ಬುಧವಾರ, ಜೂನ್ 16, 2021
27 °C

ಒಳನೋಟ: ಯಕ್ಷಗಾನ ಬೆಳೆದು ಬಂದ ಇತಿಹಾಸ

ಗ.ನಾ.ಭಟ್ಟ Updated:

ಅಕ್ಷರ ಗಾತ್ರ : | |

Prajavani

ಯಕ್ಷಗಾನ ಕಲೆಗೆ, ಅದರ ಸಾಹಿತ್ಯದ ನೆಲೆಯಲ್ಲಿ, ಅದಕ್ಕೊಂದು ದೊಡ್ಡ ಚರಿತ್ರೆಯೇ ಇದೆ. ಅದನ್ನು ದಾಖಲಿಸುವತ್ತ ಇದುವರೆಗೆ ಆಗದ ಕೆಲಸ ಇದೀಗ ಆಗಿದೆ. ಅದು ಡಾ. ಕಬ್ಬಿನಾಲೆ ವಸಂತ ಭಾರದ್ವಾಜರಿಂದ. ಕಬ್ಬಿನಾಲೆ ಅವರು 2010ರಲ್ಲಿ ‘ಕರ್ನಾಟಕ ಯಕ್ಷಗಾನ ಕವಿಚರಿತ್ರೆ’ ಎಂಬ ಕೃತಿಯನ್ನು ನಮ್ಮ ಮುಂದೆ ಇಟ್ಟಿದ್ದರು. ಈಗ ಅವರು, ‘ಯಕ್ಷಗಾನ ಸಾಹಿತ್ಯ ಚರಿತ್ರೆ’ ಎಂಬ ಬೃಹತ್ ಕೃತಿಯನ್ನು ಕೊಟ್ಟಿದ್ದಾರೆ.

‘ಕನ್ನಡ ಸಾಹಿತ್ಯಾಭ್ಯಾಸವು ಸಾಮಾನ್ಯವಾಗಿ ಪರಿಚಯ- ವಿಮರ್ಶೆ- ಸಂಶೋಧನೆ ಮತ್ತು ದಾಖಲಾತಿ ಎಂಬ ನಾಲ್ಕು ಮುಖಗಳಲ್ಲಿ ನಡೆಯುತ್ತಿರುವುದು ಹೊಸಕಾಲದ ಪದ್ಧತಿ’ ಎಂದು ಈ ಕೃತಿಗೆ ಮುನ್ನುಡಿ ಬರೆದ ಡಾ.ಪಾದೇಕಲ್ಲು ವಿಷ್ಣುಭಟ್ಟರು ಅಭಿಪ್ರಾಯಪಟ್ಟಂತೆ ಕಬ್ಬಿನಾಲೆಯವರ ಈ ಕೃತಿಯೂ ಅದೇ ದಿಕ್ಕಿನಲ್ಲಿ ಸಾಗಿದೆ. ಅಷ್ಟೇ ಅಲ್ಲ, ಅದಕ್ಕೆ ಸಾಕಷ್ಟು ಅಧಿಕೃತತೆಯನ್ನೂ ಲೇಖಕರು ಒದಗಿಸಿದ್ದಾರೆ. ಯಕ್ಷಗಾನ ಸಾಹಿತ್ಯದ ಉಗಮ ಮತ್ತು ವಿಕಾಸ, ಪಡುವಲಪಾಯ-ಪ್ರಸಂಗ ಸಾಹಿತ್ಯ, ಮೂಡಲಪಾಯ -ಪ್ರಸಂಗ ಸಾಹಿತ್ಯ, ಯಕ್ಷಗಾನದಲ್ಲಿ ಪ್ರಯೋಗಶೀಲತೆ, ಮೌಖಿಕ ಸಾಹಿತ್ಯ, ಸಂಶೋಧನೆ ಮತ್ತು ವಿಮರ್ಶೆ, ಪ್ರಮುಖ ಕವಿಗಳು- ಹೀಗೆ ಒಟ್ಟು ಏಳು ಅಧ್ಯಾಯಗಳಲ್ಲಿ ಸಾಗುವ ಈ ಕೃತಿ ಯಕ್ಷಗಾನದ ಒಟ್ಟು ಸ್ವರೂಪವನ್ನು ಒಂದೇ ತೆಕ್ಕೆಗೆ ಪರಿಚಯಿಸಿಬಿಡುತ್ತದೆ.

ಸನ್ನಿವೇಶಕ್ಕೆ ಅನುಗುಣವಾಗಿ ಆಯಾ ವಸ್ತು-ಪದಾರ್ಥಗಳ ಬಗ್ಗೆ, ಪ್ರಸಂಗಕೃತಿಗಳ ಬಗ್ಗೆ,  ಪ್ರಯೋಗಶೀಲತೆಗಳ ಬಗ್ಗೆ, ಮೌಖಿಕ ಸಾಹಿತ್ಯದ ಬಗ್ಗೆ, ಕವಿಗಳ ಬಗ್ಗೆ ಹೊಸ ಬೆಳಕು ಚೆಲ್ಲುವ ಕಿರು ಪರಿಚಯ, ವಿಮರ್ಶೆ ಮಾಡಿರುವುದು ಆಯಾ ಕೃತಿಗಳಿಗೆ, ವ್ಯಕ್ತಿಗಳಿಗೆ, ಕಲಾವಿದರಿಗೆ ಸಿಕ್ಕ ಬಹುದೊಡ್ಡ ಮನ್ನಣೆ. ಅದನ್ನು ಕಬ್ಬಿನಾಲೆಯವರು ಬಹು ಸುಂದರವಾಗಿ, ಮನೋಜ್ಞವಾಗಿ ಒಂದು ಕುಸುರಿ ಕೆಲಸ ಎಂಬಂತೆ ಮಾಡಿದ್ದಾರೆ.

 ‘ಯಕ್ಷಗಾನ ಸಾಹಿತ್ಯದ ಉಗಮ ಮತ್ತು ವಿಕಾಸ’ದೊಂದಿಗೆ ಆರಂಭವಾಗುವ ಅವರ ಈ ಕೃತಿ ಯಕ್ಷಗಾನ ಹಾಡಿನ ಜಾಡು ಎಲ್ಲಿಂದ ಮೊದಲ್ಗೊಂಡಿತು? ಅದಕ್ಕೆ  ಭಕ್ತಿಪಂಥ, ದಾಸಸಾಹಿತ್ಯಗಳ ಕೊಡುಗೆ ಏನು? ಅವು ಹೇಗೆ ಕೆಲಸ ಮಾಡಿವೆ? ವಿವಿಧ ಛಂದೋಬಂಧಗಳು ಹೇಗೆ ಹಾಸುಹೊಕ್ಕಾಗಿವೆ? ಎಂಬಿತ್ಯಾದಿ ಸಂಗತಿಗಳನ್ನು ಚರ್ಚಿಸಿದೆ.

ಯಕ್ಷಗಾನದ ಹಾಡಿನಲ್ಲಿ ಅಂದರೆ ಯಕ್ಷಗಾನ ಸಾಹಿತ್ಯದಲ್ಲಿ ಆರತಿಹಾಡು, ಸೋಬಾನೆ ಹಾಡುಗಳ ಚೆಲುವು, ಗಾದೆ
ಮಾತು, ಭಾಷಾಪ್ರಯೋಗದ ಸೌಂದರ್ಯ, ಭಾವಗೀತಾತ್ಮಕತೆ, ಮಾರ್ಗ-ದೇಸಿಗಳ ಸಮ್ಮಿಶ್ರ ಸೌಂದರ್ಯ, ಶಬ್ದಾಲಂಕಾರ, ಅರ್ಥಾಲಂಕಾರಗಳ ಬೆಡಗು, ರೂಪಕ-ಪ್ರಹೇಲಿಕೆಗಳ ಮೆರವಣಿಗೆ ಹೇಗೆ ಪ್ರಭಾವಿಸಿವೆ ಎಂಬುದನ್ನು ಚರ್ಚಿಸಲಾಗಿದೆ. ಎಲ್ಲವನ್ನೂ ಹೀರಿಕೊಂಡು ಅದು ಹೇಗೆ ಶ್ರೀಮಂತವಾಯಿತು ಮತ್ತು ಅವೆಲ್ಲವೂ ಯಕ್ಷಗಾನ ಸಾಹಿತ್ಯದಲ್ಲಿ ಹೇಗೆ ನಿಹಿತವಾಗಿದ್ದವು ಅನ್ನುವುದನ್ನು ಸಾಕ್ಷ್ಯಾಧಾರಗಳೊಂದಿಗೆ ತೌಲನಿಕವಾಗಿ ಓದುಗರ ಮುಂದಿಡಲಾಗಿದೆ.

ಹಾಗೆಯೇ ಪಡುವಲಪಾಯ ಯಕ್ಷಗಾನ ಪ್ರಸಂಗಸಾಹಿತ್ಯವನ್ನು ಎತ್ತಿಕೊಂಡ ಕಬ್ಬಿನಾಲೆಯವರು ಅವು ಯಾವ ಯಾವ ಪ್ರದೇಶಗಳಲ್ಲಿ ಪ್ರದರ್ಶನಗೊಳ್ಳುತ್ತವೆ ಎಂದು ಹೇಳುತ್ತಾ ಅವುಗಳನ್ನು ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಜನಪದೀಯ, ಕಾಲ್ಪನಿಕ ಎಂದು ಐದು ವಿಧಗಳಾಗಿ ವಿಂಗಡಿಸುತ್ತಾರೆ. ರಾಮಾಯಣಾಧಾರಿತ ಪ್ರಸಂಗಗಳೇ 150ರಷ್ಟು ಇವೆ ಎಂದು ದಾಖಲಿಸುತ್ತಾರೆ.

ಇದೇ ರೀತಿ ಭಾರತ, ಭಾಗವತಗಳನ್ನಾಧರಿಸಿ ಬಂದ ಪ್ರಸಂಗಸಾಹಿತ್ಯದ ಬಗ್ಗೆ ಬೆಳಕು ಚೆಲ್ಲುತ್ತಾ ಕೃಷ್ಣಾರ್ಜುನ ಕಾಳಗ, ರಾಮಾಂಜನೇಯ, ದ್ರೌಪದೀ ಪ್ರತಾಪ, ಚಕ್ರಚಂಡಿಕಾ, ವೀರನಾರೀ ಅಪ್ರಮೇಯೀ, ಭಾನುಮತೀ ನೆತ್ತ ಮೊದಲಾದ ಪ್ರಸಂಗಗಳು ಪುರಾಣಗಳ ಯಾವುದೋ ಒಂದು ಎಳೆಯನ್ನು ಇಟ್ಟುಕೊಂಡು, ಅವು ಕವಿಯ ಪ್ರತಿಭೆಯಲ್ಲಿ ಹೇಗೆ ಕಲ್ಪನೆಯ ವಿಸ್ತಾರವನ್ನು ಪಡೆದುಕೊಂಡು, ಸಾಹಿತ್ಯಾತ್ಮಕವಾಗಿಯೂ ಮೌಲ್ಯವನ್ನು ಉಳಿಸಿಕೊಂಡು, ಜನಮಾನಸದಲ್ಲಿ ಪ್ರತಿಷ್ಠಾಪನೆಗೊಂಡಿವೆ ಮತ್ತು ಜನಪ್ರಿಯವಾಗಿವೆ ಅನ್ನುವುದನ್ನು ಸೋದಾಹರಣವಾಗಿ ವಿವರಿಸಿದ್ದಾರೆ. ಇನ್ನು ಜೈನಪುರಾಣ, ಬೌದ್ಧಧರ್ಮ, ಇತಿಹಾಸ, ಸಾಮಾಜಿಕ, ಜಾನಪದ ಪ್ರಸಂಗಗಳೊಂದಿಗೆ ಶಂಕರ, ರಾಮಾನುಜ, ಮಧ್ವ, ರಾಘವೇಂದ್ರ, ಕ್ರಿಸ್ತ ಮೊದಲಾದ ಮಹಾಪುರುಷರ ಕುರಿತಾಗಿ ಬಂದ ಪ್ರಸಂಗಗಳನ್ನು ಅವರು ಕಲೆಹಾಕಿದ್ದನ್ನು ನೋಡಿದರೆ ಯಕ್ಷಗಾನ ಸಾಹಿತ್ಯ ಚರಿತ್ರೆಯ ವಿರಾಟ್ ಸ್ವರೂಪ ಗೋಚರಿಸುತ್ತದೆ. ಜೊತೆಗೆ ವಿಸ್ಮಯವೂ ಆಗುತ್ತದೆ.

ಪಡುವಲಪಾಯ ಯಕ್ಷಗಾನದಲ್ಲಿ ‘ಕ್ಷೇತ್ರ ಮಹಾತ್ಮೆ’ಗಳಿಗೇ ಒಂದು ವಿಶೇಷ ಸ್ಥಾನವಿದೆ. ಬಹುಪಾಲು ಎಲ್ಲಾ ಕ್ಷೇತ್ರಗಳ ಮಹಾತ್ಮೆಯೂ ಬಯಲಾಟವಾಗಿ ಪ್ರದರ್ಶನಗೊಂಡಿದೆ. ಅದಕ್ಕೆ ಕಾರಣ ಎಲ್ಲಾ ಮೇಳಗಳೂ ಯಾವುದಾದರೊಂದು ದೇವಸ್ಥಾನದ ದೇವರ ಹೆಸರಲ್ಲಿ ಸಂಸ್ಥಾಪನೆಗೊಂಡು ತಿರುಗಾಟಕ್ಕೆ ಹೊರಡುತ್ತವೆ. ಅಂತಹ ಸಂದರ್ಭದಲ್ಲಿ ಆಯಾ ದೇವರ ಮಹಿಮೆಯನ್ನು ಪ್ರಚುರಪಡಿಸುವುದು, ಭಕ್ತಿಯಿಂದ ನಡೆದುಕೊಳ್ಳುವುದು ಕಲಾವಿದರಿಗೂ, ಮೇಳದ ಯಜಮಾನರಿಗೂ ಹೆಮ್ಮೆಯ ಸಂಗತಿ. ಆ ಕಾರಣಕ್ಕಾಗಿಯೇ ಅವು ಶ್ರದ್ಧಾ-ಭಕ್ತಿಯಿಂದ ಪ್ರದರ್ಶನಗೊಂಡಿವೆ.

ಇಡಗುಂಜಿ, ಕಟೀಲು, ಬಪ್ಪನಾಡು, ಧರ್ಮಸ್ಥಳ, ಮಧೂರು ಹೀಗೆ ಮೂವತ್ತಕ್ಕೂ ಹೆಚ್ಚು ಕ್ಷೇತ್ರ ಮಹಾತ್ಮೆಗಳನ್ನು ಗುರುತಿಸಿದ್ದಾರೆ ಕಬ್ಬಿನಾಲೆಯವರು. ಹೀಗೆ ಒಂದೆಡೆ ಕ್ಷೇತ್ರ ಮಹಾತ್ಮೆಗಳು, ಮತ್ತೊಂದೆಡೆ ಕಲಾವತಿ ಪರಿಣಯ, ಭಾಸವತಿ, ನಾಗಶ್ರೀ, ವಂಶವಲ್ಲರೀ, ಸಂಧ್ಯಾಸಾವೇರಿ ಮುಂತಾದ ಕಾಲ್ಪನಿಕ ಪ್ರಸಂಗಗಳು, ಜೊತೆಗೆ ಕೋಡ್ದಬ್ಬು ತನ್ನಿಮಾನಿಗ, ಅಮರಶಿಲ್ಪಿ ವೀರಕಲ್ಕುಡ, ಅಮರೇಂದ್ರಪದ ವಿಜಯ, ಕಾಯಕಲ್ಪ, ಶುಕ್ರಸಂಜೀವಿನೀ ಮೊದಲಾದ ಹೊಸ ಅಲೆಗಳ ಪ್ರಸಂಗಗಳು ಹೀಗೆ ಯಕ್ಷಗಾನ ಸಾಹಿತ್ಯ ಚರಿತ್ರೆಗೆ ಸಿಗದೇ ಇದ್ದ ಸಾಹಿತ್ಯವೇ ಇಲ್ಲ. ಲೇಖಕರು ಇವೆಲ್ಲವನ್ನೂ ಒಂದೆಡೆ ಸಂಕಲಿಸಿ ದಾಖಲಿಸಿದ್ದಾರೆ.

ಈ ಕೃತಿಯ ಮೂರನೆಯ ಅಧ್ಯಾಯದಲ್ಲಿ ‘ಮೂಡಲಪಾಯ -ಪ್ರಸಂಗ ಸಾಹಿತ್ಯ’ ಕುರಿತಾಗಿ ಬಂದಿದೆ. ಅದರ ಬೇರೆ ಬೇರೆ ಪ್ರಕಾರಗಳಾದ ಮೂಡಲಪಾಯ, ದೊಡ್ಡಾಟ, ಸಣ್ಣಾಟ, ಘಟ್ಟದ ಕೋರೆ, ಶ್ರೀಕೃಷ್ಣ ಪಾರಿಜಾತಗಳನ್ನು ‘ಪಡುವಲಪಾಯ ಪ್ರಸಂಗ ಸಾಹಿತ್ಯ’ ಪರಿಚಯದ ದಾರಿಯಲ್ಲೇ ಮಾಡಿಕೊಟ್ಟಿದ್ದಾರೆ.

‘ಯಕ್ಷಗಾನದಲ್ಲಿ ಪ್ರಯೋಗಶೀಲತೆ’ ಎಂಬ ನಾಲ್ಕನೆಯ ಅಧ್ಯಾಯದಲ್ಲಿ ಮಾರಾವತಾರ, ಕಾರಂತರ ಬ್ಯಾಲೆ, ಅಷ್ಟಾವಧಾನ ಮತ್ತು ಕಾವ್ಯ-ಚಿತ್ರ-ಗಾನ-ನಾಟ್ಯ, ಏಕವ್ಯಕ್ತಿಪ್ರದರ್ಶನ, ಇತರ ಭಾಷೆಯಲ್ಲಿ ಯಕ್ಷಗಾನ, ವಿಶಿಷ್ಟ ಪ್ರಸಂಗಗಳು ಎಂಬ ಶೀರ್ಷಿಕೆಗಳಲ್ಲಿ ಅವೆಲ್ಲದರ ಐತಿಹಾಸಿಕ ಹಿನ್ನೆಲೆ, ಕವಿ-ಕಾವ್ಯ ಪರಿಚಯ, ಕೆಲವು ಕೃತಿಗಳ ಸ್ವಾರಸ್ಯಕರ ಘಟ್ಟ, ಪದ್ಯಗಳ ಚಮತ್ಕಾರ ಮುಂತಾದುವನ್ನು ಸಂಕ್ಷಿಪ್ತವಾಗಿ ಪರಿಚಯಿಸಿ ಅವುಗಳ ಮೇಲೆ ಪ್ರೀತ್ಯಾದರ, ಗೌರವ ಹುಟ್ಟುವಂತೆ ಮಾಡಿದ್ದಾರೆ.

ಐದನೆಯ ಅಧ್ಯಾಯದಲ್ಲಿ ಬಂದ ‘ಮೌಖಿಕ ಸಾಹಿತ್ಯ’ ಕುರಿತಾದ ವಿಶ್ಲೇಷಣೆ ‘ತಾಳಮದ್ದಳೆ’ಯ ವಿಶ್ಲೇಷಣೆ ಎಂದು ಪ್ರತ್ಯೇಕ ಹೇಳಬೇಕಿಲ್ಲ. ಇಲ್ಲಿಯೂ ಕಬ್ಬಿನಾಲೆಯವರು ಅದರ ಉಗಮ, ವಿಕಾಸ ಎಂಬ ಸಂಶೋಧನೆಯ ನೆಲೆಯಲ್ಲಿ ಒಂದಿಷ್ಟು ಮಾತನಾಡುತ್ತಾ ತಾಳಮದ್ದಳೆಯ ಬೆಳವಣಿಗೆಯನ್ನು ನಾಲ್ಕು ಹಂತದಲ್ಲಿ ಗುರುತಿಸಿದ ಡಾ.ಎಂ.ಪ್ರಭಾಕರ ಜೋಶಿಯವರ ಅಭಿಪ್ರಾಯವನ್ನು ಇಲ್ಲಿ ಕ್ರೋಡೀಕರಿಸಿದ್ದಾರೆ. ಜೊತೆಗೇನೇ ಸೇಡಿಯಾಪು, ಕಾರಂತ, ತಕ್ಕಂಜೆ, ತೋಳ್ಪಾಡಿ, ಉಚ್ಚಿಲ ಮೊದಲಾದವರ ಅಭಿಪ್ರಾಯವನ್ನು ಉಲ್ಲೇಖಿಸಿದ್ದು ಈ ಕೃತಿಗೆ ನಿಜಕ್ಕೂ ಘನತೆ, ಗಾಂಭೀರ್ಯವನ್ನು ತಂದುಕೊಟ್ಟಿದೆ.

ಸಂಶೋಧನೆ ಮತ್ತು ವಿಮರ್ಶೆ, ಪ್ರಮುಖ ಕವಿಗಳು, ಉಪಸಂಹಾರ ಎಂಬ ಅಧ್ಯಾಯಗಳೊಂದಿಗೆ ಮುಕ್ತಾಯಗೊಳ್ಳುವ ಈ ಕೃತಿ ಯಕ್ಷಗಾನಪ್ರಪಂಚಕ್ಕೇ ಒಂದು ಅಮೂಲ್ಯ ಕೃತಿಯಾಗಿದೆ. ಕಬ್ಬಿನಾಲೆ ಅವರಿಗೆ ಹಾರ್ದಿಕ ಅಭಿನಂದನೆಗಳು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು