ಶನಿವಾರ, ಜೂನ್ 6, 2020
27 °C

ಪುಸ್ತಕ ವಿಮರ್ಶೆ: ಪಾಳೆಗಾರಿಕೆಯ ಕ್ರೌರ್ಯ; ಅಸಹಾಯಕತೆಯ ಅಣಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಂದಿ ಎನ್ನುವ ಎತ್ತನ್ನು ಶೃಂಗರಿಸಿಕೊಂಡು ಮನೆ, ಮನೆಗೆ ಸುತ್ತಾಡಿಸಿ ಹೊಟ್ಟೆ ಹೊರೆಯುತ್ತಿದ್ದ ಪಾರಂಪಾರಿಕ ಅಲೆಮಾರಿ ಜನರ ಗುಂಪು ಕಾಲಾನುಕ್ರಮದಲ್ಲಿ ಜೀತದಾಳಾಗಿ ಪರಿವರ್ತನೆ ಹೊಂದಿ, ಹೇಗೆ ಅನಿಶ್ಚಿತ ಬದುಕಿನ ಸುಳಿಗೆ ಸಿಲುಕುತ್ತದೆ ಎನ್ನುವ ಕಥಾಹಂದರವೇ ಈ ಕಾದಂಬರಿಯ ಕೇಂದ್ರ ವಸ್ತು.

ಬರಗಾಲದ ದಿನಗಳಲ್ಲಿ ನೀರಿನ ಆಶ್ರಯವನ್ನರಸಿ ಗುಳೆ ಹೊರಟ ಜೀತದಾಳುಗಳ ತಂಡವೊಂದು ಶೋಷಕ ವರ್ಗದ ಕೈಸೆರೆಯಾಗಿ ಅಪಾರ ಕಷ್ಟನಷ್ಟಗಳನ್ನು ಅನುಭವಿಸಿ, ಕೊನೆಗೆ ಕಾಡು ಪಾಲಾಗುತ್ತದೆ. ಪಾಳೆಗಾರಿಕೆಯ ಕ್ರೌರ್ಯದ ರುದ್ರನರ್ತನವು ಮನುಷ್ಯನ ಬಡತನ, ಅನರಕ್ಷತೆ, ಅಸಹಾಯಕತೆಯನ್ನು ಅಣಕಿಸುತ್ತದೆ. ಜೀವ ಮತ್ತು ಜೀವನ ಉಳಿಸಿಕೊಳ್ಳಲು ರಾತ್ರೋರಾತ್ರಿ ಜಾಗ ಖಾಲಿ ಮಾಡುವ ಅಲೆಮಾರಿ ಜನರ ಬವಣೆ ವಾಸ್ತವ ಜಗತ್ತಿಗೆ ಹತ್ತಿರವಾಗಿದೆ. ಈ ವಲಸಿಗರಿಗೆ ಊರು ಸೇರುವ ದಾರಿಯೂ ಸಿಗದೆ, ಕುಡಿಯಲು ಗುಟುಕು ನೀರು ಸಿಗದೆ, ಆಹಾರವೂ ಸಿಗದೆ ಕಾಡಿನಲ್ಲಿ ಒಬ್ಬೊಬ್ಬರೇ ಧಾರುಣವಾಗಿ ಜೀವ ಕಳೆದುಕೊಳ್ಳುವುದು ಹೃದಯ ಹಿಂಡುತ್ತದೆ. 

ಗಂಟಲು ಒಣಗಿ ಜೀವ ಬಿಡುವಂತಾದ ಆರು ತಿಂಗಳ ಹಸುಗೂಸಿಗೆ ಮತ್ತು ಮೂರು ವರ್ಷದ ಮಗುವಿಗೆ ಎದೆಹಾಲು ಬಸಿದುಕೊಡುವ ಗಂಗಾವತಿ, ಹರೆಯದ ಪ್ರೇಮಜೋಡಿಗಳಾದ ನರಸು–ರೇಣು, ದಾರಿ ಮಧ್ಯೆ ಕಳೆದುಹೋಗುವ ಶಾಂತಿ ಹೀಗೆ ಈ ಕಾದಂಬರಿಯಲ್ಲಿ ಬರುವ ಎಲ್ಲ ಪಾತ್ರಗಳು ಬಿಟ್ಟುಬಿಡದೆ ಕಾಡುತ್ತವೆ.

20ಕ್ಕೂ ಹೆಚ್ಚು ಜನರಿದ್ದ ಕುಟುಂಬಗಳಲ್ಲಿ ಕೊನೆಗೆ ಉಳಿಯುವವರು ಒಂಬತ್ತು ಮಂದಿ. ಬಾಯಾರಿದ ಗಂಟಲಿಗೆ ಜೀವಸೆಲೆ ನೀರು ಸಿಕ್ಕಾಗ ಅದನ್ನು ಸಂಭ್ರಮಿಸುವ ಚೈತನ್ಯವೂ ಉಳಿದ ಒಂಬತ್ತು ಮಂದಿಯಲ್ಲಿರುವುದಿಲ್ಲ. ಈ ರುದ್ರಭಯಾನಕ ಚಿತ್ರಣವನ್ನು ಕಾದಂಬರಿಯಲ್ಲಿ ಲೇಖಕ ಹೃದಯಸ್ಪರ್ಶಿಯಾಗಿ ಚಿತ್ರಿಸಿದ್ದಾರೆ. 

ವಿನಾಶದ ಅಂಚಿಗೆ ಸರಿಯುತ್ತಿರುವ ಕುಲಕಸುಬುಗಳಿಂದ ಕಂಗೆಟ್ಟಿರುವ ವೃತ್ತಿನಿರತರ ಬವಣೆಗಳು, ಹದಗೆಡುತ್ತಿರುವ ಗ್ರಾಮೀಣ ಬದುಕು, ವಲಸಿಗರ ಜೀವನ ಹೋರಾಟದ ವಿವರಗಳು ಈ ಕಾದಂಬರಿಯಲ್ಲಿ ಹಾಸುಹೊಕ್ಕಾಗಿವೆ. ಕಾದಂಬರಿ ಓದಿ ಮುಗಿಸಿದ ಮೇಲೆ ಒಂದು ನಿಟ್ಟುಸಿರು ಸದ್ದಿಲ್ಲದೆ ಹೊರಹೊಮ್ಮುತ್ತದೆ. ಲೇಖಕಿ ಇದನ್ನು ಕನ್ನಡಕ್ಕೆ ಅಷ್ಟೇ ಸೊಗಸಾಗಿ ತಂದಿದ್ದಾರೆ.

***

ಅರಣ್ಯಕಾಂಡ

(ಕಾದಂಬರಿ)

ಮೂಲ: ಮಹಾಬಳೇಶ್ವರ ಸೈಲ್‌

ಕನ್ನಡಕ್ಕೆ: ಗೀತಾ ಶೆಣೈ

ಪ್ರ: ಕೊಂಕಣಿ ಭಾಸ ಆನಿ ಸಂಸ್ಕೃತಿ ಪ್ರತಿಷ್ಠಾನ, ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರ, ಮಂಗಳೂರು– 575016

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.