ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಹುಸೇನಿ ಬ್ರಾಹ್ಮಣರ ಮೇಲೆ ಹೊಸ ಬೆಳಕು

Last Updated 23 ಜುಲೈ 2022, 19:30 IST
ಅಕ್ಷರ ಗಾತ್ರ

ಮೂಲಭೂತವಾದ, ಆದರಲ್ಲೂ ಧರ್ಮಾಂಧತೆ, ಎಂತಹ ಔದಾರ್ಯವನ್ನಾದರೂ ನುಂಗಿಹಾಕಬಲ್ಲದು. ಐತಿಹಾಸಿಕ ಸತ್ಯಗಳನ್ನು ಸಹಜವಾಗಿ ಸಮಾಧಿ ಮಾಡಬಲ್ಲದು. ಧರ್ಮಾಂಧತೆಯ ಕ್ರೌರ್ಯದಲ್ಲಿ ಸಿಲುಕಿ ಚಲ್ಲಾಪಿಲ್ಲಿಯಾದ ಐತಿಹಾಸಿಕ ಸತ್ಯಗಳ ಪುಟಗಳನ್ನು ಒಂದೆಡೆ ಶೇಖರಿಸಿ ನೋಡಿದಾಗ ಆಶ್ಚರ್ಯವಾಗುತ್ತದೆ. ಅಂತಹುದೇ ಆಶ್ಚರ್ಯ ಹಾಗೂ ಸೋಜಿಗವನ್ನುಂಟು ಮಾಡುವುದು ಎನ್‌.ಕೆ. ಮೋಹನರಾಂ ಅವರ ಇತ್ತೀಚಿನ ಪುಸ್ತಕ ‘ಹುಸೇನಿ ಬ್ರಾಹ್ಮಣರು’.

ಯಾರು ಈ ಬ್ರಾಹ್ಮಣರು? ಒಂದು ಇಸ್ಲಾಂ ಹೆಸರು, ಇನ್ನೊಂದು ಹಿಂದೂ ಹೆಸರು. ಇಸ್ಲಾಂ, ಹಿಂದೂ ಹೆಸರನ್ನು ಇಟ್ಟುಕೊಂಡ ಈ ಬ್ರಾಹ್ಮಣರು ಯಾರು, ಎಲ್ಲಿದ್ದಾರೆ ಎಂಬ ಕುತೂಹಲದಿಂದ ಮೋಹನರಾಂ ಅವರು ಹುಸೇನಿ ಬ್ರಾಹ್ಮಣರ ಕುರಿತ ಕಳೆದುಹೋಗಿದ್ದ ಚರಿತ್ರೆಯ ಪುಟಗಳನ್ನು ಹೆಕ್ಕಿ ಈ ಪುಸ್ತಕದಲ್ಲಿ ಕೊಟ್ಟಿದ್ದಾರೆ. ಇದೊಂದು ಧಾರ್ಮಿಕ ಉತ್ಖನನ.

ಪೈಗಂಬರರ ನಂತರದ ಅರಬರ ರಾಜಕೀಯ ವಿಪ್ಲವದಲ್ಲಿ ಅತ್ಯಂತ ದಾರುಣ ಪ್ರಸಂಗ ಎಂದರೆ ಪೈಗಂಬರರ ಮೊಮ್ಮಕ್ಕಳಾದ ಹಸನ್‌ ಹಾಗೂ ಹುಸೇನ್‌ ಹಾಗೂ ಅವರ ಕುಟುಂಬದ ಸದಸ್ಯರು ವಜೀದನೊಡನೆ ನಡೆದ ಯುದ್ಧದಲ್ಲಿ ಹತರಾದದ್ದು. ಅದು ನಡೆದದ್ದು ಕ್ರಿ.ಶ. 680ರಲ್ಲಿ, ಕರಬಲಾ ಎಂಬ ಈಗಿನ ಇರಾಕ್‌ನ ಪ್ರದೇಶದಲ್ಲಿ. ಬಹಳ ಕಡಿಮೆ ಸೈನಿಕರನ್ನು ಹೊಂದಿದ್ದ ಇಮಾಮ್‌ ಹುಸೇನರು ವಜೀದನ ಸೈನಿಕರಿಂದ ಹತರಾದದ್ದು ಇತಿಹಾಸ. ಅವರ ಅಳಿದುಳಿದ ಸೈನಿಕರನ್ನು ಹಾಗೂ ಛಿದ್ರಗೊಂಡ ಇಮಾಮ್‌ ಹುಸೇನರ ದೇಹವನ್ನು ರಕ್ಷಿಸಿದ ರಹಬದತ್ತ ಹಾಗೂ ಅವನ ಸಂಗಡಿಗರ ಕುರಿತ ವಿಸ್ತಾರವಾದ ಐತಿಹಾಸಿಕ ಘಟನೆಗಳನ್ನು ಈ ಕೃತಿಯಲ್ಲಿ ಎಳೆಎಳೆಯಾಗಿ ಬಿಡಿಸಿಡಲಾಗಿದೆ.

ಮೊಹೈಲ್‌ ಬ್ರಾಹ್ಮಣರೆಂದೇ ಹೆಸರಾಗಿದ್ದ ಬ್ರಾಹ್ಮಣ ಸಮುದಾಯದವರು ಕ್ರಿ.ಶ. 67ನೇ ಶತಮಾನದಲ್ಲಿ ಅರಬ್‌ ಪ್ರದೇಶದಲ್ಲಿ ನೆಲೆಸಿದ್ದರು. ಈ ಬ್ರಾಹ್ಮಣರು ಅಲ್ಲಿ ಹೋಗಿ ನೆಲೆಸಿದ್ದು ಹೇಗೆ ಎಂಬುದರ ವಿಸ್ತಾರವಾದ ಐತಿಹಾಸಿಕ ವಿವರಗಳನ್ನು ಮೋಹನರಾಂ ದಾಖಲೆಗಳೊಂದಿಗೆ ನೀಡುವುದು ಈ ಪುಸ್ತಕದ ವೈಶಿಷ್ಟ್ಯ. ಅವರು ಉಪಯೋಗಿಸುವ ಭಾಷೆಯೂ ಗಮನಾರ್ಹವಾದುದು.

ಇನ್ನೊಂದು ಕುತೂಹಲವನ್ನೂ ಈ ಪುಸ್ತಕ ನಮ್ಮ ಮುಂದೆ ಇಡುತ್ತದೆ. ಇಮಾಮ್‌ ಹುಸೇನರ ಪತ್ನಿಯರಲ್ಲಿ ಒಬ್ಬರು ಹಿಂದೂ ಆಗಿದ್ದರೆಂಬುದು ಹಾಗೂ ಮೊಹರಮ್ಮಿನ ಚರಮಗೀತೆ ರಚನಾಕಾರರಲ್ಲಿ ಗುಲಬರ್ಗಾದ ಬ್ರಾಹ್ಮಣರಾದ ರಾಮರಾವ್‌ ಎಂಬವರು ಒಬ್ಬರು, ಅವರ ಕಾವ್ಯನಾಮ ಶೈವ ಎಂದಾಗಿತ್ತು ಎಂಬ ಸಂಗತಿಯನ್ನು ಸಂಶೋಧನಾ ಕೌತುಕತೆಯಿಂದ ವಿವರಿಸಲಾಗಿದೆ.

ರಹಬದತ್ತ ಹಾಗೂ ಅವನ ಸಂಗಡಿಗರು ಕರಬಲಾ ಯುದ್ಧದಲ್ಲಿ ಇಮಾಮ್‌ ಹುಸೇನರ ಪರವಾಗಿ ಹೋರಾಡಿದ್ದರು. ಶಿರಚ್ಛೇದವಾಗಿ ಅನಾಥವಾಗಿ ಬಿದ್ದಿದ್ದ ಇಮಾಮ್‌ ಹುಸೇನರ ರುಂಡವನ್ನು ರಹಬದತ್ತ ಹಾಗೂ ಅವನ ಮಕ್ಕಳು ತೆಗೆದುಕೊಂಡು ಹೋಗಿದ್ದರು. ವಜೀದನ ಸೈನಿಕರು ಅವರನ್ನು ಬೆನ್ನಟ್ಟಿ ಹುಸೇನರ ತಲೆಗಾಗಿ ಒತ್ತಾಯಿಸಿದ್ದರು. ರಹಬದತ್ತ ಒಂದೊಂದಾಗಿ ತನ್ನ ಮಕ್ಕಳ ತಲೆ ಕಡಿದು ಇದು ಇಮಾಮ್‌ ಹುಸೇನರ ರುಂಡ ಎಂದು ಅವರ ಮುಂದೆ ಇಟ್ಟಾಗ ವಜೀದನ ಸೈನಿಕರು ಯಾವುದೋ ಒಂದು ರುಂಡವನ್ನು ಸುಲ್ತಾನನಿಗೆ ತೋರಿಸಲು ಒಯ್ದಿದ್ದರು. ಕೊನೆಗೆ ರಹಬದತ್ತ ಇಮಾಮ್‌ ಹುಸೇನರ ರುಂಡವನ್ನು ಧಮಸ್ಕಸದಲ್ಲಿ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆಸಿದ್ದ ಎಂಬ ಕುತೂಹಲಕಾರಿ ವಿವರಗಳನ್ನು ಘಟನೆಗಳನ್ನು ಮೋಹನರಾಂ ಅವರ ಈ ಪುಸ್ತಕದಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ.

ಈ ಪುಸ್ತಕದಬಹುಮುಖ್ಯವಾದ ಪ್ರತಿಪಾದನೆ ಅಂದರೆ ಧಾರ್ಮಿಕ ಮೂಲಭೂತವಾದ ರಹಬದತ್ತ ಹಾಗೂ ಅವನ ಸಂಗಡಿಗರನ್ನು ಇತಿಹಾಸದಿಂದ ಅಳಿಸುವ ಪ್ರಯತ್ನ ನಡೆಸಿದ್ದುದು. ಕರಬಲಾ ಇತಿಹಾಸದ ದೊಡ್ಡ ಘಟನೆಯಲ್ಲಿ ಹಿಂದೂ ಧರ್ಮೀಯನೊಬ್ಬ ಪ್ರವಾದಿಯವರ ಕುಟುಂಬದ ರಕ್ಷಣೆಯ ಬಹುಮುಖ್ಯ ಭಾಗವಾಗಿದ್ದ ಎಂಬುದನ್ನೂ ಹೇಳಲು ಮುಸ್ಲಿಮರು ಸಿದ್ಧರಿಲ್ಲ ಎನ್ನುವುದನ್ನು ಈ ಕೃತಿ ಎತ್ತಿತೋರಿದೆ. ಅದರಂತೆಯೇ ಈ ಮನಸ್ಥಿತಿ 21ನೆಯ ಶತಮಾನದ ಮೊಹೈಲ್‌ ಬ್ರಾಹ್ಮಣರಲ್ಲಿಯೂ ಬಂದಿದೆ. ಹುಸೇನಿ ಬ್ರಾಹ್ಮಣರು ಕ್ರಮೇಣ ಅಳಿಯುತ್ತಾ ಬಂದಿದ್ದಾರೆ. ಇವರನ್ನು ಬ್ರಾಹ್ಮಣರು ಎಂದು ಒಪ್ಪಿಕೊಳ್ಳಲು ಉಳಿದ ಬ್ರಾಹ್ಮಣರು ತಯಾರಿಲ್ಲ. ಹುಸೇನಿ ಬ್ರಾಹ್ಮಣರ ಬಹುಸಂಸ್ಕೃತಿ, ಉದಾರತೆ, ಪರಾಕ್ರಮಗಳನ್ನು ಒಪ್ಪುವ, ಇವರ ಬಗ್ಗೆ ಹೆಮ್ಮೆಪಡುವ ಉದಾರತೆ ಸಹ ಅವರಿಗಿಲ್ಲ. ಅನೇಕ ಮುಸ್ಲಿಮರಿಗೆ ರಹಬದತ್ತನ ಪ್ರಸಂಗದ ಪರಿಚಯವೇ ಇಲ್ಲ.

ಈ ಕಾಲದಲ್ಲಿ ರಹಬದತ್ತರಂತಹ ಉದಾರವಾದಿ ಬಹುಸಂಸ್ಕೃತಿಯನ್ನು ಹೊಂದಿರುವ ಅಧ್ಯಾಯ ಇತಿಹಾಸದಿಂದ ಮಾಯವಾಗಿರುವುದು ಖೇದದ ಸಂಗತಿ. ಗೋಕುಲಾಷ್ಟಮಿ ಹಾಗೂ ಇಮಾಮ ಸಾಬಿಗೂ ಏನು ಸಂಬಂಧ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿರುವ ನಮಗೆ ಮೋಹನರಾಂ ಅವರ ಪುಸ್ತಕ ಉತ್ತರ ನೀಡುತ್ತಾ ನಮ್ಮಲ್ಲಿರುವ ಭಯದ ವಾತಾವರಣವನ್ನು ತಿಳಿಯಾಗಿಸುತ್ತದೆ. ಬಹುತ್ವದ ಸಂಸ್ಕೃತಿಯಲ್ಲಿ ಹುಟ್ಟಿ ಬೆಳೆಯುವವರೆಲ್ಲರೂ ಈ ಪುಸ್ತಕವನ್ನು ಓದಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT