ಶನಿವಾರ, ಏಪ್ರಿಲ್ 10, 2021
32 °C

ಪುಸ್ತಕ ವಿಮರ್ಶೆ: ಪ್ರೇಮಕ್ಕೆ ಸಿಕ್ಕ ಚಂದಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರೇಮಿಗಳ ಪಾಲಿಗೆ ಚಂದಿರ ಸದಾಕಾಲದ ಸ್ನೇಹಿತ. ಚಂದಿರನ ನೋಡಿ ತಮ್ಮ ಪ್ರಿಯತಮೆ ನೆನಪಿಸಿಕೊಳ್ಳುವುದು, ಬೆಳದಿಂಗಳಲ್ಲಿ ವಿರಹದಿಂದ ಬೇಯುವುದು ಸಾಹಿತ್ಯದಲ್ಲಿ ಪದೇ ಪದೇ ಬರುವ ಸಂಗತಿಗಳು. ಆದರೆ, ಐಪಿಎಸ್‌ ಅಧಿಕಾರಿಯೂ ಆಗಿರುವ ಲೇಖಕಿ ಸವಿತಾ ಶ್ರೀನಿವಾಸ ಅವರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ‘ಪ್ರೇಮ ಚಂದ್ರಮ’ನ ನೆತ್ತಿಯ ಮೇಲೆಯೇ ಪ್ರೇಮಕಥೆಯನ್ನು ಸೃಷ್ಟಿಸಿದ್ದಾರೆ!

‘ಗಾಳಕ್ಕೆ ಸಿಕ್ಕ ಚಂದಿರ’ ಸವಿತಾ ಶ್ರೀನಿವಾಸ ಅವರ ನಾಲ್ಕನೇ ಕಾದಂಬರಿ. ಎರಡನೇ ವೈಜ್ಞಾನಿಕ ಕಾದಂಬರಿ. ಹಾಗೆ ನೋಡಿದರೆ ಅವರ ಹಿಂದಿನ ಕಾದಂಬರಿ ‘ತ್ರಿಲೋಕ ಸಂಚಾರಿ ನೀರೆ’ ಕಾದಂಬರಿಯ ಸಿಕ್ವಲ್‌ನಂತೆಯೂ ಈ ಕಾದಂಬರಿಯನ್ನು ಓದಿಕೊಳ್ಳಬಹುದು. ಹಿಂದಿನ ಕಾದಂಬರಿಯಲ್ಲಿ ಚಂದ್ರನ ಕಡೆಗೆ ತಮ್ಮ ಪಾತ್ರವನ್ನು ಹರಿಬಿಟ್ಟಿದ್ದ ಅವರು ಇಲ್ಲಿ ಚಂದ್ರನ ಮೇಲೆ ಕಾಲೊನಿಗಳನ್ನೇ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ, ಚಂದ್ರನ ಮೇಲೆ ಪ್ರೇಮದ ಮೊಗ್ಗನ್ನೂ ಅರಳಿಸಿದ್ದಾರೆ. ‌

ಈ ಕಾದಂಬರಿ ಶುರುವಾಗುವುದೇ ಚಂದ್ರನ ಮೇಲಿನ ವೀಕ್ಷಣಾಲಯದಲ್ಲಿ. ಭೂಮಿಯಿಂದ ಒಂದಿಷ್ಟು ಜನರನ್ನು ಚಂದ್ರನಲ್ಲಿಗೆ ಕಳಿಸಲಾಗಿದೆ. ಅಲ್ಲಿ ಮಾನವ ಜೀವಿತಕ್ಕೆ ಅನುಕೂಲಕರವಾದ ಕೃತಕ ವಾತಾವರಣವನ್ನು ನಿರ್ಮಿಸಲಾಗಿದೆ. ಅಲ್ಲಿನ ತಂಡದ ಮುಖ್ಯಸ್ಥೆ ಇರಾ. ಅವರೆಲ್ಲರೂ ಭೂಮಿಯ ಒಳಿತಿಗಾಗಿ ಚಂದ್ರನ ಮೇಲೆ ವಾಸಿಸುತ್ತಿರುವವರು. ಭೂಮಿಯ ಒಳಿತಿಗೆ ಸಲಕರಣೆಗಳಂತೆ ಬಳಕೆಯಾಗುತ್ತಿರುವವರು.

ಅಂತರಿಕ್ಷದಲ್ಲಿ ಭೂಮಿಯಂತೆಯೇ ಮನುಷ್ಯವಾಸಕ್ಕೆ ಯೋಗ್ಯವಿರುವ ಗ್ರಹ ಇನ್ನೆಲ್ಲಾದರೂ ಇರಬಹುದೇ ಎಂಬ ಕುತೂಹಲದ ಬೆನ್ನುಹತ್ತಿ ಸಾಕಷ್ಟು ಶೋಧನೆಗಳು ನಡೆಯುತ್ತಿವೆ. ಆಗೀಗ ಅನ್ಯಗ್ರಹಜೀವಿಗಳ ಕುರಿತೂ ಸಾಕಷ್ಟು ಸುದ್ದಿ, ಚರ್ಚೆಗಳು ನಡೆಯುತ್ತಿರುತ್ತವೆ. ಅನ್ಯಗ್ರಹದಲ್ಲಿ ಜೀವಿಗಳು ಇರುವುದು ಎಷ್ಟು ನಿಜವೋ ಹೇಳುವುದು ಕಷ್ಟ. ಆದರೆ ಮನುಷ್ಯ ಅನ್ಯಗ್ರಹದ ಮೇಲೆ ಮನೆಕಟ್ಟಿಕೊಂಡು ವಾಸ್ತವ್ಯ ಹೂಡುವ ದಿನಗಳಂತೂ ತುಂಬ ದೂರ ಇದ್ದಂತಿಲ್ಲ.

ಇಂಥದ್ದೇ ಒಂದು ಕಲ್ಪನೆಯ ಎಳೆ ಹಿಡಿದುಕೊಂಡು ‘ಗಾಳಕ್ಕೆ ಸಿಕ್ಕ ಚಂದಿರ’ ಕಾದಂಬರಿ ತನ್ನ ಗರಿಗಳನ್ನು ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಚಂದ್ರನ ಮೇಲೆ ಸಂಶೋಧನೆಗೆಂದು ಹೋದವರು ಅಲ್ಲಿಯೇ ವಾಸ್ತವ್ಯ ಹೂಡಿ, ಕೊನೆಗೆ ಭೂಮಿಯ ನಿಯಂತ್ರಕರ ವಿರುದ್ಧ ಬಂಡೇಳುವ ತಿರುವೂ ಇಲ್ಲಿದೆ. ಆದರೆ ಎಷ್ಟೇ ಹಾರಾಡಿದರೂ, ಎಲ್ಲಿಯೇ ಓಡಾಡಿದರೂ ನೆಮ್ಮದಿ ಕೊಡುವುದು ನಮ್ಮ ಮನೆಯೇ ತಾನೆ? ಹಾಗೆಯೇ ಇಲ್ಲಿ ಕಾದಂಬರಿಯ ಉದ್ದಕ್ಕೂ ಅಂತರ್ಗತವಾಗಿ ನಾಯಕ ಅವಧೂತ್ ಮತ್ತು ನಾಯಕಿ ಇರಾ ನಡುವೆ ಪ್ರೇಮದ ಪರಿಮಳ ಪಸರಿಸುತ್ತಿದ್ದರೂ ಅದು ನಿವೇದನೆಯ ರೂಪ ತಳೆಯುವುದು ಭೂಮಿಯ ಪರಿಧಿಯೊಳಗೇ.

ಕನ್ನಡದಲ್ಲಿ ವೈಜ್ಞಾನಿಕ ಕಾದಂಬರಿ ಪ್ರಕಾರ ಹುಲುಸಾಗಿಯೇನೂ ಬೆಳೆದಿಲ್ಲ. ಈ ದೃಷ್ಟಿಯಲ್ಲಿ ಸವಿತಾ ಶ್ರೀನಿವಾಸ್ ಅವರು ಆಯ್ದುಕೊಂಡಿರುವ ದಾರಿ ಕುತೂಹಲ ಹುಟ್ಟಿಸುತ್ತದೆ. ಆದರೆ ವಸ್ತುವಷ್ಟೇ ಮಹತ್ವವಾದುದನ್ನು ಸೃಷ್ಟಿಸುವುದಿಲ್ಲ. ಅದಕ್ಕೆ ಭಾಷೆಯ ಬೆಂಬಲ, ಶಿಲ್ಪದ ಬೆನ್ನೆಲುಬು ಎರಡೂ ಬೇಕಾಗುತ್ತದೆ. ಲೇಖಕಿ ಈ ಎರಡು ವಿಷಯಗಳಲ್ಲಿ ಇನ್ನಷ್ಟು ಮುತುವರ್ಜಿ ವಹಿಸಿದರೆ, (ಬಹುಶಃ ಮಂಗಳನ ಮೇಲೆ ಘಟಿಸಬಹುದಾದ!) ಅವರ ಮುಂದಿನ ಕಾದಂಬರಿಗಳು ಇನ್ನಷ್ಟು ಸತ್ವಶಾಲಿಯಾಗುವುದರಲ್ಲಿ ಸಂಶಯವಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು