ಗುರುವಾರ , ಜುಲೈ 7, 2022
23 °C

ಕಡುಭ್ರಷ್ಟ ವ್ಯವಸ್ಥೆಯಲ್ಲಿ ಅಸ್ಮಿತೆಯ ಹುಡುಕಾಟ

ಎಚ್. ದಂಡಪ್ಪ Updated:

ಅಕ್ಷರ ಗಾತ್ರ : | |

Prajavani

ಜನನಾಯಕ
ಲೇ: ವಿಕ್ರಂ ಚದುರಂಗ
ಪ್ರ: ಚಿಂತನ ಚಿತ್ತಾರ, 9945668082
ಪುಟಗಳು: 206, ಬೆಲೆ: ₹ 210

‘ಚಿನುವ ಅಚಿಬೆ’ ವಿಶ್ವ ಸಾಹಿತ್ಯದ ಸಂದರ್ಭದಲ್ಲಿ ತನ್ನ ಅಸಾಧಾರಣ ವ್ಯಕ್ತಿತ್ವ ಮತ್ತು ಪ್ರತಿಭೆಯಿಂದ ಗಣ್ಯ ವ್ಯಕ್ತಿಯಾಗಿದ್ದಾನೆ. ಇವನ ‘ಥಿಂಗ್ಸ್‌ ಫಾಲ್ ಅಪಾರ್ಟ್’ ಕಾದಂಬರಿಯನ್ನು ಇಬ್ಬರು ಲೇಖಕರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಥೆಗಳೂ ಅನುವಾದಗೊಂಡಿವೆ. ಯು.ಆರ್. ಅನಂತಮೂರ್ತಿ ಅವರನ್ನೂ ಒಳಗೊಂಡಂತೆ ಕನ್ನಡದ ಹಲವಾರು ಪ್ರಸಿದ್ಧ ಚಿಂತಕರು ಅಚಿಬೆಯ ಸಂದರ್ಶನ, ಅವನ ಕೃತಿಗಳ ಕುರಿತ ಲೇಖನಗಳನ್ನು ಪ್ರಕಟಿಸಿದ್ದಾರೆ.

‘ಥಿಂಗ್ಸ್‌ ಫಾಲ್‌.. ’ ಜತೆಗೆ ‘ನೋ ಲಾಂಗರ್ ಅಟ್ ಈಸ್...’, ‘ಆ್ಯರೊ ಆಫ್ ಗಾಡ್’, ‘ಎ ಮ್ಯಾನ್ ಆಫ್ ದಿ ಪೀಪಲ್’, ಆ್ಯಂಥಿಲ್ಸ್ ಆಫ್ ದಿ ಸವನ್ನಾ’ ಕಾದಂಬರಿಗಳು ಅಚಿಬೆಗೆ ಅಪಾರ ಪ್ರಸಿದ್ಧಿಯನ್ನು ತಂದುಕೊಟ್ಟಿವೆ. ಈ ಕಾದಂಬರಿಗಳಲ್ಲಿ, ಆಫ್ರಿಕಾದ ಜನರ ಮನಸ್ಸಿನ ಮೇಲೆ ವಸಾಹತುಶಾಹಿಯ ಅಂದರೆ ಯುರೋಪಿನವರ ಸಾಂಸ್ಕೃತಿಕ ಪ್ರಭಾವ ಮತ್ತು ಪರಿಣಾಮ ಯಾವ ಸ್ವರೂಪದಲ್ಲಾಗಿದೆ, ಅದನ್ನು ಬಿಡಿಸಿಕೊಳ್ಳುವುದು ಹೇಗೆ? ಸ್ವಂತಿಕೆಯನ್ನು ತಂದುಕೊಳ್ಳುವ ದಾರಿ ಯಾವುದು   ಎಂಬ ವಿಚಾರಗಳು ಒಂದು ಧಾರೆಯಂತೆ ಹರಿಯುತ್ತವೆ. ‘ಎ ಮ್ಯಾನ್ ಆಫ್ ದಿ ಪೀಪಲ್’ ಕಾದಂಬರಿಯನ್ನು ವಿಕ್ರಂ ಚದುರಂಗ `ಜನನಾಯಕ’ ಎಂದು ಅನುವಾದಿಸಿದ್ದಾರೆ.

ಆಫ್ರಿಕಾದಲ್ಲಿ ವಸಾಹತು ಆಡಳಿತವು ಆಧುನಿಕ ವರ್ಗವೊಂದನ್ನು ಸೃಷ್ಟಿಸಿತು. ಮುಂದೆ ಈ ವರ್ಗದವರೇ ವಸಾಹತೋತ್ತರ ಸಂದರ್ಭದಲ್ಲಿ ಆಳುವ ವರ್ಗದವರಾದರು. ಇವರನ್ನು ಛೀಫ್‍ಗಳೆಂದು ಕರೆಯುತ್ತಿದ್ದರು. ವಸಾಹತು ಸರ್ಕಾರಕ್ಕಾಗಿ ತೆರಿಗೆ ಸಂಗ್ರಹಿಸುವ ಹಾಗೂ ಗ್ರಾಮಗಳನ್ನು ನಿಯಂತ್ರಿಸುವ ಜೊತೆಗೆ ತಾವೂ ಶ್ರೀಮಂತರಾಗುವ ಮಾರ್ಗಗಳನ್ನು ಅವರು ಕಂಡುಕೊಂಡರು. ಇಂತಹವರೇ ವಸಾಹತೋತ್ತರ ಸಂದರ್ಭದಲ್ಲಿ ಸರ್ಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸಿದರು. ಮಂತ್ರಿಗಳೂ ಆದರು. ನೌಕರಶಾಹಿ ವರ್ಗದವರು ಹಾಗೂ ಮಂತ್ರಿ ಮಹೋದಯರು ಯಾವಾಗ ಭ್ರಷ್ಟರಾಗುತ್ತಾರೋ ಆಗ ದೇಶದ ಆರ್ಥಿಕ ಸಾಮಾಜಿಕ ಸ್ಥಿತಿಯು ವಿಪತ್ತಿಗೆ ಒಳಗಾಗುತ್ತದೆ. ಭ್ರಷ್ಟತೆ ಮತ್ತು ಅನೈತಿಕತೆಯನ್ನು ಮೈಗೂಡಿಸಿಕೊಂಡ ಇಂಥವರೇ ಅನುಕರಣೀಯರಾಗಿ ಗ್ರಾಮೀಣ ಸಮಾಜವೂ ನೈತಿಕ ಅಧಃಪತನದತ್ತ ಸಾಗುತ್ತದೆ. ಇಂತಹ ಪರಿಸರದಲ್ಲಿ ಕಾದಂಬರಿಯ ಘಟನೆಗಳು ಬಿಚ್ಚಿಕೊಳ್ಳುತ್ತಾ ಸಾಗುತ್ತವೆ.

ಕಾದಂಬರಿಯ ಕೇಂದ್ರ ಪಾತ್ರ ನಂಗ ಅಧ್ಯಾಪಕನಾಗಿದ್ದವನು. ‘ದೇಶ ವಿರೋಧಿ’ ಮಂತ್ರಿಗಳ ವಿರುದ್ಧ ಮಾತಾಡುತ್ತಿದ್ದವನು. ಇವನೂ ಕೊನೆಗೆ ಸರ್ಕಾರದಲ್ಲಿ ಮಂತ್ರಿಯಾಗುತ್ತಾನೆ. ಕಾದಂಬರಿಯ ನಿರೂಪಕನಾದ ಓಡಿಲಿ ಸೋಮಾಲು, ತನಗೆ ಹಿಂದೆ ಉಪಾಧ್ಯಾಯನಾಗಿದ್ದು, ಈಗ ಮಂತ್ರಿಯಾಗಿರುವ ನಂಗನನ್ನು ಭೇಟಿಯಾಗುತ್ತಾನೆ. ವಿದೇಶಿ ಸ್ಕಾಲರ್‌ಶಿಪ್‍ನ ಆಸೆಯಿಂದ ರಾಜಧಾನಿಗೆ ಬಂದು ನಂಗನ ಮನೆಯಲ್ಲಿ ಉಳಿದುಕೊಂಡು ಅವನ ಭೋಗ ಜೀವನವನ್ನು ನೋಡುತ್ತಾನೆ. ತಾನೂ ಅನುಭವಿಸುತ್ತಾನೆ.

ತನ್ನ ಗೆಳತಿ ಎಲ್ಸಿಯನ್ನು ನಂಗ ಒಂದು ರಾತ್ರಿ ಹಾರಿಸಿಕೊಂಡು ಹೋದಾಗ ಓಡಿಲಿ, ನಂಗನ ವಿರೋಧಿಯಾಗುತ್ತಾನೆ. ನಂತರ ಮ್ಯಾಕ್ಸ್ ಎಂಬ ತನ್ನ ಎಡಪಂಥೀಯ ಗೆಳೆಯನ ‘ಸಿಪಿಸಿ’ ಪಕ್ಷ ಸೇರಿದ ಓಡಿಲಿ ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಆರಂಭಿಸುತ್ತಾನೆ. ನಂಗ ಮತ್ತು ಓಡಿಲಿ ಆಫ್ರಿಕಾ ರಾಜಕಾರಣದ ನೈತಿಕ ಕೇಂದ್ರದ ಎರಡು ಸಮಸ್ಯೆಗಳ ಪ್ರತಿನಿಧಿಗಳಾಗಿ ಕಾಣಿಸಿಕೊಳ್ಳುತ್ತಾರೆ. ನೈತಿಕತೆ ಪ್ರದಿಪಾದಿಸುವ ಓಡಿಲಿಗಿಂತ, ಮತದಾರರ ಬೇಕುಬೇಡಗಳನ್ನು ಅರಿತು ಭ್ರಷ್ಟನಾದ ನಂಗನೇ ಜನರಿಗೆ ಪ್ರಿಯನಾಗಿ ಬಿಡುತ್ತಾನೆ. ಕೊನೆಗೆ ಮಿಲಿಟರಿ ಕ್ಷಿಪ್ರ ಕ್ರಾಂತಿ ನಡೆದು ನಂಗನನ್ನು ಬಂಧಿಸಲಾಗುತ್ತದೆ. ಮಿಲಿಟರಿ ಆಳ್ವಿಕೆಯಲ್ಲಿ ಭ್ರಷ್ಟರಿಗೆ ಶಿಕ್ಷೆಯಾಗುತ್ತದೆ. ಇದು ಸ್ಥೂಲವಾಗಿ ಕಥಾವಸ್ತು.

ಕಾದಂಬರಿಯಲ್ಲಿ ಇಡೀ ಸಮೂಹ ಭ್ರಷ್ಟತೆಯ ನರಕದಲ್ಲಿದೆ. ಇಂತಹ ಸಮುದಾಯದೊಂದಿಗೆ ಇಲ್ಲಿಯ ನಾಯಕ ಗುರುತಿಸಿಕೊಳ್ಳುವುದಿಲ್ಲ. ಅದಕ್ಕೆ ಹೇಸುತ್ತಾನೆ. ಭ್ರಷ್ಟತೆಯೇ ತುಂಬಿ ತುಳುಕುತ್ತಿರುವ ರಾಜಕೀಯ ಸಾಮಾಜಿಕ ವ್ಯವಸ್ಥೆಯಲ್ಲಿ ದೇಶಿತನ ಭೂತದ ವೈಭವದಲ್ಲಿಯೇ ಮುಳುಗಿಹೋದರೆ, ಸಾಂಸ್ಕೃತಿಕ ವಸ್ತು ಸಂಗ್ರಹಾಲಯವನ್ನು ಸೇರಬೇಕಾಗುತ್ತದೆ ಎಂಬ ಎಚ್ಚರದಲ್ಲಿ ಅಚಿಬೆ ಈ ಕಾದಂಬರಿಯನ್ನು ಬರೆದಿದ್ದಾನೆ.

ಅಚಿಬೆಯ ಪ್ರಕಾರ ಕಾದಂಬರಿಕಾರ ಒಬ್ಬ ಶಿಕ್ಷಕನಾಗಬೇಕು. ಅವನ ಕಾದಂಬರಿಗಳಲ್ಲಿ ದೇಶಿ ನೈತಿಕ ನೆಲೆಗಳೊಂದಿಗೆ ಅನುಸಂಧಾನವಿರಬೇಕು. ಯಾವಾಗ ಕಾದಂಬರಿಕಾರ ಶಿಕ್ಷಕನಾಗುತ್ತಾನೋ ಆಗ ತನ್ನ ಸಂಸ್ಕೃತಿಯಲ್ಲಿರುವ ದೋಷಗಳನ್ನು ತಿದ್ದುವ, ಹೋಗಲಾಡಿಸುವ ಕೆಲಸ ಮಾಡುತ್ತಿರುತ್ತಾನೆ. ಕಾದಂಬರಿಕಾರನ ಪಾತ್ರ ಸಾಮುದಾಯಿಕವಾದದ್ದು.

ವಸಾಹತು ಸಂದರ್ಭದಲ್ಲಿ ಆಫ್ರಿಕಾದ ಘನತೆ ಮತ್ತು ಆತ್ಮಗೌರವಗಳು ಕಳೆದುಹೋಗಿದ್ದವು. ಅದನ್ನು ಆಫ್ರಿಕನ್ನರಿಗೆ ಹೇಳಬೇಕು ಎಂಬುದು ಈ ಕಾದಂಬರಿಯ ಉದ್ದೇಶವಾಗಿದೆ. ಹಳ್ಳಿಯಾಗಲಿ, ದೇಶವಾಗಲಿ ತಮ್ಮದು, ತಮ್ಮದೇ ಆದ ಜನರಿಗೆ ಸೇರಿದ್ದು. ಅದನ್ನು ಕಾಪಾಡಿಕೊಳ್ಳಬೇಕಾದದ್ದು ರಕ್ಷಿಸಿಕೊಳ್ಳಬೇಕಾದದ್ದು ತಮ್ಮ ನೈತಿಕ ಜವಾಬ್ದಾರಿ ಎಂಬ ಕಲ್ಪನೆ ಇಂತಹ ಭ್ರಷ್ಟತೆಯಿಂದ ಕೂಡಿದ ನೌಕರಶಾಹಿಗಾಗಲಿ, ರಾಜಕಾರಣಿಗಳಿಳಾಗಲಿ, ಅವರ ಮನಸ್ಸಿನಲ್ಲಿಯೂ ಸುಳಿಯುವುದಿಲ್ಲ. ಹೇಗಾದರೂ ಮಾಡಿ ಚುನಾವಣೆ ಗೆಲ್ಲುವುದೊಂದನ್ನೇ ಮುಖ್ಯವಾದ ಗುರಿಯಾಗಿಸಿಕೊಂಡ ಇಂತಹವರು ಸಾಮುದಾಯಿಕ ಪ್ರಜ್ಞೆಯ ಮಾತುಗಳನ್ನು ಹೇಳುವುದು ಯಾವಾಗ ಎಂದರೆ ಬುಡಕಟ್ಟುಗಳ ನಡುವೆ ಕಲಹಗಳನ್ನು ಉಂಟು ಮಾಡಬೇಕೆನಿಸಿದಾಗ ಮಾತ್ರ.

ನಂಗನನ್ನು ಬೆಂಬಲಿಸದ ಗ್ರಾಮಗಳಿಗೆ ಮೀಸಲಾದ ವಿದ್ಯುತ್ ಕಂಬಗಳನ್ನು ಕೊಳಾಯಿಗಳನ್ನು ಅವರು ರಾತ್ರೋರಾತ್ರಿ ಲಾರಿಗಳಲ್ಲಿ ಹಿಂತೆಗೆದುಕೊಂಡು ಹೋಗಿ ಬಿಡುವ ಮನಃಸ್ಥಿತಿಯವರು. ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆಗಳನ್ನು ನಿರ್ಮಿಸುವುದು ತಾವು ಅಕ್ರಮವಾಗಿ ಗಳಿಸಿದ ಹಣದಿಂದ ಕೊಂಡ ಬಸ್ಸುಗಳನ್ನು ಅಲ್ಲಿ ಓಡಿಸಿ ಇನ್ನಷ್ಟು ಹಣ ಗಳಿಸುವ ಉದ್ದೇಶದಿಂದ, ಸಿಪಿಸಿ ಪಕ್ಷದ ನಾಯಕನಾದ ಮ್ಯಾಕ್ಸ್ ಹೇಳುವಂತೆ, ‘ಹೆಂಗಸರು, ಕಾರುಗಳು, ಆಸ್ತಿ ಇಷ್ಟೇ ಅವರ ಆಸಕ್ತಿ’.

ವಸಾಹತುವಾದಿಗಳಿಗಿದ್ದ ಆಧುನಿಕತೆಯ ಹಾಗೂ ಅಭಿವೃದ್ಧಿಯ ಕಲ್ಪನೆಯಾದರೂ ಇವರಿಗೆ ಇಲ್ಲ. ಇವರು ಹೇಳುವ ದೇಶಿವಾದದ ಕಲ್ಪನೆಯೂ ವಿಕೃತವಾದದ್ದೇ. ಕುಡಿಯುವ ನೀರಿನಿಂದ ಹಿಡಿದು ಎಲ್ಲವನ್ನೂ ಪಶ್ಚಿಮದಿಂದ ಬಂದ ವಸ್ತುಗಳಿಂದಲೇ ಬಯಸುವ ಈ ವರ್ಗ ದೇಶಿವಾದದ ಮಾತಾಡುವುದು ಕೂಡ ತನ್ನ ಭ್ರಷ್ಟತೆ ಸಮರ್ಥಿಸಿಕೊಳ್ಳುವ ಸಲುವಾಗಿ. ಅಚಿಬೆ ವಾಸ್ತವವಾದಿ ಕಾದಂಬರಿಕಾರ. ನೈತಿಕತೆಯುಳ್ಳ ಸಮಾಜ, ಭ್ರಷ್ಟತೆಯಿಲ್ಲದ ರಾಜಕಾರಣದಲ್ಲಿ ವ್ಯಕ್ತಿಯ ಉಪಯುಕ್ತತೆ ಹುಡುಕುವುದು ಆತನ ಹೆಗ್ಗುರುತು. ಈ ಕಾರಣದಿಂದ ಆತನ ಕಾದಂಬರಿಗಳು ವಾಸ್ತವಿಕ ಹಾಗೂ ಸರಳ ರೇಖಾತ್ಮಕ. ಇವನ ಕಾದಂಬರಿಗಳೆಲ್ಲವೂ ಬಂಧದಲ್ಲಿ ಸಡಿಲ. ಓದುಗನು ತನ್ನ ಲೋಕದೃಷ್ಟಿಯೊಂದಿಗೆ ಹೋಲಿಸಿ ತುಲನೆ ಮಾಡಿಕೊಳ್ಳುವ ಅವಕಾಶ ಇರುವಂತೆ ಆತನ ಬರಹಗಳಿವೆ.

ಅಚಿಬೆ ಸಾಹಿತ್ಯ ಒಂದು ದಟ್ಟ ಪ್ರಪಂಚವನ್ನೇ ಸೃಷ್ಟಿಸಿ ತನ್ನ ಶ್ರೀಮಂತ ವಿವರಗಳಲ್ಲಿ ಓದುಗನನ್ನು ತನ್ಮಯಗೊಳಿಸುತ್ತದೆ. ಓದುಗರ ಮನಸ್ಸುಗಳನ್ನು ವಿಸ್ತರಿಸುತ್ತದೆ. ಆಳವಾಗಿಸುತ್ತದೆ, ತಿದ್ದುತ್ತದೆ. ಜತೆಗೆ, ಅನ್ಯಾಯ, ಭ್ರಷ್ಟತೆ ಇತ್ಯಾದಿಗಳನ್ನು ಪ್ರಶ್ನಿಸುತ್ತದೆ. ಸಡಿಲವಾದ ಬಂಧದಲ್ಲಿ ಸಾಮಾಜಿಕ, ರಾಜಕೀಯ, ಆರ್ಥಿಕ ಪ್ರಶ್ನೆಗಳನ್ನು ಸ್ಥಿತಿಗತಿಗಳನ್ನು ಚಿತ್ರಿಸುತ್ತಾ ಓದುಗರು ಪರಿಶುದ್ಧರೋ, ದಯಾಳುಗಳೋ ಅಥವಾ ಸಮಾಜದ ದೃಷ್ಟಿಯಲ್ಲಿ ಒಳ್ಳೆಯವರೋ ಜನೋಪಕಾರಿಗಳೋ ಉದಾತ್ತರೋ ಪ್ರಾಮಾಣಿಕರೋ ಎಂಬ ಪ್ರಶ್ನೆ ಮಾಡಿಕೊಳ್ಳುವಂತೆ ಮಾಡುತ್ತದೆ.

ಆಫ್ರಿಕಾದ ಸ್ವಾತಂತ್ರ್ಯೋತ್ತರ ಸ್ಥಿತಿಗತಿಗಳನ್ನು ಕುರಿತು ಬರೆದಿರುವ ಈ ಕಾದಂಬರಿಯ ಪಾತ್ರಗಳ ಮತ್ತು ಊರುಗಳ ಹೆಸರುಗಳಿಗೆ ಭಾರತೀಯ ಹೆಸರುಗಳನ್ನು ಕೊಟ್ಟರೆ ಅದು ಭಾರತದ ಭ್ರಷ್ಟ ರಾಜಕಾರಣದ ಕಾದಂಬರಿಯೂ ಆಗಿಬಿಡುತ್ತದೆ. ಅಚಿಬೆಯೊಂದಿಗೆ ವೋಲೆ ಶೋಯಿಂಕಾ, ಗೂಗಿ ಅವರೂ ತಮ್ಮ ಕಾದಂಬರಿಗಳಲ್ಲಿ ಭ್ರಷ್ಟ ರಾಜಕಾರಣಗಳ ಸ್ವರೂಪದ ಅನಾವರಣ ಮಾಡಿದ್ದಾರೆ. ಕನ್ನಡದಲ್ಲಿ ಮಾಸ್ತಿ, ಕಾರಂತ, ಅನಂತಮೂರ್ತಿ, ತೇಜಸ್ವಿ, ಲಂಕೇಶ್ ಅವರ ಬರಹಗಳಲ್ಲಿ ಈ ರೀತಿಯ ಬರವಣಿಗೆಯನ್ನು ಕಾಣಬಹುದು.

ಅನುವಾದದ ಬಗ್ಗೆ ಇಲ್ಲಿ ಹೇಳಲೇಬೇಕು. ಅನುವಾದ ಮಾಡುವಾಗ ಎರಡು ಮಾರ್ಗಗಳನ್ನು ಅನುಸರಿಸಲಾಗುತ್ತದೆ. ಕೆಲವರು ಮೂಲ ಲೇಖಕರು ಹೇಳುತ್ತಿರುವುದನ್ನು ಒಂದೂ ಪದ ಬಿಡದಂತೆ ಅನುವಾದಿಸುತ್ತಾರೆ. ಕೆಲವರು ಮೂಲಕೃತಿಯು ಏನನ್ನು ಹೇಳಲು ಪ್ರಯತ್ನಿಸುತ್ತಿದೆ ಎಂಬುದನ್ನು ಗ್ರಹಿಸಿ, ಅದರ ಧ್ವನಿ ಹಿಡಿದು ಮೂಲಕ್ಕೆ ಧಕ್ಕೆ ಬಾರದಂತೆ ಅನುವಾದಿಸುತ್ತಾರೆ. ಈ ಎರಡನೆಯ ಮಾರ್ಗವನ್ನು ವಿಕ್ರಂ ಅವರು ಅನುಸರಿಸಿದ್ದಾರೆ. ಇವರು ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದು, ಕನ್ನಡದ ಮೂರು ಕೃತಿಗಳನ್ನು ಇಂಗ್ಲಿಷ್‍ಗೆ ಅನುವಾದಿಸಿದ್ದಾರೆ. ಅಚಿಬೆಯು ವಿಶಿಷ್ಟ ಆಫ್ರಿಕನ್ ಇಂಗ್ಲಿಷ್ ಭಾಷೆಯನ್ನು ಕಾದಂಬರಿಯಲ್ಲಿ ಬಳಸಿದ್ದಾನೆ. ದೇಶಿ ಭಾಷೆಯ ಲಯ, ಲೋಕದರ್ಶನ, ನುಡಿಗಟ್ಟುಗಳ ಪಾತ್ರವನ್ನು ಆಫ್ರಿಕಾದ ಸಮಷ್ಟಿಯ ಮನೋಧರ್ಮವನ್ನು ಕಾದಂಬರಿಯಲ್ಲಿ ಬಿಂಬಿಸುತ್ತಾನೆ. ಮೂಲಕ್ಕೆ ಧಕ್ಕೆ ಬಾರದಂತೆ, ಅಲ್ಲಿನ ಸೂಕ್ಷ್ಮಗಳನ್ನು ಗ್ರಹಿಸಿದ ವಿಕ್ರಂ, ಸ್ವಾರಸ್ಯಕರವಾಗಿ ಅನುವಾದ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು