ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಭಿಕ್ಷಾ ಪಾತ್ರೆಯೊಳಗಿನ ಜೀವನ ದ್ರವ್ಯ

Last Updated 17 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಕಗ್ಗತ್ತಲ ಕೂಪಗಳಿಂದಲೇ ನಾವು ಜೀವನದ ಪ್ರಕಾಶಮಾನ ಕಿರಣಗಳನ್ನು ಹಿಡಿದಿಟ್ಟುಕೊಳ್ಳಬೇಕು ಎಂಬ ಆಶಯದ ಕಾದಂಬರಿ ‘ಬೌಲ್‌’. ಪ್ರಾಚೀನ ವ್ಯಕ್ತಿತ್ವಗಳನ್ನು ಆಧುನಿಕ ಸಂವೇದನಗಳೊಂದಿಗೆ ಇಲ್ಲಿ ಮರುಸೃಷ್ಟಿಸಲಾಗಿದೆ. ಬಿಕ್ಕು ಹಾಗೂ ಅವನ ಕೈಯಲ್ಲಿನ ಖಾಲಿ ಪಾತ್ರೆ ರೂಪಕವಾಗಿ, ಪಾತ್ರವಾಗಿಯೂ ಕಾದಂಬರಿಯಲ್ಲಿ ಮಾತನಾಡುತ್ತಲೇ ಹೋಗಿರುವುದು ವಿಶೇಷ. ಸಾಂಸಾರಿಕ ಜವಾಬ್ದಾರಿಯೆಲ್ಲವನ್ನೂ ನಿರ್ವಹಿಸಿದ ಬಿಕ್ಕು ಮೋಕ್ಷ ಸಾಧಿಸುವ ಕಥೆ, ಅಧ್ಯಾತ್ಮ, ಲೌಕಿಕದ ನಡುವಿನ ವಾಸ್ತವಕ್ಕೆ ಬದುಕು ಹತ್ತಿರವಾಗಬೇಕು ಎಂಬ ಸಮನ್ವಯವನ್ನೂ ಸಾರಿದೆ. ಬುದ್ಧ ಮಾರ್ಗದ ಈ ಪಯಣದುದ್ದಕ್ಕೂ ರೂಪಕಗಳಲ್ಲಿ ಹೇಳುವ ಕಥೆಗಳೆಲ್ಲವೂ ವಾಸ್ತವಿಕ ಬದುಕಿಗೇ ಸಂಬಂಧಿಸಿದ್ದಾಗಿವೆ. ‘ಪರಭಕ್ಷಕ ಪ್ರಪಂಚ’ದ ‘ಮೋಕ್ಷ’ ಗಳಿಕೆಯ ಹಾದಿಯನ್ನೂ ತೋರಿವೆ.

ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸುವ ಬಗೆ ಹೇಗೆ, ಆಧುನಿಕ ಬದುಕು ಸೃಷ್ಟಿಸುವ ಗೊಂದಲ, ಅತಂತ್ರತೆ, ಅಸಹನೆ ಎಂತಹದ್ದು ಎಂಬುದನ್ನು ಇಲ್ಲಿನ ಪಾತ್ರಗಳು ಚರ್ಚಿಸಿವೆ. ಕಾರ್ಪೊರೇಟ್‌ ಜಗತ್ತಿನ ಯೋಜನೆಗಳ ಆಳವಾದ ಉದ್ದೇಶಗಳೂ ಇಲ್ಲಿ ವಿಶ್ಲೇಷಣೆಗೆ ಒಳಗಾಗಿವೆ. ಇಂತಹ ಸನ್ನಿವೇಶಕ್ಕೆ ಕಾರಣವಾದ ಪ್ರಭುತ್ವದ ವಿರುದ್ಧ ಆಕ್ರೋಶವೂ ಹರಿದಿದೆ. ಮನುಷ್ಯ ಬದುಕಿನ ಶೂನ್ಯತೆ ಮತ್ತು ಸಾತ್ವಿಕತೆ ಒಂದು ಹಂತದ ಅಮಾಯಕತೆಯನ್ನು ಬಿಕ್ಕುವಿನ ಪಾತ್ರ ವಿವರಿಸಿದಂತಿದೆ. ಮುರಿದ ಭಿಕ್ಷಾಪಾತ್ರೆ, ಅದನ್ನೂ ಜೋಪಾನವಾಗಿರಿಸಿಕೊಂಡು ಮುಂದುವರಿಯುವ ಬಿಕ್ಕು ಭೂತ, ವರ್ತಮಾನ ಮತ್ತು ಭವಿಷ್ಯದ ನೇರವಾದ ಪೂರಕ ಸಾಕ್ಷಿಯಂತೆ ಕಾಣಿಸುತ್ತಾನೆ. ಭಿಕ್ಷಾಪಾತ್ರೆ ಮನುಷ್ಯ ಬದುಕಿನ ಪಲ್ಲಟ ಹಾಗೂ ಅಸ್ಥಿರತೆಯನ್ನೂ ಪ್ರತಿಬಿಂಬಿಸಿದಂತಿದೆ.

ಪ್ರೊ. ಮನು ಚಕ್ರವರ್ತಿ ಅವರು ಮುನ್ನುಡಿಯಲ್ಲೇ ಹೇಳಿರುವಂತೆ ಇದೊಂದು ಮೂಲಭೂತವಾದ ತಾತ್ವಿಕ ವಿಚಾರಗಳನ್ನು ಅಪ್ಪಿಕೊಳ್ಳುವ ಸುಂದರ ಕಲಾಕೃತಿ. ಆದರೆನಿರೂಪಣೆ ಅಲ್ಲಲ್ಲಿ ತುಸು ಬಳಲಿದಂತೆ ಗೋಚರಿಸುತ್ತದೆ.

***

ಕೃತಿ: ಬೌಲ್‌ (ಕಾದಂಬರಿ)
ಲೇ: ಎಂ.ಎಸ್‌. ಮೂರ್ತಿ
ಪ್ರ: ಕಿರಂ ಪ್ರಕಾಶನ ಬೆಂಗಳೂರು
ಬೆಲೆ: ₹ 250
ಪುಟಗಳು: 240

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT