ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರುಬಂಡೆಯಲ್ಲಿ ಸ್ವಾಯತ್ತ ಸಂಸ್ಥೆಗಳು!

Last Updated 15 ಆಗಸ್ಟ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಸಾಂವಿಧಾನಿಕ ಪ್ರಜಾಪ್ರಭುತ್ವದ ಅಭಿವ್ಯಕ್ತಿಗಳಾದ ಸಾರ್ವಜನಿಕ ಸಂಸ್ಥೆಗಳಿಗೆ ಈಗೇನಾಗಿದೆ? ನಾಗರಿಕರಿಗೆ ಸರ್ಕಾರದ ಉತ್ತರದಾಯಿತ್ವವನ್ನು ಖಚಿತಪಡಿಸಬೇಕಾದ ತಮ್ಮ ಹೊಣೆಯನ್ನು ಅವುಗಳು ಸರಿಯಾಗಿ ನಿಭಾಯಿಸುತ್ತಿವೆಯೇ? ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಿದ್ದ ಅವುಗಳು ಈಗ ರಾಜಕೀಯ ನಾಯಕತ್ವದ ಅಧೀನಕ್ಕೆ ಒಳಪಟ್ಟಿದ್ದು ನಿಜವೇ? ಸ್ವಾತಂತ್ರ್ಯ ಹಬ್ಬದ ನೆಪದಲ್ಲಿ ಒಂದು ಅವಲೋಕನ...

ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ, ಭಾರತವು ಸಾಂವಿಧಾನಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹೊಂದಬೇಕು ಎನ್ನುವುದು ಎಲ್ಲ ರಾಜಕೀಯ ವಲಯಗಳ ಒಮ್ಮತದ ಅಭಿಪ್ರಾಯವಾಗಿತ್ತು. ಸಾಂವಿಧಾನಿಕ ಪ್ರಜಾಪ್ರಭುತ್ವವು ಮೂರು ಹಂತಗಳ ಸಂಬಂಧಗಳನ್ನು ಹೊಂದಿರುತ್ತದೆ. ನಾಗರಿಕರು ಹಾಗೂ ಸರ್ಕಾರದ ನಡುವಿನ ಸಂಬಂಧ, ಸರ್ಕಾರದ ವಿವಿಧ ಸಂಸ್ಥೆಗಳ ನಡುವಿನ ಸಂಬಂಧ ಮತ್ತು ನಾಗರಿಕರ ನಡುವಿನ ಪರಸ್ಪರ ಸಂಬಂಧ – ಇವೇ ಆ ಮೂರು ಹಂತಗಳು.

ಭಾರತೀಯ ಸಂವಿಧಾನದಲ್ಲಿ ಈ ಸಂಬಂಧಗಳ ಕುರಿತ ವ್ಯಾಖ್ಯಾನ ಸಂದಿಗ್ಧಕ್ಕೆ ಎಡೆ ಇಲ್ಲದಷ್ಟು ಸ್ಪಷ್ಟವಾಗಿದೆ. ಆದರೆ, ಕಾಲಾನಂತರದಲ್ಲಿ ಶಾಸಕಾಂಗದ ನಿರ್ಣಯಗಳು ಹಾಗೂ ತಿದ್ದುಪಡಿಗಳು ಆ ಸಂಬಂಧಗಳಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣವಾಗಿದ್ದು, ಅಂತಹ ಹಲವು ಸಂಸ್ಥೆಗಳ ಸ್ಥಾಪನೆಯ ಮೂಲ ಉದ್ದೇಶವೇ ಗೌಣವಾಗಿ ಹೋಗಿದ್ದಿದೆ. ಏಳು ದಶಕಗಳಲ್ಲಿ –ಅದರಲ್ಲೂ ದೇಶದ ರಾಜಕೀಯವು ನೆಹರೂ ಉದಾರ ನೀತಿಯಿಂದ ಬಹುಸಂಖ್ಯಾತ ಹಿಂದೂ ನೀತಿಯತ್ತ ವಾಲಿದ ಕಳೆದ ಆರು ವರ್ಷಗಳಲ್ಲಿ– ಸರ್ಕಾರದ ವಿವಿಧ ಸಂಸ್ಥೆಗಳ ನಡುವಿನ ಸಂಬಂಧದ ಸ್ವರೂಪ ಹೇಗೆ ಬದಲಾಗಿದೆ ಎನ್ನುವುದನ್ನು ನೋಡೋಣ. ಸಮುದಾಯಗಳ ಆರೋಗ್ಯ ಹಾಗೂ ದೀರ್ಘಕಾಲೀನ ರಾಜಕೀಯ ಸ್ಥಿರತೆಗಾಗಲೀ ಬಯಕೆ ಈಡೇರಿಸುವ ಅವುಗಳ ಸಾಮರ್ಥ್ಯಕ್ಕಾಗಲೀ ವ್ಯವಸ್ಥೆಯ ಒಳಗಿರುವ ಸಾರ್ವಜನಿಕ ಸಂಸ್ಥೆಗಳೇ ಸಾಧನ. ಆ ಸಂಸ್ಥೆಗಳ ಕಾರ್ಯವೈಖರಿಯ ಆಧಾರದ ಮೇಲೆ ಅಲ್ಲಿನ ನಾಗರಿಕರು, ಅದರಲ್ಲೂ ಪ್ರಜ್ಞಾವಂತರು, ಆ ಸಂಸ್ಥೆಗಳು ತಮ್ಮವೆಂದು ಸ್ವೀಕರಿಸುತ್ತಾರೆ. ಆದ್ದರಿಂದಲೇ ಸರ್ಕಾರದ ವಿವಿಧ ಸಂಸ್ಥೆಗಳ ನಡುವಿನ ಸಂಬಂಧದ ಈ ಚರ್ಚೆಯು ಮಹತ್ವವನ್ನು ಪಡೆಯುತ್ತದೆ.

ರಾಜಕೀಯ ಸಂಸ್ಥೆಗಳು

ಮಹಾತ್ಮ ಗಾಂಧಿಯವರು 1919ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನೇತೃತ್ವವನ್ನು ವಹಿಸಿಕೊಳ್ಳುವ ಮುನ್ನ ಅದರ ಚಟುವಟಿಕೆಗಳಲ್ಲಿ ಒಂದುರೀತಿಯ ಉದಾಸೀನ ಮನೋಭಾವ ಎದ್ದು ಕಾಣುತ್ತಿತ್ತು. ಅದರಲ್ಲಿನ ವಿವಿಧ ಗುಂಪುಗಳು ಹಾಗೂ ನಾಯಕರಿಂದ ತಲೆದೋರಿದ ಸಮಸ್ಯೆಯದು. ಕಾಂಗ್ರೆಸ್‌ಗೆ ಒಂದು ಸಾಂಸ್ಥಿಕ ರೂಪವನ್ನು ಕೊಟ್ಟ ಗಾಂಧಿ, ಅದರ ರಾಜಕೀಯ ಉದ್ದೇಶಗಳಿಗೂ ಒಂದು ಸ್ಪಷ್ಟರೂಪ ನೀಡಿದರು. ಆ ಉದ್ದೇಶಗಳ ಈಡೇರಿಕೆಗಾಗಿ ಬೇಕಾದ ತಂತ್ರಗಳ ದೀಕ್ಷೆಯನ್ನೂ ಅವರು ಕೊಟ್ಟರು. ಜತೆಗೆ ಸಂಸ್ಥೆಯ ಸ್ವರೂಪದಲ್ಲಿಯೇ ಮುಂದೆ ಸಾಗಲು ಕಾಂಗ್ರೆಸ್ಸಿಗೆ ಬೇಕಾದ ಸಾಂಸ್ಥಿಕ ನಿಯಮಾವಳಿಯನ್ನೂ ರೂಪಿಸಿದರು. ಜಗತ್ತು ಕಂಡಿದ್ದ ದೊಡ್ಡ ಸಾಮ್ರಾಜ್ಯದ ಎಲ್ಲ ವಿಧದ ಪ್ರಚೋದನೆ ಮತ್ತು ಆಕ್ರಮಣವನ್ನು ತಡೆದುಕೊಂಡು, ಅಂತಿಮವಾಗಿ ಆ ಸಾಮ್ರಾಜ್ಯವನ್ನು ಉರುಳಿಸುವಲ್ಲಿಯೂ ಈ ಸಂಸ್ಥೆಯು ಯಶಸ್ವಿಯಾಯಿತು. ಸ್ವರಾಜ್ಯ ಒಂದೇ ಗಾಂಧಿ ಕೊಟ್ಟ ದೊಡ್ಡ ಕೊಡುಗೆಯಾಗಿ ನಮಗೆ ಕಾಣುತ್ತಿದ್ದು, ಸಂಸ್ಥೆಗಳನ್ನು ಕಟ್ಟಿ ಬೆಳೆಸಲು ಅವರು ವಹಿಸಿದ ಕಾಳಜಿ, ಹಾಕಿದ ಶ್ರಮ ದೇಶದ ಗಮನವನ್ನು ಅಷ್ಟಾಗಿ ಸೆಳೆಯಲಿಲ್ಲ.

ಸಂವಿಧಾನ ರಚನಾ ಸಭೆ ಹಾಗೂ ಹಂಗಾಮಿ ಸಂಸತ್ತಿನ (1947–1952) ಕಲಾಪಗಳ ಕುರಿತ ಕಡತಗಳ ಮೇಲೆ ಕಣ್ಣು ಹಾಯಿಸಿದರೆ, ಸಾಂವಿಧಾನಿಕ ಮತ್ತು ಇತರ ಶಾಸನಬದ್ಧ ಸಂಸ್ಥೆಗಳಿಗೆ ರೂಪ ಕೊಡುವಾಗ ಆಗಿನ ನಾಯಕರು ವಹಿಸಿದ ಕಾಳಜಿ ಎಂತಹದ್ದು ಎನ್ನುವುದು ಅರ್ಥವಾಗುತ್ತದೆ. ಒಮ್ಮೆ ಕಠೋರ ಚರ್ಚೆಗಳು ನಡೆದರೆ, ಇನ್ನೊಮ್ಮೆ ವೈಯಕ್ತಿಕ ವಾಗ್ದಾಳಿಗಳೂ ಇಂತಹ ಕಲಾಪದಲ್ಲಿ ನಡೆದಿವೆ. ಆದರೆ, ಸಂಸ್ಥೆಗಳ ಸ್ವರೂಪದ ಮೇಲಿನ ಚರ್ಚೆ ಎಲ್ಲಿಯೂ ಹಳಿ ತಪ್ಪಿಲ್ಲ. ಹಾಗೆ ಸಂಸ್ಥೆಗಳ ನಿಯಮಾವಳಿಯನ್ನು ರೂಪಿಸುವಾಗ ಸಂವಿಧಾನದ ಮೂಲ ಉದ್ದೇಶಗಳ ಈಡೇರಿಕೆಗೆ ಖಚಿತ ಮಾರ್ಗ ಹಿಡಿಯುವ ಕಾಳಜಿ ಎದ್ದು ಕಂಡಿದೆ. ಹೀಗಾಗಿ ಅಂತಹ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಅವುಗಳ ಸ್ವಾಯತ್ತತೆ ಹಾಗೂ ಸಮರ್ಪಕತೆಯ ಮಾನದಂಡಗಳಿಂದ ಅಳೆಯಲಾಗುತ್ತದೆ.

ಸ್ವಾತಂತ್ರ್ಯ ಗಳಿಸಿದ ಬಳಿಕ –ಅದರಲ್ಲೂ ಸಂವಿಧಾನ ಜಾರಿಗೆ ಬಂದಮೇಲೆ– ಹಲವು ಮಹತ್ವದ ಸಾರ್ವಜನಿಕ ಸಂಸ್ಥೆಗಳನ್ನು ಕಟ್ಟುವ ಅಮೋಘ ಕ್ಷಣಗಳಿಗೆ ದೇಶ ಸಾಕ್ಷಿಯಾಗಿದೆ. ಆಗಿನ ನಾಯಕರು ತುಂಬು ಉತ್ಸಾಹದಿಂದ ಈ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು. ಲೋಕಸಭೆಯ ಮೊದಲ ಸ್ಪೀಕರ್‌ ಗಣೇಶ್‌ ವಾಸುದೇವ್‌ ಮಾವಲಂಕರ್‌ ಅವರಿಗೆ ಜವಾಹರಲಾಲ್‌ ನೆಹರೂ ಅವರು ಕಳುಹಿಸಿದ ಸಂದೇಶದ ಕುರಿತು ಮಧು ದಂಡವತೆ ಹೀಗೆ ನೆನಪಿಸಿಕೊಳ್ಳುತ್ತಾರೆ: ‘ಸರ್‌, ನಿಮ್ಮೊಂದಿಗೆ ನನಗೆ ತುರ್ತು ಕೆಲಸವಿದೆ. ನನ್ನ ಚೇಂಬರ್‌ಗೆ ಬರುತ್ತೀರಾ?’ ಎಂದು ನೆಹರೂ ಅವರು ಸಂದೇಶ ಕಳುಹಿಸಿದ್ದರು. ಅದಕ್ಕೆ ಮಾವಲಂಕರ್‌ ಅವರು ನೀಡಿದ ಉತ್ತರದ ಟಿಪ್ಪಣಿ ಹೀಗಿತ್ತು: ‘ಸಂಸತ್ತಿನ ಅಂಗೀಕೃತ ಸಂಪ್ರದಾಯಗಳ ಪ್ರಕಾರ, ಪ್ರಧಾನ ಮಂತ್ರಿ ಸೇರಿದಂತೆ ಯಾರ ಚೇಂಬರ್‌ಗೂ ಸ್ಪೀಕರ್‌ ಹೋಗುವುದಿಲ್ಲ. ಯಾವುದೇ ಕೆಲಸವಿದ್ದರೂ ನನ್ನ ಚೇಂಬರ್‌ಗೆ ನಿಮಗೆ ಸದಾ ಸ್ವಾಗತ.’

ಡಬ್ಲ್ಯು.ಎಚ್‌. ಮೊರಿಸ್‌–ಜೋನ್ಸ್‌ ಅವರ ‘ಪಾರ್ಲಿಮೆಂಟ್‌ ಇನ್‌ ಇಂಡಿಯಾ’ ಕೃತಿ, 1950ರ ದಶಕದ ಆರಂಭದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವಲ್ಲಿ ಭಾರತ ಎದುರಿಸಿದ್ದ ಆಳವಾದ ಆತಂಕಗಳ ಕುರಿತು ಹೇಳುತ್ತದೆ. ಇದು ಕೆಲವು ಪ್ರದೇಶಗಳನ್ನು ತಲುಪಲಾಗದ ಕಾರಣಕ್ಕಷ್ಟೇ ಎದುರಾದಂತಹ ಆತಂಕವಲ್ಲ. ಆದರೆ, ರಾಜಕೀಯ ಜಾಗೃತಿಯ ಕೊರತೆ, ವ್ಯಾಪಕ ಅಸಮಾನತೆ ಮತ್ತು ನಿರಕ್ಷರಿ ಮತದಾರ –ಇಂತಹ ವಾತಾವರಣದಲ್ಲಿ ಚುನಾವಣೆ ನಡೆಸಬೇಕಾಗಿದ್ದ ಆತಂಕ. ಆದರೆ,ಶೇಕಡ 46ರಷ್ಟು ಮತದಾರರು ಮತ ಚಲಾಯಿಸಿ ಮೊದಲ ಲೋಕಸಭಾ ಸದಸ್ಯರ ಆಯ್ಕೆಗೆ ಕಾರಣರಾಗಿದ್ದನ್ನು ಜಗತ್ತು ಬೆರಗುಗಣ್ಣಿನಿಂದ ನೋಡಿತು. ಅದರ ಬಹುಪಾಲು ಶ್ರೇಯ ಮೊದಲ ಸಾರ್ವತ್ರಿಕ ಚುನಾವಣೆ ನಡೆಯುವುದಕ್ಕಿಂತ ಒಂದು ವರ್ಷದ ಹಿಂದೆಯಷ್ಟೇ ಜನ್ಮತಾಳಿದ್ದ ಚುನಾವಣಾ ಆಯೋಗಕ್ಕೆ ಸಲ್ಲಬೇಕು.

ನೆಹರು- ಇಂದಿರಾ ಗಾಂಧಿ- ನರೇಂದ್ರ ಮೋದಿ

ಅಂತೆಯೇ, ಕಾಂಗ್ರೆಸ್ ಪಕ್ಷದ ಮಹತ್ವ ಮತ್ತು ಅದರ ದೊಡ್ಡ ನಾಯಕತ್ವವನ್ನು ಗಮನದಲ್ಲಿ ಇಟ್ಟುಕೊಂಡು ಭಾರತದಲ್ಲಿ ಸಂಸದೀಯ ವಿರೋಧ ಪಕ್ಷಕ್ಕೆ ಜಾಗವಿದೆಯೇ ಎಂಬ ಆತಂಕ ಕೂಡ ಮನೆಮಾಡಿತ್ತು. ಆದರೆ, ಮೊದಲ ಚುನಾವಣೆ ನಡೆದ ಬರೋಬ್ಬರಿ 25 ವರ್ಷಗಳ ತರುವಾಯ, ವಿರೋಧ ಪಕ್ಷಗಳು ಕಾಂಗ್ರೆಸ್‌ಗೆ ಮೊದಲ ಸೋಲಿನ ರುಚಿ ತೋರಿಸಿ ಅಧಿಕಾರದ ಗದ್ದುಗೆಗೆ ಏರಿದ್ದವು.

ಭಾಷಾವಾರು ರಾಜ್ಯಗಳ ರಚನೆ, ಒಕ್ಕೂಟ ವ್ಯವಸ್ಥೆಯ ರಾಜಕೀಯ ಮುಖ್ಯವಾಹಿನಿಯಲ್ಲಿ ಆದಿವಾಸಿಗಳಿಗೂ ಪ್ರಾಧಾನ್ಯ ನೀಡಲು ಮುಂದಾದ ಕ್ರಮಗಳನ್ನು ಸಹ ಸಂಸ್ಥೆ ಕಟ್ಟುವ ಪ್ರಯತ್ನಗಳನ್ನಾಗಿಯೇ ನೋಡಬೇಕು. 1974ರಲ್ಲಿ ಬಂದ ಕೇಶವಾನಂದ ಭಾರತಿ ಪ್ರಕರಣದ ಐತಿಹಾಸಿಕ ತೀರ್ಪು, ಶಾಸಕಾಂಗ ಹಾಗೂ ನ್ಯಾಯಾಂಗದ ವ್ಯಾಪ್ತಿಯನ್ನು ಮರುವ್ಯಾಖ್ಯಾನ ಮಾಡಿದ್ದನ್ನು ಯಾರೂ ಮರೆಯುವಂತಿಲ್ಲ. ಸಂವಿಧಾನದ 73 ಹಾಗೂ 74ನೇ ತಿದ್ದುಪಡಿಗಳು ಸ್ಥಳೀಯ ಸಂಸ್ಥೆಗಳಿಗೆ ಹೊಸ ಶಕ್ತಿಯನ್ನು ತುಂಬಿ, ಅವುಗಳಿಗೆ ಅಧಿಕಾರವನ್ನೂ ತಂದುಕೊಟ್ಟವು. ನ್ಯಾಯಾಂಗದ ಮಧ್ಯ ಪ್ರವೇಶದಿಂದಾಗಿ ‘ಪೇಸಾ’ದಂತಹ (ಪರಿಶಿಷ್ಟ ಜನಾಂಗಗಳು ವಾಸಿಸುವ ಪ್ರದೇಶಗಳಲ್ಲಿ ಪಂಚಾಯತ್‌ ವ್ಯವಸ್ಥೆಯ ವಿಸ್ತರಣೆ) ಸಂಸ್ಥೆಗಳು ಜನ್ಮತಾಳಿದವು. ಕೆಲವು ಸಂಸ್ಥೆಗಳಿಗೆ ಶ್ರೇಷ್ಠ ನಾಯಕತ್ವ ದೊರೆತ ಕಾರಣಕ್ಕೆ ಅವುಗಳು ಹೊಸ ಸ್ವರೂಪ ಪಡೆದು ಮತ್ತಷ್ಟು ಸಶಕ್ತವಾದವು. 1990ರ ದಶಕದ ಆರಂಭದಲ್ಲಿ ಚುನಾವಣಾ ಆಯೋಗದ ಆಯುಕ್ತರಾಗಿ ಬಂದ ಟಿ.ಎನ್‌. ಶೇಷನ್‌ ಅವರು ಅದರ ಶಕ್ತಿಯನ್ನು ಅನಾವರಣ ಮಾಡಿದ್ದು ಅಂತಹ ಉದಾಹರಣೆಗಳಲ್ಲಿ ಒಂದು.

ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರವನ್ನು ಯಶಸ್ವಿಯಾಗಿ ನಡೆಸಿದ ಅಟಲ್‌ ಬಿಹಾರಿ ವಾಜಪೇಯಿ ಅವರು, ಸಾಂಸ್ಥಿಕ ರಾಜಕೀಯ ಸ್ಥಿರತೆಯನ್ನು ಖಾತರಿಪಡಿಸಿದ್ದಷ್ಟೇ ಅಲ್ಲದೆ ಪ್ರಾದೇಶಿಕ ಅಸ್ಮಿತೆಗೂ ಮಾನ್ಯತೆ ನೀಡಿದ ಕೀರ್ತಿಗೆ ಭಾಜನರಾದರು. ಈ ಸಹಸ್ರಮಾನದ ಎರಡನೇ ದಶಕದ ಆರಂಭದಲ್ಲಿ ಭಾರೀ ಜನಬೆಂಬಲದಿಂದ ನಡೆದ ಭ್ರಷ್ಟಾಚಾರ ವಿರೋಧಿ ಆಂದೋಲನವು ಅಂತಿಮವಾಗಿ 2013ರಲ್ಲಿ ಲೋಕಪಾಲ ಸಂಸ್ಥೆಯ ಸ್ಥಾಪನೆಗೂ ಕಾರಣವಾಯಿತು.

ಕಳೆದ ಶತಮಾನದ ಕೊನೆಯ ಅವಧಿಯಲ್ಲಿ ದಶಕಗಳಲ್ಲಿ ಹಲವು ಶಾಸನಬದ್ಧ ಸಂಸ್ಥೆಗಳನ್ನು ಹುಟ್ಟುಹಾಕಲಾಯಿತು. ಇಲಾಖಾವಾರು ಸ್ಥಾಯಿ ಸಮಿತಿಗಳ ಸ್ವರೂಪದಲ್ಲೂ ಸಂಸ್ಥೆಗಳು ಹುಟ್ಟಿಕೊಂಡು ಸಂಸತ್ತಿನ ಕಾರ್ಯಗಳಿಗೆ ಹೆಚ್ಚಿನ ಶಕ್ತಿಯನ್ನು ತುಂಬಿದವು. ಕೆಲವು ಸಂದರ್ಭಗಳಲ್ಲಿ ರಾಜ್ಯ ಸರ್ಕಾರಗಳು ಮಾಡಿದ ವಿಶಿಷ್ಟ ಪ್ರಯೋಗಗಳನ್ನು ಕೇಂದ್ರ ಸರ್ಕಾರ ತನ್ನ ನೀತಿ ನಿರೂಪಣೆಯಲ್ಲಿ ಬಳಸಿಕೊಳ್ಳುವಂತಾಯಿತು. ಉದಾಹರಣೆಗೆ, ಕರ್ನಾಟಕದ ಪಂಚಾಯತ್‌ ರಾಜ್‌ –1985 ಕಾಯ್ದೆಯು ಸಂವಿಧಾನದ 73ನೇ ತಿದ್ದುಪಡಿಗೆ ಕಾರಣವಾಗಿ, ಇಡೀ ದೇಶದಲ್ಲಿ ಸುಧಾರಣಾ ಪರ್ವಕ್ಕೆ ದಾರಿ ಮಾಡಿಕೊಟ್ಟಿತು.

ಸಾರ್ವಜನಿಕ ಸಂಸ್ಥೆಗಳ ಜಾರುಹಾದಿ

ಸ್ವಾತಂತ್ರ್ಯಾನಂತರ ಸುದೀರ್ಘ ಅವಧಿಯವರೆಗೆ ಅಧಿಕಾರದಲ್ಲಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಸಹ ಸಂಸ್ಥೆಗಳ ನಿರ್ಮಾಣದ ವಿಷಯದಲ್ಲಿ ಮಿಶ್ರ ದಾಖಲೆಯನ್ನು ಹೊಂದಿದೆ. ನೆಹರೂ ಅವರು ಸಕಾರಾತ್ಮಕ ಹೆಜ್ಜೆ ಗುರುತು ಮೂಡಿಸಿದ್ದರೂ ಕಾಶ್ಮೀರ ಪ್ರಶ್ನೆಯನ್ನು ಅವರು ನಿರ್ವಹಿಸಿದ ರೀತಿ, ಈಶಾನ್ಯ ರಾಜ್ಯಗಳಲ್ಲಿ ದಂಗೆಯನ್ನು ಎದುರಿಸಿದ ರೀತಿ, ಕೇರಳದಲ್ಲಿ ಜನಬೆಂಬಲದಿಂದ ಆಯ್ಕೆಯಾದ ಕಮ್ಯುನಿಸ್ಟ್‌ ನೇತೃತ್ವದ ಸರ್ಕಾರವನ್ನು (1957–59) ನಡೆಸಿಕೊಂಡ ರೀತಿ ಹಾಗೂ ಕಾಕಾ ಕಾಲೇಲ್ಕರ್‌ ಆಯೋಗದ ಶಿಫಾರಸುಗಳನ್ನು ಅವಗಣನೆ ಮಾಡಿದ ರೀತಿಗೆ ತೀವ್ರ ಟೀಕೆಯನ್ನು ಎದುರಿಸಬೇಕಾಯಿತು. ಇಂದಿರಾ ಗಾಂಧಿ ಅವರಂತೂ ತಮಗೆ ನಿಷ್ಠರಾದವರನ್ನು ಸರ್ಕಾರಿ ಸಂಸ್ಥೆಗಳಲ್ಲಿ ವ್ಯವಸ್ಥಿತವಾಗಿ ತುಂಬುತ್ತಾ ಬಂದರು. ತುರ್ತು ಪರಿಸ್ಥಿತಿ (1975–1977) ಅವರ ಅಧಿಕಾರ ಚಲಾವಣೆಯ ಪರಾಕಾಷ್ಠೆ. ಪ್ರಸಿದ್ಧ ವಿದ್ವಾಂಸ ದಂಪತಿಯಾದ ಲಾಯ್ಡ್‌ ರುಡಾಲ್ಫ್‌ ಹಾಗೂ ಸುಸಾನ್ನೆ ರುಡಾಲ್ಫ್‌, ಈ ಪರಿಪಾಟವನ್ನು ಅಧಿಕಾರದ ಕೇಂದ್ರೀಕರಣ ಹಾಗೂ ವೈಯಕ್ತೀಕರಣ ಎಂದೇ ಕರೆದಿದ್ದಾರೆ.

ಇನ್ನು ಕಳೆದ ಆರು ವರ್ಷಗಳಲ್ಲಿ ಏನಾಗಿದೆ ನೋಡಿ. ಯಾವೆಲ್ಲ ಸಂಸ್ಥೆಗಳು ರಾಜಕೀಯ ನಾಯಕತ್ವದ ಆಣತಿಯಂತೆ ನಡೆಯುವ ಪರಿಪಾಟದಿಂದ ಮುಕ್ತವಾಗಿದ್ದವೋ ಅಂತಹ ಸಂಸ್ಥೆಗಳ ನಾಯಕತ್ವವೂ ರಾಜಕೀಯ ನಾಯಕತ್ವದ ಆದೇಶಗಳಿಗೆ ಕಿವಿಗೊಡುತ್ತಿದೆ. ಅದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಇರಬಹುದು, ಇಲ್ಲವೆ ಕೇಂದ್ರ ತನಿಖಾ ದಳವೇ (ಸಿಬಿಐ) ಆಗಿರಬಹುದು. ಇನ್ನೂ ಎಷ್ಟೋ ಸಂಸ್ಥೆಗಳು ಕಾಗದಗಳಲ್ಲಿ ಮಾತ್ರ ಅಸ್ತಿತ್ವದಲ್ಲಿದ್ದು, ಅವುಗಳ ಚಲನಶೀಲತೆ ಯಾವಾಗಲೋ ಕ್ವಚಿತ್‌ ಆಗಿ ಕಾಣುತ್ತದೆ. ಭ್ರಷ್ಟಾಚಾರ ವಿರೋಧಿ ಹೋರಾಟದಿಂದ ಜನ್ಮತಾಳಿದ ಸಂಸ್ಥೆ ಲೋಕಪಾಲ. ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆಗಳು 2013ರಲ್ಲಿಯೇ ರಚನೆಯಾದರೂ ಲೋಕಪಾಲರ ನೇಮಕಕ್ಕೆ 2019ರ ಮಾರ್ಚ್‌ ತಿಂಗಳವರೆಗೆ ಕಾಯಬೇಕಾಯಿತು.

ಕೆಲವು ಸಂಸ್ಥೆಗಳು ತಮ್ಮ ಕರ್ತವ್ಯ ನಿಭಾಯಿಸಲು ಮುಂದಾಗದಿರುವುದು ಇಲ್ಲಿ ಉಲ್ಲೇಖನೀಯ. ಇದಕ್ಕೆ ಚುನಾವಣಾ ಆಯೋಗವೇ ತಕ್ಕ ಉದಾಹರಣೆ. ಒಂದೊಮ್ಮೆ ಜಗತ್ತಿನ ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದು ಎಂಬ ಹಿರಿಮೆಗೆ ಪಾತ್ರವಾಗಿತ್ತು ಈ ಆಯೋಗ. ಭಾರತದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಲು ಸುಧಾರಣಾ ಕ್ರಮಗಳನ್ನು ಶಿಫಾರಸು ಮಾಡುವ ದಿಟ್ಟತನವನ್ನೂ ತೋರಿದ್ದ ಸಂಸ್ಥೆಯಿದು. ಇತ್ತೀಚಿನ ವರ್ಷಗಳಲ್ಲಿ ಯಾವುದಕ್ಕೂ ಪ್ರತಿರೋಧ ತೋರದೆ ಮೌನಕ್ಕೆ ಶರಣಾಗಿದೆ. ನಮ್ಮ ಚುನಾವಣೆಗಳು ಜನಾದೇಶವನ್ನು ಪ್ರತಿಬಿಂಬಿಸುತ್ತಿಲ್ಲ ಎನ್ನುವುದಕ್ಕೆ ಬೇಕಾದಷ್ಟು ಸಾಕ್ಷಿಗಳಿವೆ. ಚುನಾವಣಾ ವೆಚ್ಚದ ಮೇಲೆ ಕಡಿವಾಣ ಹಾಕಲು ಆಯೋಗ ಸಂಪೂರ್ಣ ವಿಫಲವಾಗಿದೆ. ಅಪರಾಧದ ಹಿನ್ನೆಲೆ ಉಳ್ಳವರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಲು, ಅದಕ್ಕೆ ರಾಜಕೀಯ ಪಕ್ಷಗಳನ್ನೇ ಹೊಣೆಯನ್ನಾಗಿ ಮಾಡಲು ಸಹ ಅದರಿಂದ ಸಾಧ್ಯವಾಗಿಲ್ಲ.

ಶಾಸಕಾಂಗ ಮತ್ತು ಕಾರ್ಯಾಂಗ (ಸರ್ಕಾರ), ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ಸಂಬಂಧಗಳ ಸಂಘರ್ಷ ಇಂದು ನಾವು ಎದುರಿಸುತ್ತಿರುವ ನಿಜವಾದ ಅಗ್ನಿಪರೀಕ್ಷೆ. ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವಂತಹ ಮಹತ್ವದ ನಿರ್ಣಯ ಕೈಗೊಳ್ಳುವಾಗ ಅದನ್ನು ಸ್ಥಾಯಿಸಮಿತಿ ಮುಂದೆ ಮಂಡಿಸುವ ಅಗತ್ಯ ಸರ್ಕಾರಕ್ಕೆ ಕಾಣಲೇ ಇಲ್ಲ. ಕೋವಿಡ್‌–19ನಂತಹ ಸಾಂಕ್ರಾಮಿಕದ ಈ ಸಂದರ್ಭವು ಸ್ಥಾಯಿಸಮಿತಿಗಳ ಸಭೆಯನ್ನು ಕರೆಯದಿರಲು ಒಂದು ನೆಪವಾಗಿ ಒದಗಿದೆ. ವಾಸ್ತವವಾಗಿ ಸರ್ಕಾರ ನಡೆಸುವವರಿಗೆ ಯಾವುದೇ ವಿಷಯಗಳನ್ನು ಸ್ಥಾಯಿಸಮಿತಿಗಳ ಪರಿಶೀಲನೆಗೆ ಒಪ್ಪಿಸುವ ಮನಸ್ಸಿಲ್ಲ. ಅಂತೆಯೇ, ನ್ಯಾಯಾಂಗವು ಸರ್ಕಾರದ ವಿಷಯದಲ್ಲಿ ಮೃದುವಾಗಿ ವರ್ತಿಸುತ್ತಿದೆ ಎಂಬ ಆರೋಪಗಳಿಗೂ ಕೊರತೆಯಿಲ್ಲ.

ಮೇಲೆ ಪ್ರಸ್ತಾಪಿಸಲಾದ ಸಾರ್ವಜನಿಕ ಸಂಸ್ಥೆಗಳು ಮತ್ತು ಇಂತಹ ಇತರ ಸಂಸ್ಥೆಗಳು ಸಾಂವಿಧಾನಿಕ ಪ್ರಜಾಪ್ರಭುತ್ವದ ಅಭಿವ್ಯಕ್ತಿಗಳು. ನಾಗರಿಕ ಸಮುದಾಯಕ್ಕೆ ಸರ್ಕಾರದ ಹೊಣೆಗಾರಿಕೆ, ಉತ್ತರದಾಯಿತ್ವವನ್ನು ಖಚಿತಪಡಿಸುವುದು ಅವುಗಳ ರಚನೆಯ ಉದ್ದೇಶ. ಆದರೆ, ಇತ್ತೀಚಿನ ವರ್ಷಗಳ ಬೆಳವಣಿಗೆಗಳು ಸಾಂವಿಧಾನಿಕ ಪ್ರಜಾಪ್ರಭುತ್ವ ಕುಗ್ಗುತ್ತಿರುವುದನ್ನು ಎತ್ತಿ ತೋರುತ್ತವೆ ಮತ್ತು ಸರ್ಕಾರದ ಅಂಗಗಳಿಂದ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವವನ್ನು ಖಚಿತಪಡಿಸುವಲ್ಲಿಯೂ ಆ ಸಂಸ್ಥೆಗಳು ವಿಫಲವಾಗಿವೆ. ಇನ್ನೂ ದುರದೃಷ್ಟಕರ ಸಂಗತಿಯೆಂದರೆ, ಅಧಿಕಾರದ ಬಲೆಯಲ್ಲಿ ಸಿಕ್ಕಿ ಬೀಳುವಲ್ಲಿಯೇ ಅವುಗಳು ಹೆಚ್ಚು ಆಸಕ್ತವಾಗಿವೆ ಮತ್ತು ಅಧಿಕಾರ ಹೊಂದಿದವರ ಅಧೀನದಲ್ಲಿರಲು ಅವುಗಳು ಏನು ಬೇಕಾದರೂ ಮಾಡಲು ಸಿದ್ಧವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT