ಸೋಮವಾರ, ಸೆಪ್ಟೆಂಬರ್ 28, 2020
25 °C

ಶತಾಯುಷಿಗಳ ಬೀಡು ಅಚಿರೋಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಅಂದಿನ ಉರುಕ್‌ ದೇಶದ ಚಕ್ರವರ್ತಿ ಗಿಲ್‌ಗಮೇಶ್‌ ಅಮರತ್ವ ಪಡೆಯಲು ಹುಡುಕಾಟ ನಡೆಸಿದ್ದನಂತೆ. ಅಲ್ಲಿಂದ ಈಚೆಗೆ ಅಮರತ್ವಕ್ಕಾಗಿ ಅಲ್ಲದಿದ್ದರೂ ದೀರ್ಘಾಯುಷ್ಯಕ್ಕಾಗಿ ಮಾನವನ ನಿರಂತರ ಹುಡುಕಾಟ ನಡೆಯುತ್ತಿದೆ. ಆರೋಗ್ಯಕರ ಜೀವನ ನಡೆಸಲು ಏನೇನು ಅವಶ್ಯಕ ಎಂಬುದರ ಕುರಿತು ಸಂಶೋಧನೆಗಳಂತೂ ನಡೆಯುತ್ತಲೇ ಇವೆ.

ಆದರೆ, ಪ್ರಪಂಚದ ಕೆಲವು ಕಡೆ ನೂರು ವರ್ಷ ದಾಟಿದರೂ ಆರಾಮವಾಗಿ ಬದುಕು ಸಾಗಿಸುತ್ತಿರುವ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಅಚ್ಚರಿ ಮೂಡಿಸುತ್ತದೆ. ಇಟಲಿಯ ಪುಟ್ಟ ಹಳ್ಳಿ ಅಚಿರೋಲಿಯಲ್ಲಿ ಶತಾಯುಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನೇಪಲ್ಸ್‌ನಿಂದ 140 ಕಿ.ಮೀ. ದೂರವಿರುವ ಈ ಹಳ್ಳಿಯಲ್ಲಿ ಸುಮಾರು 2000 ಮಂದಿ ನಿವಾಸಿಗಳಿದ್ದು, ಅವರಲ್ಲಿ 300 ಮಂದಿ ಶತಕ ದಾಟಿ ಬಿಟ್ಟಿದ್ದಾರೆ.

ವ್ಯಕ್ತಿ ಬಹುಕಾಲ ಬದುಕಬೇಕಾದರೆ ಏನು ಮಾಡಬೇಕು ಹೇಳಿ– ಆರೋಗ್ಯಕರವಾದ ಮಿತ ಆಹಾರ, ನಿತ್ಯ ವ್ಯಾಯಾಮ, ವ್ಯಸನಗಳಿಂದ ದೂರ ಇರುವುದು. ಆದರೆ, ಅಲ್ಲಿಯ ಜನ ಈ ನಿಯಮಗಳನ್ನೆಲ್ಲ ಗಾಳಿಗೆ ತೂರಿ ಧೂಮಪಾನ, ಮದ್ಯಪಾನ ಹೆಚ್ಚಾಗೇ ಮಾಡುತ್ತಾರಂತೆ.

ಈ ದೀರ್ಘಾಯುಷ್ಯದ ಗುಟ್ಟನ್ನು ಒಡೆಯಲು ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಅಧ್ಯಯನವನ್ನೇ ಆರಂಭಿಸಿತು. ರಕ್ತ ಮಾದರಿ, ವಂಶವಾಹಿ ಸಂಗ್ರಹಿಸಿ, ಅವರ ಹವ್ಯಾಸಗಳ ಬಗ್ಗೆ ಸಂಶೋಧನೆ ನಡೆಸಲಾಯಿತು.

ಅಚಿರೋಲಿಯ ಜನ ರೋಸ್‌ಮೆರಿ ಎಂಬ ಔಷಧೀಯ ಗುಣವುಳ್ಳ ಸಸ್ಯವನ್ನು ಹೆಚ್ಚು ಸೇವಿಸುತ್ತಾರಂತೆ. ಇದು ಸ್ಮರಣ ಶಕ್ತಿ ಹೆಚ್ಚಿಸುತ್ತದೆ. ಹೀಗಾಗಿ ಅಲ್ಲಿಯ ಜನರಿಗೆ ಮರೆವಿನ ಕಾಯಿಲೆ ಇಲ್ಲವಂತೆ. ಜೊತೆಗೆ ತೈಲಯುಕ್ತ ಮೀನು ಮತ್ತು ತಾಜಾ ಹಣ್ಣು ಸೇವಿಸುವುದರಿಂದ ಕಾಯಿಲೆಗೆ ಕಾರಣವಾಗುವ ಉರಿಯೂತದಿಂದ ದೂರ ಉಳಿಯುವ ಸಾಧ್ಯತೆ ಹೆಚ್ಚು. ಇದು ಮೆಡಿಟರೇನಿಯನ್‌ ಆಹಾರ ಪದ್ಧತಿ. ಇದರಿಂದ ಹೃದ್ರೋಗವೂ ಕಡಿಮೆ. ರಕ್ತನಾಳವನ್ನು ಹಿಗ್ಗಿಸುವ ಅಡ್ರೆನೊಮೆಡ್ಯುಲಿನ್‌ ಹಾರ್ಮೋನ್‌ ಪ್ರಮಾಣವೂ ಅವರಲ್ಲಿ ಕಡಿಮೆ ಎನ್ನುತ್ತಾರೆ ವಿಜ್ಞಾನಿಗಳು.

ವ್ಯಾಯಾಮ ಮಾಡದ ಸೋಮಾರಿಗಳು ಅವರು. ಆದರೆ, ಕಡಲ ದಂಡೆಯಲ್ಲಿ ಅಡ್ಡಾಡುವುದು, ಮಾಲಿನ್ಯರಹಿತ ಗಾಳಿಯನ್ನು ಉಸಿರಾಡುವುದರಿಂದ ಆರೋಗ್ಯ ಕಾಪಾಡಿಕೊಂಡಿದ್ದಾರೆ ಎನ್ನುತ್ತದೆ ಅಧ್ಯಯನ.

ಬೆವರಿಳಿಸದ ಜನ ಕಾಫಿ, ವೈನ್‌ ಸೇವಿಸುತ್ತ, ನೆರೆಯವರೊಂದಿಗೆ ಹರಟೆ ಹೊಡೆಯುತ್ತ, ಮೀನು ಹಿಡಿಯುತ್ತ ಸಮಯ ಕಳೆಯುತ್ತಾರಲ್ಲದೆ, ಒತ್ತಡವನ್ನು ಹತ್ತಿರವೂ ಸುಳಿಯಗೊಟ್ಟಿಲ್ಲ.

ಜೊತೆಗೆ ಅವರ ದೀರ್ಘಾಯುಷ್ಯದ ಇನ್ನೊಂದು ರಹಸ್ಯವೆಂದರೆ ಲೈಂಗಿಕ ಚಟುವಟಿಕೆ. ವಯಸ್ಸಾದವರೂ ಕೂಡ ಇಂತಹ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವುದರಿಂದ ಒತ್ತಡ ಅವರ ಬಳಿ ಸುಳಿಯಲಾರದು ಎನ್ನುವುದು ಅಧ್ಯಯನ ನಡೆಸಿದವರ ಅಭಿಮತ.

ಅಮರತ್ವ ಪಡೆಯುವ ಗಿಲ್‌ಗಮೇಶ್‌ನ ಕನಸಂತೂ ನನಸಾಗಲಿಲ್ಲ. ಆದರೆ, ದೀರ್ಘಾಯುಷ್ಯ ಪಡೆಯುವ ಕೆಲವು ರಹಸ್ಯಗಳಂತೂ ಅಚಿರೋಲಿಯ ಜನಕ್ಕೆ ಗೊತ್ತಿದೆಯಲ್ಲ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು