ಶುಕ್ರವಾರ, ಜೂನ್ 18, 2021
21 °C

ನಮ್ಮಲ್ಲೊಂದಿಷ್ಟು ಚೊಲುಟೆಕ ಸೇತುವೆಗಳು

ಚಂದ್ರಶೇಖರ್ ಕಾಕಾಲ್ Updated:

ಅಕ್ಷರ ಗಾತ್ರ : | |

ಚೊಲುಟೆಕ ಸೇತುವೆ

ಧುತ್ತನೆ ಎದುರಾದ ಸಮಸ್ಯೆಗೆ ಪರಿಹಾರವೊಂದನ್ನು ಕಂಡು ಹಿಡಿದಿದ್ದೇವೆ ಎಂದು ಬೀಗುವ ಹೊತ್ತಿಗೆ ಮೂಲ ಸಮಸ್ಯೆಯೇ ಬದಿಗೆ ಸರಿಯಬಹುದು. ಪರಿಹಾರವೇ ಹೊಸ ಸಮಸ್ಯೆಯನ್ನೂ ಹುಟ್ಟು ಹಾಕಬಹುದು. ಬಳಕೆಯಾಗದೆ ಉಳಿದ ಚೊಲುಟೆಕ ಸೇತುವೆ ನೆಪದಲ್ಲಿ ಹೀಗೊಂದು ಚಿಂತನೆ...

‘ಚೊಲುಟೆಕ ಸೇತುವೆಯ ಹೆಸರನ್ನು ಕೇಳಿದ್ದೀರಾ? ಮೊನ್ನೆ ಮೊನ್ನೆಯವರೆಗೂ ನಾನೂ ಕೇಳಿರಲಿಲ್ಲ’ ಎಂಬ ಸಾಲಿನಿಂದ ಪ್ರಾರಂಭವಾಗುವ ಲೇಖನವೊಂದು ಕಳೆದ ವಾರ ವಾಟ್ಸ್‌ಆ್ಯಪ್‌ನಲ್ಲಿ ಹರಿದುಬಂತು. ನಾನಂತೂ ಆ ಸೇತುವೆಯ ಹೆಸರನ್ನು ಕೇಳಿರಲಿಲ್ಲ. ಲೇಖನದ ಜೊತೆಗೇ ಬಂದ ಚಿತ್ರವನ್ನು ನೋಡಿದ ತಕ್ಷಣ ನನ್ನ ಮನಸ್ಸಿಗೆ ಅನಿಸಿದ್ದು, ಇದೊಂದು ಬೇಕಾದಾಗ ನದಿಯ ಮೇಲೆ ಎತ್ತಿಟ್ಟುಕೊಳ್ಳಬಹುದಾದ, ಮಿಲಿಟರಿ ಕಾರ್ಯಾಚರಣೆಯಲ್ಲಿ ಉಪಯೋಗಿಸುವ ಸೇತುವೆಯಿರಬೇಕು ಎಂದು. ಹಾಗೆಯೇ ಲೇಖನದ ಓದನ್ನು ಮುಂದುವರಿಸಿದೆ.

ಅದರ ಕಥೆ ಹೀಗಿದೆ: ಚಂಡಮಾರುತ ಮತ್ತು ಸುಂಟರಗಾಳಿ ಹೆಚ್ಚಿರುವ ಮಧ್ಯ ಅಮೆರಿಕದ ಹೊಂಡುರಾಸ್ ದೇಶದಲ್ಲಿ ಚೊಲುಟೆಕ ನದಿಗೆ 1998ರಲ್ಲಿ ಕಟ್ಟಿದ 484 ಮೀಟರ್ ಉದ್ದದ ಸೇತುವೆಯದು. ಚೊಲುಟೆಕ ನದಿಗೆ ಹೊಸ ಸೇತುವೆಯೊಂದನ್ನು ನಿರ್ಮಿಸುವ ಪ್ರಸ್ತಾಪ 1996ರಲ್ಲಿ ಬಂದಾಗ, ಎಂತಹ ಪ್ರತಿಕೂಲ ಹವಾಮಾನವನ್ನೂ ಎದುರಿಸಿ ನಿಲ್ಲುವಂತಹ ಗಟ್ಟಿಮುಟ್ಟಾದ ಸೇತುವೆ ಹೊಂದುವ ನಿರ್ಧಾರವನ್ನು ಆ ದೇಶ ತೆಗೆದುಕೊಂಡಿತ್ತು. ಜಪಾನಿನ ಕಂಪನಿಯೊಂದು ಅಂತಹ ಸೇತುವೆಯೊಂದನ್ನು ನಿರ್ಮಿಸಿಕೊಟ್ಟಿತು. ಚೊಲುಟೆಕ ನದಿಪಾತ್ರದ ಜನರ ಹೆಮ್ಮೆಯ ಪ್ರತೀಕವಾಗಿತ್ತು ಆ ಸೇತುವೆ.

ಆ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ‘ಮಿಚ್’ ಚಂಡಮಾರುತವು ಹೊಂಡುರಾಸ್ ದೇಶಕ್ಕೆ ಅಪ್ಪಳಿಸಿತು. ಆರು ತಿಂಗಳಲ್ಲಿ ಬೀಳುತ್ತಿದ್ದಷ್ಟು 75 ಇಂಚು ಪ್ರಮಾಣದಷ್ಟು ಮಳೆ ನಾಲ್ಕೇ ದಿನಗಳಲ್ಲಿ ಸುರಿಯಿತು. ಕಂಡು ಕೇಳರಿಯದ ವಿನಾಶ ಸಂಭವಿಸಿತು. ಚೊಲುಟೆಕ ನದಿ ಉಕ್ಕಿ ಹರಿದು ಎಲ್ಲೆಲ್ಲೂ ಪ್ರವಾಹ ಉಂಟಾಯಿತು. 7,000 ಜನ ಸಾವನ್ನಪ್ಪಿದರು ಮತ್ತು ಹೊಂಡುರಾಸ್‌ನ ಎಲ್ಲ ಸೇತುವೆಗಳೂ– ಒಂದನ್ನು ಮಾತ್ರ ಬಿಟ್ಟು– ನಾಶವಾಗಿದ್ದವು. ಚೊಲುಟೆಕ ನದಿಯ ಹೊಸ ಸೇತುವೆ ಸ್ವಲ್ಪವೂ ಮುಕ್ಕಾಗದೆ ಅಚಲವಾಗಿ ನಿಂತಿತ್ತು.

ವಿಪರ್ಯಾಸವೆಂದರೆ, ಅಚಲವಾಗಿ ನಿಂತ ಸೇತುವೆಯ ಎರಡೂ ಬದಿಯ ರಸ್ತೆಗಳೂ ಹೇಳಹೆಸರಿಲ್ಲದಂತೆ, ರಸ್ತೆಯ ಕುರುಹೂ ಇಲ್ಲದಂತೆ ಕೊಚ್ಚಿಕೊಂಡು ಹೋಗಿದ್ದವು. ಅಷ್ಟು ಸಾಲದೆಂಬಂತೆ ವಿಪರೀತ ಪ್ರವಾಹದ ನೀರಿನಿಂದಾಗಿ ನದಿಯು ಹೊಸ ಪಾತ್ರವೊಂದನ್ನು ಸೃಷ್ಟಿಸಿಕೊಂಡು, ಸೇತುವೆಯ ಕೆಳಗೆ ಹರಿಯದೆ ಪಕ್ಕದಲ್ಲಿ ಹರಿಯತೊಡಗಿತ್ತು. ಆಧುನಿಕ ತಂತ್ರಜ್ಞಾನದ ಪ್ರತೀಕವಾಗಿದ್ದ ಸೇತುವೆಯು ಗಟ್ಟಿಮುಟ್ಟಾಗಿ ನಿಂತಿತ್ತಾದರೂ ಅದು ಅತಂತ್ರವಾಗಿತ್ತು. ನಾಲ್ಕೇ ದಿನಗಳಲ್ಲಿ ನೀರಿಲ್ಲದ ಜಾಗಕ್ಕೆ ಸೇತುವೆಯಾಗಿ ಸಂಪರ್ಕ ಶೂನ್ಯವಾಗಿ ಪರಿವರ್ತಿತವಾಗಿತ್ತು.


ವಲಸೆ ಕಾರ್ಮಿಕರು

ನಿಜವಾಗಿ ನಾನು ಹೇಳಲೇಬೇಕೆಂದಿರುವುದು ಈ ಕಥೆಯನ್ನಲ್ಲ. ಇದೊಂದು ಸ್ವಾರಸ್ಯಕರ ಪೀಠಿಕೆಯಷ್ಟೆ. ಪ್ರಕೃತಿ ಮುನಿದರೆ, ವಿನಾಶ ಸಂಭವಿಸಿದರೆ, ಕಂಡು ಕೇಳರಿಯದ ವಿಪತ್ತು ಬಂದೊದಗಿದರೆ, ನಾವು ಆವಿಷ್ಕಾರ ಮಾಡಿದ ಪರಿಹಾರಕ್ಕೆ ಮೂಲವಾಗಿದ್ದ ಸಮಸ್ಯೆಯೇ ಬದಿಗೆ ಸರಿಯಬಹುದು. ಪರಿಹಾರವೇ ಹೊಸ ಸಮಸ್ಯೆಯನ್ನೂ ಹುಟ್ಟು ಹಾಕಬಹುದು. ನಮ್ಮ ಸುತ್ತಲೇ ಒಡಮೂಡುತ್ತಿರುವ  ದಿಗ್ಭ್ರಮೆ ಹುಟ್ಟಿಸುವ ಪರಿಕಲ್ಪನೆಗಳಿಗೆ ಇದೊಂದು ಮುನ್ನುಡಿಯಷ್ಟೆ.

1960ರ ದಶಕದಲ್ಲಿ ನಡೆದ ಹಸಿರುಕ್ರಾಂತಿಯಿಂದಾಗಿ ಭಾರತದಲ್ಲಿನ ಆಹಾರ ಧಾನ್ಯಗಳ ಉತ್ಪಾದನೆಯೇನೋ ಹೆಚ್ಚಾಯಿತು. ಹಸಿವಿನ ಸಮಸ್ಯೆಗೆ ನಾವು ಆ ಸಮಯದಲ್ಲಿ ಕಂಡುಕೊಂಡ ಪರಿಹಾರವೆಂದರೆ, ಹೆಚ್ಚು ಇಳುವರಿ ಕೊಡುವ ಆಮದಾದ ಬೀಜಗಳು ಮತ್ತು ಯಥೇಚ್ಛ ರಸಗೊಬ್ಬರದ ಬಳಕೆ. ತರಕಾರಿ, ಹಣ್ಣು ಹಂಪಲುಗಳನ್ನು ಬೆಳೆಯಲೂ ಇದೇ ಒಳಸುರಿಕೆ ಮತ್ತು ಕ್ರಿಮಿ, ಕೀಟ, ವೈರಸ್‌ಗಳ ನಿರ್ವಹಣೆಗಾಗಿ ರಾಸಾಯನಿಕಗಳ ಸಿಂಪಡಣೆ. ಹಸಿವಿನ ಸಮಸ್ಯೆಯನ್ನು ನೀಗಲು ಭಾರತ ತಕ್ಕಮಟ್ಟಿಗೆ ಯಶಸ್ವಿಯಾದರೂ ಅಧಿಕ ರಾಸಾಯನಿಕಗಳ ಸೇವನೆಯಿಂದಾಗಿ ಆರೋಗ್ಯದಲ್ಲಿನ ಏರುಪೇರುಗಳು ಸಾವಯವ ಕೃಷಿಯತ್ತ ಮತ್ತೆ ನಮ್ಮನ್ನು ಕೊಂಡೊಯ್ಯುತ್ತಿದ್ದರೆ, ಆಗಿನ ಹಸಿರು ಕ್ರಾಂತಿ ಪರಿಹಾರವೂ ಒಂದು ‘ಚೊಲುಟೆಕ ಸೇತುವೆ’ಯಾಗಿತ್ತು ಎಂದುಕೊಳ್ಳುವುದರಲ್ಲಿ ತಪ್ಪೇನು? 

ಹಳ್ಳಿಯ ಮೂಲದವನಾದ ನನಗೆ, ಕಳೆದ ಹತ್ತು ವರ್ಷಗಳಲ್ಲಿ ಪ್ರತೀ ಸಲ ಊರಿಗೆ ಹೋದಾಗಲೂ ಕೇಳಿ ಬರುತ್ತಿದ್ದ ಒಕ್ಕಣೆಯೆಂದರೆ ‘ಹಳ್ಳಿಗಳೆಲ್ಲಾ ವೃದ್ಧಾಶ್ರಮಗಳಾಗುತ್ತಿವೆ. ಯುವಕರೆಲ್ಲಾ ನೌಕರಿಗಾಗಿ ಪಟ್ಟಣ ಸೇರಿದ್ದಾರೆ, ಐಟಿ–ಬಿಟಿಯ ಸೆಳೆತ ಎಲ್ಲರನ್ನೂ ನಗರಗಳಿಗೆ ಕೊಂಡೊಯ್ದಿದೆ. ಕೂಲಿ ಮಾಡುವ ಯುವಕರಿಲ್ಲದೆ ಕೆಲಸ ಹಾಳು ಬಿದ್ದಿದೆ’ ಇತ್ಯಾದಿ. ಕೊರೊನಾ ಎಂಬ ಸೋಂಕು, ಚಂಡಮಾರುತವೊಂದು ನದಿಯ ಪಾತ್ರವನ್ನೇ ಬದಲಿಸಿ ಸೇತುವೆಯನ್ನು ನಿರರ್ಥಕಗೊಳಿಸಿದ ಮಾದರಿಯಲ್ಲಿ ಐಟಿ ಕಂಪನಿಗಳ ಕೆಲಸವನ್ನೇ ಕಚೇರಿಗಳಿಂದ ಮನೆಗೆ, ಮನೆಯಿಂದ ಊರಿಗೆ ವರ್ಗಾಯಿಸಿಬಿಟ್ಟಿತಲ್ಲ!

ವೃದ್ಧಾಶ್ರಮಗಳಾಗುತ್ತಿದ್ದ ಹಳ್ಳಿಗಳಲ್ಲಿ ಈಗ ಹೊಸ ಸಮಸ್ಯೆಗಳು ಶುರುವಾಗಿವೆ. ಮಲೆನಾಡಿನ ಹಳ್ಳಿಯ ಮನೆ ಮನೆಯಲ್ಲೂ 4ಜಿ ತರಂಗಗಳನ್ನು ಹಿಡಿದುಕೊಳ್ಳಲು ಆ್ಯಂಟೆನಾಗಳು ತಲೆಯೆತ್ತಿವೆ. ಬೂಸ್ಟರುಗಳು ಬಿಕರಿಯಾಗುತ್ತಿವೆ. ತಡೆರಹಿತ ವಿದ್ಯುತ್‌ಗಾಗಿ ಅಧಿಕ ಸಂಖ್ಯೆಯಲ್ಲಿ ಇನ್ವರ್ಟರ್ ಮತ್ತು ಬ್ಯಾಟರಿಗಳು ಮಾರಾಟವಾಗುತ್ತಿವೆ. ಜೀವನ ನಿಭಾಯಿಸಲು ಕೆಟ್ಟು ಪಟ್ಟಣ ಸೇರಿದ್ದ ‘ವಲಸೆ’ ಮಂದಿ ಹಿಮ್ಮುಖವಾಗಿ ನಡೆದಿದ್ದಾರೆ. ನರೇಗಾ ಯೋಜನೆಯಡಿ ನೋಂದಣಿ ಹೆಚ್ಚಾಗುತ್ತಿದೆ. ನಗರ ಕೇಂದ್ರಗಳಲ್ಲಿ ಉದ್ಯೋಗ ಸೃಷ್ಟಿಸಿ ನೌಕರಿಗಾಗಿ ಹಳ್ಳಿಗಳಿಂದ ಯುವಕರನ್ನು ಸೆಳೆಯುತ್ತಿದ್ದ ಸೇತುವೆಗಳಲ್ಲೀಗ ಬಿರುಕು ಕಾಣುತ್ತಿದೆ.


ನಗರದಲ್ಲಿರುವ ಉದ್ಯೋಗಾವಕಾಶಗಳು ಗ್ರಾಮಾಂತರ ಭಾಗದ ನಿರುದ್ಯೋಗ ಸಮಸ್ಯೆಗೆ ಪರಿಹಾರ ಎಂದುಕೊಂಡರೆ ಕೊರೊನಾ ಕಾರಣದಿಂದ ಹಳ್ಳಿಯ ಯುವಕರು ಮರುವಲಸೆ ಹೋಗಬೇಕಿದ್ದರಿಂದ ನಿರುದ್ಯೋಗ ಸಮಸ್ಯೆ ಮತ್ತೆ ದೊಡ್ಡದಾಗಿ ತಲೆ ಎತ್ತಿದೆ. ಚಿತ್ರ: ರಂಜು ಪಿ.

ಈ ಸಂದರ್ಭದಲ್ಲಿ ನನಗೆ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ‘ಗ್ರಾಮೀಣ ಪ್ರದೇಶಗಳಿಗೆ ನಗರ ಸೌಲಭ್ಯಗಳನ್ನು ಒದಗಿಸುವುದು’ (ಪುರ) ಎಂಬ ಪರಿಕಲ್ಪನೆಯ ಪ್ರಸ್ತುತತೆ ಕಣ್ಣಿಗೆ ಕಟ್ಟುತ್ತದೆ. ಭಾರತದಲ್ಲಿ ಗ್ರಾಮೀಣಾಭಿವೃದ್ಧಿಗೆ ಒಂದು ತಂತ್ರವಾಗಿದ್ದ ಈ ಕಲ್ಪನೆಯನ್ನು ಸಾಕಾರಗೊಳಿಸಿದ್ದರೆ, ಪ್ರತೀ ಮನೆಯಲ್ಲಿಯೂ ಆ್ಯಂಟೆನಾ ಎಬ್ಬಿಸುವ ಪರಿಸ್ಥಿತಿ ಈಗ ತಲೆದೋರುತ್ತಿರಲಿಲ್ಲ. ನಗರಗಳ ಹೊರಗೆ ಆರ್ಥಿಕ ಅವಕಾಶಗಳನ್ನು ಸೃಷ್ಟಿಸಲು ಗ್ರಾಮೀಣ ಕೇಂದ್ರಗಳಲ್ಲಿ ನಗರ ಮೂಲಸೌಕರ್ಯ ಮತ್ತು ಸೇವೆಗಳನ್ನು ಒದಗಿಸಬೇಕೆಂದು ಪುರ ಪ್ರಸ್ತಾಪಿಸಿತ್ತು. ರಸ್ತೆಗಳನ್ನು ಒದಗಿಸುವ ಮೂಲಕ ಭೌತಿಕ ಸಂಪರ್ಕ, ಸಂವಹನ ಜಾಲಗಳನ್ನು ಒದಗಿಸುವ ಮೂಲಕ ಎಲೆಕ್ಟ್ರಾನಿಕ್ ಸಂಪರ್ಕ, ವೃತ್ತಿಪರ ಮತ್ತು ತಾಂತ್ರಿಕ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಜ್ಞಾನ ಸಂಪರ್ಕವನ್ನು ಸಮಗ್ರ ರೀತಿಯಲ್ಲಿ ಮಾಡಬೇಕಾಗಿರುವುದರ ಕಲ್ಪನೆ ಇಂದಿಗೂ ಸರ್ಕಾರದ ಅಂಕಿಅಂಶಗಳಲ್ಲಿ ಬಿಂಬಿತವಾಗುತ್ತಿದೆಯೇ ಹೊರತು ಪರಿಣಾಮಕಾರಿಯಾದ ನಿದರ್ಶನಗಳಿಲ್ಲ. ನಗರಗಳ ಅಧಿಕ ಸಾಂದ್ರತೆಯು ರಸ್ತೆ, ನೀರು ಮತ್ತು ಸ್ವಚ್ಛ ಗಾಳಿಯಂತಹ ಮೂಲಸೌಕರ್ಯಗಳ ಮೇಲೆ ಹೊರೆಯುಂಟುಮಾಡಿ, ಕೊರೊನಾದಂತಹ ಪಿಡುಗು ಶೀಘ್ರವಾಗಿ ಪಸರಿಸಲು ದಾರಿ ಮಾಡಿಕೊಟ್ಟಿದೆಯೇ ವಿನಾ ನಗರ ಮತ್ತು ಹಳ್ಳಿಗಳ ನಡುವಿನ ಆರ್ಥಿಕ ಅಸಮತೋಲನವನ್ನು ನಿಭಾಯಿಸಲು ಎಳ್ಳಷ್ಟೂ ಸಹಕಾರಿಯಾಗಿಲ್ಲ. ಜಾರುತ್ತಿರುವ ಸಮಸ್ಯೆಗಳಿಗೆ ಹೊಸ ಸೇತುವೆಗಳು ತುರ್ತಾಗಿ ಬೇಕಾಗಿದೆ.

ಕೊರೊನಾ ಪರಿಣಾಮದಿಂದಾಗಿ ಬುಡಮೇಲಾದ ಮತ್ತೊಂದು ಪರಿಹಾರವೆಂದರೆ, ಕೌಶಲ ಅಭಿವೃದ್ಧಿಗಾಗಿ ಹುಟ್ಟಿಕೊಂಡ ತರಬೇತಿ ಕೇಂದ್ರಗಳು. ಅವುಗಳಲ್ಲಿ ಹೂಡಿದ ಬಂಡವಾಳ ಮತ್ತು ಮೀಸಲಿಟ್ಟ ಮೂಲಸೌಕರ್ಯಗಳು ನೆಲಕಚ್ಚಿವೆ. ಯಾವುದೇ ಶಾಖೆಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದವರನ್ನೂ ಪ್ರವೇಶ ಪರೀಕ್ಷೆಯ ಮೂಲಕ ನಿರ್ಧರಿಸಿ ಸೇರಿಸಿಕೊಂಡು ‘ಫ್ರೆಶರ್ಸ್ ಟ್ರೈನಿಂಗ್’ ನೀಡುತ್ತಿದ್ದ ಸೌಕರ್ಯಗಳು ಬಿಳಿಯಾನೆಗಳಾಗತೊಡಗಿವೆ. ಮನೆಬಿಟ್ಟು ಹೊರಡಲಾಗದ ಪರಿಸ್ಥಿತಿಯಲ್ಲಿ ಆನ್‌ಲೈನ್ ತರಬೇತಿಗಳು ಮುಂಚೂಣಿಗೆ ಬಂದು, ಹುಡುಗರಿಲ್ಲದ ಕ್ಲಾಸ್ ರೂಮುಗಳು ಏಕಾಏಕಿ ನದಿಯಿಲ್ಲದ ‘ಚೊಲುಟೆಕ’ ಸೇತುವೆಗಳಾಗಿವೆ. ಅಷ್ಟೇ ಅಲ್ಲದೆ, ಕ್ಲಾಸ್ ರೂಮುಗಳಲ್ಲಿ ಕಲಿತ ಜ್ಞಾನವು ಕೆಲಸಕ್ಕೆ ಬಾರದೆ, ನಿರಂತರ ಕಲಿಕೆಯೊಂದೇ ಜೀವನ ನಿಭಾಯಿಸಲು ಕೈ ಹಿಡಿಯುವ ಮಾರ್ಗ ಎಂಬುದು ಸಾಬೀತಾಗುತ್ತಿದೆ.

ಪ್ರಕೃತಿ ವಿಕೋಪದಿಂದ ಅಥವಾ ಮಾನವ ನಿರ್ಮಿತ ಎಡವಟ್ಟಿನಿಂದ ಸಮಸ್ಯೆಯೇ ಪಕ್ಕಕ್ಕೆ ಸರಿದು, ಪರಿಹಾರವೇ ಸಮಸ್ಯೆಯಾಗಿದ್ದ ಇನ್ನೊಂದು ಉದಾಹರಣೆ ಬೇಕೇ? 1935ರ ಸುಮಾರಿಗೆ ಆಸ್ಟ್ರೇಲಿಯಾದ ಕಬ್ಬಿನ ಗದ್ದೆಗಳಲ್ಲಿ ಹಾನಿ ಉಂಟು ಮಾಡುತ್ತಿದ್ದ ಜೀರುಂಡೆಗಳ ನಿಯಂತ್ರಣಕ್ಕಾಗಿ ದಕ್ಷಿಣ ಅಮೆರಿಕದಿಂದ ಒಂದು ಜಾತಿಯ ಕಪ್ಪೆಗಳನ್ನು ಆಮದು ಮಾಡಿಕೊಂಡು ಕಬ್ಬಿನ ಗದ್ದೆಗಳಲ್ಲಿ ಬಿಡಲಾಯಿತು. ಅತಿ ಶೀಘ್ರವಾಗಿ ಸಂತಾನಾಭಿವೃದ್ಧಿ ಮಾಡಿಕೊಂಡ ಈ ಹೊಸ ಕಪ್ಪೆಗಳ ಜೊಲ್ಲು ಮತ್ತು ಚರ್ಮ ಮನುಷ್ಯರಿಗಲ್ಲದೆ ಇತರ ಹಲವಾರು ಪ್ರಾಣಿ ಪ್ರಭೇದಗಳಿಗೂ ವಿಷಕಾರಿಯಾಗಿ ಪರಿಣಮಿಸಿದ್ದು, ಅವುಗಳನ್ನು ನಿಯಂತ್ರಿಸುವುದೇ ಆಸ್ಟ್ರೇಲಿಯಾ ಸರ್ಕಾರಕ್ಕೆ ಈಗ ಇನ್ನೊಂದು ತಲೆನೋವಾಗಿದೆ.

ಇತ್ತೀಚಿನ ವರದಿಯ ಪ್ರಕಾರ, ಆಸ್ಟ್ರೇಲಿಯಾ ಮೂಲದವೇ ಆದ ರಾಕಲಿ ಎಂಬ ನೀರಿಲಿಗಳು ಈ ಕಬ್ಬಿನ ತೋಟದ ಕಪ್ಪೆಗಳ ಚರ್ಮ ಮತ್ತು ಗ್ರಂಥಿಗಳಿಂದ ಅಪಾಯಕ್ಕೊಳಗಾಗದಂತೆ ಅವುಗಳ ಹೃದಯ ಮತ್ತು ಯಕೃತ್ತನ್ನು ತಿನ್ನಲು ಕಲಿತಿದ್ದು ಸಮಸ್ಯೆಗೆ ಹೊಸ ಪರಿಹಾರ ಹುಡುಕಿಕೊಡಬಲ್ಲದೆಂಬ ಭರವಸೆ ಮೂಡತೊಡಗಿದೆಯಂತೆ. ಪ್ರಕೃತಿಯಲ್ಲಿನ ವಿನಾಶಕಾರಿ ಬೆಳವಣಿಗೆಯ ಹತೋಟಿಗೆ ಪ್ರಕೃತಿಯೇ ಇನ್ನೊಂದು ಪರಿಹಾರ ಸೃಷ್ಟಿಸುತ್ತದೆ ಎಂಬ ಮಾತು ಸುಳ್ಳಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು