ಬುಧವಾರ, ಆಗಸ್ಟ್ 4, 2021
21 °C

ಅಡುಗೆ ಮನೆಯ ಆರದ ಬೆಂಕಿಯೂ

ದೀಪಾ ಫಡ್ಕೆ Updated:

ಅಕ್ಷರ ಗಾತ್ರ : | |

Prajavani

ಮಹಿಳೆಯೊಬ್ಬಳು ಬ್ರೆಡ್ಡಿನ ಹತ್ತು ಪ್ಯಾಕೇಟುಗಳನ್ನು ಕೊಂಡಾಗ ಗಾಬರಿಯಾಯ್ತು. ಎಲ್ಲಾದರೂ ಕಳೆದ ರಾತ್ರೆ ಎಂಟು ಗಂಟೆಗೆ ಪ್ರಧಾನ ಸೇವಕರು ಟಿವಿಯಲ್ಲಿ ಕಾಣಿಸಿಕೊಂಡು, ಇನ್ನು ಹದಿನೈದು ದಿನ ಬ್ರೆಡ್ಡಿಗೂ ಲಾಕ್‍ಡೌನ್ ಅಂತೇನಾದ್ರೂ ಮಾತಿನ ಮುತ್ತುದುರಿಸಿದ್ರೇ? ‘ಸ್ವಲ್ಪ ನ್ಯೂಸ್ ನೋಡು’ ಎನ್ನುವ ಪತಿಯ ಮಾತನ್ನು ಒಮ್ಮೊಮ್ಮೆ ಆದ್ರೂ ಕೇಳಬೇಕು ಅನಿಸಿತು.

ಲಾಕ್‍ಡೌನಿನಿಂದ ಸಂಜೆ ವಾಕಿಂಗ್‌ಗೂ ಸಂಚಕಾರ ಬಂದುದರಿಂದ ಪುಸ್ತಕವೊಂದನ್ನು ಹಿಡಿದು ಕೂತಿದ್ದೆ. ಹೊರಗೆ ರಸ್ತೆಯಿಂದ ‘ಟಪ್, ಟಪ್’ ಎಂಬ ಸದ್ದು ಕೇಳಿ ಎದ್ದು ನೋಡಲು ಉದ್ಯುಕ್ತಳಾದೆ. ‘ಇಡೀ ರಸ್ತೆಯ ಜವಾಬ್ದಾರಿ ನಿನ್ನದಲ್ಲಮ್ಮಾ, ನಮ್ಮ ರಸ್ತೆಯಲಿ ಬೇರೆ ಮನೆಗಳೂ ಇವೆ. ಬೇರೆಯವರೂ ವಾಸ ಮಾಡುತ್ತಿದ್ದಾರೆ. ಸಣ್ಣ ಸದ್ದಾದರೂ ಏನಿರಬಹುದೆಂದು ನೋಡಬೇಕಿಲ್ಲ’ ಎನ್ನುವ ಮಗಳ ಹಿತವಚನ ಕಿವಿಯಲ್ಲಿ ಗುಂಯ್‍ಗುಟ್ಟುತ್ತಿದ್ದರೂ ಹುಟ್ಟು ಸ್ವಭಾವವನ್ನು ನಿನ್ನೆ ಕಣ್ಣ ಮುಂದೆ ಹುಟ್ಟಿದವಳು ಏನೋ ಹೇಳಿದಳೆಂದು ಬಿಡಲಾಗುತ್ತದೆಯೇ?! ಎದ್ದು ನೋಡಿಯೇ ನೋಡಿದೆ!

ನೋಡಿದರೆ ಪಕ್ಕದ ಮನೆಯ ಭಾಮಿನಿ ಬಲು ಬಿಂಕದಿಂದ ತನ್ನ ಪತಿಯೊಂದಿಗೆ ಶಟ್ಲ್ ಆಡುತ್ತಿದ್ದಾಳೆ! ಈ ಭಾಮಿನಿಯ ಮೇಲೆ ನನಗೆ ಮೊದಲಿನಿಂದಲೂ ಸಣ್ಣ ಮತ್ಸರ ಮತ್ತು ಸ್ವಲ್ಪ ಪ್ರೀತಿ. ಪ್ರೀತಿ ಏಕೆಂದರೆ ತನ್ನ ಗಂಡನನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡಿರುವವಳೆಂದು. ನನ್ನ ಪತಿಯೊಂದಿಗೆ ಅವಳ ಪತಿ ಅಪರೂಪಕ್ಕೆ ಲೋಕಾಭಿರಾಮ ಮಾತಾಡುತ್ತಿದ್ದಾಗ ಭಾಮಿನಿಯ ಬರೀ ‘ರೀ...’ ಕರೆಗೆ ಓಗೊಟ್ಟು ‘ಬರ್ತೀನ್ ಸಾರ್’ ಎಂದು ಹೆದರಿ ಭಾಮಿನಿಯ ‘ರೀ...’ ಪೂರ್ಣ ಮುಗಿವಷ್ಟರಲ್ಲಿ ಮನೆಯೊಳಗಿರುತ್ತಿದ್ದ ಸಜ್ಜನ!

ಮತ್ಸರ ಏಕೆಂದರೆ, ಪತಿಯನ್ನು ಹದ್ದುಬಸ್ತಿನಲ್ಲಿಡಲು ದಶಕಗಳಿಂದ ಒದ್ದಾಡುತ್ತಿರುವ ನನ್ನಿಂದ ಆಗದೇ ಇರುವ ಮಹತ್ಕಾರ್ಯವನ್ನು ವರುಷಗಳಲ್ಲೇ ಅವಳು ಮಾಡಿಬಿಟ್ಟಿದ್ದಾಳೆಂದು. ಇರಲಿ, ಲಾಕ್‍ಡೌನಿನ ಕಾರಣ ಪಾಪ ಅಪರೂಪಕ್ಕೆ ಗಂಡ ಹೆಂಡತಿ ಆಡುತ್ತಿದ್ದಾರೆ ಎನಿಸಿದರೂ ಮನದ ಮೂಲೆಯಲ್ಲಿ ‘ಅದೆಷ್ಟು ದಿನ ಆಡುತ್ತಾಳೋ ನೋಡ್ತಿನಿ’ ಎಂದೂ ಅಂದುಕೊಂಡೆ. ನನ್ನ ನಾಲಗೆಯಲ್ಲಿ ಮಚ್ಚೆಯೇನಾದರೂ ಇದೆಯೋ ಎಂದು ನಾಲಗೆಯನ್ನು ತಿರುಗಿಸಿ ತಿರುಗಿಸಿ ಬೇರೆ ನೋಡಿದ್ದೆ. ಪಾಪ, ಒಂದು ವಾರದ ಬಳಿಕ ಸದ್ದೇ ಇಲ್ಲದ್ದಕ್ಕಾಗಿ ನಾನೇ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಂಪೌಂಡ್ ಬಳಿ ಹೋಗಿ ನೋಡಿದರೆ ಅಶೋಕವನದ ಸೀತಾಮಾತೆಯಂತೆ ಸೋತ ಮುಖ ಹೊತ್ತು ನಿಂತಿದ್ದಳು. ಛೇ! ಏನಾಯಿತೋ!

‘ಹಲೋ ಭಾಮಿನಿ, ಯಾಕೆ? ಆಡ್ತಾ ಇಲ್ವಾ ಈವಾಗ?’.

‘ಅಯ್ಯೋ, ಬಿಡ್ರಿ ಸುಮ್ನೆ. ಆಟ ಆಡಿದ ಮೇಲೆ ಇವ್ರೇನೋ ಸುಸ್ತಾಯಿತು ಅಂತ ಕಾಲು ಚಾಚಿಕೊಂಡು ಮಲಗ್ತಾರೆ. ನಾನು ಅಡುಗೆ ಮಾಡ್ಬೇಕಲ್ವಾ? ಅದೂ ಮೊದಲಿಗಿಂತ ಈಗ ಜಾಸ್ತಿ ಬೇರೆ. ಮಕ್ಕಳು, ಇವ್ರು, ಮಾವ... ಇದುವರೆಗೂ ತಿಂಡಿಗಳನ್ನೇ ನೋಡಿಲ್ವಾ ಅನ್ನೋ ಹಾಗೆ ತಿಂತಾರೆ ಮಾರ್‍ರೇ. ಜೀವನನೇ ಸಾಕಾಗಿಬಿಟ್ಟಿದೆ’ ಎಂದಾಗ ಮರುಕ ಉಕ್ಕಿತು. ಸ್ಯಾನಿಟೈಸ್ ಮಾಡಿದ ಕೈಗಳಿಂದ ದೂರದಿಂದಲೇ ಸಾಂತ್ವನ ಹೇಳಿದೆ.

ಕೊರೊನಾ ಕ್ರಿಮಿಯೊಂದು ಈ ಪರಿಯಲ್ಲಿ ಜಗತ್ತನ್ನೇ ಆಡಿಸುತ್ತಿರುವ ಹೊತ್ತಿನಲ್ಲಿ ಪ್ರಪಂಚದ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಚಟುವಟಿಕೆಗಳು ಸ್ಥಗಿತಗೊಂಡು ಜನ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕೈತೊಳೆಯುವುದರಲ್ಲಿ ನಿರತರಾದರು. ಆದರೆ ಈ ಹೊತ್ತಿನಲ್ಲಿ ವೈದ್ಯನಾರಾಯಣರು, ಪೋಲಿಸ್ ನಾರಾಯಣರು ಮಾತ್ರ ಮೊದಲಿಗಿಂತಲೂ ನೂರು ಪಟ್ಟು ಹೆಚ್ಚು ದುಡಿವ ಅವತಾರವೆತ್ತಬೇಕಾಯಿತು. ಇವರ ಜೊತೆಯಲ್ಲೇ ಪ್ರತೀ ಅಡುಗೆಮನೆಯಲ್ಲೂ ಸಾಕ್ಷಾತ್ ಅನ್ನಪೂರ್ಣೆಯರು ಅವತಾರವೆತ್ತಬೇಕಾಯಿತು ಎಂದು ಭಾಮಿನಿಯ ಮಾತಿನಿಂದ ಅರಿವಾಯಿತು.

ಅಡುಗೆ ಮನೆಯೆಂದರೆ ಒಂದ್ಹೊತ್ತು ಬೇಯಿಸುವ ಪಾಕಶಾಲೆ ಎಂದಷ್ಟೇ ನಾನು ಮೊದಲಿನಿಂದಲೂ ತಿಳಿದವಳು. ಪತಿಗೆ ಊರಿನ ಭಕ್ಷ್ಯಭೋಜ್ಯಗಳನ್ನು, ಮಗಳಿಗೆ ಪ್ರಪಂಚದ ಇತರ ಕಡೆಗಳ ಖಾದ್ಯಗಳನ್ನು ಚಪ್ಪರಿಸುವ ಅದಮ್ಯ ಹಂಬಲವಿದ್ದರೂ ನನ್ನ ಉದಾಸೀನ ನೋಡಿ ‘ಪಾಪ ಹೋಗ್ಲಿ’ ಎಂದು ನನ್ನನ್ನೂ ನನ್ನ ಉದಾಸೀನವನ್ನೂ ಉದಾರ ಮನಸ್ಸಿನಿಂದ ಸ್ವೀಕರಿಸಿದ್ದರು. ನಾನು ಮನೆಯ ಪುಟ್ಟ ಅಡುಗೆಕೋಣೆ ನೋಡಿ, ‘ತುಂಬಾ ಚಿಕ್ಕದು ಅಡುಗೆ ಮನೆ’ಯೆಂದಾಗ ಮಗಳು, ‘ನೀನು ಮಾಡೋ ಅಡುಗೆಗೆ ಧಾರಾಳ ಸಾಕು’ ಎಂದು ಮುಲಾಜಿಲ್ಲದೇ ಅಂದಿದ್ದಳು. ದಪ್ಪ ಚರ್ಮದ ನನಗೆ ಹೀಗೆ ಯಾವ ಟೀಕೆಗಳೂ ಬಾಧಿಸದೇ ಇದ್ದರೂ ಲಾಕ್‍ಡೌನಿನ ವಿಶೇಷ ಅಡುಗೆ ಎಂಬ ಬಂಧನ ಮಾತ್ರ ಬಾಧಿಸಿತು. ಹೊರಗಿನ ಕುರುಕುರು ತಿಂಡಿಗಳೂ ಆಪತ್ತು ತರುವ ಸಾಧ್ಯತೆಯ ಭೀತಿ ಇದ್ದಾಗ ನಾನೂ ಅಡುಗೆಮನೆಯ ಒಂದ್ಹೊತ್ತು ಬೇಯಿಸುವ ಫಜೀತಿಯಿಂದ ಮೂರ್ಹೊತ್ತು ಬೇಯಿಸಬೇಕಾದ ಫಜೀತಿಗೆ ಪ್ರಮೋಟ್ ಆಗಿದ್ದೆ.

ಒಂದೂವರೆ ತಿಂಗಳು ತಾನೇ? ನಾನು ಒಮ್ಮೆ ಕೈ ನೋಡೇಬಿಡೋಣವೆಂದು ಸುಪರ್ ಮಾರ್ಕೆಟಿಗೆ ದಾಳಿ ಮಾಡಿದೆ. ಅಲ್ಲಿನ ಸ್ಥಿತಿ ನೋಡಿ, ‘ಭಗವಂತಾ, ಆದಷ್ಟು ಬೇಗ ಈ ಕ್ರಿಮಿಯನ್ನು ಸಾಯಿಸು. ಅದಾಗದೇ ಹೋದರೆ ನಾಲಗೆ ರುಚಿಯನ್ನೇ ನಿರ್ಮೂಲಗೊಳಿಸು’ ಎಂದು ಮೊರೆಯಿಡುವಷ್ಟು ಆತಂಕವಾಯಿತು. ಸುಪರ್ ಮಾರ್ಕೆಟಿನಲ್ಲಿ ಜನರ ಸಂತೆ! ಒಬ್ಬೊಬ್ಬರ ಕೈಯಲ್ಲಿ ಮೂರ್ಮೂರು ಬ್ಯಾಗುಗಳು. ಹೊರಗಿನ ರಸ್ತೆಯಲ್ಲೇ ಫರ್ಲಾಂಗು ಉದ್ದದ ಕ್ಯೂ! ನಡುವೆ ಅಂತರ ಬೇರೆ. ನಿಂತೂ ನಿಂತೂ ಸುಸ್ತಾಗಿ ಈ ಕೈಯಿಂದ ಆ ಕೈಗೆ ಬ್ಯಾಗ್ ಬದಲಾವಣೆ ಮಾಡುವಾಗ ಎಲ್ಲಾದರೂ ತಪ್ಪಿ ಮುಂದಿನವರಿಗೋ ಹಿಂದಿನವರಿಗೋ ಬ್ಯಾಗ್ ತಾಗಿದರೆ ಕೊರೊನಾವನ್ನು ಮುಟ್ಟಿದಂತೇ ಬೀಭತ್ಸ ಭಾವ!

ಒಳಗೆ ಹೋದರೆ ಮತ್ತದೇ ಅಂತರ! ಅದೇ ಸಾನಿಟೈಸರ್! ಮುಂದಿದ್ದ ಮಹಿಳೆಯೊಬ್ಬಳು ಬ್ರೆಡ್ಡಿನ ಹತ್ತು ಪ್ಯಾಕೇಟುಗಳನ್ನು ಕೊಂಡಾಗ ಗಾಬರಿಯಾಯ್ತು, ಎಲ್ಲಾದರೂ ಕಳೆದ ರಾತ್ರೆ ಎಂಟು ಗಂಟೆಗೆ ಪ್ರಧಾನಸೇವಕರು ಟಿವಿಯಲ್ಲಿ ಕಾಣಿಸಿಕೊಂಡು ಇನ್ನು ಹದಿನೈದು ದಿನ ಬ್ರೆಡ್ಡಿಗೂ ಲಾಕ್‍ಡೌನ್ ಅಂತೇನಾದ್ರೂ ಮಾತಿನ ಮುತ್ತುದುರಿಸಿದ್ರೇ? ‘ಸ್ವಲ್ಪ ನ್ಯೂಸ್ ನೋಡು’ ಎನ್ನುವ ಪತಿಯ ಮಾತನ್ನು ಒಮ್ಮೊಮ್ಮೆ ಆದ್ರೂ ಕೇಳಬೇಕು ಅನಿಸಿತು. ನಾನೂ ಉಳಿದಿದ್ದ ಎರಡು ಬ್ರೆಡ್ ಪ್ಯಾಕುಗಳನ್ನು ಮೆಲ್ಲಗೆ ಬುಟ್ಟಿಗೆ ಹಾಕಿಕೊಂಡೆ. ಮಗಳ ಲಿಸ್ಟ್ ಸ್ವಲ್ಪ ದೊಡ್ಡದೇ ಇತ್ತು: ಬಟರ್, ಚೀಸ್, ಮಯೋ ಸಾಸ್, ಒರಿಗಾನೋ, ಚಿಲ್ಲಿ ಫ್ಲೇಕ್ಸ್... ಅಯ್ಯೋ ಶಿವನೇ! ಇವಳು ಈ ಪಾಟಿ ಲಂಡನ್ ಸಂಜಾತೆ ಯಾವಾಗ ಆದ್ಲು, ಗೊತ್ತೇ ಆಗಲಿಲ್ಲವಲ್ಲಾ!

ತಲೆ ಕೆರೆದುಕೊಳ್ಳಲೂ ಪುರುಸೊತ್ತಿಲ್ಲ. ಸುಪರ್ ಬಝಾರಿನ ಹುಡುಗರು ಈ ಹೆಂಗಸರು ಒಮ್ಮೆ ಹೊರಗೆ ಹೋದ್ರೆ ಸಾಕೆನ್ನುವ ರೀತಿಯಲ್ಲಿ ನೋಡುತ್ತಿದ್ದರು. ಅಂತೂ ಸಿಕ್ಕಿದ್ದನ್ನೆಲ್ಲ ಬುಟ್ಟಿಗೆ ಹಾಕಿ ಬಿಲ್ ಮಾಡಿಸಿದರೆ ಎದೆ ಒಡೆಯೋದೊಂದು ಬಾಕಿ. ಶಿವನ ಬಿಲ್ಲಿನಷ್ಟೇ ನಮ್ಮ ಖರೀದಿ ಬಿಲ್ಲು ಭಾರವಾಗಿತ್ತು. ಎರಡು ತಿಂಗಳ ರೇಷನ್ನಿನಷ್ಟು ಒಂದೇ ತಿಂಗಳಿಗೆ ಬಿಲ್ ಮಾಡಿಸಿದ್ದೆ. ಉಗ್ರಪ್ರತಾಪಿ ಗಂಡನ ಮುಖ ನೆನೆಸಿಕೊಂಡಾಗ ಮೈಗೆ ಕೊರೊನಾ ಬಂದಂತೆ ಚಳಿ ಆವರಿಸಿತು.

ಸರಿ. ತಯಾರಿಸಿದ ಸ್ಪೆಷಲ್ ಅಡುಗೆಯ ಫೋಟೊ ಫ್ಯಾಮಿಲಿ ಗ್ರೂಪುಗಳಲ್ಲಿ ಹಾಕಿದ್ದೇ ಹಾಕಿದ್ದು. ಮನೆಯಲ್ಲೇ ಪಿಜ್ಜಾ, ಎಗ್ ಇಲ್ಲದ ಕೇಕು... ಕುಕ್ಕರಿನ ತಳ ಸೀದು ಹಾಕಿದೆ... ಯೂ ಟ್ಯೂಬಿನ ಸರ್ಚ್ ಈ ಎರಡು ತಿಂಗಳಲ್ಲಿ ತೀವ್ರವಾಗಿತ್ತು ಅನಿಸುತ್ತದೆ. ಎರಡು ವಾರದೊಳಗೆ ಬಸವಳಿದು ಹೋದೆ. ಫ್ಯಾಮಿಲಿ ಗ್ರೂಪುಗಳಿಗೆ ಫೋಟೊ ನಿಂತು ಹೋಯಿತು. ಕೇಳಿದಾಗ ಅವಮಾನವಾಗಿ ಇನ್ನೊಂದು ಗ್ರೂಪಿನಲ್ಲಿ ಯಾರೋ ಮಾಡಿದ ಅಡುಗೆಯ ಫೋಟೊ ಹಾಕಿದೆ. ಕೊನೆಗೂ ನಾನು ಬಿಳಿಧ್ವಜ ತೋರಿ ಕದನವಿರಾಮ ಘೋಷಿಸಿದೆ.

ಮೊನ್ನೆಯಷ್ಟೇ ವಿದ್ಯುತ್ ನಿಗಮದ ಅಧಿಕಾರಿಗಳು ಕರೆಂಟ್ ಶಾಕು ಕೊಟ್ಟ ಬಿಲ್ಲಿನ ಕಾರಣ ಕೊಟ್ಟಿದ್ದರು. ಇಡೀ ಕುಟುಂಬ ಮನೆಯಲ್ಲಿಯೇ ಇರುವ ಕಾರಣ, ಎಲ್ಲ ಅಗತ್ಯಗಳೂ ದ್ವಿಗುಣವಾಗಿದ್ದು ಸುಳ್ಳಲ್ಲ. ಎರಡ್ಹೊತ್ತು ಮಾತ್ರ ಮನೆ ಊಟ ಮಾಡುವವರೆಲ್ಲ ಮೂರು ಹೊತ್ತಷ್ಟೇ ಅಲ್ಲದೇ ನಡುವೆ ಸುಳಿವ ಇನ್ನೂ ಮೂರು ಹೊತ್ತಿನ ಬಾಯಾಡಿಸುವ ಸುಳಿಗೆ ಸಿಕ್ಕಿ ಅಡುಗೆ ಮನೆಯ ಬೆಂಕಿ ಆರುತ್ತಿಲ್ಲ. ಅನ್ನಪೂರ್ಣೆಯರೆಂದು ಹೇಳಿ ಹೊಗಳಿ ಅಟ್ಟಕ್ಕೇರಿಸಿದರೂ ಒಲೆಯ ಮುಂದೆ ಭಾಮಿನಿಯರು ನಿರಂತರ ಸೀದು ಹೋಗಲಾರಂಭಿಸಿದರು. ಇಷ್ಟೆಲ್ಲ ಆಗುವ ಹೊತ್ತಿಗೆ ಏಕಾಏಕಿ ಜ್ಞಾನೋದಯವಾದ ಕೆಲ ಭಾಮಿನಿಯರು ವಾರಕ್ಕೊಂದು ದಿನ ಪತಿ ಮಹಾಶಯರ ಅಡುಗೆ ಎಂದೂ ಘೋಷಿಸಿದರು. ಮತ್ತೆ ಎರಡೇ ದಿನಗಳಲ್ಲಿ ‘ಇಲ್ಲ ಬೇಡ ನಾವೇ ಅಡುಗೆ ಮಾಡುತ್ತೇವೆ. ಇವ್ರು ಮಾಡೋ ಅಡುಗೆಯಿಂದ ಕಿಚನ್ ಕ್ಲೀನ್ ಮಾಡಲು ಒಂದಿಡೀ ದಿನ ಬೇಕಾಗುತ್ತೆ’ ಎಂದೂ ಹೇಳಿದಾಗ ಅಡುಗೆ ಒಮ್ಮೊಮ್ಮೆ ಹೆಗಲ ಮೇಲಿನ ಬೇತಾಳದಂತೆ ಕಂಡಿದ್ದು ಸತ್ಯ. ಪಕ್ಕದ ಮನೆ ಭಾಮಿನಿ ಶೋಕ ತುಂಬಿದ ದನಿಯಲ್ಲಿ ‘ನಂಗೆ ಈಗ ಆಫೀಸು ಸ್ವರ್ಗದ ಹಾಗೆ ಕಾಣ್ತಿದೆ. ಮಕ್ಕಳ ಟೀಚರ್ಸ್ ನಿಜಕ್ಕೂ ದೇವತೆಯರು’ ಎಂದಾಗ ಮೊದಲ ಬಾರಿಗೆ ನಾನೂ ಒಪ್ಪಿದೆ. ಸಮಾನ ದುಃಖಿಗಳು ಎನಿಸಿತು. ಈಗ ಲಾಕ್ ಡೌನ್ ಎಂಬ ಏಳೂವರೆ ಶನಿ ಎಂದು ಮುಗಿಯುತ್ತೋ ಎಂದು ಸಮಸ್ತ ಭಾಮಿನಿಯರ ಜೊತೆಗೆ ನಾನೂ ನಿತ್ಯ ಎಳ್ಳೆಣ್ಣೆ ದೀಪ ಹಚ್ಚುತ್ತಿದ್ದೇನೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು