ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಒಂದಿನಿತು ಗೌರವಕ್ಕಾಗಿ ತಹತಹ

Last Updated 31 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಸಣ್ಣದೊಂದು ಸನ್ಮಾನ ಕಾರ್ಯಕ್ರಮ. ಮಹಿಳೆಯರು ಒಗ್ಗೂಡಿದ್ದರು. ಅದೆಂಥ ಅಭಿಮಾನ ಕಂಗಳಲ್ಲಿ, ಅದೆಂಥ ಸಾರ್ಥಕ್ಯ ಭಾವ.
ವೇದಿಕೆಯ ಮೇಲೆ ಕುಳಿತಾಗ ಕೆಲವರು ಗದ್ಗದಿತರಾದರು. ಇನ್ನೂ ಕೆಲವರು ಪ್ರಶಸ್ತಿಯನ್ನು ಸವರುತ್ತಿದ್ದರು. ಜೊತೆಯಲ್ಲಿ ನೆನಪುಗಳನ್ನೂ ನೇವರಿಸುತ್ತಿದ್ದರು.ಅವರ ಕುಟುಂಬದವರೆಲ್ಲ ವೇದಿಕೆಯ ಮುಂದೆ ನಿಂತು ಫೋಟೊ ತೆಗೆಯುವಲ್ಲಿ ನಿರತರಾಗಿದ್ದರು. ವೇದಿಕೆಯ ಮೇಲೆ ಸನ್ಮಾನಕ್ಕೊಳಗಾಗುತ್ತಿದ್ದವರಿಗೆ ಎಲ್ಲವೂ ಮಂಜಮಂಜು. ಕಣ್ಮುಂದೆ ಒಂದು ಪಸೆ.

ಮೂವತ್ತು ದಾಟಿದವರು, ನಾಲ್ವತ್ತು ದಾಟಿದವರು, ಐವತ್ತು, ಅರವತ್ತು ದಾಟಿದವರೂ ಇದ್ದರು. ಎಲ್ಲರದ್ದೂ ಇಂಥದ್ದೇ ಪ್ರತಿಕ್ರಿಯೆ.ಒಂದು ಮೆಚ್ಚುಗೆಗೆ, ಒಂದು ಗೌರವಕ್ಕೆ ಇಷ್ಟೊಂದು ಕಾತರರಾಗಿದ್ದರು. ಇವರೆಲ್ಲ ಅದೃಷ್ಟವಂತರು. ಜನ, ಸಮಾಜ ಗುರುತಿಸಿ, ಗೌರವಿಸಿತು. ಆದರೆ ಬಹುತೇಕ ಹೆಂಗಳೆಯರಿಗೆ ಈ ಭಾಗ್ಯ ಇರುವುದಿಲ್ಲ.

ಗಾಣದೆತ್ತಿನಂತೆ ದುಡಿಮೆಯೊಂದೇ ಬಲ್ಲವರು ಎಂಬಂತೆ ಅವರ ಜೈವಿಕ ಚಕ್ರ ತಿರುಗುತ್ತಿರುತ್ತದೆ. ಬೆಳಗಿನ ತಿಂಡಿಯನಂತರ ಮಕ್ಕಳ ಶಾಲೆ, ಅವರು ಹೊರಟರೆಂದರೆ ಒಂದು ಅಧ್ಯಾಯ ಪೂರೈಸಿದಂತೆ. ಮತ್ತೆ ತಮ್ಮ ಕಚೇರಿ, ಸಂಜೆ ವಾಪಸಾದ ಕೂಡಲೇ ರಾತ್ರಿ ಅಡುಗೆ, ರಾತ್ರಿ ಅಡುಗೆ ಮಾಡುವಾಗಲೇ ಬೆಳಗಿನ ತಿಂಡಿಯ ಚಿಂತೆ.

ಗೃಹವಾದಿನಿ ಭೂತ ನಮ್ಮನ್ನು ಎಲ್ಲೆಡೆಯೂ ಅಟ್ಟಿಸಿಕೊಂಡು, ಆವರಿಸಿಕೊಂಡು, ಬೆನ್ನೇರಿ, ಹೆಗಲಿಗೇರಿ ಕುಳಿತಿರುತ್ತದೆ. ವಿಕ್ರಮ್‌ ಮತ್ತು ಬೇತಾಳ ಇದ್ದಂತೆ. ಬಹುತೇಕ ಮಹಿಳೆಯರ ಒತ್ತಡದ ವಿಷಯ ಬೆಳಗಿನ ತಿಂಡಿಗೇನು, ಡಬ್ಬಿಗೇನು ಹಾಗೂ ಊಟಕ್ಕೇನು ಎಂಬುದೇ ಆಗಿರುತ್ತದೆ.

ದುಡಿದು ಬಂದ ಮಹಿಳೆಯರಿಗೆ ಆದರದ ಅಥವಾ ಸಂಯಮದ ಸ್ವಾಗತವೇನೂ ಕಾದಿರುವುದಿಲ್ಲ. ಇಷ್ಟೂ ಸಾಲದು ಎಂಬಂತೆ ಕುಹಕ ನುಡಿಗಳಿಗೂ ಕೊರತೆ ಇರುವುದಿಲ್ಲ. ಕಲ್ಲಾಗು ಕಷ್ಟಗಳ ಮಳೆ ಸುರಿಯೆ ಎಂಬುದು, ಚುಚ್ಚು ಮಾತುಗಳಿಗೆಲ್ಲ ಕಲ್ಲಾಗುವುದು ಇವರಿಗೆ ಗೊತ್ತಿದೆ.

ನನ್ನ ಮನೆ, ನನ್ನವರು ಎಂಬ ಒಂದೆ ಒಂದು ಎಳೆಯನ್ನು ಹಿಡಿದುಕೊಂಡು ಮುನ್ನಡೆಯುವ ಮಹಿಳೆಯರಿಗೆ ಈ ಮಾತುಗಳೆಲ್ಲವೂ ವಿಷಕಂಠನಂತಾಗಲು ಪ್ರೇರೇಪಿಸುತ್ತವೆ. ಆದರೆ ಅವೆಲ್ಲವೂ ಒಂದು ಬಗೆಯ ಮಂಜುಕಲ್ಲನ್ನು ಹೃದಯದೊಳಗಡಿಗಿಸಿ ಇಟ್ಟಂತೆ ಆಗಿರುತ್ತವೆ.

ಮನಸೊಂದು ಸ್ಪ್ರಿಂಗ್‌ನಂತೆ. ಮಹಿಳೆಯರು ಮಾತುಗಳನ್ನು ಅದುಮಿಟ್ಟಷ್ಟೂ, ಮನಸಿನೊಳಗೆ ಕುಗ್ಗುತ್ತ ಹೋಗುತ್ತವೆ. ಯಾವತ್ತೋ ಒಂದು ಸಲ... ಅಲ್ಲಲ್ಲ ಆ ಮೂರು ದಿನಗಳ ಹೊತ್ತಿನಲ್ಲಿ ಮೂಡು ಸ್ವಿಂಗ್‌ ಆಗುವಾಗ ಇದ್ದಕ್ಕಿದ್ದಂತೆ ಠೊಂಯ್‌ ಅಂತ ಜ್ವಾಲಾಮುಖಿಯಂತೆ ಸಿಡಿಯುತ್ತವೆ. ಆಗ ರೇಗುವುದು, ಅಳುವುದು, ಅರಚುವುದು ಎಲ್ಲವೂ ಆಗಿಹೋಗುತ್ತದೆ. ಅಷ್ಟು ದಿನಗಳ ವರೆಗೆ ಅದುಮಿಟ್ಟ ದುಃಖದ ಬಗ್ಗೆ ಯಾರೂ ಮಾತಾಡಲಾರರು. ಆದರೆ ತಾಟಕಿ, ಹಿಡಿಂಬೆಯಂತೆ ಕಿರುಚಾಡ್ತಾಳೆ ಅನ್ನುವ ವಿಶೇಷಣಗಳು ಬಾರದೇ ಇರವು.

ಇಂಥ ಕ್ಷಣಗಳ ನಂತರವೂ ಸಮಾಧಾನಿಸಲು ಯಾರೂ ಇರರು. ತಾವೇ ಹಾಡು ಗುನುಗಿಕೊಂಡು, ಹಾಡನ್ನು ಕೇಳಿಕೊಂಡು ಒಳ ಮನಸನ್ನು ತಣ್ಣಗಿಟ್ಟುಕೊಳ್ಳುತ್ತಾರೆ. ಮತ್ತೊಂದು ಸ್ಪ್ರಿಂಗ್‌ ಅದುಮಿಡಲು ಸಿದ್ಧರಾಗುತ್ತಾರೆ. ಈ ಮನದೊಳಗಿನ ಇನ್ನೊಂದು ನೀರ್ಗಲ್ಲು ಕರಗುವುದು ಅಂತಃಕರುಣೆಯ ನಾಲ್ಕು ಮಾತುಗಳಿಗೆ. ಒಂದೆರಡು ಮೆಚ್ಚುಗೆಗೆ.

ಆದರೆ ಪುರುಷ ಪ್ರಧಾನ ಸಮಾಜದ ಚೌಕಟ್ಟಿನಲ್ಲಿ ಕೆಲಸಗಳ ನಡುವೆ ಗೆರೆ ಎಳೆದಷ್ಟು ಸ್ಪಷ್ಟವಾಗಿ ಜವಾಬ್ದಾರಿಗಳ ನಡುವೆ ಗೆರೆ ಎಳೆದಿಲ್ಲ. ಇಂದಿಗೂ ದುಡಿಯುವ ಮಹಿಳೆಯರ ಮನೆಗಳಲ್ಲಿ ಮಹಿಳೆಯರ ದುಡಿಮೆ ಅನ್ನಕ್ಕಾಗಿ ವೆಚ್ಚವಾದರೆ, ಪುರುಷರ ದುಡಿಮೆ ಬಂಡವಾಳ ಹೂಡಲು, ಆಸ್ತಿ ಮಾಡಲು. ಆ ಆಸ್ತಿಯೂ ಮನೆಯ ಒಡೆಯನ ಹೆಸರಿನಲ್ಲಿಯೇ ಇರುತ್ತದೆ.

ದುಡಿತದ ಅಂತ್ಯದಲ್ಲಿ ಬಹುತೇಕ ಮಹಿಳೆಯರ ಪಾಲಿಗೆ ಉಳಿಯುವುದೇನು? ಆರ್ಥಿಕವಾಗಿ ಅನಕ್ಷರಸ್ಥರಾಗಿದ್ದರಂತೂ ತಿಂಗಳ ಕೊನೆಗೆ ಕನಿಷ್ಠ ಮಟ್ಟದ ಬ್ಯಾಲೆನ್ಸು. ಆಗಾಗ ಬಾಚಿ ಬಳಿದ ಪಿಎಫ್‌ನ ಚಿಕ್ಕಾಸು. ಆಸ್ತಿ ಮಾಡುವ ಹಿರಿಮೆ, ಹೆಗ್ಗಳಿಕೆಗಳೆಲ್ಲ ಮತ್ತೆ ಗಂಡುಜಾತಿಗೆ ಸೇರುತ್ತದೆ.

ಹೀಗೆ ಬದುಕಿನ ಬಹುಪಾಲು ಮಹಿಳೆಯರನ್ನು ಕಳೆದೆಬಿಡುತ್ತಾರೆ. ಒಂದು ಸಣ್ಣ ಮೆಚ್ಚುಗೆ, ಆದರ, ಗೌರವ ದೊರೆತಾಗ ಕಂಬನಿ ಮೂಡುವುದು, ಕಣ್ಣ ಪಸೆ ಆರದೇ ಇರುವುದು ಅಸಾಧ್ಯವಾಗುತ್ತದೆ.

ಸಂಘರ್ಷವನ್ನು ಸಮಚಿತ್ತದಿಂದ ಸ್ವೀಕರಿಸಬಹುದು. ಸಂತೋಷವನ್ನು ಸ್ವೀಕರಿಸುವಾಗ ಭಾವೋದ್ವೇಗಕ್ಕೆ ಒಳಗಾಗುವುದು ಸಹಜ. ಆಗಲೂ ಮನೆಯ ಸದಸ್ಯರು ಕಣ್ಣಲ್ಲೇ ಗದರುತ್ತಾರೆ... ಕ್ಯಾಮೆರಾ ಕಂಗಳಿವೆ.. ನಗು ಅಂತ.. ಆ ನಗುವಿನೊಂದಿಗೆ ಮೂಡುವ ಈ ಅಳುವಿಗಾಗಿ ಮಹಿಳೆಯರು ಅದೆಷ್ಟು ತಹತಹಿಸುತ್ತಾರೆ...

ಹೀಗಿರುವಾಗ ಒಂದು ಸನ್ಮಾನ ಅವರಲ್ಲಿ ಎಷ್ಟೆಲ್ಲ ಆತ್ಮವಿಶ್ವಾಸ ನೀಡುತ್ತದೆ. ಈ ಚಪ್ಪಾಳೆಯ ಬಿಸುಪಿಗೆಅದೆಷ್ಟೆಲ್ಲ ಮನದೊಳಗಿನ ಮಂಜುಗಡ್ಡೆಗಳು ಕರಗಿ, ಕಂಬನಿಯಾಗುತ್ತವೆಯೋ.. ಸಾಧಕಿಯರೆಂಬ ಸನ್ಮಾನ ಅವರಿಗೆ ದೊಡ್ಡದೆನಿಸುವುದು ಈ ಕಾರಣದಿಂದಲೇ.

ಮುಂದಿನ ತಿಂಗಳಲ್ಲಿ ಅಮ್ಮನ ದಿನ ಬರುತ್ತದೆ. ಅದಕ್ಕೆ ಈಗಿನಿಂದಲೇ ಉಡುಗೊರೆ ತೆಗೆದುಕೊಳ್ಳುವ ತಯಾರಿಯಲ್ಲಿರುವವರು ಒಮ್ಮೆ ಅಮ್ಮನ ಎಲ್ಲ ಸಂಘರ್ಷಗಳನ್ನೂ ನೆನಪಿಸಿ, ಮೆಚ್ಚುಗೆ ಸೂಸಿ. ಈ ಅಳುನಗುವಿನ ಅಪರೂಪದ ಕ್ಷಣ ನಿಮಗಷ್ಟೇ ದಕ್ಕಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT