕ್ತಿಗೆ ಈ ಪತ್ರಿಕೆ ವೇದಿಕೆಯಾಗಿದೆ. ಹೌದು, ಜಾಹೀರಾತು ಆದಾಯವಿಲ್ಲದೆ ಕಷ್ಟ ಎದುರಿಸಿದ್ದಿದೆ. ಆದರೆ, ಭೌಗೋಳಿಕ ಮಿತಿಯನ್ನೂ ಮೀರಿ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಯುವ ಬರಹಗಾರರು ಪತ್ರಿಕೆಗೆ ಬರೆಯುತ್ತಿದ್ದಾರೆ. ಪತ್ರಿಕೆ ಎಲ್ಲರನ್ನೂ ತಲುಪುತ್ತಿದೆ’ ಎಂದು ಹೇಳುತ್ತಾರೆ.

ಒಂದೊಮ್ಮೆ ದೊಡ್ಡ ಓದುಗ ವಲಯವನ್ನು ಸೃಷ್ಟಿಸಿಕೊಂಡಿದ್ದ ‘ಸಿವಿಲ್‌ ಲೈನ್‌’ ಪತ್ರಿಕೆಯ ಪ್ರಕಾಶಕರಾಗಿದ್ದ ರವಿ ದಯಾಳ್‌ ಅವರು 2006ರಲ್ಲಿ ತೀರಿಹೋದ ಮೇಲೆ, ಆ ಪತ್ರಿಕೆ ಸಹ ಕಣ್ಮುಚ್ಚಿದೆ. ಫೋರ್ಡ್‌ ಫೌಂಡೇಷನ್‌ನಿಂದ ಧನಸಹಾಯವನ್ನೂ ಪಡೆಯುತ್ತಿದ್ದ ಅಂತರ ದೇವ್‌ ಸೇನ್‌ ಅವರ ‘ದಿ ಲಿಟಲ್‌ ಮ್ಯಾಗಜಿನ್‌’ ಸಹ ನಿಂತು ಹೋಗಿದೆ.

ಬೆಂಗಳೂರು ಲಿಟ್‌ ಫೆಸ್ಟ್‌ನ ಸಂಘಟಕರು ‘ಬೀನ್‌ಟೌನ್‌’ ಎಂಬ ಸಾಹಿತ್ಯ ಸಂಚಿಕೆಯನ್ನು ಹೊರತರುತ್ತಿದ್ದರು. ಅದು ಕೂಡ ಈಗ ನಿಂತಿದೆ. ‘ನಾವು ಹತ್ತು ಸಂಚಿಕೆಗಳನ್ನು ಹೊರತಂದೆವು. ಅತ್ಯದ್ಭುತ ಎನ್ನುವಂತಹ ಪ್ರತಿಕ್ರಿಯೆ ಕೂಡ ಸಿಕ್ಕಿತು. ಸಂಪಾದಕೀಯ ಮಂಡಳಿಯ ಪರವಾಗಿ ಹೇಳುವುದಾದರೆ ಇದೊಂದು ಯಶಸ್ವಿ ಪ್ರಯತ್ನ’ ಎಂದು ಹೇಳುತ್ತಾರೆ ‘ಬೀನ್‌ಟೌನ್‌’ನ ಸಂಪಾದಕಿಯಾಗಿದ್ದ ಶೈನಿ ಅಂತೋನಿ.

‘ಪತ್ರಿಕೆಯನ್ನು ಹೊರತರುವುದು ಅಷ್ಟು ಸುಲಭದ ಕೆಲಸವಲ್ಲ. ಲೇಖನಗಳನ್ನು ಬರೆಸುವುದು, ಪುಸ್ತಕಗಳ ವಿಮರ್ಶೆ ಮಾಡಿಸುವುದು, ಪತ್ರಿಕೆಯನ್ನು ಮುದ್ರಿಸಿ, ಚಂದಾದಾರರಿಗೆ ತಲುಪಿಸುವುದು ಸುಲಭದ ಕೆಲಸವಲ್ಲ. ನಮ್ಮಲ್ಲಿ ಇದೇ ಕೆಲಸಕ್ಕಾಗಿ ಮೀಸಲಾದ ಸಿಬ್ಬಂದಿ ಇಲ್ಲ ಮತ್ತು ಅದಕ್ಕಾಗಿ ಸಂಬಳ ಕೊಡುವ ವ್ಯವಸ್ಥೆ ಇಲ್ಲ. ಪುಸ್ತಕಪ್ರಿಯರು ಸೇರಿಕೊಂಡು ಈ ಕೆಲಸ ಮಾಡುತ್ತಿದ್ದರು. ಬರುಬರುತ್ತಾ ಪತ್ರಿಕೆ ನಡೆಸುವುದು ಕಷ್ಟವಾಗಿ ಬಂದ್‌ ಮಾಡಬೇಕಾಯಿತು’ ಎಂದು ಅವರು ವಿವರಿಸುತ್ತಾರೆ.

‘ಒಂದಿಲ್ಲ ಒಂದು ದಿನ ಮತ್ತೆ ಬೀನ್‌ಟೌನ್‌ ಶುರುವಾಗಲಿದೆ’ ಎಂದು ಶೈನಿ ವಿಶ್ವಾಸದಿಂದ ಹೇಳುತ್ತಾರೆ.

ಸಾಹಿತ್ಯೋತ್ಸವದ ಮೇಲೆ ಖೈರ್‌ ಅವರು ಬೇರೊಂದು ಬಗೆಯಲ್ಲಿ ಒಳನೋಟ ಬೀರುತ್ತಾರೆ. ‘ಸಾಹಿತ್ಯೋತ್ಸವಕ್ಕೆ ಬರುವವರಲ್ಲಿ ಹೆಚ್ಚಿನವರು ಪುಸ್ತಕಗಳಿಗಿಂತ ಊಟಕ್ಕೆ ಹೆಚ್ಚು ಖರ್ಚು ಮಾಡುತ್ತಾರೆ. ಸಾಹಿತ್ಯ ಪತ್ರಿಕೆಗಳೆಂದರೆ ಚಂದಾ ಮಾಡಿಸಲು ಬಹುತೇಕರು ಹಿಂದೇಟು ಹಾಕುತ್ತಾರೆ. ಬಂಗಾಳಿಯಂತಹ ಭಾಷೆಯನ್ನು ಹೊರತುಪಡಿಸಿದರೆ ಇದೊಂದು ಇತರ ಎಲ್ಲ ಭಾಷೆಗಳ ಸಾಂಸ್ಕೃತಿಕ ಬಿಕ್ಕಟ್ಟು’ ಎಂದು ಅವರು ವಿಶ್ಲೇಷಿಸುತ್ತಾರೆ.

ಕಣ್ಮುಚ್ಚುತ್ತಿರುವುದು ಏಕೆ?

ನೂರಾರು ವರ್ಷಗಳ ಕಾಲ ಜ್ಞಾನದ ಹೊನಲು ಹರಿಸಿದ ಪತ್ರಿಕೆಗಳು ಈಗ ಕಣ್ಮುಚ್ಚುತ್ತಿರುವುದು ಏಕೆ? ಸಾಹಿತ್ಯ ವಲಯದ ಹಲವು ದಿಗ್ಗಜರನ್ನು ಈ ಪ್ರಶ್ನೆ ಕಾಡಿದ್ದಿದೆ. ಆನ್‌ಲೈನ್‌ ಆವೃತ್ತಿಯಲ್ಲಿ ಎಲ್ಲರಿಗೂ ಕಂಟೆಂಟ್‌ ಓದುವ ಆತುರ. ಆದರೆ, ಪತ್ರಿಕೆಗೆ ದೇಣಿಗೆ ನೀಡಿ ಅಥವಾ ಚಂದಾದಾರರಾಗಿ ಎಂದರೆ ಯಾರೂ ಕಿವಿಗೊಡುವುದಿಲ್ಲ ಎನ್ನುವ ಕೊರಗು ಬಹುತೇಕ ಪತ್ರಿಕೆಗಳ ಪ್ರಕಾಶಕರದ್ದು. ‘ಪತ್ರಿಕೆಗಳನ್ನು ನಡೆಸುವ ನಮ್ಮ ತಂತ್ರಗಾರಿಕೆಯೇ ಸರಿಯಿಲ್ಲ. ಮಾರುಕಟ್ಟೆಯಲ್ಲಿ ಸಂಪೂರ್ಣ ಎಡವಿದ್ದೇವೆ. ಪ್ರತಿಭಾನ್ವಿತರ ಪಡೆ ಇದ್ದರೂ ಆದಾಯವನ್ನು ಕ್ರೋಡೀಕರಿಸಲು ವಿಫಲರಾಗಿದ್ದೇವೆ’ ಎನ್ನುತ್ತಾರೆ ರಾಯ್‌.

ಶುದ್ಧ ಸಾಹಿತ್ಯದ ಜತೆಗೆ ಆಧ್ಯಾತ್ಮಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಂಟೆಂಟ್‌ ಸಹ ಬೇಕೆನ್ನುವುದು ಮಾರುಕಟ್ಟೆ ಬಯಕೆ. ಅದನ್ನು ‘ದಿ ಇಕ್ವೇಟರ್‌ ಲೈನ್‌’ ಪೂರೈಸುತ್ತಾ ಬಂದಿದೆ. ಈ ಎರಡೂ ವಿಷಯಗಳಿಗೆ ಸಂಬಂಧಿಸಿದ ಪ್ರಬಂಧಗಳು, ಸಂದರ್ಶನಗಳು, ಕಥೆಗಳು ಪ್ರತೀ ಸಂಚಿಕೆಯಲ್ಲೂ ಇರುತ್ತವೆ. ಕೆಲವು ಸಾಹಿತ್ಯ ಪತ್ರಿಕೆಗಳು ಕಂಟೆಂಟ್‌ ಆಯ್ಕೆಯಲ್ಲೂ ವಿಫಲವಾಗಿವೆ ಎಂದು ಅವರು ಹೇಳುತ್ತಾರೆ.

ಕಳೆದ ವರ್ಷ ಬಾಲಾಕೋಟ್‌ ದಾಳಿ ಪ್ರಕರಣದ ನಂತರ ಭಾರತೀಯ ಉಪಖಂಡದಲ್ಲಿ ಯುದ್ಧದ ಕಾರ್ಮೋಡ ದಟ್ಟೈಸಿತ್ತು. ಆ ವೇಳೆ ‘ಇಕ್ವೇಟರ್‌’ನಲ್ಲಿ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಕಥೆಗಾರರು ಬರೆದ ಕಥೆಗಳು ಯುದ್ಧದ ವಿರುದ್ಧ ಆಶಯ ವ್ಯಕ್ತಪಡಿಸಿದ್ದವು. ಸಾಹಿತ್ಯ ವಲಯ ಈ ಸಂಚಿಕೆಯನ್ನು ಪ್ರೀತಿಯಿಂದ ಎತ್ತಿಕೊಂಡಿತ್ತು ಎಂಬ ವಿವರಣೆಯೂ ರಾಯ್‌ ಅವರಿಂದ ಸಿಗುತ್ತದೆ.

ಪಾಕಿಸ್ತಾನದ ಕಥೆಗಾರ್ತಿ ಶೇಬಾ ತರಾಜ್‌, ‘ಇನ್ನೊಂದು ದೇಶದ ಸಾಹಿತ್ಯ ಪತ್ರಿಕೆಯಲ್ಲಿ ಬರೆಯುವುದಕ್ಕಿಂತ ದೊಡ್ಡ ಗೌರವ ಬೇರೊಂದಿಲ್ಲ. ನನ್ನ ಕಥೆ ಭಾರತದ ಪತ್ರಿಕೆಯಲ್ಲಿ ಪ್ರಕಟವಾಗಿದ್ದು ತುಂಬಾ ಸಂತೋಷ ತಂದಿದೆ’ ಎಂದು ಹೇಳುತ್ತಾರೆ. ಪಾಕಿಸ್ತಾನದಲ್ಲೂ ಸಾಹಿತ್ಯ ಪತ್ರಿಕೆಗಳು ಅವಸಾನದ ಅಂಚಿನಲ್ಲಿರುವುದನ್ನು ಅವರು ದೃಢಪಡಿಸುತ್ತಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು