ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಟು, ಪತ್ಲು ಸೃಷ್ಟಿಸಿದ ಮಾಯಾಲೋಕ

Last Updated 11 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಭಾರತದವರ ಕೈಯಲ್ಲಿ ಸೃಷ್ಟಿಯಾಗಿ, ಮಕ್ಕಳ ಮನಸ್ಸನ್ನು ರಂಜಿಸುತ್ತಿರುವ ಕಾರ್ಟೂನ್‌ ಪಾತ್ರಗಳ ಸಾಲಿನಲ್ಲಿ ಮೋಟು ಮತ್ತು ಪತ್ಲು ಕೂಡ ಸೇರಿವೆ. ನಿಕಲೋಡಿಯನ್‌ ವಾಹಿನಿಗಾಗಿ ಮೋಟು ಪತ್ಲು ಕಥೆಯನ್ನು ಸೃಷ್ಟಿಸಿಕೊಟ್ಟಿದ್ದು ನೀರಜ್ ವಿಕ್ರಮ್. ಇದನ್ನು ಜನಪ್ರಿಯ ‘ಲಾಟ್‌ಪಾಟ್‌’ ಕಾಮಿಕ್ಸ್‌ ಆಧರಿಸಿ ಸೃಷ್ಟಿಸಲಾಗಿದೆ.

ಮಾಡರ್ನ್‌ ಸಿಟಿ ಎನ್ನುವ ಕಾಲ್ಪನಿಕ ನಗರದಲ್ಲಿ ವಾಸ ಮಾಡುವ ಮೋಟು ಮತ್ತು ಪತ್ಲು ಎನ್ನುವ ಇಬ್ಬರು ಸ್ನೇಹಿತರು ಈ ಕಥೆಯ ಕೇಂದ್ರಬಿಂದು. ಈ ಇಬ್ಬರು ಸ್ನೇಹಿತರ ದಿನಚರಿಯೇ ಇದರ ಕಥೆ. ಇಬ್ಬರೂ ಸ್ನೇಹಿತರು ಹೇಗೆ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತಾರೆ, ಅಲ್ಲಿಂದ ಹೇಗೆ ತಪ್ಪಿಸಿಕೊಳ್ಳುತ್ತಾರೆ ಎಂಬುದು ಕಥೆಯ ಮೂಲ ಅಂಶ. ಬಹುತೇಕ ಸಂದರ್ಭಗಳಲ್ಲಿ ಇವರು ಸಂಕಷ್ಟದಿಂದ ತಪ್ಪಿಸಿಕೊಳ್ಳುವುದು ಅದೃಷ್ಟದ ಬಲದಿಂದಲಂತೆ! ಸಾಂದರ್ಭಿಕವಾಗಿ ಇವರು ಸೃಷ್ಟಿಸುವ ಹಾಸ್ಯ ಪ್ರಸಂಗಗಳು, ಮಕ್ಕಳ ತುಟಿಯ ಮೇಲೆ ನಗುವಿನ ಗೆರೆ ಎಳೆಯುತ್ತವೆ.

ಮೋಟುಗೆ ಸಮೋಸಾಗಳು ಅಂದರೆ ಪಂಚಪ್ರಾಣ. ಅವುಗಳನ್ನು ಕದಿಯಲು ಕೂಡ ಆತ ಯತ್ನಿಸುವುದುಂಟು. ಇಬ್ಬರಲ್ಲಿ ಯಾವಾಗಲೂ ಸಮಸ್ಯೆ ಸೃಷ್ಟಿಸುವವ ಕೂಡ ಇದೇ ಮೋಟು. ಕದಿಯುವುದು, ಸಮಸ್ಯೆ ಉಂಟುಮಾಡುವುದರ ಜೊತೆಯಲ್ಲೇ, ಮೋಟುಗೆ ಇನ್ನೊಂದು ಗುಣವೂ ಇದೆ: ಅದು ಸ್ನೇಹ ಬೆಳೆಸುವುದು. ಪತ್ಲುವಿನ ದೇಹ ತುಸು ಸಪೂರ. ಈತನಿಗೆ ದಿನಪತ್ರಿಕೆಗಳು ಅಂದರೆ ಪಂಚಪ್ರಾಣ. ಸಮೋಸಾ ಅಂದರೆ ಆಗಿಬರುವುದಿಲ್ಲ. ಒಂದರ್ಥದಲ್ಲಿ ಮೋಟುಗೆ ವಿರುದ್ಧವಾದ ವ್ಯಕ್ತಿತ್ವ ಪತ್ಲುವದು.

ಇಬ್ಬರೂ ಸ್ನೇಹಿತರು ಸಮಸ್ಯೆಗೆ ಸಿಲುಕಿಕೊಂಡ ಸಂದರ್ಭಗಳಲ್ಲಿ ಪಾರುಮಾಡುವ ಕೆಲಸ ಪತ್ಲುವಿನದ್ದು. ಚಾಯ್‌ವಾಲಾ, ಬಾಕ್ಸರ್‌, ಜಾನ್‌ ಇವರೆಲ್ಲ ಈ ಕಾರ್ಟೂನ್‌ ಲೋಕದ ಖಳರು.

ಮೋಟು ಮತ್ತು ಪತ್ಲುವಿನ ಕಥೆಗಳು ಜನಪ್ರಿಯ ಆಗಿರುವುದು ಭಾರತದಲ್ಲಿ ಮಾತ್ರವೇ ಅಲ್ಲ. ಅವು ನಮ್ಮ ನೆರೆಯ ದೇಶಗಳಾದ ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ದೂರದ ಇಂಡೊನೇಷ್ಯಾ ಹಾಗೂ ವಿಯೆಟ್ನಾಂನಲ್ಲೂ ಕೂಡ ಮಕ್ಕಳ ಮನಸ್ಸನ್ನು ರಂಜಿಸಿವೆ.

ಇವರಿಬ್ಬರ ಕಥೆಗಳನ್ನು ಹೊಂದಿರುವ ನೂರಾರು ಕಥೆಗಳು ಸೃಷ್ಟಿಯಾಗಿವೆ. ಅಷ್ಟೇ ಅಲ್ಲ ಮೋಟು, ಪತ್ಲು ಹಾಗೂ ಅಲ್ಲಿನ ಪಾತ್ರಗಳನ್ನು ಇರಿಸಿಕೊಂಡು ಆ್ಯನಿಮೇಷನ್‌ ಸಿನಿಮಾಗಳು ಕೂಡ ಮೂಡಿಬಂದಿವೆ.

(ಆಧಾರ: ವಿವಿಧ ಮೂಲಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT