ಮಂಗಳವಾರ, ನವೆಂಬರ್ 29, 2022
27 °C

ಸಾಧನೆ: ಮಕ್ಕಳ ಸಾಹಿತ್ಯದ ಕೋಲ್ಮಿಂಚು ತಮ್ಮಣ್ಣ ಬೀಗಾರ

ಮಂಡಲಗಿರಿ ಪ್ರಸನ್ನ Updated:

ಅಕ್ಷರ ಗಾತ್ರ : | |

Prajavani

ಮಲೆನಾಡಿನ ಸೊಗಡನ್ನು, ಅದರ ಹಚ್ಚಹಸಿರಿನ ಹೊದಿಕೆಯನ್ನು ಯಾವುದೇ ಸಾಂಪ್ರದಾಯಿಕ, ನೀತಿಗಳ ಹಂಗಿಲ್ಲದೆ ಮಕ್ಕಳ ಸಾಹಿತ್ಯದಲ್ಲಿ ಕಟ್ಟಿಕೊಟ್ಟವರು ತಮ್ಮಣ್ಣ ಬೀಗಾರ. ಮಲೆನಾಡಿನ ಮಕ್ಕಳ ಬದುಕನ್ನು ವೈವಿಧ್ಯವಾಗಿ ಅರಳಿಸಿದ ಅವರನ್ನೀಗ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿ ಅರಸಿಕೊಂಡು ಬಂದಿದೆ...

‘ಶುದ್ಧವಾದ ಭಾಷೆ, ಕಾವ್ಯದ ಲಯಗಾರಿಕೆ, ಆರೋಗ್ಯವಂತ ದೃಷ್ಟಿಕೋನ, ಮಕ್ಕಳಿಗೆ ಪ್ರಿಯವಾಗುವ ಪರಿಸರ, ಪ್ರಾಣಿ, ಪಕ್ಷಿ ಪ್ರಪಂಚ, ಈ ಕಾರಣದಿಂದ ಮಕ್ಕಳ ಕಾವ್ಯದಲ್ಲಿ ಗಟ್ಟಿಯಾಗಿ ನಿಲ್ಲಬಲ್ಲ ಹೆಸರು....’ ಎಂದು ನಾಡಿನ ಹಿರಿಯ ಕವಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಕುರಿತು ಬಹಳ ಹಿಂದೆಯೆ ಹೇಳಿರುವುದು ಈಗ ನಿಜವೆನಿಸಿದೆ. ಬೀಗಾರ ಮಕ್ಕಳ ಕವಿ ಮಾತ್ರವಲ್ಲ, ಮಕ್ಕಳ ಕತೆಗಾರ, ಕಾದಂಬರಿಕಾರ, ಮಕ್ಕಳ ಸಾಹಿತ್ಯದ ಒಟ್ಟಾರೆ ಗಂಭೀರ ಬರಹಗಾರ ಎಂಬುದು ಸಾಬೀತಾಗಿದ್ದು, ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2022ನೇ ಸಾಲಿನ ಬಾಲ ಸಾಹಿತ್ಯ ಪ್ರಶಸ್ತಿ ದಕ್ಕಿದೆ. ಸದರಿ ಪ್ರಶಸ್ತಿ ಅವರ ‘ಬಾವಲಿ ಗುಹೆ’ ಕಾದಂಬರಿಗೆ ಒಲಿದಿದ್ದರೂ ಅವರ ಸಮಗ್ರ ಸಾಹಿತ್ಯ ಒಂದು ಮಾದರಿಯಾಗಿ ನಮ್ಮ ಮುಂದೆ ಕಣ್ಣಮುಂದೆ ನಿಲ್ಲುತ್ತದೆ.

ಮಕ್ಕಳ ಸಾಹಿತ್ಯದಲ್ಲಿ ಮಲೆನಾಡಿನ ಸೊಗಡನ್ನು, ಅದರ ಹಚ್ಚಹಸಿರಿನ ಹೊದಿಕೆಯನ್ನು ಯಾವುದೇ ಸಾಂಪ್ರದಾಯಿಕ, ನೀತಿಗಳ ಹಂಗಿಲ್ಲದೆ ಕಟ್ಟಿಕೊಟ್ಟವರು ಬೀಗಾರ. ಅವರು ಮೂಲತಃ ಉತ್ತರಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಬೀಗಾರ ಗ್ರಾಮದವರು (ಜನನ: ನವೆಂಬರ್‌ 22, 1959). ಶಿಕ್ಷಕರಾಗಿ 37 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದವರು. ಬೀಗಾರರದು ಪ್ರಕೃತಿಯ ಮಡಿಲಿನ ಪ್ರಶಾಂತ ಮನಸು. ತಮ್ಮ ಮಕ್ಕಳ ಕತೆ, ಕಾವ್ಯ, ಕಾದಂಬರಿ, ಮತ್ತಿತರ ಬರಹಗಳಲ್ಲಿ ಮಲೆನಾಡಿನ ಮಕ್ಕಳ ಬದುಕು ಮತ್ತು ಆ ಬದುಕಿನ ಚಿತ್ರಣಗಳನ್ನೇ ವೈವಿಧ್ಯವಾಗಿ ಅರಳಿಸಿದ ಸಶಕ್ತ ಬರವಣಿಗೆ ಅವರದು.

ನಿಸರ್ಗದಲ್ಲಿ ವಿಹರಿಸುವ, ಬೆಟ್ಟ-ಕಣಿವೆಗಳನ್ನು ಏರಿ ಇಳಿದ ಮಕ್ಕಳ ಖುಷಿ, ವಿನೋದ, ಹುಡುಗಾಟಿಕೆಗೆ ನೀರೆರೆಯುವ ಜೊತೆಗೆ ಅಲ್ಲಿನ ಗಂಭೀರ ಸಮಸ್ಯೆಗಳ ಕುರಿತು ಬೀಗಾರ ತಮ್ಮ ಬರಹಗಳಲ್ಲಿ ಚಿತ್ರಿಸಿದ್ದಾರೆ. ಜೊತೆಗೆ ಅಲ್ಲಿಯ ವೈರುಧ್ಯಗಳನ್ನು ಹೇಳಲು ಸಹ ಅವರು ಹಿಂಜರಿದಿಲ್ಲ. ಬೀಗಾರರ ಸಾಹಿತ್ಯ ಓದುವಾಗ ಭಾರತೀಯ ಇಂಗ್ಲಿಷ್ ಮಕ್ಕಳ ಸಾಹಿತ್ಯದ ರಸ್ಕಿನ್ ಬಾಂಡ್ ಮತ್ತು ಕನ್ನಡದವರೇ ಆದ ನಾ.ಡಿಸೋಜ, ಡಾ.ಆನಂದ ಪಾಟೀಲ ಅವರ ಬರಹಗಳು ನೆನಪಾಗುತ್ತವೆ. ಒಟ್ಟು 27 ಮಕ್ಕಳ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿರುವ ಬೀಗಾರರು ಆ ಪೈಕಿ ತಲಾ ಹತ್ತು ಕಾವ್ಯ ಸಂಕಲನ ಮತ್ತು ಕಥಾ ಸಂಕಲನ, ತಲಾ ಎರಡು ಮಕ್ಕಳ ಸುಲಲಿತ ಬರಹಗಳ ಸಂಕಲನ, ಕಾದಂಬರಿ, ಚಿತ್ರ ಸಂಪುಟ ಹಾಗೂ ಒಂದು ವ್ಯಕ್ತಿ ಚಿತ್ರ ಪ್ರಕಟಿಸಿದ್ದಾರೆ.

ಬೀಗಾರರ ಎರಡು ಕಾದಂಬರಿಗಳಲ್ಲಿ ಮೊದಲನೆಯದು ‘ಬಾವಲಿ ಗುಹೆ’ (2019). ಈ ಪುಟ್ಟ ಕಾದಂಬರಿಯಲ್ಲಿ ದೊಡ್ಡ ಸಂದೇಶ ನೀಡಿರುವುದು ಹೆಗ್ಗಳಿಕೆ. ಊರಿನ ಗುಡ್ಡಗಳಲ್ಲಿ ಕಲ್ಲು ಒಡೆದು ಸಾಗಿಸುವ ಗಣಿಗಾರಿಕೆ ಸ್ಫೋಟದಿಂದಾಗಿ ಊರಿಗೆ ಅನಾಹುತವಾಗುತ್ತಿದೆ, ಬಂಡೆಗಳ ಒಡೆಯುವಿಕೆ ಅವಿರತವಾಗಿ ನಡೆದಿದೆ. ಮರಗಳನ್ನು ಉರುಳಿಸಲಾಗುತ್ತಿದೆ. ಸ್ಫೋಟದಿಂದ ಸಿಡಿದ ಕಲ್ಲುಗಳಿಂದ ದನಗಳು ಗಾಯಗೊಂಡಿವೆ. ಮರಗಳೆಲ್ಲ ಗಣಿಗಾರಿಕೆಯ ದೂಳಿನಿಂದ ಕೆಂಪಾಗಿವೆ. ಊರಿನ ಸಾರಾಯಿ ಅಂಗಡಿಯಲ್ಲಿ ಮಾತ್ರ ವ್ಯಾಪಾರ ಜೋರಾಗಿದೆ. ಆಗ ಊರವರೆಲ್ಲ ಸೇರಿ ಮಾಡಿದ ಚಳವಳಿಯಲ್ಲಿ ಶಾಲಾ ಮಕ್ಕಳು ಭಾಗವಹಿಸಿದರೆ ಪೊಲೀಸ್ ಇನ್ಸಪೆಕ್ಟರ್ ಅವರನ್ನು ಹೆದರಿಸಿ ಕಳಿಸುತ್ತಾರೆ. ಅವರಲ್ಲಿ ಜಾನು ಮತ್ತು ಶಂಕರ ಎಂಬ ಮಕ್ಕಳಿಗೆ ಹೇಗಾದರೂ ಮಾಡಿ ಗಣಿಗಾರಿಕೆ ನಿಲ್ಲಿಸುವ ಆಸೆ. ಶಂಕರನ ಅಪ್ಪ ಶಾಮಣ್ಣ, ಖಾಜಿ ಮಾಸ್ತರ ಮುಂತಾದವರೆಲ್ಲ ಚಳವಳಿ ಮಾಡಿದರೂ ಏನು ಪ್ರಯೋಜನವಾಗಲಿಲ್ಲ. ಶಾಲೆಯಲ್ಲಿ ಶಿಕ್ಷಕರು ಇತಿಹಾಸ ಪಾಠ ಮಾಡುವಾಗ ‘ಐತಿಹಾಸಿಕ ವಸ್ತುಗಳ ರಕ್ಷಣೆಗೆ ಕಾನೂನು ಇದೆ....’ ಎಂದು ತಿಳಿಸಿದ್ದು ನೆನಪಾಗಿ ಶಂಕರನಿಗೆ ಏನೋ ಹೊಳೆಯುತ್ತದೆ.

ಒಂದು ದಿನ ಜಾನು, ಶಂಕರ ಗುಡ್ಡದಲ್ಲಿರುವ ಬಾವಲಿ ಗುಹೆ ನೋಡಲು ಹೋಗಿ ಒಳಗೆ ಇಣುಕಿ ಕತ್ತಲಿಗೆ ಹೆದರಿ ಹಿಂದೆ ಬರುತ್ತಾರೆ. ಮತ್ತೊಂದು ದಿನ ಟಾರ್ಚ್‌ ತೆಗೆದುಕೊಂಡು ಹೋಗಿ ನೋಡಿದಾಗ ಬಿಳಿಗೋಡೆಯಲ್ಲಿ ಕೆತ್ತಿದ ಬಾಹುಬಲಿಯ ವಿಗ್ರಹ ಕಾಣುತ್ತದೆ. ಇದನ್ನು ನೋಡಿದ ಹುಡುಗರು ಐತಿಹಾಸಿಕ ಸ್ಮಾರಕವೊಂದು ದೊರೆಯಿತೆಂದು ಖುಷಿಗೊಂಡು ಮನೆಗೆ ಬಂದು ಹೇಳಿದಾಗ ಶಂಕರನ ಅಪ್ಪ ಬೈಯ್ದರೂ ಶಾಮಣ್ಣನವರಿಗೆ ಸಂತೋಷ ಉಂಟಾಗುತ್ತದೆ. ಯಾಕೆಂದರೆ ಐತಿಹಾಸಿಕ ಸ್ಮಾರಕದಿಂದಾಗಿ ಗಣಿಗಾರಿಕೆ ವಿರುದ್ಧದ ನ್ಯಾಯಾಲಯದ ತನ್ನ ಹೋರಾಟಕ್ಕೆ ಬಲ ಸಿಕ್ಕು ಜಯ ಸಿಕ್ಕೇ ಸಿಗುತ್ತದೆ ಎಂಬ ಭರವಸೆ. ಇಲ್ಲಿ ಮಕ್ಕಳ ಪರಿಸರ ಕಾಳಜಿ ಮತ್ತು ಸಾಹಸ ಊರಿನ ಸಂಕಷ್ಟ ನೀಗಿಸುವಲ್ಲಿ ಸಹಾಯ ಆಗುವುದು ಕಾದಂಬರಿಯ ಸಾರಾಂಶ. ಕಾದಂಬರಿ ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತದೆ. ಬೀಗಾರರ ಇನ್ನೊಂದು ಕಾದಂಬರಿ ‘ಫ್ರಾಗಿ ಮತ್ತು ಗೆಳೆಯರು’ (2020) ಈ ಕಾದಂಬರಿ ಅವರ ಸೃಜನಶೀಲ ಶಕ್ತಿಯ ಅತ್ಯುತ್ತಮ ನಿದರ್ಶನ.

ಬೀಗಾರರ ‘ಹಸಿರೂರಿನ ಹುಡುಗ’ ಕೃತಿಗೆ ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ‘ಫ್ರಾಗಿ ಮತ್ತು ಗೆಳೆಯರು’ ಕಾದಂಬರಿಗೆ ಪುಸ್ತಕ ಸೊಗಸು ಬಹುಮಾನ, ‘ಮರ ಬಿದ್ದಾಗ’ ಕೃತಿಗೆ ಬಾಲವಿಕಾಸ ಅಕಾಡೆಮಿ ಕೊಡುವ ಮಕ್ಕಳ ಚಂದ್ರ ಪ್ರಶಸ್ತಿ, ‘ಉಲ್ಟಾಅಂಗಿ’ ಕಥಾ ಸಂಕಲನಕ್ಕೆ 2019ರ ರಾಯಚೂರು ಜಿಲ್ಲಾ ಮಕ್ಕಳ ಸಾಹಿತ್ಯ ಪ್ರಶಸ್ತಿ ಸಂದಿವೆ.

ಬೀಗಾರರಿಗೆ ರಾಜ್ಯ ಶಿಕ್ಷಕರ ಪ್ರಶಸ್ತಿ, ರಾಷ್ಟ್ರ ಶಿಕ್ಷಕರ ಪ್ರಶಸ್ತಿ, ವ್ಯಂಗ್ಯ ಚಿತ್ರ ರಚನೆಗಾಗಿ ರಾಜ್ಯಮಟ್ಟದ ಬಹುಮಾನ, ರಾಜ್ಯಮಟ್ಟದ ವಿಜ್ಞಾನ ಗೋಷ್ಠಿ ಬಹುಮಾನ, ಪ್ರಜಾವಾಣಿ ಶಿಶುಕಾವ್ಯ ಸ್ಪರ್ಧಾ ಬಹುಮಾನ ಮತ್ತಿತರ ಪುರಸ್ಕಾರಗಳು ಮುಡಿಗೇರಿವೆ. ನಿರಂತರ ಮಕ್ಕಳ ಸಾಹಿತ್ಯದ ತುಡಿತದಲ್ಲೇ ಕಾಲಕಳೆಯುತ್ತಿರುವ ಬೀಗಾರರು ಪ್ರಸ್ತುತ ಸಿದ್ದಾಪುರದಲ್ಲಿ ನೆಲೆಸಿದ್ದಾರೆ. ತಮ್ಮ ಬಾಲ್ಯದ ಹಾಗೂ ಗ್ರಾಮೀಣ ಪ್ರದೇಶದ ಅನುಭವಗಳ ಮೂಲಕವೇ ಮಕ್ಕಳ ಸಾಹಿತ್ಯದಲ್ಲಿ ಈಗಲೂ ರಚನಾತ್ಮಕ ಕೆಲಸ ಮಾಡುತ್ತಿರುವ ಬೀಗಾರ ಅತ್ಯುತ್ತಮ ವ್ಯಂಗ್ಯಚಿತ್ರ ಕಲಾವಿದರೂ ಆಗಿರುವುದು ಬಹುತೇಕರಿಗೆ ತಿಳಿಯದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು