ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ. ಎಂ.ಎ.ಹೆಗಡೆ: ಉಳಿದಿರುವುದೀಗ ಮೌನದ ಮಂಟಪ

Last Updated 18 ಏಪ್ರಿಲ್ 2021, 5:58 IST
ಅಕ್ಷರ ಗಾತ್ರ

ಯಕ್ಷಗಾನ ಅಕಾಡೆಮಿ ಅಧ್ಯಕ್ಷ, ವಾಗ್ಮಿ, ತಾಳಮದ್ದಲೆ ಅರ್ಥಧಾರಿ, ಪ್ರಸಂಗಕರ್ತರಾಗಿ ಖ್ಯಾತಿ ಹೊಂದಿದ್ದ ಪ್ರೊ. ಎಂ.ಎ. ಹೆಗಡೆ ಇನ್ನು ನೆನಪು ಮಾತ್ರ. ಅವರ ಜತೆಗಿನ ಒಡನಾಟವನ್ನು ಯಕ್ಷಗಾನ ಅಕಾಡೆಮಿ ಸದಸ್ಯೆ ಆರತಿ ಪಟ್ರಮೆ ಅವರು ಆಪ್ತವಾಗಿ ಇಲ್ಲಿ ಹಂಚಿಕೊಂಡಿದ್ದಾರೆ.

‘ಹೇಗೆ ನಂಬಲಿ? ಹೇಗೆ ವಿದಾಯ ಹೇಳಲಿ? ಒಂದೂ ಅರ್ಥವಾಗದೇ ತಳಮಳಿಸುತ್ತಿದ್ದೇನೆ. ಹೌದು. ಪ್ರೊ. ಎಂ.ಎ. ಹೆಗಡೆಯವರು ಯಕ್ಷಗಾನ ಅಕಾಡೆಮಿಯ ಸದಸ್ಯರಾದ ನಮಗೆ ‘ಮಾರ್ಗದರ್ಶಕರರೆಂದರೆ ಹೇಗಿರುತ್ತಾರೆ’ ಎಂಬುದನ್ನು ಪರಿಚಯಿಸಿದವರು. ನನ್ನ ಪಾಲಿಗೆ ಅಕ್ಷರಶಃ ‘ಫಾದರ್ ಫಿಗರ್’! ಅಕಾಡೆಮಿ ರೂಪುಗೊಂಡ ಬಳಿಕ ಪದಗ್ರಹಣದ ದಿನ ಅವರನ್ನು ಮೊದಲಬಾರಿಗೆ ಭೇಟಿ ಮಾಡಿದಾಗ ಅವರಲ್ಲಿ ಮಾತಾಡಲು ಕೊಂಚ ಭಯವಿತ್ತು.

ಆದರೆ ಹೊರನೋಟದಲ್ಲಿ ಬಹಳ ಗಂಭೀರವದನರಾಗಿ ಕಾಣುವ ಅವರ ಒಳಮನಸ್ಸು ಎಷ್ಟು ಒಳ್ಳೆಯದು ಎಂದು ಅರ್ಥವಾಗಲು ಮತ್ತೆರಡು ಮೀಟಿಂಗುಗಳು ಸಾಕಾಗಿದ್ದವು. ‘ಈ ಹುಡುಗಿಗೆ ಏನೂ ಗೊತ್ತಾಗುವುದಿಲ್ಲ..’ ಎಂದು ಅವರು ನಗುವಾಗೆಲ್ಲ ಮನೆಯ ಮೊಮ್ಮಗಳ ಕುರಿತು ಅಜ್ಜ ತೋರುವ ವಾತ್ಸಲ್ಯವಷ್ಟೇ ಇತ್ತು. ಅಲ್ಲಿಂದ ಮೊದಲುಗೊಂಡು ‘ಈ ಎಳೆಯ ಹುಡುಗಿ ಯಾಕೆ ಅಕಾಡೆಮಿಗೆ ಅಂದುಕೊಂಡಿದ್ದೆ. ಅವಳ ಸಾಮರ್ಥ್ಯ ಏನು ಅಂತ ಇವತ್ತು ತೋರಿಸಿಯೇ ಬಿಟ್ಟಳು. ಅಕಾಡೆಮಿಗೆ ಇಂತಹಾ ಸದಸ್ಯರೇ ಬೇಕು’ ಎಂದು ನಾವು ತುಮಕೂರಿನಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದ ಅಧ್ಯಕ್ಷೀಯ ನುಡಿಯಲ್ಲಿ ಮನಃಪೂರ್ವಕವಾಗಿ ನುಡಿದಿದ್ದರು.

ಆ ಬಳಿಕದ ಹಲವು ಕಾರ್ಯಕ್ರಮಗಳಿಗೆ ಅವರು ನೀಡಿದ ಬೆಂಬಲ ಅಷ್ಟಿಷ್ಟಲ್ಲ. ‘ಮಾಡಬಹುದಾ?’ ಎಂದು ಕೇಳಿದಾಗೆಲ್ಲ, ‘ಹಾಗೆ ಕೇಳುವುದೆಂಥದ್ದು. ಮಾಡಬೇಕು ಅನ್ನಿ. ನೀವು ಸದಸ್ಯರು. ಯಕ್ಷಗಾನಕ್ಕೆ ಇದರಿಂದ ಏನಾದರೂ ಪ್ರಯೋಜನವಿದೆ ಅನ್ನಿಸಿದರೆ ಖಂಡಿತಾ ಪ್ರಸ್ತಾವನೆ ಕೊಡಿ. ಮೀಟಿಂಗ್‌ನಲ್ಲಿ ಪಾಸಾಗುತ್ತದೆ’ ಎಂದು ಬೆನ್ನು ತಟ್ಟಿ ಉತ್ತೇಜಿಸಿದವರು. ಮೀಟಿಂಗ್‌ಗಳಲ್ಲಾದರೂ ಅಷ್ಟೇ. ಒಂದು ಉತ್ತಮ ಕಾರ್ಯಕ್ರಮ ಅನ್ನುವುದು ಅವರ ಮನಸ್ಸಿಗೆ ಬಂದರೆ ಸಾಕು, ಎಲ್ಲ ಸದಸ್ಯರನ್ನೂ ರಿಜಿಸ್ಟ್ರಾರ್‌ರನ್ನೂ ಅವರೇ ಒಪ್ಪಿಸಿಯಾರು. ಹಾಗೆಂದು ಅವರ ಮಾತುಗಳಲ್ಲಿ ಎಂದೂ ಅಧಿಕಾರದ ದರ್ಪ ಇರಲಿಲ್ಲ. ಮೆಲುವಾದ ಧ್ವನಿ. ಹಿತವಾದ ಮಾತು. ಆದರೆ ಅಷ್ಟೇ ಖಡಕ್.

ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಯಾವ ಕಾರ್ಯಕ್ರಮವನ್ನೂ ಮಾಡದ ಪರಿಸ್ಥಿತಿ ಇದ್ದಾಗ ಆನ್‌ಲೈನ್ ಕಾರ್ಯಕ್ರಮದ ಬಗ್ಗೆ ಚರ್ಚೆ ಮಾಡಿದ್ದೆವು. ‘ಕಲಾವಿದರನ್ನೇ ಮಾತನಾಡಿಸಿ’ ಎಂದು ಸ್ಪಷ್ಟ ಮಾರ್ಗದರ್ಶನ ಕೊಟ್ಟವರು ಅವರು. ‘ಮಾತಿನ ಮಂಟಪ’ದಲ್ಲಿ ನೂರು ಕಲಾವಿದರನ್ನು ಮಾತಾಡಿಸಿದಾಗ ಪ್ರತಿಯೊಂದರಲ್ಲೂ ಭಾಗವಹಿಸಿ, ತನ್ನ ಇಳಿವಯಸ್ಸಿನಲ್ಲಿ ಎರಡೆರಡು ಗಂಟೆ ಅದಕ್ಕಾಗಿ ಮೀಸಲಿಟ್ಟು ಎಲ್ಲ ಕಲಾವಿದರ ಹತ್ತಿರವೂ ಮಾತಾಡಿದರು. ಒಂದೊಮ್ಮೆ ಸಂದರ್ಶನದಲ್ಲಿ ಭಾಗವಹಿಸಲಾಗದೇ ಹೋದಾಗ ನಂತರವಾದರೂ ಆಯಾ ಕಲಾವಿದರಿಗೆ ಫೋನಾಯಿಸಿ ಮಾತನಾಡುತ್ತಿದ್ದರು. ಸರ್ಕಾರದ ಯೋಜನೆಗಳನ್ನು ಮತ್ತೆ ಮತ್ತೆ ಕಲಾವಿದರ ಗಮನಕ್ಕೆ ತಂದರು. ಅಕಾಡೆಮಿ ಮತ್ತು ಕಲಾವಿದರ ನಡುವೆ ಬಂಧವಿರಬೇಕು ಎಂದರು.

ನಂತರದ ‘ನೆನಪಿನ ಬುತ್ತಿ’ ಅವರದೇ ಆಕಾಂಕ್ಷೆಯ ಕೂಸು. ನೂರು ಮಾಡಬೇಕಿತ್ತು. ನನಗೆ ಕಾರ್ಯದ ಒತ್ತಡದಲ್ಲಿ ದಡ ಮುಟ್ಟಿಸುವುದು ಕಷ್ಟವಾದೀತು ಅಂದಾಗ ಐವತ್ತಕ್ಕೆ ನಿಲ್ಲಿಸಿ... ಇಷ್ಟು ಮಾಡಿದ್ದೀರಲ್ಲ.. ಯಾಕೆ ಯೋಚನೆ? ಎಂದು ನಿರುಮ್ಮಳವಾಗಿಸಿದವರು ಅವರು. ನಿಲ್ಲಿಸದೇ ಇದ್ದಿದ್ದರೆ ಬಹುಶಃ ನಿನ್ನೆಯವರೆಗೂ ಅವರು ಮಾತಾಡಿಯೇ ಮಾತಾಡುತ್ತಿದ್ದರು!

‘ಈ ಸಂದರ್ಶನಗಳನ್ನು ಬರೆಹರೂಪಕ್ಕೆ ಇಳಿಸೋಣ ಸರ್... ಒಳ್ಳೆಯ ದಾಖಲೆ ಆಗುತ್ತದೆ’ ಅಂದಾಗ ಮಾತ್ರ ಯಾಕೋ ‘ಬೇಡ ಮಹರಾಯಿತಿ. ಮುಂದಿನ ಅವಧಿಯವರು ಬೇಕಿದ್ದರೆ ಮಾಡಿಕೊಳ್ಳಲಿ. ನನ್ನ ಅವಧಿಯಲ್ಲಿ ಇದಾಗುವುದಿಲ್ಲ’ ಎಂದುಬಿಟ್ಟರು. ಅವರೇಕೆ ಹಾಗಂದರೋ.. ಅಕಾಡೆಮಿ ಅಧ್ಯಕ್ಷರಾಗಿ ಅವರ ಅವಧಿ ಮುಗಿಸುವುದರೊಳಗೆ ಬದುಕಿನ ಅವಧಿ ಮುಗಿಸಿ ನಡೆದೇ ಬಿಟ್ಟರು.

‘ಮೊದಲ ಬಾರಿಗೆ ಅಧ್ಯಕ್ಷನಾದಾಗ ಸರ್ಕಾರ ಉರುಳಿತು. ಅಧಿಕಾರ ಹೋಯ್ತು, ಏನೂ ಮಾಡಲಿಕ್ಕಾಗಲಿಲ್ಲ. ಎರಡನೆಯಬಾರಿ ಏನಾದರೂ ಮಾಡೋಣ ಅನ್ನುವಷ್ಟರಲ್ಲಿ ಕೊರೋನಾಸುರನ ಕಾಟ’ ಎಂದು ಸಣ್ಣಗೆ ನಗುತ್ತಿದ್ದವರು, ಕೊರೊನಾಸುರ ಕಾಳಗ ಎಂಬ ಪ್ರಸಂಗವನ್ನೂ ಡಿ.ಎಸ್. ಶ್ರೀಧರ ಅವರ ಜೊತೆಗೆ ಬರೆದು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದವರು ಕಡೆಗೂ ಕಾಲನ ಕರೆಗೆ ಓಗೊಟ್ಟರೇ..ಕೋವಿಡ್ ಕರೆದೊಯ್ಯಿತೇ...

ಅನಾಥಭಾವ ಕಾಡುತ್ತಿದೆ ಸರ್... ಮಾತಿನ ಮಂಟಪದೊಳಗೆ ನಮ್ಮನ್ನೆಲ್ಲ ಮೌನಕ್ಕೆ ನೂಕಿ ಹೀಗೆ ಹೋಗಬಾರದಿತ್ತು ನೀವು...’

–ಆರತಿ ಪಟ್ರಮೆ,ಯಕ್ಷಗಾನ ಅಕಾಡೆಮಿ ಸದಸ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT