ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆದಾಡುತ್ತಿದ್ದ ‘ರಕ್ತರಾತ್ರಿ’!

Last Updated 29 ಆಗಸ್ಟ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ರಂಗನೇಪಥ್ಯದಲ್ಲಿರುವವರು ಬೆಳಕಿಗೆ ಬರುವುದು ಕಡಿಮೆ. ಆದರೆ ನಾಡಂಗ ಬಸವರಾಜ ನೇಪಥ್ಯದಲ್ಲಿದ್ದುಕೊಂಡೇ ಅದರ ಗೆರೆಯನ್ನೂ ದಾಟಿ ಬಳ್ಳಾರಿಯ ರಂಗಭೂಮಿಯನ್ನು ತಮ್ಮ ಪ್ರತಿಭೆಯ ಬೆಳಕಿನಿಂದ ಪ್ರಜ್ವಲಿಸಿದವರು. ಸದ್ದಿಲ್ಲದೇ ಸರಿದುಹೋದವರು.

ಏಳೆಂಟು ವರ್ಷದ ಹಿಂದೆ ಬಳ್ಳಾರಿಯ ರಂಗಮಂದಿರದಲ್ಲಿ ಮಹದೇವ ತಾತಾ ಕಲಾ ಸಂಘ ಏರ್ಪಡಿಸಿದ್ದ ‘ರಕ್ತರಾತ್ರಿ’ ಪೌರಾಣಿಕ ನಾಟಕ ಇನ್ನೇನು ಶುರುವಾಗಬೇಕಿತ್ತು.

‘ರಕ್ತರಾತ್ರಿ’ ನಾಟಕದ ಅರ್ಜುನನಾಗಿ

ದುರ್ಯೋಧನನ ಪಾತ್ರಧಾರಿಯಾಗಿದ್ದ ಗಾದಿಗನೂರು ಹಾಲಪ್ಪ ಯಾಕೋ ಬರಲಿಲ್ಲ. ಹಾಗೆಂದು ನಾಟಕವನ್ನು ಮುಂದೂಡಲು ಆಗುವುದೇ? ಕೊನೇ ಕ್ಷಣದಲ್ಲಿ, ಆಯೋಜಕ ಪುರುಷೋತ್ತಮ ಹಂದ್ಯಾಳ್‌ ಅವರು ನಾಡಂಗ ಬಸವರಾಜ ಅವರ ಕಡೆಗೆ ನೋಡಿದರು. ಆ ನೋಟದಲ್ಲೊಂದು ಅಸಹಾಯಕ ಕೋರಿಕೆ ಇತ್ತು.

ರಂಗಸಜ್ಜಿಕೆಯನ್ನು ಸಿದ್ಧಪಡಿಸಿ, ತೆರೆಯನ್ನು ಮೇಲಕ್ಕೆ ಎಳೆಯಲು ಸಜ್ಜಾಗಿದ್ದ ಬಸವರಾಜ ಅವರಿಗೆ ಅದು ಅರ್ಥವಾಯಿತು. ನಾಟಕ ಶುರುವೂ ಆಯಿತು. ದುರ್ಯೋಧನ ಪಾತ್ರವೂ ಬಲು ಸೊಗಸಾಗಿ ಮೂಡಿಬಂತು. ಪಾತ್ರದ ಕೊರತೆ ತುಂಬಿದ ಬಗೆ ಮಾತ್ರ ಬಲ್ಲವರಿಗಷ್ಟೇ ಗೊತ್ತಾಯಿತು.

ಮೂರು ದಿನದ ಹಿಂದೆ ಬಳ್ಳಾರಿಯಲ್ಲಿ ಬಸವರಾಜ ಅವರು ಕೊನೆಯುಸಿರೆಳೆದಾಗ ಜಿಲ್ಲೆಯ ಕಲಾವಿದರಲ್ಲಿ ಇಂಥ ಹಲವು ನೆನಪುಗಳು ಒತ್ತರಿಸಿಕೊಂಡು ಬಂದವು. ಬಸವರಾಜ ಅವರಿಗೆ ಎಲ್ಲ ನಾಟಕಗಳಲ್ಲೂ ನೇಪಥ್ಯದ ಕೆಲಸಗಳ ಜೊತೆಗೆ, ಆಪತ್ತಿಗಾಗುವ ಇಂಥ ನೆಂಟನ ಪಾತ್ರ ಇದ್ದೇ ಇರುತ್ತಿತ್ತು!

ಬಿಸಿಲನಾಡಿನ ರಂಗಭೂಮಿ ಕ್ಷೇತ್ರದಲ್ಲಿ ಬಸವರಾಜ ಏನಾಗಿದ್ದರು ಎಂಬುದಕ್ಕಿಂತ, ಏನಾಗಿರಲಿಲ್ಲ ಎಂದು ಕೇಳಿಕೊಳ್ಳುವುದೇ ಉಚಿತ. ಅವರೊಬ್ಬ ನೇಪಥ್ಯ ರಂಗಕಲಾವಿದ. ರಂಗಮಂಚದ ಹಿಂದೆ ಅವರಿಗಾಗಿ ಇರುವ ಕೆಲಸಗಳು ಕಮ್ಮಿಯೇನಲ್ಲ. ಆದರೆ ಬಸವರಾಜ ತೆರೆ ಎಳೆಯುವುದಷ್ಟೇ ಅಲ್ಲ, ಪಾತ್ರಗಳ ಕೊರತೆ ಬಿದ್ದರೆ ದಿಢೀರ್‌ ಕಲಾವಿದರಾಗಿ ಪರಕಾಯ ಪ್ರವೇಶ ಮಾಡಿಬಿಡುತ್ತಿದ್ದರು.

ಅಷ್ಟೆಯೇ? ರಂಗ ಸಜ್ಜಿಕೆಯನ್ನು ರೂಪಿಸುತ್ತಲೇ, ಹೊಸ ಕಲಾವಿದರು ನಾಟಕದ ನಡುವೆ ಮರೆತ ಮಾತುಗಳನ್ನು ಸೂಕ್ಷ್ಮವಾಗಿ ಎತ್ತಿಕೊಡುತ್ತಿದ್ದರು. ಯಾವ ನಾಟಕದ ಯಾವ ಪಾತ್ರದ ಸಂಭಾಷಣೆ ಬೇಕು? ಎಲ್ಲವೂ ಅವರ ಬಾಯಲ್ಲಿತ್ತು. ಅವರಿಗೆ ಯಾವುದೇ ನಾಟಕದ ಪುಸ್ತಕ ಬೇಕಿರಲಿಲ್ಲ.

ಪೌರಾಣಿಕ ನಾಟಕಗಳಾದ ‘ರಕ್ತರಾತ್ರಿ’, ‘ಕುರುಕ್ಷೇತ್ರ’, ಜನಪ್ರಿಯ ಸಾಮಾಜಿಕ ನಾಟಕಗಳಾದ ‘ರತ್ನಮಾಂಗಲ್ಯ’, ‘ಅಣ್ಣ–ತಂಗಿ’, ‘ಕಲಿತ ಕಳ್ಳ’, ‘ಆಶಾ ಲತಾ’, ‘ಗೌರಿ ಗೆದ್ದಳು’ ಮೊದಲಾದವು ಅವರಿಗೆ ಬಾಯಿಪಾಠವಾಗಿಬಿಟ್ಟಿದ್ದವು.

ಹಂದ್ಯಾಳ್‌ ಮಾತ್ರ ‘ಬಸವರಾಜ ಅವರೊಬ್ಬ ನಡೆದಾಡುವ ರಕ್ತರಾತ್ರಿ’ ಎಂದೇ ಸ್ಮರಿಸಿಕೊಳ್ಳುತ್ತಾರೆ. ಈ ನಾಟಕದ ನವಲಿಪಕ್ಕ, ಕಲಿ, ಶಿವ, ಗಂಧರ್ವ, ಸೈನಿಕನ ಪಾತ್ರಗಳಿಗೆ ಈ ಕಲಾವಿದ ಜೀವ ತುಂಬುತ್ತಿದ್ದರು. ಅದರಾಚೆಗೆ ಎಲ್ಲರಿಗೂ ಅನಧಿಕೃತ ಸಹನಿರ್ದೇಶಕರೂ ಆಗಿಬಿಡುತ್ತಿದ್ದರು.

ಬದುಕಿನ ಕಷ್ಟ ಕಾರ್ಪಣ್ಯಗಳ ನಡುವೆಯೂ ಅವರು ನಾಟಕದ ಮಾತುಗಳನ್ನು ಒಂದಿನಿತೂ ಮರೆತಿರಲಿಲ್ಲ. ನಾಟಕದ ಚರ್ಚೆ ಬಂತೆಂದರೆ ಎಲ್ಲವನ್ನೂ ಮರೆಯುತ್ತಿದ್ದರು. ತುರ್ತು ಸಂದರ್ಭಗಳಲ್ಲಿ ಯಾರೇ ನಟರು ಕೈಕೊಟ್ಟರೂ, ನಾಡಂಗ ಅವರೇ ದಿಢೀರ್‌ ಕಲಾವಿದರಾಗಿ ಬಣ್ಣ ಹಚ್ಚುತ್ತಿದ್ದರು!

ಹವ್ಯಾಸಿ ನಾಟಕಗಳಿಗೆ ಬೇಕಾದ ಸಾಮಗ್ರಿಗಳ ಸರಬರಾಜುದಾರರಾಗಿಯೂ ಅವರ ಸೇವೆಯನ್ನು ಹಲವರು ಸ್ಮರಿಸುತ್ತಾರೆ.

‘ಯಾವುದೇ ನಾಟಕವಿರಲಿ, ಆರಂಭದ ಪೂಜೆಗೆ ಬೇಕಾದ ಎಲ್ಲ ಸಾಮಗ್ರಿಗಳನ್ನೂ ಅವರೇ ಮನೆಯಿಂದ ತರುತ್ತಿದ್ದರು. ನಾಡಂಗ ಬಸವರಾಜ ಇದ್ದಾರೆ ಎಂದರೆ ಒಂದು ಹವ್ಯಾಸಿ ನಾಟಕಕ್ಕೆ ಏನು ಬೇಕೋ ಅವೆಲ್ಲವೂ ಅವರೊಂದಿಗೇ ಬರುತ್ತಿದ್ದವು. ನಾಟಕವನ್ನು ಆ ಪರಿಯಲ್ಲಿ ಮೈಗೆ ಹಚ್ಚಿಕೊಂಡವರು ಇನ್ನೊಬ್ಬರಿಲ್ಲ’ ಎಂಬುದು ರಂಗಕರ್ಮಿ ಕೆ.ಜಗದೀಶ್‌ ಅವರ ನೆನಪು.

ನಾಟಕಗಳಿಗೆ ಕಲಾವಿದರ ಕೊರತೆ ಬಿದ್ದಾಗ ಜಿಲ್ಲೆಯ ಯಾವ್ಯಾವುದೋ ಮೂಲೆಗಳಿಂದ ಕರೆಸಿ ಜೋಡಿಸಿ ನಿಲ್ಲಿಸಿಬಿಡುವಂಥ ‘ಕಲಾವಿದರ ಸಂಪರ್ಕ ಶ್ರೀಮಂತಿಕೆ’ಯೂ ಅವರಿಗೆ ಇತ್ತು.

ನಾಟಕ ಅಕಾಡೆಮಿಯು ನೇಪಥ್ಯ ಕಲಾವಿದರಿಗಾಗಿ ನೀಡುತ್ತಿದ್ದ ಪದ್ದಣ್ಣ ಪ್ರಶಸ್ತಿ ಪಡೆದ ಬಳಿಕವೂ ಅವರ ಬದುಕೇನೂ ಬದಲಾಗಲಿಲ್ಲ. ನಾಟಕದ ಕೆಲಸಕ್ಕೆ ಯಾರೇ ಕರೆದರೂ ಅವರು ಮೊದಲು ಕೇಳುತ್ತಿದ್ದುದು ಟೀ ಮತ್ತು ಗಣೇಶ ಬೀಡಿ ಅಷ್ಟೇ. ದೇಹದಲ್ಲಿ ಕಸುವಿರುವವರೆಗೂ ಅವುಗಳು ಅವರ ಸಂಗಾತಿಯಾಗಿದ್ದವು.

ನೇಪಥ್ಯದಲ್ಲಿ ಇದ್ದುಕೊಂಡೇ ರಂಗಮಂಚವನ್ನು ಶ್ರೀಮಂತಗೊಳಿಸಿದ ಇಂಥ ಅಪರೂಪದ ಕಲಾವಿದರೇಕೆ ಇದ್ದೂ ಇಲ್ಲದಂತೆ ಸರಿದುಹೋದರು ಎಂಬ ಪ್ರಶ್ನೆಗೆ ರಂಗಭೂಮಿ ಕ್ಷೇತ್ರದ ಯಾರಲ್ಲೂ ಉತ್ತರವಿಲ್ಲ. ಇತ್ತೀಚೆಗೆ ಕಣ್ಮುಚ್ಚಿದ ಮೇಕಪ್‌ ವೆಂಕಟೇಶ್‌ ಕೂಡ ಅಂಥ ಕಲಾವಿದರಲ್ಲಿ ಒಬ್ಬರಾಗಿದ್ದರು. ದಿಢೀರನೆ ನೋಡಿದರೆ ಈ ಇಬ್ಬರೂ ಸಾಮಾನ್ಯ ದಾರಿಹೋಕರಂತೆ ಕಾಣುತ್ತಿದ್ದರು. ಆದರೆ ಅಂತರಾಳದಲ್ಲಿ ಪ್ರತಿಭೆ ಪ್ರಜ್ವಲಿಸುತ್ತಿತ್ತು.

‘ಆಪತ್ತಿಗಾದವನೇ ನೆಂಟ’ ಎಂಬ ಗಾದೆ ಮಾತನ್ನೇ ಬದುಕಿದವರು ಬಸವರಾಜ. ಅವರಿಗೆ ರಂಗನೇಪಥ್ಯ ಮತ್ತು ಅದರಾಚೆಗಿನ ರಂಗಿನ ಲೋಕ ಬೇರೆ ಬೇರೆ ಆಗಿರಲಿಲ್ಲ ಎಂಬುದೇ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT