ಮಂಗಳವಾರ, ಸೆಪ್ಟೆಂಬರ್ 28, 2021
24 °C

ಪುಸ್ತಕ ವಿಮರ್ಶೆ: ಹರಿವ ನದಿಗೆ ಗತದ ವ್ಯಾಮೋಹ

ಎಚ್.ದಂಡಪ್ಪ Updated:

ಅಕ್ಷರ ಗಾತ್ರ : | |

Prajavani

ಗೂಗಿ ವಾ ಥಿಯಾಂಗೊ ಜಾಗತಿಕ ಸಾಹಿತ್ಯದ ಸಂದರ್ಭದಲ್ಲಿ ತಮ್ಮ ಅಸಾಧಾರಣ ವ್ಯಕ್ತಿತ್ವ ಮತ್ತು ಪ್ರತಿಭೆಗೆ ಹೆಸರಾದವರು. ಚಿನುವಾ ಅಚಿಬೆ ಅವರ ಸಾಹಿತ್ಯದಂತೆ ಇವರ ಕೃತಿಗಳನ್ನೂ ವಿವಿಧ ಲೇಖಕರು ಕನ್ನಡಕ್ಕೆ ಅನುವಾದಿಸಿದ್ದಾರೆ ಮತ್ತು ಕೆಲವು ಚಿಂತಕರು ಇವರ ಬಗೆಗೆ ಬರೆದಿದ್ದಾರೆ. ಇವರ ಮುಖ್ಯವಾದ ಕಾದಂಬರಿಗಳೆಂದರೆ, ವೀಪ್ ನಾಟ್- ಚೈಲ್ಡ್, ದಿ ರಿವರ್ ಬಿಟ್ವೀನ್, ಎ ಗ್ರೈನ್ ಆಫ್ ವೀಟ್, ಡೆವಿಲ್ ಆನ್ ದಿ ಕ್ರಾಸ್, ವಿಜಾರ್ಡ್ ಆಫ್ ದಿ ಕ್ರೊ. ಜೊತೆಗೆ ನಾಟಕ, ಸಾಹಿತ್ಯ, ಸಂಸ್ಕೃತಿ, ರಾಜಕೀಯ ಸ್ವರೂಪದ ಬಗ್ಗೆ ಹಲವಾರು ಪ್ರಬಂಧಗಳನ್ನೂ ಬರೆದಿದ್ದಾರೆ. ಇವರ ಬಹುಚರ್ಚಿತ ಲೇಖನಗಳು ಕನ್ನಡಕ್ಕೆ ಅನುವಾದಗೊಂಡಿವೆ.

ಗೂಗಿಯವರ ಕೃತಿಗಳಲ್ಲಿ ಆಫ್ರಿಕಾದ ಸಂಸ್ಕೃತಿಯ ಮೇಲೆ ವಸಾಹತುಶಾಹಿಯ, ಅಂದರೆ ಯುರೋಪಿನ ಸಾಂಸ್ಕೃತಿಕ ಪ್ರಭಾವ ಮತ್ತು ಪರಿಣಾಮ ಯಾವ ರೀತಿಯಲ್ಲಾಗಿದೆ, ಅದರಿಂದ ಬಿಡಿಸಿಕೊಳ್ಳುವುದು ಹೇಗೆ, ಸ್ವಂತಿಕೆಯನ್ನು ತಂದುಕೊಳ್ಳುವುದು ಹೇಗೆ ಎಂಬಂಥ ವಿಚಾರಗಳು ಒಂದು ಒಳಧಾರೆಯಾಗಿ ಹರಿಯುತ್ತವೆ. ಪ್ರಸ್ತುತ ‘ದಿ ರಿವರ್ ಬಿಟ್ವೀನ್’ ಎಂಬ ಕಾದಂಬರಿಯನ್ನು ‘ಹರಿವ ನದಿ ಸಾಕ್ಷಿ’ ಎಂಬ ಹೆಸರಿನಲ್ಲಿ ಪ್ರೊ. ಸಿ.ನಾಗಣ್ಣ ಅನುವಾದಿಸಿದ್ದಾರೆ.

ಈ ಕೃತಿಯನ್ನು ಗೂಗಿಯವರು ಮೊದಲೇ ಬರೆದಿದ್ದರೂ ಪ್ರಕಟಿಸಿದ್ದು ಎರಡನೆಯ ಕಾದಂಬರಿಯಾಗಿ. ಹೊನಿಯಾ ನದಿಯ ಎರಡೂ ದಡಗಳಲ್ಲಿ ವಾಸಿಸುವ ಎರಡು ಊರುಗಳ ಸಮುದಾಯಗಳ ನಡುವೆ ಹಿಂದಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ದ್ವೇಷ ಬೆಳೆಯುತ್ತಿರುತ್ತದೆ. ಕ್ರೈಸ್ತಧರ್ಮ ಹರಡಲು ಪ್ರಾರಂಭವಾದ ಮೇಲಂತೂ ಈ ದ್ವೇಷ ಹೆಚ್ಚಾಗುತ್ತದೆ. ಜೋಶುವಾ ಮತ್ತು ಕಬೋನಿ ಈ ಧರ್ಮವನ್ನು ಸ್ವೀಕರಿಸಿರುತ್ತಾರೆ. ಆದರೆ ಕಬೋನಿ ಆ ಧರ್ಮದಿಂದ ವಾಪಸಾಗುತ್ತಾನೆ. ಜೋಶುವಾ ಪಕ್ಕಾ ಕ್ರೈಸ್ತ ಧರ್ಮೀಯನಾಗುತ್ತಾನೆ. ಕ್ರೈಸ್ತ ಧರ್ಮ ಮತ್ತು ಸಾಂಪ್ರದಾಯಿಕ ನಂಬಿಕೆಗಳ ನಡುವಿನ ಸಂಘರ್ಷ ಈ ಕಾದಂಬರಿಯಲ್ಲಿದೆ. ಜೊತೆಗೆ ಈ ಸಂಘರ್ಷದಲ್ಲಿ ಸಿಲುಕಿ ನಲುಗುವ ವೈಯಾಕಿ ಮತ್ತು ನಿಯುಂಬರ ಅವರ ಪ್ರೇಮದ ತೊಳಲಾಟಗಳೂ ಇವೆ.

ಹೊನಿಯಾ ನದಿ ಈ ಕಾದಂಬರಿಯಲ್ಲಿ ಸಾಂಕೇತಿಕವಾಗಿ ಬಂದಿದೆ. ಇದು ಎರಡೂ ಊರಿಗೆ ಒಂದು ಗಡಿ ಪ್ರದೇಶವೂ ಹೌದು. ಈ ನದಿಯು ದಡದಲ್ಲಿರುವ ಎರಡೂ ಹಳ್ಳಿಗಳ ಸಮುದಾಯಗಳನ್ನು ಬೇರ್ಪಡಿಸಿದೆ ಮತ್ತು ಇನ್ನೊಂದು ನೆಲೆಯಲ್ಲಿ ಎರಡನ್ನೂ ಬೆಸೆದಿದೆ. ಆದರೆ, ಎರಡೂ ಊರಿನವರು ಒಂದು ಗಡಿ ಎಂದು ನೋಡುತ್ತಾರೋ ಅದೊಂದು ಸಂಪರ್ಕ ಸೇತುವೆ ಎಂದು ನೋಡುತ್ತಾರೋ ಎಂಬುದು ಮುಖ್ಯವಾಗುತ್ತದೆ. ಸಂಪರ್ಕ ಎಂಬುದನ್ನು, ಅದೊಂದು ಜೀವಸೆಲೆ ಎಂದು ಜನರು ತಿಳಿಯಬೇಕು. ಈ ರೀತಿಯಾದ ತಿಳಿವಳಿಕೆ ಬರಬೇಕಾದರೆ ಶಿಕ್ಷಣ ಬೇಕು. ಶಿಕ್ಷಕರು ಬೇಕು. ವೈಯಾಕಿಯು ಶಿಕ್ಷಣ, ಐಕ್ಯತೆ ಮತ್ತು ರಾಜಕೀಯ ಸ್ವಾತಂತ್ರ್ಯದ ಹಂಬಲವುಳ್ಳವನು. ಹೊರಗಿನವರು ಅನ್ಯಾಯವಾಗಿ ತಮ್ಮ ನೆಲ, ಸಂಪತ್ತನ್ನು ಆಕ್ರಮಿಸಿಕೊಂಡಿದ್ದಾರೆ, ಅವರ ಶಿಕ್ಷಣವನ್ನು ಕಲಿತು ಅವರ ಬುದ್ಧಿಮತ್ತೆ, ಚಾಕಚಕ್ಯತೆಯನ್ನೇ ಬಳಸಿ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದು ಯೋಚಿಸುತ್ತಾನೆ. ಆದರೆ, ಅವನ ಈ ಯೋಚನೆ ನೆರವೇರುವುದಿಲ್ಲ.

‘ವೈಯಾಕಿಯು ಕ್ರೈಸ್ತ ಮತಕ್ಕೆ ಸೇರಿದ ಜೋಶುವಾನ ಮಗಳನ್ನು ಆಸ್ಪತ್ರೆಗೆ ಸೇರಿಸಿ ಇಂಗ್ಲಿಷ್ ಔಷಧಿ ಕೊಡಿಸಿದ್ದಾನೆ, ಇನ್ನೊಬ್ಬ ಮಗಳು ನಿಯುಂಬರಳನ್ನು ಪ್ರೇಮಿಸಿ ಮದುವೆಯಾಗುತ್ತಿದ್ದಾನೆ. ಯುರೋಪಿನ ಶಾಲೆಗಳಿಗೆ ಭೇಟಿ ನೀಡುತ್ತಾ ಸಮುದಾಯಗಳ ಗುಟ್ಟನ್ನು ಅವರಿಗೆ ತಿಳಿಸುತ್ತಿದ್ದಾನೆ, ಅವನಿಗೆ ಬುಡಕಟ್ಟು ಸಮುದಾಯಗಳ ಆಚರಣೆಗಳು, ಪದ್ಧತಿಗಳು, ನೀತಿ ನಿಯಮಗಳ ಬಗ್ಗೆ ಗೌರವವಿಲ್ಲ’ ಎಂದೆಲ್ಲ ಕಬೋನಿಯು ಎಲ್ಲಾ ಸಮುದಾಯದವರನ್ನು ವೈಯಾಕಿಯ ವಿರುದ್ಧ ಎತ್ತಿಕಟ್ಟುತ್ತಾನೆ. ಅವನ ವಿರುದ್ಧ ಅಪಪ್ರಚಾರ ಮಾಡುತ್ತಾನೆ. ವೈಯಾಕಿಯು ಏಕಾಂಗಿಯಾಗುತ್ತಾನೆ. ಅಸಹಾಯಕನಾಗುತ್ತಾನೆ.

ವೈಯಾಕಿಯು ಶಿಕ್ಷಣ, ಬುಡಕಟ್ಟು ಸಂಸ್ಕೃತಿ, ಆಧುನಿಕತೆ, ರಾಜಕೀಯ ಸ್ವಾತಂತ್ರ್ಯ ಮತ್ತು  ಅಭಿವೃದ್ಧಿಯ ವಿಚಾರಗಳಲ್ಲಿ ನಂಬಿಕೆಯುಳ್ಳವ. ಆದರೆ ಗತದ ಬಗ್ಗೆ ನಂಬಿಕೆಯಿದ್ದ ಸಮುದಾಯ ಅದನ್ನು ಒಪ್ಪುವುದಿಲ್ಲ. ಅವರದೇ ಆದ ವಿಧಾನಗಳಿಂದ ಅಭಿವೃದ್ಧಿಯಾಗಬೇಕೆಂಬ ನಿಲುವು ಕಬೋನಿ ಮತ್ತು ಅವನ ಹಿಂಬಾಲಕರದು. ಕಾದಂಬರಿಯ ಧ್ವನಿಯೂ ಗತಕಾಲದ ಬಗೆಗಿನ ವ್ಯಾಮೋಹವೇ ಆಗಿದೆ. ಜೊತೆಗೆ ಕಾದಂಬರಿಕಾರರ ನಿಲುವೂ ಕೂಡ.

ಚಿನುವಾ ಅಚಿಬೆ ‘ಗತದ ಘಟನೆಯನ್ನು ಪ್ರತಿಪಾದಿಸಲು ಕಂಡುಕೊಂಡ ಮಾಧ್ಯಮವೇ ಕಾದಂಬರಿ’ ಎನ್ನುತ್ತಾರೆ. ರಾಬರ್ಟ್ ಜುಲೈ, ಇಮ್ಯಾನ್ಯುಯಲ್ ಒಬೆಚಿನಾ ‘ಆಫ್ರಿಕನ್ ವ್ಯಕ್ತಿತ್ವದ ಹುಡುಕಾಟವೇ ಕಾದಂಬರಿ’ ಎಂದರೆ, ಗೂಗಿಯು ‘ನಮ್ಮ ಸಮುದಾಯಗಳ ದೇವರುಗಳ ಜೊತೆ ಕಳೆದುಕೊಂಡಿರುವ ಸಂಬಂಧವನ್ನು ಮರಳಿ ಸ್ಥಾಪಿಸುವ ಮಾಧ್ಯಮವೇ ಕಾದಂಬರಿ’ ಎನ್ನುತ್ತಾರೆ. ಕಾದಂಬರಿಯನ್ನು ವ್ಯಾಖ್ಯಾನಿಸಿಕೊಳ್ಳುವಾಗ ಈ ನಾಲ್ಕು ಜನರಲ್ಲಿ ಕಾಣಬರುವ ಸಾಮಾನ್ಯ ಅಂಶವೆಂದರೆ ಗತಕಾಲದ ಬಗೆಗಿನ ಕಾಳಜಿ.

ವಸಾಹತು ಕಾಲಘಟ್ಟದ ಬಹುತೇಕ ಆಫ್ರಿಕನ್ ಕಾದಂಬರಿಗಳು ಗತಕಾಲದ ಆಚರಣೆಗಳು, ವಿಧಿವಿಧಾನಗಳು, ರೀತಿ ನೀತಿಗಳ ಬಗ್ಗೆಯೇ ಕಾಳಜಿ ವಹಿಸುತ್ತವೆ. ಆಗಿನ ಮುಖ್ಯ ತಾತ್ವಿಕ ನಿಲುವುಗಳೂ ಅವೇ ಆಗಿದ್ದವು. ಅದರಲ್ಲೂ ಗಿಕುಯೂ ಸಮುದಾಯದಲ್ಲಿ ತಮಗಿಂತ ಭಿನ್ನವಾಗಿ ಬದುಕುವವರನ್ನು ತಿರಸ್ಕಾರದಿಂದ ನೋಡಲಾಗುತ್ತಿತ್ತು. ಅವರಿಗೆ ಸಮೂಹ ಮುಖ್ಯ. ಆದ್ದರಿಂದಲೇ ಆಫ್ರಿಕನ್ ಕಾದಂಬರಿಗಳ ಬಹುತೇಕ ನಾಯಕರು ಗತ ಪರಂಪರೆಯ ಆಚರಣೆ, ಮೌಲ್ಯಗಳ ವಿರುದ್ಧ ಬಂಡೆದ್ದವರಲ್ಲ. ಗತದ ಬಗೆಗಿನ ಸಂಬಂಧ ಅವರಿಗೆ ಮುಖ್ಯವಾಗುತ್ತದೆ.

ಕಾದಂಬರಿಯ ನಿರೂಪಣೆ ಬಹಳ ಸರಳವಾಗಿದೆ. ಕಥನದ ಓಟ ಓದುಗನಿಗೆ ಕುತೂಹಲವನ್ನುಂಟು ಮಾಡುತ್ತದೆ. ಈ ನಿರೂಪಣಾ ಕ್ರಮವನ್ನು ಗೂಗಿಯು ಜನಪದ ಕಥನಗಳಿಂದ ರೂಪಿಸಿಕೊಂಡಿದ್ದಾರೆ. ಕಥಾ ನಾಯಕನ ಎಲ್ಲಾ ಚಟುವಟಿಕೆಗಳನ್ನು ನಿರೂಪಕನೇ ಹೇಳುತ್ತಾ ಹೋಗುತ್ತಾನೆ. ನಿರೂಪಕನ ದೃಷ್ಟಿಯಲ್ಲಿಯೇ ಕಾದಂಬರಿ ಬೆಳೆಯುತ್ತದೆ. ಇವನು ಕಣ್ಣಿಗೆ ಕಾಣದ ನಿರೂಪಕ.

ಸಿ. ನಾಗಣ್ಣ ಅವರು ಆಫ್ರಿಕಾ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಅನುವಾದಿಸಿ ಪ್ರಕಟಿಸಿದ್ದಾರೆ. ಗೂಗಿ ಅವರ ಬರವಣಿಗೆಯ ಸೂಕ್ಷ್ಮಗಳನ್ನು ಹಿಡಿದು ಅದಕ್ಕೆ ಪೂರಕವಾದ ಕನ್ನಡದ ಶೈಲಿಯೊಂದನ್ನು ರೂಪಿಸಿಕೊಂಡು ಅನುವಾದಿಸಿದ್ದಾರೆ. ಕನ್ನಡದ ಓದುಗರಿಗೆ ಇದರ ಲಾಭ ಸಿಗುತ್ತದೆ. ಅನುವಾದವು ಒಂದು ರೀತಿಯ ಕನ್ನಡಿ. ಅದು ಒಂದನ್ನು ಪ್ರತಿಫಲಿಸುವುದಷ್ಟೇ ಅಲ್ಲ ಬೆಳಕನ್ನೂ ನೀಡುತ್ತದೆ. ನಾಗಣ್ಣನವರು ಇನ್ನುಮುಂದೆಯೂ ಬೆಳಕನ್ನು ನೀಡುವಂತಹ ಕೃತಿಗಳನ್ನು ಅನುವಾದ ಮಾಡಲಿ ಎಂಬುದಷ್ಟೇ ಆಶಯ.

ಹರಿವ ನದಿ ಸಾಕ್ಷಿ

ಮೂಲ: ಗೂಗಿ ವಾ ಥಿಯಾಂಗೊ

ಕನ್ನಡಕ್ಕೆ: ಪ್ರೊ. ಸಿ.ನಾಗಣ್ಣ

ಪ್ರ: ಯುಕ್ತ ಪ್ರಕಾಶನ

ಸಂ: 9480107298

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು