ಬುಧವಾರ, ಆಗಸ್ಟ್ 4, 2021
27 °C

ಪುಸ್ತಕ ವಿಮರ್ಶೆ: ಸೃಷ್ಟಿಶೀಲ ಮೀಮಾಂಸೆಯ ಹುಡುಕಾಟ

ಎಸ್.ಆರ್.ವಿಜಯಶಂಕರ Updated:

ಅಕ್ಷರ ಗಾತ್ರ : | |

Prajavani

ಆದಿಕವಿ ಪಂಪನಿಂದ ಇಂದಿನ ಬರಹಗಾರರವರೆಗೆ ಮಹಾಭಾರತವು ಕನ್ನಡದಲ್ಲಿ ಮರುಸೃಷ್ಟಿಯಾಗುತ್ತಲೇ ಬಂದಿದೆ. ‘ಇತಿಹಾಸ ಪ್ರದೀಪ’ವಾದ ಮಹಾಭಾರತದಲ್ಲಿ ಮಹರ್ಷಿ ವ್ಯಾಸರು ತಮ್ಮ ಧ್ಯಾನದ ಮೂಲಕ ಲೋಕಗರ್ಭವನ್ನು ಪ್ರವೇಶಿಸಿ, ಸಕಲ ಜಗತ್ ಸ್ವರೂಪವನ್ನು ಅರಿತರು. ಬಾಳಿನಾಳದಲ್ಲಿ ಪ್ರಳಯಾಂಶವಿದೆ ಎಂಬುದು ವ್ಯಾಸದರ್ಶನ. ಭಾರತೀಯ ತತ್ವಚಿಂತನೆಯನ್ನು ಬೆಳೆಸುವ ಅಂತಹ ಅರಿವನ್ನು ವ್ಯಾಸರು ಭವಸಾಗರದ ಮಂಥನದಿಂದ ಪಡೆದರು ಎಂದು ಸೂತಪುರಾಣಿಕರು ಹೇಳುತ್ತಾರೆ. ಇಂತಹ ಮೂಲ ಕೃತಿಯೊಂದು ಇಂದಿಗೂ ಕನ್ನಡ ಲೇಖಕರನ್ನು ಕಾಡುತ್ತಲೇ ಬಂದಿದೆ. ಇದರ ಮರುಸೃಷ್ಟಿಗೆ ಇತ್ತೀಚಿನ ಸೇರ್ಪಡೆಯೆಂದರೆ ಗೋಪಾಲಕೃಷ್ಣ ಪೈಗಳ ಕಾದಂಬರಿ ‘ಬ್ರಹ್ಮ’.

ಇದು ವ್ಯಾಸರ ಸೃಷ್ಟಿ ಕಲ್ಪನೆಯನ್ನು ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾದ ಆಧುನಿಕ ಕನ್ನಡ ಸಾಹಿತ್ಯ ಮೀಮಾಂಸೆಯ ಹಿನ್ನೆಲೆಯಲ್ಲಿ ಪುನರ್ ನಿರೂಪಿಸುವ ಸೃಜನಶೀಲ ಕೃತಿ. ಜಯ, ಭಾರತ, ಮಹಾಭಾರತ ಎಂದು ಈ ಪುರಾಣ ಬೆಳೆಯಿತು ಎಂಬ ವಿದ್ವಾಂಸರ ಒಂದು ಅಭಿಪ್ರಾಯವನ್ನು ಬದಿಗಿಟ್ಟು ಮಹಾಭಾರತವು ಮಹರ್ಷಿ ವ್ಯಾಸರೆಂಬ ವ್ಯಕ್ತಿಯ ಪ್ರತಿಭಾ ಕೌಶಲವೆಂಬ ನಂಬಿಕೆಯನ್ನು ಈ ಕೃತಿ ಪುರಸ್ಕರಿಸುತ್ತದೆ.

ಕನ್ನಡ ಕಾದಂಬರಿ ಮೊದಲಿಗೆ ಪಾಶ್ಚಾತ್ಯ ವಾಸ್ತವವಾದಿ ಪರಂಪರೆಯಲ್ಲಿ ಬೆಳೆದುಬಂದ ಪ್ರಕಾರ. ಅದರ ಪ್ರಭಾವದಲ್ಲಿ ಮರುಸೃಷ್ಟಿಗೊಂಡ ಮಹಾಭಾರತವೇ ಭೈರಪ್ಪನವರ ‘ಪರ್ವ’. ಸಮುದಾಯದ ನೆನಪಿನ ಸಂಗ್ರಹವಾಗಿದ್ದ ನಮ್ಮ ಇತಿಹಾಸ, ಇಂಗ್ಲಿಷ್‌ ವಿದ್ಯಾಭ್ಯಾಸದ ಬಳಿಕ ದಾಖಲೆಯಿಂದ ಬೆಳೆಯುವ ಚರಿತ್ರೆಯಾಗಿ ಪರಿವರ್ತನೆಯಾಯಿತು. ‘ಪರ್ವ’ ಮಹಾಭಾರತವನ್ನು ವಾಸ್ತವ ಚರಿತ್ರೆಯಾಗಿ ಕಾಣಿಸಲು ಪ್ರಯತ್ನಿಸುತ್ತದೆ. ಅದು ಮಹಾಭಾರತ ಕೃತಿಕೇಂದ್ರಿತ ಮರುಸೃಷ್ಟಿ. ಅದರಿಂದ ಭಿನ್ನವಾಗಿ, ಲೇಖಕ ವ್ಯಾಸರಲ್ಲಿ ಮಹಾಭಾರತದ ಸೃಷ್ಟಿಯನ್ನು ಪ್ರೇರೇಪಿಸಿದ ಕಲ್ಪನೆ ಮತ್ತು ಕಲ್ಪನಾವಿಲಾಸದ ಮೂಲ ಆಕರಗಳು ಏನಾಗಿದ್ದಿರಬಹುದು ಎಂಬ ಚಾರಿತ್ರಿಕ ವಾಸ್ತವದ ಸೃಜನಶೀಲ ಶೋಧನೆಯೇ ‘ಬ್ರಹ್ಮ’ ಕಾದಂಬರಿ.

‘ಬ್ರಹ್ಮ’ದಲ್ಲಿ ವಿಶ್ವಾಮಿತ್ರ – ಲೋಕದ ಕಷ್ಟಕಾರ್ಪಣ್ಯಗಳನ್ನು ದೂರಮಾಡಿ ಮಾನವ ಬದುಕನ್ನು ಜ್ಞಾನ ಮತ್ತು ಸಂಪತ್ ಸಮೃದ್ಧಿಯಿಂದ ತುಂಬಬೇಕೆಂಬ ಆದರ್ಶ ಹೊಂದಿದ ಯುವರಾಜ. ವಸಿಷ್ಠರು ನದಿದಂಡೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಗುರುಕುಲವನ್ನು ನಡೆಸುವ ಕುಲಪತಿ. ಅಲ್ಲಿ ಆಯುರ್ವೇದ ಸೇರಿ ಎಲ್ಲಾ ರೀತಿಯ ವಿದ್ಯೆಗಳಿಗೂ ಅವಕಾಶವಿದೆ. ಅದು ರಾಜಕೃಪೆ ಹೊಂದಿದ ಸ್ವತಂತ್ರ ವ್ಯವಸ್ಥೆ. ತನ್ನ ಸ್ನೇಹಿತ ತ್ರಿಶಂಕುವಿಗೆ ವಿಶ್ವಾಮಿತ್ರ ನೂತನ ನಗರ ನಿರ್ಮಾಣಕ್ಕೆ ಸಹಾಯ ಮಾಡುತ್ತಾನೆ. ಅದು ಶತ್ರು ದಾಳಿಯಲ್ಲಿ ನಾಶವಾಗುತ್ತದೆ. ಮೇನಕೆ ದೂರದ ಇನ್ನೊಂದು ಆಶ್ರಮದಾಕೆ.

ಇಂದಿನ ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಮಾನವವಿಜ್ಞಾನ ಮುಂತಾದ ಹಲವು ಜ್ಞಾನ ಶಾಖೆಗಳಿಂದ ಪುಷ್ಟೀಕರಣಗೊಂಡ ಗುರುಕುಲದ ಕುಲಪತಿ ವಸಿಷ್ಠರ ಪ್ರಿಯಶಿಷ್ಯ, ಮಾನಸಪುತ್ರ ಹಾಗೂ ಪ್ರಾಜ್ಞ ಗೌರವಕ್ಕೆ ಪಾತ್ರನಾದವ ವ್ಯಾಸ. ಅಲ್ಲಿಯೇ ಪರಾಶರ, ಮನು ಹೀಗೆ ಹಲವರಿದ್ದಾರೆ. ಅವರೆಲ್ಲರ ಕೃತಿಗಳಾದ ಶಾಸ್ತ್ರ ಗ್ರಂಥಗಳ ರಚನಾ ಹಿನ್ನೆಲೆಯೊಂದಿಗೆ ವ್ಯಾಸರ ಸೃಷ್ಟಿಶೀಲ ಮನಸ್ಸು, ವೇದಗಳನ್ನು ವರ್ಗೀಕರಣಗೊಳಿಸಿದ ಕ್ರಮ ಸೇರಿದಂತೆ ಅಂದಿನ ಹಲವು ಜ್ಞಾನ ಶೋಧನಾ ಕ್ರಮಗಳೂ ಇಂದಿನ ತಿಳಿವಿನಿಂದ  ವಿವರಿಸಲ್ಪಟ್ಟಿವೆ.

ವ್ಯಾಸ ದ್ವೈಪಾಯನರಿಗೆ, ಪರಾಶರ ಕೇಳುವ ಒಂದು ಪ್ರಶ್ನೆ: ‘ಕತೆ ಬರೆಯುವುದೆಂದರೆ ಸೃಷ್ಟಿಕಾರ್ಯ. ಸೃಷ್ಟಿಕಾರ್ಯ ದೇವರಿಂದ ಮಾತ್ರ ಸಾಧ್ಯ. ನಾನೂ ಸೃಷ್ಟಿಸುತ್ತೇನೆಂದು ಹೊರಟರೆ ಅವನಿಗೆ ಸವಾಲು ಎಸೆದಂತಾಗುತ್ತದೆ, ಅಲ್ಲವೇ?’ ಅದಕ್ಕೆ ದ್ವೈಪಾಯನರ ಉತ್ತರ : ‘ದೇವರು ನೀರು, ಗಾಳಿ, ರಕ್ತ, ಮಾಂಸಗಳಿಂದ ತುಂಬಿದ ಜೀವಿಗಳನ್ನು ಸೃಷ್ಟಿಸುತ್ತಾನೆ. ಇಲ್ಲವೇ ಮರಗಿಡ ಕಲ್ಲುಗಳನ್ನು ಸೃಷ್ಟಿಸುತ್ತಾನೆ. ನನ್ನ ಸೃಷ್ಟಿ ಅಕ್ಷರಗಳ ಮೂಲಕ ಕೊಡುವ ಅನುಭವ’.

ಪ್ಲೇಟೊನಿಂದ ಇಂದಿನವರೆಗೆ ಬೆಳೆದುಬಂದ ಪಾಶ್ಚಾತ್ಯ ಕಾವ್ಯ ಮೀಮಾಂಸೆಯನ್ನು ಬಲ್ಲವರಿಗೆ ಇಂತಹ ಚಿಂತನೆಗಳ ಹಿಂದಿನ ಕಲ್ಪನೆಯು ಪಾಶ್ಚಾತ್ಯ ಸಾಹಿತ್ಯ ಮೀಮಾಂಸೆಯಿಂದ ಪಡೆದಿರಬಹುದಾದ ಪ್ರೇರಣೆಯನ್ನು ವಿವರಿಸಬೇಕಾಗಿಲ್ಲ. ನಮ್ಮ ಶ್ರೇಷ್ಠ ಕೃತಿಗೆ ಅನ್ವಯಿಸಿಕೊಂಡು ಅರಿತಾಗಲೇ ಅಂತಹ ಮೀಮಾಂಸೆಯೊಂದು ನಮ್ಮದಾಗಿ ಪರಿವರ್ತನೆಯಾಗುತ್ತದೆ ಎಂಬ ವಿಶ್ವಾಸ ಬ್ರಹ್ಮದಂತಹ  ಸೃಜನಶೀಲ ಶೋಧನೆಗೆ ಇರುತ್ತದೆ. ಅದರ ಇನ್ನೊಂದು ನೆಲೆಯಲ್ಲಿ ಕಶ್ಯಪ ಮುನಿ ಧ್ಯಾನವನ್ನು ವಿವರಿಸುವುದು ಹೀಗೆ: ‘ಯಾವುದೇ ಗ್ರಂಥವನ್ನು ಒಂದು ಸಾರಿ ಮಾತ್ರ ಓದುವುದಲ್ಲ. ಆಗಾಗ ಓದುತ್ತಲೇ ಇರಬೇಕು. ಎದುರಿಗೆ ಗ್ರಂಥವಿಲ್ಲದಿದ್ದರೂ ಅಲ್ಲಿಯ ವಾಕ್ಯಗಳು ಮನಸ್ಸಿನಲ್ಲಿ ಮರುಕಳಿಸುತ್ತಿರಬೇಕು. ಸಾಧ್ಯವಾದರೆ ಉಚ್ಚರಿಸಬೇಕು. ಅದರಿಂದ ಆ ವಾಕ್ಯಗಳ ಒಡೆತನ ನಮ್ಮದಾಗುತ್ತದೆ. ಅದೇ ಧ್ಯಾನ’.

ತೀನಂಶ್ರೀಯವರು ತಮ್ಮ ಭಾರತೀಯ ಕಾವ್ಯಮೀಮಾಂಸೆ ಕೃತಿಯಲ್ಲಿ ಕಾವ್ಯಲಕ್ಷಣಗಳನ್ನು ವಿವರಿಸಿ ಕೊನೆಗೆ, ಕಾವ್ಯದ ಲಕ್ಷಣಗಳನ್ನು ಹೇಳುವುದೆಂದರೆ ‘ಬ್ರಹ್ಮ’ದ ಲಕ್ಷಣವನ್ನು ಹೇಳುವಂತೆಯೇ, ಎರಡೂ ಅನುಭವೈಕಗಮ್ಯವಾದವು. ಬ್ರಹ್ಮ ವಾಕ್ಯಾರ್ಥವಾಗಲಾರದು. ಅದು ಕೇವಲ ‘ಪ್ರಾತಿಪದಿಕಾರ್ಥ’ ಎನ್ನುತ್ತಾರೆ. – ಅಂದರೆ ಕೆಲವನ್ನು ಒಂದೇ ಶಬ್ದದಲ್ಲಿ ಹೇಳಬಹುದಷ್ಟೆ. ಬ್ರಹ್ಮ ಸ್ವರೂಪವನ್ನು ಎಷ್ಟೇ ವಿವರಿಸಿದರೂ ‘ಬ್ರಹ್ಮ’ ಎಂದರೆ ‘ಬ್ರಹ್ಮ’ ಎಂದೇ ಅರ್ಥ. ಅದರ ಸೃಷ್ಟಿ ಸ್ವರೂಪವನ್ನು ಸಾಹಿತ್ಯ ಮೀಮಾಂಸೆಗೆ ಅನ್ವಯಿಸಿ ‘ವ್ಯಾಸ’ ಹಾಗೂ ‘ಮಹಾಭಾರತ’ಗಳ ಮೂಲಕ ಗೋಪಾಲಕೃಷ್ಣ ಪೈಗಳು ಸೃಜನಶೀಲ ಅನುಭವ ಶೋಧನೆಯ ಕೃತಿಯೊಂದನ್ನು ರಚಿಸಿದ್ದಾರೆ. ಅವರ ಕಲ್ಪನೆಗೆ ಮಹಾಭಾರತ-ರಾಮಾಯಣಗಳನ್ನು ವಿಶ್ಲೇಷಿಸುತ್ತಾ, ಕಲಾನುಭವವನ್ನು, ರಸಾನುಭವಗಳನ್ನು ನೀಡುವ ಯಕ್ಷಗಾನ ಕಲಾವಿದರೂ ಪ್ರೇರಣೆ ನೀಡಿದ್ದಾರೆ.

ತಾಳೆ ಓಲೆಗಳಲ್ಲಿ ಮೊದಲ ಕರಡನ್ನು ಬರೆಯುವುದು, ಸೈನಿಕರಿಗೆ ಇಂದಿನಂತೆ ಶಾಶ್ವತ ಸಂಬಳ ಇಲ್ಲದಿದ್ದ ಅಂದಿನ ಕಾಲದಲ್ಲೂ ಪಿಂಚಣಿ ನೀಡುವ ಖರ್ಚು ಹೀಗೆ ಅಲ್ಲಲ್ಲಿ ಸಣ್ಣ ಪುಟ್ಟ ವಿವರಗಳ ಅನಧಿಕೃತ ಮಾಹಿತಿಗಳು ಕೃತಿಯೊಳಗೆ ನುಸುಳಿವೆ. ಅವೆಲ್ಲಾ ಮುಂದಿನ ಆವೃತ್ತಿಯಲ್ಲಿ ಸರಿಪಡಿಸಬಹುದಾದ ಪುಟ್ಟ ವಿವರಗಳು. ಮುಖ್ಯವಾಗಿ ಸೃಜನಶೀಲ ಪ್ರಕ್ರಿಯೆಯನ್ನು ಆಧುನಿಕ ಸಾಹಿತ್ಯ ಮೀಮಾಂಸೆಯಾದ ‘ಕಲ್ಪನಾ ವಿಲಾಸ’ದ ಮೂಲಕ ಶೋಧಿಸುವುದು ಈ ಕೃತಿಯ ಮುಖ್ಯ ಕೊಡುಗೆಯಾಗಿದೆ.

ಕೃತಿ: ಬ್ರಹ್ಮ

ಲೇ: ಗೋಪಾಲಕೃಷ್ಣ ಪೈ

ಪ್ರ: ವಸಂತ ಪ್ರಕಾಶನ, ಬೆಂಗಳೂರು

ಸಂ: 080–22443996

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು