ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘಟ್ಟಿವಾಳಯ್ಯನ ವಚನ: ಕತ್ತಿಗೆ ಧರ್ಮಾಧರ್ಮಗಳ ಪರಿಚಯವೆ?

Last Updated 5 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಇರಿವ ಕೈದಿಂಗೆ ದಯೆ ಧರ್ಮದ ಮೊನೆಯುಂಟೆ?

ಕಾಳೋರಗನ ದಾಡೆಯಲ್ಲಿ ಅಮೃತದ ಸುಧೆಯುಂಟೆ?

ಕೂಟವ ಕೂಡಿ ಸಮಯನೊಂದಲ್ಲಿ ಅಜಾತನ ಬಲ್ಲರೆ?

ಎನಗೆ ನಿಮ್ಮೊಳಗಿನ್ನೇತರ ಮಾತು?

ವೇಷಧಾರಿಗಳೆಲ್ಲ ನಿಮ್ಮ ಕೂಟಕ್ಕೆ ಹೊರಗು

ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಮಾಣು

ಮುದ್ದಣ್ಣ ಎಂಬ ಪೂರ್ವನಾಮದ ಘಟ್ಟಿವಾಳಯ್ಯನ ವಚನವಿದು. 146 ವಚನಗಳನ್ನು ರಚಿಸಿರುವ ಈತನ ವ್ಯಕ್ತಿತ್ವದ ಹಿರಿಮೆಯ ಕುರಿತು ಬಸವಣ್ಣ, ಚೆನ್ನಬಸವಣ್ಣ, ಸಿದ್ಧರಾಮ ಮುಂತಾದವರು ಗುಣಗಾನ ಮಾಡಿದ್ದಾರೆ.

ನಡೆ, ನುಡಿ, ಅನುಭಾವ, ಆಚರಣೆ, ಅಭಿವ್ಯಕ್ತಿ – ಈ ಎಲ್ಲವುಗಳಲ್ಲೂ ಒಂದು ಗಟ್ಟಿಯಾದ ನಿಲುವನ್ನು ಸಾಧಿಸಿದ ಘಟ್ಟಿವಾಳಯ್ಯ ಶಿವಾನುಭವವನ್ನು ಸಾರುತ್ತ ನರ್ತನ ಕಾಯಕ ಮಾಡುತ್ತಿದ್ದ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎನ್ನುವುದು ಘಟ್ಟಿವಾಳಯ್ಯನ ಅಂಕಿತ ನಾಮ. ಕೇಳುವುದಕ್ಕೆ ವಿಚಿತ್ರವಾಗಿರುವ ಈ ಅಂಕಿತವು ತನ್ನ ನಕಾರಾತ್ಮಕ ನೆಲೆಯಲ್ಲಿಯೇ ಸಕಾರಾತ್ಮಕ ಅಪೇಕ್ಷೆಯನ್ನು ಪ್ರತಿಪಾದಿಸುತ್ತದೆ. ಪ್ರಸ್ತುತ ವಚನದಲ್ಲಿ ನಿರ್ಮಲ ಹೃದಯಗಳ ಹುಡುಕಾಟದ ಬಯಕೆ ವ್ಯಕ್ತವಾಗುತ್ತದೆ.

ಕೈದು ಎಂದರೆ ಕತ್ತಿ. ಅದರ ಗುಣ ಇರಿಯುವುದು. ಅದಕ್ಕೆ ದಯೆ-ಧರ್ಮಗಳ ಪರಿಚಯವಿರುವುದಿಲ್ಲ. ನಿರ್ದಯತೆಯೇ ಅದರ ಜೀವಾಳ. ಕಾಳೋರಗ ಎಂದರೆ ಕೃಷ್ಣಸರ್ಪ. ಅದರ ದವಡೆಯಲ್ಲಿ ಘೋರ ವಿಷ ತುಂಬಿಕೊಂಡಿರುತ್ತದೆ. ಹಾವಿನ ಹಲ್ಲಿನಲ್ಲಿ ಅಮೃತ ಸಿಗಲು ಸಾಧ್ಯವಿದೆಯೆ? ಅಜಾತ ಎಂದರೆ ಶಿವ. ಕೂಟವ ಕೂಡಿ ಎಂದರೆ ಸಹವಾಸ ಮಾಡಿ ಅಂತ. ಈ ವಚನದ ಮಟ್ಟಿಗೆ ಇದು ದುಷ್ಟರ ಸಂಗಾತವನ್ನು ಸೂಚಿಸುತ್ತದೆ. ಕೆಟ್ಟವರ ಒಡನಾಡಿ ವೇಳೆಯನ್ನು ವ್ಯರ್ಥಗೊಳಿಸಿದರೆ ಶಿವನು ಸಿಗುವುದಿಲ್ಲ. ಸಮಯನೊಂದಲ್ಲಿ ಎಂಬ ಶಬ್ದವನ್ನು ಎಷ್ಟು ಸುಂದರವಾಗಿ ಬಳಸಿದ್ದಾರೆ.

ಅಕಾರಣಗಳಲ್ಲಿ ತೊಡಗಿಕೊಂಡರೆ ಮನುಷ್ಯನ ಆಯುಷ್ಯದ ಅಮೂಲ್ಯ ವೇಳೆ ನಷ್ಟವಾಗುತ್ತದೆ. ಇಂತಹ ಹಾನಿಯಾದಾಗ ಸಮಯ ಅಪವ್ಯಯವಾಗುತ್ತದೆ. ಈ ಕುರಿತು ಘಟ್ಟಿವಾಳಯ್ಯನಿಗೆ ತುಂಬಾ ಕೋಪವಿದೆ. ಆದ್ದರಿಂದ ಆತ ನಿಮ್ಮೊಳಗಿನ್ನೇತರ ಮಾತು ಎಂದು ಬೈಯುತ್ತಾನೆ. ಅಂತರಂಗ-ಬಹಿರಂಗಗಳಲ್ಲಿ ಅಂತರವಿರುವವರನ್ನು ವೇಷಧಾರಿಗಳೆಂದು ಜರೆಯುತ್ತಾನೆ. ದ್ವಂದ್ವ ನಡವಳಿಕೆಯ ವೇಷಧಾರಿಗಳು ಶಿವನ ಕೂಟ, ಎಂದರೆ ಶರಣರ ಒಡನಾಟಕ್ಕೆ ಅರ್ಹರಲ್ಲ. ಅವರನ್ನು ಹೊರಗಿಡಬೇಕು ಎಂಬುದು ಆತನ ಅಭಿಮತ.

ಉತ್ತಮ ಬದುಕಿಗಾಗಿ ಹೇಗೆ ಉತ್ತಮರ ಒಡನಾಟ ಅತ್ಯವಶ್ಯವೋ ಹಾಗೆ ದುಷ್ಟರನ್ನು, ಕಪಟಿಗಳನ್ನು ದೂರವಿಡುವುದು ಅವಶ್ಯ. ಕೆಡಕನ್ನುಂಟು ಮಾಡುವ ಗುಣವಿರುವವರಿಂದ ಒಳಿತನ್ನು ಅಪೇಕ್ಷೆ ಮಾಡಲು ಸಾಧ್ಯವಿಲ್ಲ. ಹೇಗೆ ಆಯುಧದ ತುದಿಯಲ್ಲಿ ದಯೆಗೆ ಜಾಗವಿಲ್ಲವೋ, ಹಾವಿನ ಹಲ್ಲಿನಲ್ಲಿ ಅಮೃತವಿರಲಾರದೋ – ಹಾಗೆಯೇ ದುಷ್ಟರು ಒಳಿತನ್ನು ಮಾಡಲಾರರು. ಆದ್ದರಿಂದಲೇ ಅವರ ಸಹವಾಸ ಮಾಡಿದರೆ ಪರಮಾತ್ಮ ಸಿಗಲು ಸಾಧ್ಯವಿಲ್ಲ ಎನ್ನುವುದು ಘಟ್ಟಿವಾಳಯ್ಯನ ವಚನದಲ್ಲಿ ವ್ಯಕ್ತವಾಗಿರುವ ಭಾವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT