ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ವಿಷಾದದ ನಿಟ್ಟುಸಿರು ಹೊರಡಿಸುವ ಜೋಗಪ್ಪ

Last Updated 12 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಕುಂ. ವೀ. ಅವರ ‘ಎಲ್ಲೋ ಜೋಗಪ್ಪ ನಿನ್ನರಮನೆ’, ಅವರ ಹಿಂದಿನ ಕಾದಂಬರಿ ‘ಅರಮನೆ’ಯ ಮುಂದುವರಿದ ಭಾಗವಾಗಿ ಓದಿಕೊಳ್ಳಬಹುದು. ಅದು ವಸಾಹತುಪೂರ್ವದ ಕಥನವಾಗಿದ್ದರೆ, ಇದು ವಸಾಹತ್ತೋತ್ತರ ಕಾಲಘಟ್ಟದ ಸ್ಥಿತ್ಯಂತರಗಳನ್ನು ಹಿಡಿದಿಟ್ಟಿದೆ.

‘ಅರಮನೆ’ ಕಾದಂಬರಿಯು ವಸಾಹತುಶಾಹಿಯ ಕಾಲಘಟ್ಟದ ಚರಿತ್ರೆಯೊಂದಿಗೆ ಸಾಂಸ್ಕೃತಿಕ ಪರಿಸರವನ್ನು ಚಿತ್ರಿಸುತ್ತಾ, ಗ್ರಾಮೀಣ ಸಮಾಜದ ಊಳಿಗಮಾನ್ಯ ವ್ಯವಸ್ಥೆಯ ಕ್ರೌರ್ಯದ ವಿವಿಧ ಮುಖಗಳನ್ನ ಅನಾವರಣಗೊಳಿಸುತ್ತಾ ಮಾನವೀಯ ಸಂಬಂಧಗಳ ಸ್ವರೂಪವನ್ನು ಹಿಡಿದಿಟ್ಟಿದೆ. ಪ್ರಸ್ತುತ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಕಾದಂಬರಿಯಲ್ಲಿ ವಸಾಹತೋತ್ತರ ಕಾಲಘಟ್ಟದ ಗ್ರಾಮೀಣ ಮತ್ತು ನಗರಜೀವನ, ಪ್ರಜಾಪ್ರಭುತ್ವದ ವ್ಯವಸ್ಥೆ, ಅಧಿಕಾರಶಾಹಿ, ರಾಜಕೀಯ ನಾಯಕರ ಮನಃಸ್ಥಿತಿ, ಸ್ವಾರ್ಥಲಾಲಸೆ, ಹಣ ಮತ್ತು ಅಧಿಕಾರ ವ್ಯಾಮೋಹ, ಅದಕ್ಕೆ ಜನತೆಯ ಪ್ರತಿಕ್ರಿಯೆ, ಸಾಮಾನ್ಯ ಜನರ ತವಕ–ತಲ್ಲಣ ಇತ್ಯಾದಿ ಸ್ವರೂಪವನ್ನು ಶೋಧಿಸಲಾಗಿದೆ.

ಈ ಕಾದಂಬರಿಯಲ್ಲಿ ಬರುವ ‘ಬಡೇಲಡುಕು’ ಮತ್ತು ‘ಜರುಮಲೆ’ ಭಾರತದ ಗ್ರಾಮಗಳು ಮತ್ತು ಅಧಿಕಾರ ಕೇಂದ್ರಗಳು ನಗರಗಳನ್ನು ಸಂಕೇತಿಸು ತ್ತವೆ. ಹಳ್ಳಿಗಳ ಜನರ ಜೀವನಕ್ಕೂ ನಗರಗಳ ಜನಜೀವನಕ್ಕೂ ವ್ಯತ್ಯಾಸಗಳಿವೆ. ನಗರದಲ್ಲಿರುವ ಸೌಕರ್ಯಗಳು ಹಳ್ಳಿಯಲ್ಲಿಲ್ಲ. ಹಳ್ಳಿಗಳಲ್ಲೂ ಸೌಕರ್ಯಗಳು ಸಿಗಬೇಕು. ಹಾಗಾದಾಗ ಸಮಾನತೆಯ ಅವಕಾಶಗಳನ್ನು ಒದಗಿಸಿಕೊಟ್ಟಂತಾಗುತ್ತದೆ. ಆದರೆ, ಅದು ಈ ವ್ಯವಸ್ಥೆಯಲ್ಲಿ ಸಾಧ್ಯವಾಗುತ್ತಿಲ್ಲ. ಈಗಿನ ರಾಜಕೀಯ ನಾಯಕರು ಯಥಾಸ್ಥಿತಿಯನ್ನು ಬಯಸುವ ಮನಃಸ್ಥಿತಿಯವರು.

ಪೊಳ್ಳು ಆಶ್ವಾಸನೆಗಳನ್ನು ನೀಡುತ್ತಾ ಅಧಿಕಾರದ ಗದ್ದುಗೆಗಳನ್ನು ಏರುತ್ತಾ ಅವರು ತಮ್ಮ ಸುಖ, ಸಂತೋಷ, ಐಷಾರಾಮಿ ಬದುಕನ್ನು ಸಾಗಿಸಬೇಕು. ಅವರು ಒಂದು ರೀತಿಯಲ್ಲಿ ಹಿಂದಿನ ರಾಜರಿದ್ದಂತೆ. ಊಳಿಗಮಾನ್ಯ ವ್ಯವಸ್ಥೆಯ ಇನ್ನೊಂದು ಪ್ರತಿರೂಪ ಈಗಿನ ರಾಜಕೀಯ ಮತ್ತು ಸರ್ಕಾರದ ಆಡಳಿತ ವ್ಯವಸ್ಥೆ ಎಂಬುದನ್ನು ಕಾದಂಬರಿಯಲ್ಲಿನ ಘಟನೆಗಳು, ಪಾತ್ರಗಳು ಸಾಂಕೇತಿಕವಾಗಿ ಬಯಲು ಮಾಡುತ್ತಾ ಹೋಗುತ್ತವೆ.

ಗ್ರಾಮಗಳ ಸಾಂಸ್ಕೃತಿಕ ಬದುಕಿನ ವಿವರಗಳನ್ನು ‘ಬಡೇಲಡುಕು’ ಗ್ರಾಮ ಸೂಚಿಸಿದರೆ, ‘ಜರುಮಲೆ’ ಈಗಿನ ನಗರಗಳ ರಾಜಕೀಯ ನೇತಾರರ ಅಧಿಕಾರ ಚುಕ್ಕಾಣಿ ಹಿಡಿದಿರುವವರ ನೌಕರಶಾಹಿಯ ಅಂದರೆ ಶಾಸಕಾಂಗ ಮತ್ತು ಕಾರ್ಯಾಂಗದ ಸಂಕೇತವಾಗಿದೆ. ದೇಶದ ಅಭಿವೃದ್ಧಿಯನ್ನು ಮರೆತು ಇವರು ಸ್ವಾರ್ಥ ಸಾಧನೆಯಲ್ಲಿ ಸಾಗುತ್ತಿರುವ ವಿವಿಧ ಮುಖಗಳನ್ನು ದಾಖಲಿಸುತ್ತಾ ಸಾಗುವ ಕಾದಂಬರಿಯು ಸಾಗುತ್ತಾ ಈಗಿನ ಕರಾಳ ವ್ಯವಸ್ಥೆಯನ್ನು ಬಯಲು ಮಾಡುತ್ತದೆ.

ಬಡೇಲಡುಕು ಗ್ರಾಮದ ಸಾಂಸ್ಕೃತಿಕ ಪರಿಸರವನ್ನು ಕಟ್ಟಿಕೊಡುತ್ತಾ ಪ್ರಾರಂಭವಾಗುವ ಕಾದಂಬರಿ ಇಲ್ಲಿನ ಪಾತ್ರಗಳ ಜೊತೆಗೆ ಜರುಮಲೆಗೆ ಸ್ಥಳಾಂತರವಾಗುತ್ತದೆ. ಇಲ್ಲಿ ನಡೆಯುವ ಘಟನೆಗಳು ಸಮಕಾಲೀನ ಪರಿಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಪುರಾತನಳು, ನರಸನಾಯಕ, ಮುಕುಡೆಪ್ಪನಾಯಕ ಅರಮನೆ ನೋಡಲೆಂದು ಬಂದರೆ ಅವರಿಗೆ ನಗರ ಜಗತ್ತು ವಿಚಿತ್ರವಾಗಿ ಕಾಣುವುದರ ಜೊತೆಗೆ ಭಯಾನಕವಾಗಿಯೂ ತೋರುತ್ತದೆ. ಅಲ್ಲಿ ನಡೆಯುವ ಕೋಮು ಗಲಭೆಗಳ ಹಿಂದಿರುವ ಹುನ್ನಾರಗಳು, ಅದು ಬೆಳೆಯುತ್ತಾ ಹೋಗುವ ಬಗೆ, ಅದರಿಂದುಂಟಾಗುವ ಸಮಸ್ಯೆ, ಮಾನವೀಯತೆಯ ನಾಶ, ನಿರಪರಾಧಿಗಳನ್ನು ಅಪರಾಧಿಗಳನ್ನಾಗಿ ಕಾಣುವ ಬಗೆ, ಗಲಭೆಗಳಿಂದ ಬೇಳೆ ಬೇಯಿಸಿಕೊಳ್ಳುವವರ ಮುಖವಾಡ ಬಯಲಾಗುವ ಪರಿ, ಇತ್ಯಾದಿಗಳನ್ನು ಒಳಗೊಂಡಂತೆ ಕೋಮು ಸಾಮರಸ್ಯದ ಆಶಯಗಳನ್ನು ತನ್ನ ಒಡಲಲ್ಲಿ ಧ್ವನಿಪೂರ್ಣವಾಗಿ ಹುದುಗಿರಿಸಿಕೊಂಡಿದೆ. ಮಾಬು, ಸುಲೇಮಾನ್ ಈ ಸಾಮರಸ್ಯದ ಕೊಂಡಿಗಳಾಗಿದ್ದಾರೆ.

‘ಅರಮನೆ, ಕೇವಲ ಮಣ್ಣು, ಗಾರೆ, ಕಲ್ಲುಗಳ ಕಟ್ಟಡವಲ್ಲ. ಅದೊಂದು ಮಾಂತ್ರಿಕ ಸದೃಶ ರೂಪಕ’ ಎಂದು ಕಾದಂಬರಿಯಲ್ಲಿ ಬರುವ ಮಾತೇ ಇದು ಅಧಿಕಾರದ ಕೇಂದ್ರಸ್ಥಾನವಾಗಿದ್ದು ಪ್ರಜೆಗಳ, ಬಡವರ, ಜನಸಾಮಾನ್ಯರ, ಎಲ್ಲಾ ವರ್ಗದವರ ಸ್ಥಿತಿಗತಿಗಳನ್ನು ನಿರ್ಧರಿಸುವ ಕೇಂದ್ರ ಎಂಬುದು ಸ್ಪಷ್ಟವಾಗುತ್ತದೆ. ಆರ್ಥಿಕ ಸ್ಥಿತಿಗತಿಗಳಂತೂ ನಿರ್ಧಾರವಾಗುವುದು ಇಲ್ಲಿಯೇ. ಆದ್ದರಿಂದ ರಾಜಕೀಯ ವ್ಯಕ್ತಿಗಳು ಅಸಾಮಾನ್ಯರಾಗಿ ಕಾಣುತ್ತಾರೆ. ಪ್ರಧಾನಿ, ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರು, ಗ್ರಾಮ ಪಂಚಾಯತಿ ಸದಸ್ಯ, ಅಧ್ಯಕ್ಷರವರೆಗೆ ದೇಶದ ಪ್ರಗತಿಗೆ ಬೇಕಾದ ನೀತಿ ನಿಯಮಗಳನ್ನು ರೂಪಿಸುವ ಜವಾಬ್ದಾರಿಯನ್ನು ಸ್ವಾರ್ಥಸಾಧನೆ ಮಾಡಿಕೊಳ್ಳುವ ಬಗೆಗಿನ ಚಿತ್ರಣ ಇಲ್ಲಿದೆ. ಇವರ ವಿರುದ್ಧ ಪ್ರತಿಭಟನೆ ಮಾಡಿದವರನ್ನು ನಕ್ಸಲರೆಂದೋ, ಕೋಮು ಗಲಭೆ ಸೃಷ್ಟಿಸುವವರೆಂದೋ ರಾಷ್ಟ್ರವಿರೋಧಿ ಚಟುವಟಿಕೆ ನಡೆಸುವವರೆಂದೋ ಪಟ್ಟಕಟ್ಟಿ ಅವರನ್ನು ಮುಗಿಸಿಬಿಡುತ್ತಾರೆ.

ಪ್ರಧಾನಿ, ಮುಖ್ಯಮಂತ್ರಿ ಆದಿಯಾಗಿ ಇಲ್ಲಿ ಬರುವ ಪಚಾರಿ, ಸಾವಜಿ, ಖತ್ರಿ, ಹನೀಫ್‌ರಂತಹ ಪಾತ್ರಗಳು ಅವ್ಯವಸ್ಥೆಯನ್ನು ಸಂಕೇತಿಸುತ್ತವೆ. ಈ ಕಾದಂಬರಿಯಲ್ಲಿ ಚರಿತ್ರೆಯ ಜೊತೆ, ಪ್ರಾಣಿ, ಪಕ್ಷಿ, ಮನುಷ್ಯರನ್ನೊಳಗೊಂಡಂತೆ ಜೈವಿಕಲೋಕವನ್ನೆಲ್ಲಾ ಬೆಸೆಯುವುದರಿಂದ ವರ್ತಮಾನವು ಸುಪುಷ್ಟವಾಗುತ್ತದೆ ಎಂಬ ಆಶಯವೂ ಇದೆ. ನಾಯಿ (ಅರ್ಜುನ), ಚಿರತೆ (ಸೋಫಿಯಾ) ಲೈಂಗಿಕತೆ, ಇವುಗಳ ಜೊತೆ ಪುರಾತನಳು, ಅರಮನೆ ಇವುಗಳನ್ನು ಸಮೀಕರಿಸುವುದು, ಜಾತ್ರೆ, ಕ್ರೀಡಾ ಚಟುವಟಿಕೆಗಳು, ಮೆರವಣಿಗೆ ಇತ್ಯಾದಿಗಳನ್ನು ಒಳಗೊಂಡಂತೆ ಅಧ್ಯಯನ ಮಾಡುವ ಅನಘಾ ಪಾತ್ರವು ವಸಾಹತೋತ್ತರ ಪರಿಸ್ಥಿತಿಯನ್ನು ಹಿಡಿದಿಡಲು ನೆರವಾಗಿದೆ. ಜೊತೆಗೆ ದೇಶಕಾಲಗಳನ್ನು ಆವರಿಸಿಕೊಳ್ಳಲು ಈ ಕಾದಂಬರಿಗೆ ಸಾಧ್ಯವಾಗಿದೆ.

ರೈತರ, ಮಹಿಳೆಯರ, ಬಡವರ, ಗ್ರಾಮೀಣ ಸಮಸ್ಯೆಗಳನ್ನು ಅನಾವರಣಗೊಳಿಸುವ ಈ ಕಾದಂಬರಿಯನ್ನು ಓದಿ ಮುಗಿಸಿದಾಗ ಜೋಗಪ್ಪನಿಗೆ ಅರಮನೆ ಸಿಗಲಿಲ್ಲ ಎಂಬ ವಿಷಾದ ನಮ್ಮನ್ನು ಕಾಡುತ್ತದೆ. ಮುಕ್ತವಾದ, ಅಸಂಪ್ರದಾಯಿಕವಾದ ಭಾಷೆಯನ್ನು ಬಳಸಿ ಕಾದಂಬರಿಯನ್ನು ಕಲ್ಪನೆ, ಪುರಾಣ, ಸಾಂಕೇತಿಕತೆ, ವ್ಯಂಗ್ಯ ಇವೆಲ್ಲವನ್ನೂ ಬೆರೆಸಿ ಬರೆಯಲಾಗಿದೆ. ಸಾಂಪ್ರದಾಯಿಕ ನಿರೂಪಣೆ, ಭಾಷೆ ಕಥಾಸಂವಿಧಾನ, ಕಾಲ, ಪ್ರದೇಶ, ವೈಜ್ಞಾನಿಕ ಕಾರಣ ಇವುಗಳನ್ನು ಪರಿಗಣಿಸದೆ, ಬದುಕು-ಸಮಾಜ-ಮನುಷ್ಯ-ಜೈವಿಕ ಜಾಲ-ಪರಿಸರ ಇವುಗಳ ಸಂಬಂಧಗಳಲ್ಲಿ, ಇಲ್ಲಿನ ಸಾಂಕೇತಿಕ ಭಾಷೆಯ ಮೂಲಕ ಈ ಬಗೆಯ ಕೃತಿಗಳನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ. ಪುನರುಕ್ತಿ ಇಂತಹ ಕಾದಂಬರಿಯಲ್ಲಿ ಸಹಜವೇ. ತಾಳ್ಮೆಯ ಓದನ್ನು ಈ ಕೃತಿ ಬಯಸುತ್ತದೆ.

ಕೃತಿ: ಎಲ್ಲೋ ಜೋಗಪ್ಪ ನಿನ್ನರಮನೆ

ಲೇ: ಕುಂ. ವೀರಭದ್ರಪ್ಪ

ಪ್ರ: ತನುಮನು ಪ್ರಕಾಶನ, ಮೈಸೂರು

ಸಂ: 9448056562

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT