ಭಾನುವಾರ, ಆಗಸ್ಟ್ 1, 2021
27 °C

ಹಳೆಯ ಪುಸ್ತಕದ ಅಂಗಡಿಯಲ್ಲಿ ಸಿಕ್ಕ ಜೀಗ್ಲರ್ ನಿಘಂಟು

ಡಿ.ಎ. ಶಂಕರ್ Updated:

ಅಕ್ಷರ ಗಾತ್ರ : | |

Prajavani

ನನಗೂ ಹಳೆಯ ಸೆಕೆಂಡ್‍ಹ್ಯಾಂಡ್ ಪುಸ್ತಕಗಳ ಅಂಗಡಿಗಳಿಗೂ ವರ್ಷಾಂತರಗಳ ನಂಟು. ಈ ನಂಟಿನಿಂದಾಗಿ ನನಗೆ ಕನ್ನಡದ ಹಲವು ಅಪೂರ್ವ ಪುಸ್ತಕಗಳು ಲಭ್ಯವಾಗಿವೆ. 1910ರಲ್ಲಿ ಬೆಂಗಳೂರಿನ ಐರಿಷ್ ಪ್ರೆಸ್‍ನಿಂದ ಪ್ರಕಟವಾದ, ಹದಿನೇಳನೆ ಶತಮಾನದ, ಚಿಕ್ಕದೇವರಾಜ ಒಡೆಯರ್ ಕಾಲದ ‘ಶ್ರೀಶುಕಸಪ್ತತಿ’ ಒಂದಾದರೆ, ಯಾಜಮಾನ ಅಂಡ್ ಸನ್ 1938ರಲ್ಲಿ ಪ್ರಕಟಿಸಿದ್ದ ಸರಸ್ವತಿಬಾಯಿ ರಾಜವಾಡೆ ಅವರ ‘ಆಹುತಿ ಇತ್ಯಾದಿ ಕಥೆಗಳು’ ಬೆಂಗಳೂರಿನ ಅವಿನ್ಯೂ ರಸ್ತೆಯಲ್ಲಿನ ಹಳೆಯ ಪುಸ್ತಕದಂಗಡಿಯಲ್ಲಿ ಸಿಕ್ಕಿತು.

ರಾಜವಾಡೆ ಅವರು ಕನ್ನಡದ ಮೊದಲ ಅಪರೂಪದ ಸ್ತ್ರೀವಾದಿ ಲೇಖಕಿ. ಅವರ ಬಗ್ಗೆ ಬರೆದವರಲ್ಲಿ ನಾನೇ ಮೊದಲಿಗ ಎಂದು ಕಾಣುತ್ತದೆ. ಕಾರಣ, ಸರಳ. ನನಗೆ ಹಳೆಯ ನಂಟಿನಿಂದ ಈ ಪುಸ್ತಕ ಲಭ್ಯವಾಗಿತ್ತು! ಇಂಥದೇ ಇನ್ನೊಂದು ಎಂದರೆ ರೊದ್ದ ಶ್ರೀನಿವಾಸರಾಯರ ‘ಚಂದ್ರಮುಖಿಯ ಘಾತವು’. ಕನ್ನಡದ ಮೊದಲ ಕಾದಂಬರಿಗಳಲ್ಲಿ ಇದೂ ಒಂದು. ಇದು ಇಂಗ್ಲೆಂಡಿನ ಬ್ರಿಟಿಷ್ ಮ್ಯೂಸಿಯಂನಲ್ಲಿ ದೊರಕಿದ್ದು, ಮನೋಹರ ಗ್ರಂಥಮಾಲೆ ಇದನ್ನು 1998ರಲ್ಲಿ ಪ್ರಕಟಿಸಿತು.

ಇಂಥವೇ ಕೆಲವು ಲಭ್ಯವಾದ ಪುಸ್ತಕಗಳಲ್ಲಿ, ಸುಮಾರು ಮೂರು ನಾಲ್ಕು ವರ್ಷಗಳ ಹಿಂದೆ, ಮೈಸೂರಿನ ಲ್ಯಾನ್ಸ್‌ಡೌನ್ ಬಿಲ್ಡಿಂಗ್‍ನ ಹಳೆಯ ಪುಸ್ತಕದಂಗಡಿಯಲ್ಲಿ ದೊರೆತದ್ದು ರೆವರೆಂಡ್ ಎಫ್‌. ಜೀಗ್ಲರ್‌ ಅವರ ‘English - Kannada Dictionary: ಇಂಗ್ಲಿಷ್-ಕನ್ನಡ ನಿಘಂಟು’. ಈ ಗ್ರಂಥದ ಎರಡನೇ ಆವೃತ್ತಿಗೆ ಜೀಗ್ಲರ್‌ ಅವರ ಮುನ್ನುಡಿ ಇದೆ. ಅವರು ಅದನ್ನು ಬರೆದದ್ದು ಧಾರವಾಡದಲ್ಲಿ, 17 ಡಿಸೆಂಬರ್ 1888ರಲ್ಲಿ. ಅಂದರೆ ಸುಮಾರು 150 ವರ್ಷಗಳ ಹಿಂದೆ.

ಇದಕ್ಕೆ ಮೊದಲು, ಅಂದರೆ ಸುಮಾರು 1876ರಲ್ಲಿ ಈ ನಿಘಂಟಿನ ಮೊದಲ ಮುದ್ರಣ ಹೊರ ಬಂದಿತ್ತು. ಅದನ್ನು compile ಮಾಡಿದ್ದು, ಮಂಗಳೂರಿನ ಥಿಯಾಲಾಜಿಕಲ್ ಸೆಮಿನರಿಯಲ್ಲಿ ಟ್ಯೂಟರ್ ಆಗಿದ್ದ ರೆವರೆಂಡ್ ಕ್ರಿಸ್ತಾನುಜ ವತ್ಸ ಮತ್ತು ರೆವರೆಂಡ್ ಜೀಗ್ಲರ್ ಅವರು.

ಇಂಗ್ಲಿಷ್ ಭಾಷೆಯನ್ನು ಕಲಿಯಲು ಹೊರಟಿದ್ದ, ಕಲಿಯಲು ಪ್ರಯತ್ನಿಸುತ್ತಿದ್ದ ‘ಕ್ಯಾನರೀಸ್.’ ವಿದ್ಯಾರ್ಥಿಗಳ ಉಪಯೋಗಕ್ಕೆನ್ನುವ ಮುಖ್ಯೋದ್ದೇಶದಿಂದ ಈ ನಿಘಂಟು ರಚಿತವಾದದ್ದು. ಆದರೆ ಇದು ಅವರಿಗಷ್ಟೇ ಸೀಮಿತವಾಗಿರಲಿಲ್ಲ. ಅದು ಕನ್ನಡ ಭಾಷೆ ಕಲಿಯಲು ಪ್ರಯತ್ನಿಸುತ್ತಿದ್ದ ಇಂಗ್ಲಿಷರಿಗೆ, ಯುರೋಪಿಯನ್ ಜನರಿಗೆ ಸಹಾಯಕವಾಗಬೇಕು ಎನ್ನುವ ಉದ್ದೇಶವೂ ಸಂಪಾದಕರಿಗೆ ಇತ್ತು. ಹಾಗಾಗಿ, ನಿಘಂಟಿನಲ್ಲಿ ಕನ್ನಡಕ್ಕೆ ಪರ್ಯಾಯ ಇಂಗ್ಲಿಷ್ ಪದಗಳನ್ನು, ನುಡಿಗಟ್ಟುಗಳನ್ನು, ಗಾದೆಗಳನ್ನು ಧಾರಾಳವಾಗಿ ಬಳಸಿದರು. ಇದು ನಿಘಂಟಿನ ವ್ಯಾಪ್ತಿಗೆ ಒಳಪಟ್ಟಿಲ್ಲದಿದ್ದದ್ದೂ ಸಾಮಾಜಿಕವಾಗಿ ಸಕಲರಿಗೂ ಉಪಯೋಗಕರವಾಗಿರಲಿ ಎನ್ನುವುದು ಗ್ರಂಥದ ಹಿಂದಿನ ಆಶಯ. ಜೀಗ್ಲರ್ ಅವರೇ ಇದನ್ನು ತಮ್ಮ ಮುನ್ನುಡಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ನಿಘಂಟಿನಲ್ಲಿ ಬಳಕೆಯಾಗಿರುವ ಕನ್ನಡ, ದಕ್ಷಿಣ ಕನ್ನಡದ ಮಂಗಳೂರು ಹಾಗೂ ಉತ್ತರ ಕರ್ನಾಟಕದ ಧಾರವಾಡ ಪ್ರದೇಶಗಳಲ್ಲಿ ಪ್ರಚಲಿತವಾಗಿರುವ ಕನ್ನಡ. ಮೈಸೂರು ಭಾಗದ ಕನ್ನಡ ಎಲ್ಲೋ ಕ್ವಚಿತ್ತಾಗಿ ಕಾಣಸಿಗುತ್ತದೆ. ಇದು ಸಹಜವೇ. ಕಾರಣ ಜೀಗ್ಲರ್ ಧಾರವಾಡದಲ್ಲಿದ್ದದ್ದು ಮತ್ತು ಪುಸ್ತಕ ಅಚ್ಚಾಗಿದ್ದು ಮಂಗಳೂರಿನ ಬಿ.ಎಂ. ಪ್ರೆಸ್‍ನಲ್ಲಿ. ಅಂದರೆ ಬಾಸಲ್ ಮಿಷನ್‍ನ ಮುದ್ರಣಾಲಯದಲ್ಲಿ, 1929ರಲ್ಲಿ. ದೆಹಲಿಯ ಏಷ್ಯನ್ ಎಜುಕೇಶನಲ್ ಸರ್ವೀಸಸ್ ಇದರ ಸುಲಭ ಬೆಲೆಯ ಆವೃತ್ತಿಯನ್ನು 1983ರಲ್ಲಿ ತಂದಿತು. ಇದು ಹಲವು ಮರು ಮುದ್ರಣಗಳನ್ನು ಕಂಡಿದೆ. ಇದಕ್ಕೂ ಮುಂಚೆ ವಿಶೇಷ ಜನಸಾಮಾನ್ಯರ ಆವೃತ್ತಿ 1929ರಲ್ಲಿ ಬಂದಿದ್ದು.

ಜೀಗ್ಲರ್ ನಿಘಂಟಿನಲ್ಲಿ ಕಾಣಬಹುದಾದ ಕ್ರಮಗಳನ್ನು ಹೀಗೆ ಪಟ್ಟಿ ಮಾಡಬಹುದು: (1). ಇಂಗ್ಲಿಷ್ ಗಾದೆಗಳಿಗೆ, ನುಡಿಗಟ್ಟಿಗೆ ಅಚ್ಚಕನ್ನಡ ಪರ್ಯಾಯ ಪದಗಳನ್ನು, ವಾಕ್ಯಗಳನ್ನು ಕೊಡುವುದು. (2) ನೇರ ಸಮಾನಾರ್ಥಕ ಪದಗಳನ್ನು ಒದಗಿಸುವುದು. (3) ಅನುವಾದಗಳನ್ನು ಸೃಷ್ಟಿಸುವುದು ಮತ್ತು (3) ಸ್ವಲ್ಪ ಲಘು ರೀತಿಯಲ್ಲಿ, ತಮಾಷೆ ಎನ್ನಿಸಬಹುದಾದ ಪದಸೃಷ್ಟಿ ಮಾಡುವುದು. ಈ ಎಲ್ಲವುಗಳಿಂದ ಈ ನಿಘಂಟು ಸೊಗಸಾಗಿ ಓದಿಸಿಕೊಳ್ಳುತ್ತದೆ.

ಮೊದಲು ಕೆಲವು ಪರ್ಯಾಯ ನುಡಿಗಟ್ಟುಗಳನ್ನು ನೋಡಬಹುದು: Familiarity breeds contempt: ನಿತ್ಯ ಹೋದರೆ ನುಚ್ಚಿಗೆ ಸಮ; The secret is out: ಗುಟ್ಟು ಬೈಲಿಗೆ ಬಿದ್ದಿದೆ; From smoke into smother: ಹಳ್ಳಕ್ಕೆ ಹೆದರಿ ಹೊಳೆಯಲ್ಲಿ ಬೀಳು; Cry over spilled milk: ಎಣ್ಣೆ ಚೆಲ್ಲಿ ಅಳು; An oily tongue: ಬಾಳೆ ಎಲೆಗೆ ತುಪ್ಪ ತೊಡೆದಂತೆ ನುಣ್ಣಗೆ ಆಡುವವನು; The child is father to the man: ಮೂರು ವರ್ಷದ ಬುದ್ಧಿ ನೂರು ವರ್ಷದ ತನಕ.

ಕೆಲವು ಹೊಸ ಪ್ರಯೋಗಗಳನ್ನೂ ನೋಡಿ: Self-contradiction: ಸ್ವೋಕ್ತಿವಿಘಾತ; Personification: ಪುರುಷೋಪಮಾಲಂಕಾರ, Pluperfect: ಅತೀತ ಭೂತಕಾಲ, Metonymy: ಅಜಹಲ್ಲಕ್ಷಣ: ಊರು ಮೊರೆ ಇಡುತ್ತದೆ ಅಂದರೆ ಊರ ಜನ ಮೊರೆ ಇಡುತ್ತಿದ್ದಾರೆ ಎಂದು; Oxygen: ಪ್ರಾಣವಾಯು; Lipservice: ಬಾಯುಪಾಸನೆ, Waxing moon: ವೃದ್ಧಿ ಚಂದ್ರ.

ಸಮಾನಾರ್ಥಕ ಪದಗಳನ್ನು ನೋಡಿ: Realistic: ವಸ್ತುತ್ರ್ವವಾದಿ; Pine apple: ‘ಫರಂಗಿ’ ಹಲಸಿನ ಹಣ್ಣು; Salivary gland: ಲಾಲಾಕೋಶ; Idiot: ಜಾತಮೂರ್ಖ; Organ of action: ಕರ್ಮೇಂದ್ರಿಯ; Organ of sense: ಜ್ಞಾನೇನಿಂದ್ರಿಯ; Organ of mind: ಅಂತರಿಂದ್ರಿಯ; Organ of speech: ವಾಗಿಂದ್ರಿಯ.

ಇನ್ನು ಕೆಲವು ತಮಾಷೆ ಅನ್ನಿಸುವ ಲಘು ಪ್ರಯೋಗಗಳನ್ನು ನೋಡಿ: Precocious: ಬಾಲಫ್ರೌಡ; Ostrich: ಶ್ಯಾನುಕುಕ್ಕುಟ; Promise breaker: ದ್ವಿಜಿಹ್ವ; Elope: ಮಿಂಡನ ಬೆನ್ನು ಹತ್ತಿ ಓಡಿ ಹೋಗು.

ಕೆಲವು ಗ್ರಾಮ್ಯ ನಿಜ. ಆದರೆ ನಿಘಂಟುಕಾರನ ಕೆಲಸ ಜನ ಪ್ರಯೋಗಗಳನ್ನು ವಿರೂಪಗೊಳಿಸಿದೇ ದಾಖಲಿಸುವುದು. ಕೆಲವು ಬಾರಿ ಕೆಲವು ವಿವರಗಳು ಓದಿಗಾಗಲಿ ಅರ್ಥದೃಷ್ಟಿಯಿಂದಾಗಲಿ ಸಹಾಯಕವಾಗಿಲ್ಲ, ತುಂಬ ಕೃತಕ ಎನ್ನಿಸುತ್ತವೆ. ಉದಾಹರಣೆಗೆ Congratulate: ಪರರಿಗೆ ಶುಭೋದಯವಾದದಕ್ಕಾಗಿ ತನಗೆ ಆನಂದವಾಯಿತೆಂದು ಹೇಳು; Optical: ದರ್ಶನಾನುಶಾಸನ ಸಂಬಂಧವಾಗಿ.

ನಿಜ, ಜೀಗ್ಲರ್ ನಿಘಂಟು ಕಿಟ್ಟೆಲ್‍ರ ನಿಘಂಟಿಗೆ ಪರ್ಯಾಯವಲ್ಲ. ಆದರೆ ಪೂರಕವಾಗಬಲ್ಲದು. ಮತ್ತೆ, ಜೀಗ್ಲರ್ ಕೃತಿ ಕಿಟ್ಟೆಲ್ಲರ ಕೃತಿಗಿಂತ ಎಂಟು ವರ್ಷ ಮುಂಚೆ ಬಂದದ್ದು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು