ಶನಿವಾರ, ಜೂನ್ 19, 2021
22 °C

ಟ್ರಂಪ್‌ ಕುಟುಂಬದ ಕಣ್ಣಲ್ಲಿ ಡೊನಾಲ್ಡ್‌

ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಇ ಡೀ ಜಗತ್ತಿನ ಮೇಲೆ ಪ್ರಭಾವ ಬೀರುವಂತಹ ‘ಶಕ್ತಿಶಾಲಿ’ ಅಮೆರಿಕ ದೇಶದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತೀರಾ ಅಷ್ಟೊಂದು ವಿಕ್ಷಿಪ್ತವಾದ ವ್ಯಕ್ತಿಯೇ?

ಡೊನಾಲ್ಡ್‌ ಅವರ ಅಣ್ಣನ (ಫ್ರೆಡರಿಕ್‌ ಕ್ರಿಸ್ಟ್‌ ಟ್ರಂಪ್‌) ಮಗಳು ಮೇರಿ ಎಲ್‌. ಟ್ರಂಪ್‌ ಅವರ ‘ಟೂ ಮಚ್‌ ಅಂಡ್‌ ನೆವರ್‌ ಇನಫ್‌’ (Too Much and Never Enough) ಕೃತಿಯನ್ನು ಓದುತ್ತಾ ಹೋದಂತೆ ಪುಟ–ಪುಟದಲ್ಲೂ ಎದುರಾಗುವ ಪ್ರಶ್ನೆ ಇದು. ಅಮೆರಿಕದ ಈಗಿನ ಅಧ್ಯಕ್ಷರನ್ನು ‘ನನ್ನ ಕುಟುಂಬವು ಸೃಷ್ಟಿಸಿದ ಪ್ರಪಂಚದ ಅತ್ಯಂತ ಅಪಾಯಕಾರಿ ಮನುಷ್ಯ’ ಎಂದು ಕರೆಯುವಲ್ಲಿ ಅವರಿಗೆ ಒಂದಿನಿತೂ ಸಂಕೋಚ ಆಗುವುದಿಲ್ಲ.

‘ನಮ್ಮಜ್ಜ (ಡೊನಾಲ್ಡ್‌ ಅವರ ತಂದೆ, ಫ್ರೆಡ್‌ ಟ್ರಂಪ್‌) ಮರಣಶಯ್ಯೆಯಲ್ಲಿ ಮಲಗಿದ್ದಾಗ ಚಿಕ್ಕಪ್ಪ (ಡೊನಾಲ್ಡ್‌) ಸಿನಿಮಾ ನೋಡಲು ಹೋಗಿದ್ದ. ಕೋವಿಡ್‌ನಿಂದ ದೇಶದಲ್ಲಿ ನಿತ್ಯ ಸಾವಿರಾರು ಜನ ಸಾಯುತ್ತಿರುವಾಗ, ಷೇರು ವಿನಿಮಯದಿಂದ ಎಷ್ಟು ಲಾಭವಾಯಿತು ಎನ್ನುವ ಲೆಕ್ಕಾಚಾರದಲ್ಲಿ ಆತ ಮುಳುಗಿದ್ದ. ಅಂತಹ ವಿಕ್ಷಿಪ್ತ ವ್ಯಕ್ತಿತ್ವ ಆತನದು’ ಎಂದು ಬರೆಯುತ್ತಾರೆ ಮೇರಿ. 

ಸ್ವತಃ ಮನಃಶಾಸ್ತ್ರಜ್ಞೆಯಾಗಿರುವ ಲೇಖಕಿ, ಡೊನಾಲ್ಡ್‌ ಅವರದು ಆತ್ಮರತಿಯ (narcissist) ವ್ಯಕ್ತಿತ್ವ ಎಂದು ವಿಶ್ಲೇಷಿಸುತ್ತಾರೆ. ಸಮಾಜ ವಿರೋಧಿ ವ್ಯಕ್ತಿತ್ವದ ಅಸ್ವಸ್ಥತೆ (anti-social personality disorder), ಅವಲಂಬಿತ ವ್ಯಕ್ತಿತ್ವದ ಅಸ್ವಸ್ಥತೆ (ಸದಾ ಇನ್ನೊಬ್ಬರ ಮೇಲೆ ಅವಲಂಬನೆ, dependent personality disorder) ಹಾಗೂ ನಿತ್ಯ ಡಜನ್‌ಗಟ್ಟಲೆ ಡಯಟ್‌ ಕೋಕ್‌ಗಳನ್ನು ಕುಡಿಯುತ್ತಾ ನಿದ್ರಾಹೀನತೆಯ ಅಸ್ವಸ್ಥತೆಯಿಂದ (sleeping disorder) ಅವರು ಬಳಲುತ್ತಿದ್ದಾರೆ ಎಂದು ಟಿಪ್ಪಣಿಯನ್ನೂ ಕೊಡುತ್ತಾರೆ. ಹೌದು, ಇಂತಹ ಒಳನೋಟಗಳೇ ಟ್ರಂಪ್‌ ಅವರ ಕುರಿತು ಬಂದಿರುವ ಇತರ ಕೃತಿಗಳಿಗಿಂತ ಇದು ವಿಶಿಷ್ಟ ಎನಿಸಲು ಕಾರಣವಾಗಿರುವುದು.

ಟ್ರಂಪ್‌ ಅವರ ವ್ಯಕ್ತಿತ್ವವನ್ನು ಕೃತಿಯಲ್ಲಿ ಅನಾವರಣ ಮಾಡುತ್ತಾ ಹೋಗುವ ಬಗೆಯನ್ನು ನೋಡಿದಾಗ ದಾಯಾದಿ ಮತ್ಸರವೂ ಬರವಣಿಗೆಯನ್ನು ಪ್ರಭಾವಿಸಿದೆ ಎಂದೆನಿಸದೆ ಇರುವುದಿಲ್ಲ. ಆದರೆ, ಲೇಖಕಿ ಅದನ್ನು ಸುತಾರಾಂ ಒಪ್ಪಲು ಸಿದ್ಧರಿಲ್ಲ. ‘ದುಡ್ಡು ಮಾಡುವ ಆಸೆಯಿಂದಾಗಲಿ, ಪ್ರತೀಕಾರ ತೆಗೆದುಕೊಳ್ಳುವ ಮನೋಭಾವದಿಂದಾಗಲಿ ಈ ಕೃತಿಯನ್ನು ನಾನು ಬರೆದಿಲ್ಲ’ ಎಂದು ಅವರು ಹೇಳುತ್ತಾರೆ. ಚಿಕ್ಕಪ್ಪನ ಮೇಲೆ ಸಿಟ್ಟು, ದ್ವೇಷ ಇಲ್ಲವೆಂದಾದರೆ ಅವರಲ್ಲಿ ಒಂದೇ ಒಂದು ಒಳ್ಳೆಯ ಗುಣವನ್ನಾದರೂ ಲೇಖಕಿಗೆ ಕಾಣಲು ಏಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆ ಕಾಡುತ್ತದೆ.

ಇಡೀ ಕೃತಿಯಲ್ಲಿ ಡೊನಾಲ್ಡ್‌ ಅವರ ಕುರಿತು ಲೇಖಕಿ ತುಸು ಮೃದು ಧೋರಣೆ ತಳೆದಿದ್ದೆಂದರೆ, ಅದು ಅವರ ಬಾಲ್ಯ ಜೀವನದ ಕುರಿತು ಪ್ರಸ್ತಾಪ ಮಾಡುವಾಗ. ಅನಾರೋಗ್ಯಪೀಡಿತಳಾಗಿದ್ದ ಅಮ್ಮ ಹಾಸಿಗೆ ಹಿಡಿದಾಗ ಎರಡೂವರೆ ವರ್ಷದ ಪುಟ್ಟ ಬಾಲಕನಾಗಿದ್ದ ಡೊನಾಲ್ಡ್‌ಗೆ ತಾಯಿಯ ಪ್ರೀತಿಯೇ ಸಿಗಲಿಲ್ಲವಂತೆ. ಹೀಗಾಗಿ ಆಗಿನಿಂದಲೂ ಆಕ್ರಮಣಶೀಲ ಮನೋಭಾವದಿಂದಲೇ ಬೆಳೆದರಂತೆ. ಅಮ್ಮನ ಜತೆ ಆತ್ಮೀಯ ಬಂಧ ಇಲ್ಲದಿರುವ ಕಾರಣದಿಂದಲೋ ಏನೋ, ವೈಟ್‌ಹೌಸ್‌ನಲ್ಲಿ ಅವರು ತಂದೆಯ ಭಾವಚಿತ್ರವನ್ನಷ್ಟೇ ಇಟ್ಟಿದ್ದಾರೆ. ಜನ್ಮದಿನದ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರ ಸಹೋದರಿ, ಅಮ್ಮನ ಚಿತ್ರ ಏಕೆ ಇಟ್ಟಿಲ್ಲ ಎಂದು ಪ್ರಶ್ನೆ ಮಾಡಿದರೆ, ಆಗಲೂ ಅಸಡ್ಡೆಯಿಂದ ಉತ್ತರವನ್ನು ನೀಡಿದ್ದರು ಎಂಬ ವಿವರಗಳು ಕೃತಿಯಲ್ಲಿ ಸಿಕ್ಕುತ್ತವೆ.   

ಬ್ರೂಕ್ಲಿನ್‌ನ ರಿಯಲ್‌ ಎಸ್ಟೇಟ್‌ ಉದ್ಯಮಿ ಫ್ರೆಡ್‌ ಟ್ರಂಪ್‌ ಅವರಿಗೆ ಒಟ್ಟು ಐವರು ಮಕ್ಕಳು (ಮೂವರು ಪುತ್ರರು, ಇಬ್ಬರು ಪುತ್ರಿಯರು). ಮಿಕ್ಕ ನಾಲ್ವರನ್ನು ನೇಪಥ್ಯಕ್ಕೆ ತಳ್ಳಿ, ತಂದೆಯ ನೆಚ್ಚಿನ ಮಗನಾಗಿ ಹೊರಹೊಮ್ಮಿದವರು ಡೊನಾಲ್ಡ್‌. ಅವರು ಕಟ್ಟಿದ ಸಾಮ್ರಾಜ್ಯಗಳು, ಮಾಡಿಕೊಂಡ ಎಡವಟ್ಟುಗಳನ್ನು ಎಳೆ ಎಳೆಯಾಗಿ ಬಿಡಿಸಿಡುವ ಪ್ರಯತ್ನವನ್ನು ಮಾಡಿದ್ದಾರೆ ಮೇರಿ.

ಅಜ್ಜ ಬರೆದ ವಿಲ್‌ನ ಸ್ವರೂಪ ಬದಲಾಗಿ ಡೊನಾಲ್ಡ್‌ ಅವರನ್ನು ಹೊರತುಪಡಿಸಿ ಇತರ ಮಕ್ಕಳಿಗಾಗಲಿ, ಅವರ ಅವಲಂಬಿತರಿಗಾಗಲಿ ಆಸ್ತಿಯಲ್ಲಿ ಪಾಲು ಸಿಗದಂತಾದ ಸನ್ನಿವೇಶವನ್ನೂ ಲೇಖಕಿ ಓದುಗರ ಮುಂದೆ ಇಡುತ್ತಾರೆ. ‘ಡೊನಾಲ್ಡ್‌ ಅವರ ಬಗೆಗಿನ  ಭಯದಿಂದ ಹಾಗೂ ಮನೆತನದ ಗೌರವ ಕಾಪಾಡಬೇಕಾದ ಕಾರಣದಿಂದ ಉಳಿದವರು ಬಾಯಿ ತೆಗೆಯಲು ಸಿದ್ಧರಿಲ್ಲ. ಆದರೆ, ನನಗೆ ಯಾವುದೇ ಹಿಂಜರಿಕೆ ಇಲ್ಲ’ ಎಂದೆನ್ನುವ ಧೈರ್ಯವನ್ನೂ ಅವರು ಪ್ರದರ್ಶಿಸುತ್ತಾರೆ.

ಹಾಗೆ ನೋಡಿದರೆ ಇದೊಂದು ವ್ಯಕ್ತಿಚಿತ್ರ. ಆದರೆ, ಡೊನಾಲ್ಡ್‌ ಅವರ ಅವಗುಣಗಳನ್ನು ಎತ್ತಿ ತೋರುವುದಕ್ಕೆ ಪೂರಕವಾಗಿ ಅಮೆರಿಕದ ಪ್ರತಿಷ್ಠಿತ ಟ್ರಂಪ್‌ ಕುಟುಂಬದ ಇತರ ಸದಸ್ಯರು ಪಾತ್ರಧಾರಿಗಳಂತೆ ಬಂದು ಹೋಗುತ್ತಾರೆ. ಕಥೆ ಹೇಳಲು ಆಯ್ದುಕೊಂಡಿರುವ ತಂತ್ರವು ಸಹ ಬಲು ವಿಶಿಷ್ಟವಾಗಿದೆ. ಕೃತಿಯಲ್ಲಿ ನೆನಪುಗಳು ದಟ್ಟವಾಗಿ ಹರಡಿಕೊಂಡಿವೆ. ಕೆಲವು ಸನ್ನಿವೇಶಗಳು ನಮ್ಮ ಮುಂದೆಯೇ ನಡೆಯುತ್ತಿವೆಯೇನೋ ಎನ್ನುವಂತೆ ಸಂವಾದಗಳನ್ನು ಮರುಸೃಷ್ಟಿಸಿದ್ದು ಕೃತಿಯ ಹೆಚ್ಚುಗಾರಿಕೆ.

ಡೊನಾಲ್ಡ್‌ ಅವರ ಬ್ಯಾಂಕ್‌ ವ್ಯವಹಾರಗಳು ಹಾಗೂ ಹಗರಣಗಳ ಕುರಿತು ಪ್ರಸ್ತಾಪ ಮಾಡುವಾಗ ಪಕ್ಕಾ ತನಿಖಾ ವರದಿಗಾರ್ತಿಯಂತೆ ಸಾಕ್ಷ್ಯಗಳನ್ನು ಒದಗಿಸುವ ಯತ್ನ ಮಾಡಿದ್ದಾರೆ ಲೇಖಕಿ. ಬ್ಯಾಂಕಿನ ಕಾಗದಪತ್ರಗಳ ವಿವರಗಳು, ನ್ಯೂಯಾರ್ಕ್‌ ಟೈಮ್ಸ್‌, ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಗಳಲ್ಲಿ ಬಂದ ವರದಿಗಳ ಎಳೆಗಳನ್ನು ತಮ್ಮ ಕಥನದ ನೇಯ್ಗೆಯಲ್ಲಿ ಹದವಾಗಿ ಬಳಸಿಕೊಂಡಿದ್ದಾರೆ. ಡೊನಾಲ್ಡ್‌ ಅವರನ್ನು ‘ಹೊಳಪು ಕಳೆದುಕೊಂಡ ರಿಯಾಲಿಟಿ ತಾರೆ, ವಿಫಲ ಉದ್ಯಮಿ’ (Faded reality star, failed businessman) ಎಂದು ಕರೆದಿರುವ ಮೇರಿ, ‘ಜೀವನದಲ್ಲಿ ಯಾವ ತತ್ವಾದರ್ಶಗಳನ್ನೂ ಇಟ್ಟುಕೊಳ್ಳದ ವ್ಯಕ್ತಿ’ ಎಂದೂ ಅವರನ್ನು ಹೀಯಾಳಿಸುತ್ತಾರೆ.

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚಿಕ್ಕಪ್ಪ ಸ್ಪರ್ಧಿಸಿದ್ದಾಗ ಮೊದಲು ನಮ್ಮ ಕುಟುಂಬದವರು ಯಾರೂ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಅಷ್ಟೇ ಏಕೆ, ಚಿಕ್ಕಪ್ಪ ಕೂಡ ಸ್ಪರ್ಧೆಯ ಕುರಿತು ಗಂಭೀರವಾಗಿರಲಿಲ್ಲ. ಬಿಟ್ಟಿ ಪ್ರಚಾರದಿಂದ ಉದ್ಯಮಕ್ಕೆ ನೆರವಾಗಬಹುದು ಎಂದಷ್ಟೇ ಆತ ಎಣಿಸಿದ್ದ. ಆದರೆ, ರಷ್ಯಾದ ಅಧ್ಯಕ್ಷರ ಬೆಂಬಲ ಸಿಕ್ಕಮೇಲೆ ಚುನಾವಣೆಯ ಚಿತ್ರಣವೇ ಬದಲಾಗಿಹೋಯಿತು. ಜಯಶಾಲಿಯಾದ ಚಿಕ್ಕಪ್ಪ ತುಂಬಾ ಸೋಜಿಗವನ್ನು ಉಂಟುಮಾಡಿದ ಎಂದು ವಿವರಿಸುತ್ತಾರೆ.

ಕಳೆದ ಚುನಾವಣೆಯ ಪ್ರಚಾರದ ಸಮಯದಲ್ಲಿ ಡೊನಾಲ್ಡ್‌ ಅವರು ಜನರ ಅನುಕಂಪವನ್ನು ಗಿಟ್ಟಿಸಲು ತಮ್ಮ ತಂದೆಯ ಮದ್ಯವ್ಯಸನದ ಪ್ರಸ್ತಾಪವನ್ನೂ ಮಾಡಿದ್ದು ಮೇರಿ ಅವರಲ್ಲಿ ಆಕ್ರೋಶ ಉಕ್ಕುವಂತೆ ಮಾಡಿದ್ದು ನಿಜ. ಅದನ್ನು ಆಕೆ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಅಧ್ಯಕ್ಷರಾಗಲು ಹಿಲರಿ ಕ್ಲಿಂಟನ್‌ ಹೆಚ್ಚು ಅರ್ಹರಾಗಿದ್ದರು. ಅವರೇ ಆ ಸ್ಥಾನವನ್ನು ಅಲಂಕರಿಸಬೇಕಿತ್ತು ಎಂಬ ಹಳಹಳಿಕೆ ಕೃತಿಯಲ್ಲಿ ಎದ್ದು ಕಾಣುವ ಅಂಶ.

ಅಮೆರಿಕದ ಅಧ್ಯಕ್ಷ ಎಂಬ ಪಟ್ಟದೊಂದಿಗೆ ಡೊನಾಲ್ಡ್‌ ಅವರು ಕಟ್ಟಿಕೊಂಡಿದ್ದ ದೊಡ್ಡ ಪ್ರಭಾವಳಿಯನ್ನು ಉರುಳಿಸುವ ತವಕ ಪ್ರತೀ ಅಧ್ಯಾಯದಲ್ಲೂ ಎದ್ದು ಕಾಣುತ್ತದೆ. ಮುಂದಿನ ಚುನಾವಣೆಯಲ್ಲಿ ಡೊನಾಲ್ಡ್‌ ಗೆಲ್ಲಬಾರದು ಎಂಬ ಆಶಯ ಕೂಡ ಲೇಖಕಿಯದಾಗಿದೆ. ಅವರೊಂದು ವೇಳೆ ಮತ್ತೆ ಗೆದ್ದರೆ, ಅಮೆರಿಕದಲ್ಲಿ ಖಂಡಿತವಾಗಿ ಪ್ರಜಾಪ್ರಭುತ್ವ ಉಳಿಯದು ಎಂಬ ಎಚ್ಚರಿಕೆಯ ಮಾತುಗಳನ್ನು ಅವರು ಹೇಳಿದ್ದಾರೆ. ಅಂದಹಾಗೆ, ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಹತ್ತಿರವಾಗಿದೆ. ಇದೇ ಹೊತ್ತಿನಲ್ಲಿ ಕೃತಿ ಬಿಡುಗಡೆ ಆಗಿರುವುದು ಕಾಕತಾಳೀಯವಂತೂ ಅಲ್ಲ.

‘ಟೂ ಮಚ್‌ ಅಂಡ್‌ ನೆವರ್‌ ಇನಫ್‌’ Too Much and Never Enough

ಲೇಖಕಿ: ಮೇರಿ ಎಲ್‌. ಟ್ರಂಪ್‌

ಪ್ರಕಾಶಕರು: ಸೈಮನ್‌ ಅಂಡ್‌ ಶ್ಯುಸ್ಟರ್‌

ಪುಟಗಳು: 236, ಬೆಲೆ: ₹ 578

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು