ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಸಾಂಸ್ಕೃತಿಕ ವಿರಹಕ್ಕೆ ರಸಿಕತೆಯ ಉಪಚಾರ

Last Updated 29 ಜನವರಿ 2022, 19:30 IST
ಅಕ್ಷರ ಗಾತ್ರ

‘ಮೋಡದೊಡನೆ ಮಾತುಕತೆ’ – ಈ ಕೃತಿಯ ಪರಿಚಯವನ್ನು ಮಾಡಿಕೊಡುವಾಗ ಮೊದಲು ‘ಯಾವ ಮಾತಿನಿಂದ ಆರಂಭಿಸುವುದು’ ಎಂಬ ಪ್ರಶ್ನೆ ಎದುರಾಯಿತು. ಆಗ ಕಣ್ಣಿಗೆ ಬಿದ್ದದ್ದು ಪುತಿನ ಅವರ ಈ ಮಾತು: ‘ಪದ್ಯದಲ್ಲಿ ವಾಸ್ತವ ಹುಚ್ಚಿಗೇರಬೇಕು; ಗದ್ಯದಲ್ಲಿ ಹುಚ್ಚು ವಾಸ್ತವಕ್ಕಿಳಿಯಬೇಕು.’ ‘ಮೋಡದೊಡನೆ ಮಾತುಕತೆ’ಯು ಕಾಳಿದಾಸನ ‘ಮೇಘದೂತ’ವನ್ನು ಕುರಿತು ಕೆ.ವಿ. ಅಕ್ಷರ ಅವರು ರಚಿಸಿರುವ ವಿವರಣೆ, ಪದ್ಯಾನುವಾದ ಸಹಿತ. ಮೇಘದೂತದಲ್ಲಿ ವಾಸ್ತವವು ಹುಚ್ಚಿಗೇರಿರುವುದನ್ನು ನೋಡುತ್ತೇವೆ. ಪ್ರೇಮದಲ್ಲಿ ವಿರಹವೂ ಸಹಜಾವಾಸ್ಥೆ. ಆದರೆ ಪ್ರೇಮಿಯೊಬ್ಬ ಪ್ರಿಯತಮೆಗೆ ವಿರಹದ ಸಂದೇಶವನ್ನು ಮೋಡದ ಮೂಲಕ ಕಳುಹಿಸಲು ತವಕಿಸುತ್ತಾನೆ ಎಂದರೆ, ಅದು ‘ವಾಸ್ತವವು ಹುಚ್ಚಿಗೇರಿದೆ’ ಎಂದೇ ಅಲ್ಲವೆ! ಈ ‘ಹುಚ್ಚಿನ’ ವಾಸ್ತವಾಂಶಗಳನ್ನು ಕಂಡುಹಿಡಿಯುವ ಪ್ರಯತ್ನವೇ ಅಕ್ಷರ ಅವರ ಗದ್ಯವಿವರಣೆ.

ಕಾಳಿದಾಸನ ‘ಮೇಘದೂತ’ ಸಾವಿರಾರು ವರ್ಷಗಳಿಂದ ವಿಶ್ವಸಾರಸ್ವತಲೋಕದಲ್ಲಿ ಸಹೃದಯರನ್ನು ಆನಂದಿಸುತ್ತ ಬಂದಿದೆ. ಪ್ರಾಚೀನ ಭಾರತೀಯ ಕಾವ್ಯಪರಂಪರೆಯ ಸ್ವರೂಪ ಏನು; ಈ ಪರಂಪರೆ ಇಂದಿಗೂ ಹೇಗೆ ಸಲ್ಲುತ್ತದೆ – ಎಂಬ ಎರಡು ಪ್ರಶ್ನೆಗಳು ಅಕ್ಷರ ಅವರನ್ನು ಮುಖ್ಯವಾಗಿ ಕಾಡಿದಂತಿವೆ. ಸಮಾಧಾನವನ್ನು ಕಂಡುಕೊಳ್ಳಲು ಅವರು ಮೇಘದೂತವನ್ನು ಆರಿಸಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಭಾಷೆ–ಸಂಸ್ಕೃತಿಗಳ ಸುತ್ತ ಹಲವು ನೆಲೆಗಳ ವಾದ–ವಿವಾದಗಳು ನಡೆಯುತ್ತಿವೆ. ಸಂಸ್ಕೃತವನ್ನು ಕನ್ನಡಕ್ಕೆ ವಿರೋಧ ಎಂಬಂತೆ ಚಿತ್ರಿಸುವ ಹುನ್ನಾರ, ಕನ್ನಡವನ್ನೇ ಕುಬ್ಜಗೊಳಿಸುವ ಉತ್ಸಾಹಗಳು ನಮ್ಮ ನಡುವೆ ಕಾಣುತ್ತಿವೆ. ‘ನಮಗೆ ಸಂಸ್ಕೃತ ಏಕೆ ಬೇಕು’ ಎಂಬುದರ ಜೊತೆಗೆ ‘ಸಂಸ್ಕೃತ–ಕನ್ನಡಗಳ ನಂಟು ಏಕೆ, ಹೇಗೆ’ ಎಂಬ ನಮ್ಮ ಕಾಲದ ಬೌದ್ಧಿಕ ಒತ್ತಡಕ್ಕೆ ಉತ್ತರವನ್ನು – ತನಗೆ ಅರಿವಿಲ್ಲದೆಯೇ – ‘ಮೋಡದೊಡನೆ ಮಾತುಕತೆ’ ತಿಳಿಸಿಕೊಡುವಂತಿದೆ. ಸಮಕಾಲೀನ ಸಮಾಜ ಎದುರಿಸುತ್ತಿರುವ ’ಸಾಂಸ್ಕೃತಿಕ ವಿರಹ’ಕ್ಕೆ ಬೇಕಾದ ಉಪಚಾರ ಒದಗುವುದು ಪ್ರಾಚೀನ ಸಂಸ್ಕೃತವಾಙ್ಮಯದ ಅನುಸಂಧಾನದಿಂದಲೇ ಹೌದು ಎಂಬ ನಂಬಿಕೆ ಈ ಕೃತಿಯಲ್ಲಿದೆ. ನಮಗೆ ಸಂಸ್ಕೃತ ಬೇಕು. ಹಾಗಾದರೆ ಕನ್ನಡಕ್ಕೆ ಈ ಸಂಸ್ಕೃತ ಹೇಗೆ ಬೇಕು? ‘ಹಿಂದೆ ಸಂಸ್ಕೃತದಿಂದ ಕನ್ನಡ ಬದುಕಿತು; ಮುಂದಕ್ಕೆ ಕನ್ನಡದಲ್ಲಿ ಸಂಸ್ಕೃತ ಬದುಕಬೇಕು’ ಎಂಬ ಡಿವಿಜಿ ಅವರ ಮಾತಿನ ಅರ್ಥವನ್ನು ಅಕ್ಷರ ಅವರ ಕೃತಿಯಲ್ಲಿ ನೋಡಬಹುದು.

‘ಹಳೆಗಾಲದ ಪಠ್ಯಗಳನ್ನು ನಮ್ಮ ಕಾಲದ ಒಂದೊಂದು ತಲೆಮಾರು ತನ್ನದೇ ಹುಡುಕಾಟದ ಅಂಗವಾಗಿ ಮರು–ಆವಿಷ್ಕಾರ ಮಾಡಿಕೊಳ್ಳುವುದು ತುಂಬ ತುರ್ತಾಗಿ ನಡೆಯಬೇಕಾದ ಒಂದು ಸಾಂಸ್ಕೃತಿಕ ಅಗತ್ಯ’ ಎಂಬ ವ್ರತಬುದ್ಧಿಯಿಂದ ಅಕ್ಷರ ಮೇಘದೂತದ ವ್ಯಾಖ್ಯಾನದಲ್ಲಿ ತೊಡಗಿದ್ದಾರೆ. ಮೇಘದೂತಕ್ಕೆ ಸಂಸ್ಕೃತದಲ್ಲಿಯೇ ಹಲವು ವ್ಯಾಖ್ಯಾನಗಳಿವೆ; ನಮ್ಮ ಕಾಲದಲ್ಲಿ ಹಿಂದಿಯಲ್ಲಿ ಹಜಾರೀ ಪ್ರಸಾದ್‌ ದ್ವಿವೇದಿ ಒಂದು ಅಪೂರ್ವವಾದ ವ್ಯಾಖ್ಯಾನವನ್ನು ರಚಿಸಿದ್ದಾರೆ. ಇವೆಲ್ಲವೂ ಅಕ್ಷರ ಅವರಿಗೆ ನೆರವಾಗಿವೆ; ಜೊತೆಗೆ ಶ್ರೀರಾಮ ಭಟ್‌ ಅವರ ತರಗತಿಗಳು, ಅಕ್ಷರ ಅವರ ಬೇರೆಯ ಓದು, ನಾಟಕರಂಗದಲ್ಲಿಯ ಅವರ ಅನುಭವಗಳೂ ಕೈಹಿಡಿದಿವೆ. ಎಲ್ಲಕ್ಕಿಂತಲೂ ಮಿಗಿಲಾಗಿ ಅವರಲ್ಲಿ ವಿದ್ಯಾರ್ಥಿಯ ಕುತೂಹಲ ಮತ್ತು ಶಿಸ್ತು ಎದ್ದುಕಾಣುತ್ತವೆ. ಹೀಗಾಗಿ ಅವರ ಬರಹದಲ್ಲಿ ಸಹೃದಯತೆಯ ಸಂಭ್ರಮವನ್ನೂ ವಿದ್ಯಾರ್ಥಿಯ ವಿನಯವನ್ನೂ ಕಾಣುತ್ತೇವೆ. ‘ಮೇಘದೂತದಂಥ ಕಾವ್ಯವನ್ನು ಮೊದಲ ಸಲ ಅವಲೋಕಿಸುವುದೇ ನಮ್ಮ ಜೀವನದ ವಿಶೇಷ ಸಂಭ್ರಮದ ಮಹಾಘಟನೆ’ ಎಂಬ ಗಯಟೆಯ ಮಾತು ಅವರ ಬರಹದಲ್ಲಿ ಸ್ಪಷ್ಟವಾಗುತ್ತದೆ. ಹೀಗಿದ್ದರೂ ಕೆಲವೊಮ್ಮೆ ಅವರು ಕಾವ್ಯಮಂದಿರದ ಒಳಗೆ ಪ್ರವೇಶಿಸಲು ಸ್ವಲ್ಪ ಹೆದರುತ್ತಿರಬಹುದು ಎಂದೂ ಅನಿಸದಿರದು. ಈ ಹೆದರಿಕೆಗೂ ಸಕಾರಣ ಇದೆಯೆನ್ನಿ!

ಸಂಸ್ಕೃತಪ್ರಪಂಚದ ಅಗಾಧತೆಯ ಅರಿವು ಅವರಲ್ಲಿ ಸದಾ ಎಚ್ಚರವಾಗಿರುವುದು ಖಂಡಿತ. ಹೀಗಾಗಿಯೇ, ಯಕ್ಷನು ಮೋಡಕ್ಕೆ ಒದಗಿಸಿದ ಸಾಂಸ್ಕೃತಿಕ–ಸಾಹಿತ್ಯಾತ್ಮಕ ನಕ್ಷೆಗಳಿಗಿಂತಲೂ ಅವರ ಆಖ್ಯಾನ–ವ್ಯಾಖ್ಯಾನಯಾನದಲ್ಲಿ ಕೆಲವೆಡೆ ‘ಜಿಪಿಎಸ್‌’ ಸೌಲಭ್ಯವನ್ನು ಬಳಸಿದಂತೆ ಕಾಣುತ್ತದೆ. ಈ ಮಾತು ಅವರು ವಿವರಣೆಯಲ್ಲಿ ಬಳಸಿರುವ ಆಧುನಿಕ ಉದಾಹರಣೆ–ವಿವರಣೆಗಳನ್ನು ಉದ್ದೇಶಿಸಿದ್ದಲ್ಲ; ವಸ್ತುತಃ ಇವು ಸಾರ್ಥಕವಾಗಿಯೇ ಬಳಕೆಯಾಗಿವೆ. ಕಂಬಾರ, ಅಡಿಗ, ಬೇಂದ್ರೆಯವರಂಥ ಆಧುನಿಕರ ಪ್ರತಿಭೆಯಲ್ಲಿ ಅವರು ಕಾಣುವ ಕಾವ್ಯಪರಂಪರೆಯ ಸಾತತ್ಯ ಅವರ ವಿಶಿಷ್ಟ ಕಾಣ್ಕೆ. ‘ಕಚ್ಚಿತ್‌ ಸೌಮ್ಯ’ ಎಂಬ ಪದ್ಯಕ್ಕೆ ವಿವರಣೆ ನೀಡುವಾಗ ಅವರಿಗೆ ಒದಗಿರುವ ನಾಟಕದ ವಿವರಗಳೂ ಪದ್ಯದ ಆಯಾಮವನ್ನು ಹಿಗ್ಗಿಸಿವೆ.

‘ಈ ಕೃತಿಯೊಳಗೆ ಮೋಡವು ಬರಿಯ ಮೋಡವೂ ಅಲ್ಲ, ಸಂದೇಶವು ಬರಿಯ ಸಂದೇಶವೂ ಅಲ್ಲ’ ಎಂಬ ಪ್ರತಿಜ್ಞೆಯನ್ನು ಅವರು ಸಮರ್ಥವಾಗಿಯೇ ಸಾಧಿಸಿದ್ದಾರೆ. ಅವರು ಬಳಸುವ ಸಿನಿಮಾದ ಪರಿಭಾಷೆ, ಅಲಂಕಾರತತ್ತ್ವಗಳ ಪರಾಮರ್ಶೆ, ನಮ್ಮ ಕಾಲದ ತಾತ್ತ್ವಿಕ ಸಿದ್ಧಾಂತಗಳು, ಆಧುನಿಕತೆಯ ತವಕ–ತಲ್ಲಣಗಳು ಮೇಘದೂತವನ್ನು ಸಾರ್ವಕಾಲಿಕ ಕೃತಿಯನ್ನಾಗಿ ಕಂಡರಿಸುವುದರಲ್ಲಿ ಯಶಸ್ವಿಯಾಗಿವೆ; ನಮ್ಮ ಕಾಲಕ್ಕೆ ಅನಿವಾರ್ಯವಾಗಿದ್ದ ಇಂಥದೊಂದು ಕೃತಿಯನ್ನು ಅವರು ಒದಗಿಸಿದ್ದಾರೆ. ಶ್ರೀರಾಮ ಭಟ್‌ ಅವರ ಟಿಪ್ಪಣಿಗಳು ಸಂಸ್ಕೃತ ಕಾವ್ಯಪರಂಪರೆಯನ್ನು ಆರ್ಷೇಯ ಸಂಬಂಧವನ್ನು ಎತ್ತಿಹಿಡಿದಿವೆ. ‘ಮೇಘದೂತದ ಓದು ಕಾಳಿದಾಸನ ಮಹಾಕಾವ್ಯ ನಾಟಕಗಳ ಓದಿಗೆ ಬೇಕಾದ ಶಕ್ತಿ ನೀಡುತ್ತದೆ’ ಎಂಬ ಅವರ ಮಾತು ಈ ಕೃತಿಯ ಭರತವಾಕ್ಯವಾಗಿರುವುದೂ ಧ್ವನಿಪೂರ್ಣವಾಗಿದೆ.

ಕೊನೆಯ ಮಾತು: ಈ ಕೃತಿಯನ್ನು ನೋಡಿದ ಕೂಡಲೇ ಮೂಡಿದ ಮೊದಲ ಮಾತು – ಪುಸ್ತಕದ ಮುದ್ರಣಕ್ಕೆ ‘ಪಾರ್ಚ್‌ಮೆಂಟ್‌’ ಕಾಗದದ ಬದಲಿಗೆ ‘ಎನ್‌ಎಸ್‌’ ಕಾಗದವನ್ನು ಬಳಸಿಕೊಂಡಿದ್ದಿದ್ದರೆ ಬೆಲೆಯಲ್ಲಿ ಕನಿಷ್ಠ ₹50ಗಳಷ್ಟಾದರೂ ಕಡಿಮೆಯಾಗುತ್ತಿತ್ತೇನೋ!

ಮೋಡದೊಡನೆ ಮಾತುಕತೆ

ಲೇ: ಅಕ್ಷರ ಕೆ. ವಿ.

ಪ್ರ: ಬಹುವಚನ

ಸಂ: 63625 88659

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT