ಭಾನುವಾರ, ಜೂನ್ 26, 2022
21 °C

ಒಳನೋಟ: ಕಣ್‌ ಅರಳಿದಾಗಲಷ್ಟೇ ಕಂಡ ಬೇಂದ್ರೆ!

ಎಚ್. ದಂಡಪ್ಪ Updated:

ಅಕ್ಷರ ಗಾತ್ರ : | |

Prajavani

ಕಂಡವರಿಗಷ್ಟೆ
ಸಂಪಾದಕರು:
ಡಾ.ಗೀತಾ ವಸಂತ, ರಾಜಕುಮಾರ ಮಡಿವಾಳರ
ಪ್ರ: ಬೇಂದ್ರೆ ಬದುಕು ಬರಹ
ಸಂ: 98864 36020

ಬೇಂದ್ರೆಯವರು ಕನ್ನಡದ ಮಹತ್ವದ ಕವಿ, ಶ್ರೇಷ್ಠ ಕವಿ, ‘ವರಕವಿ’. ಮಹತ್ವದ ಕವಿಯ ಲಕ್ಷಣವೆಂದರೆ, ಆ ಕವಿಯು ಎಲ್ಲಾ ಕಾಲದ ವಿಮರ್ಶಾ ಸಿದ್ಧಾಂತಗಳನ್ನು ಮೀರಿ ಬೆಳೆಯುತ್ತಾ ಕಾಲದ ಪ್ರವಾಹದಲ್ಲಿ ಉಳಿದುಕೊಳ್ಳುತ್ತಾ ಸಾಗುವುದು. ಏಕೆಂದರೆ ವಿಮರ್ಶಾ ಸಿದ್ಧಾಂತಗಳು, ಮಾನದಂಡಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುತ್ತವೆ. ಬೇಂದ್ರೆಯವರ ಕಾವ್ಯ ಅಂತಹ ಎಲ್ಲ ಮಾನದಂಡಗಳಲ್ಲೂ ಗೆದ್ದು ಇಂದಿಗೂ ಚರ್ಚೆಯಾಗುತ್ತಾ ಅಪಾರವಾದ ಸಾಧ್ಯತೆಗಳಿಗೆ ತೆರೆದುಕೊಳ್ಳುತ್ತಲೇ ಇದೆ.

ಮಾಸ್ತಿಯವರಿಂದ ಇಲ್ಲಿಯವರೆಗಿನ ಹಿರಿಯ ಕಿರಿಯ ವಿಮರ್ಶಕರು ಬೇಂದ್ರೆಯವರ ಕಾವ್ಯವನ್ನು ಅಧ್ಯಯನ ಮಾಡಿ ಲೇಖನಗಳು, ಗ್ರಂಥಗಳನ್ನು ಬರೆದಿದ್ದಾರೆ. ಒಂದು ಸಂಸ್ಕೃತಿಯಲ್ಲಿ ಓದುಗ ಸಮುದಾಯವನ್ನು ಬೆಳೆಸುವುದು ಆ ಗ್ರಂಥಗಳೇ ಎಂಬುದರಲ್ಲಿ ಸಂಶಯವಿಲ್ಲ. ಇಂತಹ ವಿಮರ್ಶಾ ಗ್ರಂಥಗಳ ಸಾಲಿಗೆ ಡಾ. ಗೀತಾ ವಸಂತ ಮತ್ತು ರಾಜಕುಮಾರ ಮಡಿವಾಳರ ಸಂಪಾದಿಸಿರುವ ‘ಕಂಡವರಿಗಷ್ಟೆ’ ಸಂಪುಟವು ಸೇರುತ್ತದೆ.

ಈ ಸಂಪುಟದಲ್ಲಿ ಅರವತ್ತಾರು ಲೇಖನಗಳಿವೆ. ಇವುಗಳನ್ನು ‘ಬೇಂದ್ರೆ; ಪರಂಪರೆಯ ಬನಿ’ ಮತ್ತು ‘ಬೇಂದ್ರೆ; ಎದೆಯದನಿ’ ಎಂದು ಎರಡು ಭಾಗ ಮಾಡಿದ್ದಾರೆ. ಮೊದಲನೆಯ ಭಾಗದಲ್ಲಿ ಬೇಂದ್ರೆಯವರ ಕಾವ್ಯದ ಅಧ್ಯಯನದ ಲೇಖನಗಳಿದ್ದರೆ, ಎರಡನೆಯ ಭಾಗದಲ್ಲಿ ಜೀವನ ಚರಿತ್ರಾತ್ಮಕ ವಿಚಾರಗಳು, ಬದುಕಿನ ವಿವರಗಳು, ಬೇಂದ್ರೆಯವರನ್ನು ಕಂಡು ಮಾತನಾಡಿಸಿದ ಅನುಭವಗಳು ಇವೆ. ಜೊತೆಗೆ ಅವರ ಕಾವ್ಯದ ವಿಮರ್ಶೆಯೂ ಸೇರಿಕೊಂಡಿದೆ. ಎಲ್ಲಾ ತಲೆಮಾರಿನ ಲೇಖಕರು ಬರೆದಿರುವ ಎರಡೂ ಭಾಗದ ಲೇಖನಗಳಲ್ಲಿ ಕವಿ ಕವಿತೆಗಳ ಕುರಿತ ಅಧ್ಯಯನಪೂರ್ಣ ಲೇಖನಗಳೂ ಇವೆ. ಪರಿಚಯಾತ್ಮಕ ವಿವರಣಾತ್ಮಕ ಲೇಖನಗಳೂ ಇವೆ.

ಜನಭಾಷೆ ಮತ್ತು ಪ್ರಕೃತಿ ಭಾಷೆ ಎರಡನ್ನೂ ಸೇರಿಸಿ ಬೇಂದ್ರೆಯವರು ವಿಶಿಷ್ಟವಾದ ಕಾವ್ಯ ಭಾಷೆಯನ್ನು ರೂಪಿಸಿಕೊಂಡಿದ್ದರು. ಇದರಿಂದಾಗಿ ಅವರ ಕವಿತೆಗಳಲ್ಲಿ ಅನಂತ ಅರ್ಥಸಾಧ್ಯತೆಗಳು ಒಳಗೊಳ್ಳಲು, ಮಾನವೀಯ ಸಂಬಂಧಗಳನ್ನು ಬೆಸೆಯಲು ಸಾಧ್ಯವಾಗಿದೆ. ಇವು ಕಾಲದಿಂದ ಕಾಲಕ್ಕೆ ಓದುಗನ, ವಿಮರ್ಶಕನ ಸಾಮರ್ಥ್ಯಕ್ಕನುಗುಣವಾಗಿ ತನ್ನ ಅರ್ಥಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳುತ್ತಾ ಹೋಗುತ್ತವೆ. ಬೇಂದ್ರೆಯವರ ಈ ಕಾವ್ಯ ಶಕ್ತಿಯನ್ನು ನಾವು ಹಿಡಿಯದಿದ್ದರೆ ಅವರ ಕಾವ್ಯವನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲವೆಂದೇ ತಿಳಿಯಬೇಕು. ಈ ಸಂಪುಟದಲ್ಲಿ ಕೆಲವು ಲೇಖನಗಳು ವಿವರಣಾತ್ಮಕ ಹಂತದಲ್ಲಿರುವುದರಿಂದ ಅರ್ಥಸಾಧ್ಯತೆಗಳು ಮತ್ತು ತಾತ್ವಿಕ ಒಳನೋಟಗಳನ್ನು ಗ್ರಹಿಸಿ ವಿಶ್ಲೇಷಿಸಲು ಸಾಧ್ಯವಾಗಿಲ್ಲ.

ಬೇಂದ್ರೆಯವರಿಗೆ ಪ್ರಕೃತಿ ಮತ್ತು ವಿಜ್ಞಾನ ಎರಡೂ ಮುಖ್ಯವಾಗುತ್ತವೆ. ವಿಜ್ಞಾನ ಅವರಿಗೆ ವಿಜ್ಞಾನ ಸೂರ್ಯನಾಗಿದ್ದಾನೆ. ‘ವಿಜ್ಞಾನ ಸೂರ್ಯ’ ಎಂಬ ಕವಿತೆಯಲ್ಲಿ, ಅನ್ನದೇವನ ಅವತಾರಕ್ಕೆ ಮುನ್ನ ಇಂದು ವಿಜ್ಞಾನ ಸೂರ್ಯನು ಉದಯಿಸಬೇಕಾಗಿದೆ ಎಂದೇ ಹೇಳುತ್ತಾರೆ. ತತ್ವಶಾಸ್ತ್ರದಂತೆ, ವಿಜ್ಞಾನದಂತೆ ಕಾವ್ಯವೂ ಸತ್ಯಶೋಧನೆಯ ಒಂದು ಪ್ರಕಾರ. ಇವು ಪ್ರಕೃತಿಯ ರಹಸ್ಯಗಳನ್ನು ತಿಳಿಸಿಕೊಡುತ್ತವೆ. ಇಲ್ಲಿನ ಲೇಖನಗಳಲ್ಲಿ ಪ್ರಕೃತಿ ಕವಿತೆಗಳನ್ನು ಅಧ್ಯಯನ ಮಾಡುವಾಗ ತತ್ವಶಾಸ್ತ್ರ ಮತ್ತು ವಿಜ್ಞಾನದ ಪೂರಕ ವಿಚಾರಗಳನ್ನು ಮರೆಯಲಾಗಿದೆ. ಕಾವ್ಯವು ಜ್ಞಾನದ ಶ್ವಾಸವಿದ್ದಂತೆ ಎಂದು ವರ್ಡ್ಸ್‌ವರ್ತ್‌  ಹೇಳುತ್ತಾನೆ. ಅದು ಸೂಕ್ಷ್ಮವಾದದ್ದು, ಚೈತನ್ಯಶಾಲಿಯಾದದ್ದು, ವಿಜ್ಞಾನದ ಎಲ್ಲ ಲಕ್ಷಣಗಳೂ ಅದಕ್ಕಿವೆ. ಆದರೆ ಈ ಜ್ಞಾನದ ಜೊತೆಗೆ ಕಾವ್ಯದಲ್ಲಿ ಭಾವವೂ ಸೇರಿಕೊಂಡಿದೆ, ಕಾವ್ಯಕ್ಕೆ ಮಾನವೀಯ ಮೌಲ್ಯಗಳಿರುವಂತೆ ವಿಜ್ಞಾನಕ್ಕೆ ಇರುವುದಿಲ್ಲ ಎನ್ನುತ್ತಾನೆ. ಬೇಂದ್ರೆಯವರ ಕಾವ್ಯವನ್ನು ಈ ದೃಷ್ಟಿಯಿಂದ ನೋಡಿದರೆ ಅದರ ಅರ್ಥಸಾಧ್ಯತೆಗಳು ಹೆಚ್ಚುತ್ತವೆ.

ಬೇಂದ್ರೆಯವರ ಕಾವ್ಯವನ್ನು ಪ್ರಕೃತಿ, ಪ್ರೀತಿ, ತಾಯಿ, ಮಾನವೀಯತೆ, ವಿರಾಟ್ ದರ್ಶನ, ಅಧ್ಯಾತ್ಮ, ಅನುಭಾವ ಮುಂತಾದ ವಿಭಾಗಗಳನ್ನಾಗಿಸಿ ಅಧ್ಯಯನ ಮಾಡಿರುವ ಕ್ರಮವೊಂದು ಇದೆ. ಆದರೆ ಈ ಸಂಪುಟದಲ್ಲಿ ಆ ರೀತಿ ವಿಭಾಗಿಸಿಕೊಳ್ಳದಿದ್ದರೂ ಕೆಲವು ಲೇಖಕರು ಇದೇ ಧಾಟಿಯನ್ನು ಅನುಸರಿಸಿದ್ದಾರೆ. ಇದರಿಂದ ಕವಿತೆಯನ್ನು ಒಂದೇ ಉದ್ದೇಶಕ್ಕೆ ಕಟ್ಟಿಹಾಕಿದಂತೆ ಆಗಬಹುದು. ಕೆಲವು ಲೇಖನಗಳು ಭಾಷಾ ಬಳಕೆಯನ್ನು ವಿಶ್ಲೇಷಿಸುತ್ತಾ ಬೇಂದ್ರೆ ಕಾವ್ಯದ ಅರ್ಥ ಸಾಧ್ಯತೆಗಳನ್ನು ವಿವರಿಸಲು ಪ್ರಯತ್ನಿಸಿವೆ. ಇನ್ನೂ ಕೆಲವು ಲೇಖನಗಳು ಆಧುನಿಕೋತ್ತರ ಚಿಂತನೆಗಳ ಹಿನ್ನೆಲೆಯಲ್ಲಿ ಕವಿತೆಗಳನ್ನು ವಿಶ್ಲೇಷಿಸಲು ಪ್ರಯತ್ನಿಸಿವೆ.

ಹೃದಯಸಮುದ್ರ, ಮುಕ್ತಕಂಠ, ಚೈತ್ಯಾಲಯ, ಜೀವಲಹರಿ ಈ ಸಂಕಲನಗಳು ‘ಅರಳು-ಮರಳು’ ಎಂಬ ಹೆಸರಿನಲ್ಲಿ ಒಟ್ಟಾಗಿ ಸೇರಿ ಪ್ರಕಟವಾಗಿವೆ. ಈ ಕವಿತೆಗಳಲ್ಲಿ ಬೇಂದ್ರೆಯವರ ಆಧ್ಯಾತ್ಮಿಕತೆ, ಅನುಭಾವ, ಗುರುಭಕ್ತಿಯ ಸ್ವರೂಪದ ನೆಲೆಗಳು ವ್ಯಕ್ತವಾಗಿವೆ. ಮಾನವನ ಉನ್ನತಿಗೆ ಅವಶ್ಯವಾದ ಆಧ್ಯಾತ್ಮಿಕ ವಿಚಾರಗಳಿವೆ. ಮೊದಲೇ ತಿಳಿಸಿದಂತೆ ಆಯಾ ಕವಿತೆಗಳನ್ನು ಭಾಷಾ ವಿನ್ಯಾಸದಲ್ಲಿಯೇ ಅಧ್ಯಯನ ಮತ್ತು ವಿಶ್ಲೇಷಣೆ ಮಾಡಬೇಕು. ಆದರೆ ಈ ಸಂಪುಟದಲ್ಲಿ ‘ಅರಳು-ಮರಳು’ ಸಂಕಲನದಿಂದ ಆಯ್ಕೆ ಮಾಡಿರುವ ಕವನಗಳು ತುಂಬಾ ಕಡಿಮೆ. ಸಂಪುಟವನ್ನು ಸಂಯೋಜಿಸುವಾಗ ಸಂಪಾದಕರು ಬೇಂದ್ರೆಕಾವ್ಯದ ಬೆಳವಣಿಗೆಯ ಹಂತಗಳನ್ನು ಹಾಗೂ ಕನ್ನಡ ಸಾಂಸ್ಕೃತಿಕ ಪರಿಸರಕ್ಕೆ, ಆ ಮೂಲಕ ಸಾಧ್ಯವಾದರೆ ವಿಶ್ವ ಸಾಹಿತ್ಯಕ್ಕೆ ಅವರು ಕೊಟ್ಟಿರುವ ಕೊಡುಗೆಗಳನ್ನು ವಿವರಿಸುವಂತಹ ಅಧ್ಯಯನಪೂರ್ಣ ಲೇಖನಗಳು ಸೇರುವಂತೆ ನೋಡಿಕೊಳ್ಳಬಹುದಾಗಿತ್ತು.

ಈ ಸಂಪುಟದಲ್ಲಿ ಬೇಂದ್ರೆಯವರ ಗರಿ ಸಂಕಲನ: ಕೆಲವು ಟಿಪ್ಪಣಿಗಳು, ಬೇಂದ್ರೆಯವರು ಭಾವಾನುವಾದಿಸಿದ ‘ಸ್ವಪ್ನ ನೌಕೆ’, ನಾಕುತಂತಿ ಮತ್ತು ಸಾವಿತ್ರಿ, ಕವಿ ಗುರುಗಳು, ಕತ್ತಲೆ ಕವಿದ ಹೊತ್ತು, ಬೇಂದ್ರೆ ಕಾವ್ಯ: ಲೌಕಿಕದಲ್ಲಿ ಪರಮಾರ್ಥದ ಹುಡುಕಾಟ, ವರ್ತಮಾನದ ಹೊಸ ಸೃಷ್ಟಿಯ ಶೋಧದ ಪ್ರಶ್ನೆ ಮತ್ತು ಆತಂಕಗಳು, ಬೇಂದ್ರೆಯವರ ಕಾವ್ಯದಲ್ಲಿ ಇಳಿಯುವ ಪ್ರಕ್ರಿಯೆಯಾಗಿ ಐದು ಐದೆಯರು, ನೂರು ವರ್ಷದ ‘ಬೆಳಗು’ ಕವಿತೆ- ಮುಂತಾದ ಲೇಖನಗಳಲ್ಲಿ ಬೇಂದ್ರೆ ಕಾವ್ಯದ ತಾತ್ವಿಕತೆಯನ್ನು, ಒಳನೋಟಗಳನ್ನು ವಿಶ್ಲೇಷಣೆ ಮಾಡಲಾಗಿದೆ. ಹಾಗೆಯೇ ಎರಡನೇ ಭಾಗದಲ್ಲಿನ ಕುಚ್ಚಿನ ಟೋಪಿಯ ಬೆಚ್ಚನೆ ಬೇಂದ್ರೆ, ಬೇಂದ್ರೆಯವರೊಡನೆ, ನನ್ನ ಬೇಂದ್ರೆ ಪುರಾಣ, ಬೇಂದ್ರೆ ಅಂದ್ರೆ ಬೇಂದ್ರೆ ಮುಂತಾದ ಲೇಖನಗಳು ವರಕವಿಯ ಬದುಕು ಮತ್ತು ಬರಹಗಳು ಜೀವನ ಚರಿತ್ರಾತ್ಮಕ ವಿಮರ್ಶೆಯ ನೆಲೆಗಳಲ್ಲಿದ್ದು ಮಹತ್ವದ ಒಳನೋಟಗಳನ್ನು ಒದಗಿಸುತ್ತವೆ.

ಬೇಂದ್ರೆಯವರ 125ನೇ ಜನ್ಮದಿನಾಚರಣೆಯ ಅಂಗವಾಗಿ ಹಲವಾರು ಪ್ರಸಿದ್ಧ ವಿಮರ್ಶಕರು, ತರುಣ ಬರಹಗಾರರ ಲೇಖನಗಳನ್ನು ಸಂಪಾದಿಸಿ ಪ್ರಕಟಿಸಿರುವುದು ಸಾರ್ಥಕವಾದ ಕೆಲಸ. ಬೇಂದ್ರೆ ಮತ್ತು ಕುವೆಂಪು ಕನ್ನಡ ಜನಮಾನಸದಲ್ಲಿ ಸಾಂಸ್ಕೃತಿಕ ವ್ಯಕ್ತಿತ್ವವನ್ನು ಪಡೆದವರು. ಇಬ್ಬರೂ ನಮ್ಮ ಕಾವ್ಯ ಸಂಸ್ಕೃತಿಯ ಎರಡು ಮೇರುಗಳು. ಒಂದು ಸಂಸ್ಕೃತಿಯಲ್ಲಿ ಕಾವ್ಯಾಭಿವ್ಯಕ್ತಿಯನ್ನು ಅನನ್ಯವಾಗಿ ಸ್ವೀಕರಿಸುವ ಓದುಗರು ಸೃಷ್ಟಿಯಾಗುವುದು, ಅಭಿರುಚಿಯನ್ನು ಬೆಳೆಸುವುದು, ಕಾವ್ಯದ ಒಳದಾರಿಗಳನ್ನು ಕಂಡುಕೊಳ್ಳುವುದು ಮತ್ತು ಕನ್ನಡ ಕಾವ್ಯ ಪರಂಪರೆಯ ಮಹತ್ವದ ಕೃತಿಗಳ ಕಡೆಗೆ ಹೊಸ ಓದುಗರ ಗಮನ ಸೆಳೆಯುವುದಕ್ಕೆ ಇಂತಹ ಸಂಕಲನಗಳಿಂದ ಸಾಧ್ಯವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು