ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ತುಳು ಸಾಂಸ್ಕೃತಿಕ ಪಠ್ಯಗಳ ವಿವೇಚನೆ

Last Updated 17 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

‘ಕರಾವಳಿ ಕಥನಗಳು’ ಜಾನಪದ ವಿದ್ವಾಂಸ ಡಾ.ಕೆ. ಚಿನ್ನಪ್ಪ ಗೌಡರ ಅಧ್ಯಯನ ಮತ್ತು ಚಿಂತನೆಗಳ ಫಲವಾಗಿ ರೂಪುಗೊಂಡ ಒಂದು ಅಧ್ಯಯನಶೀಲ ಕೃತಿ. ತುಳು ಸಾಹಿತ್ಯದ ಅಕ್ಷರ ಸಂಪತ್ತಿನ ವಿವಿಧ ಪ್ರಕಾರಗಳನ್ನು ಸಾಂಸ್ಕೃತಿಕ ಪಠ್ಯಗಳಾಗಿ ವಿಶ್ಲೇಷಿಸಿರುವ ಪ್ರಬಂಧಗಳಿವು.

ಒಂದು ನಕ್ಷೆಯ ರೂಪದಲ್ಲಿ ಈ ಗ್ರಂಥದ ಎಂಟು ಲೇಖನಗಳ ವ್ಯಾಪ್ತಿಯನ್ನು ತೋರಿಸಬಹುದು: ಪಾಡ್ದನಗಳು ಬಗೆದು ಕಟ್ಟಿದ ಲೋಕದೃಷ್ಟಿ, ತುಳುವಿನ ಅಜ್ಜಿ ಕಥೆಗಳು (ಆಯುಧ-ಕನ್ನಡಿ-ಕಿಟಕಿ), ಕೆಲಸ ಮತ್ತು ಕುಣಿತಗಳ ಹಾಡುಗಳು (ಹೆಣ್ಣು ಮತ್ತು ನೆಲ-ಕನಸುಗಳ ಮೆರವಣಿಗೆ), ಉಳ್ಳಾಳ್ತಿ ಪರಂಪರೆ (ಇತಿಹಾಸ ಕಥನ), ತುಳು ಕಾವ್ಯ, ತುಳು ಕಥೆಗಳು, ಅನುವಾದ (ತುಳು ತಲೆಯೆತ್ತಿ ನಿಲ್ಲುವ ಬಗೆ) ಹಾಗೂ ಯಕ್ಷಗಾನ ಪ್ರದರ್ಶನ (ಇತಿಹಾಸ ಕಟ್ಟುವ ಕಷ್ಟದ ಕೆಲಸ).

ಜಾನಪದ ಅಧ್ಯಯನದ ನೆಲೆಯಿಂದ ಪ್ರದರ್ಶನ, ಆಚರಣೆ ಮತ್ತು ಅಕ್ಷರ ಪಠ್ಯಗಳನ್ನು ಗ್ರಹಿಸುವಲ್ಲಿ ಒಂದು ಜನಪದ ಕ್ಷೇತ್ರವು ನಾಲ್ಕು ಘಟ್ಟಗಳನ್ನು ಹಾದುಬರುವುದು ಎನ್ನುವುದು ಚಿಂತಕರ ಅಭಿಪ್ರಾಯ. ಇಲ್ಲಿನ ಆ ನಾಲ್ಕು ಘಟ್ಟಗಳು ಹೀಗಿವೆ: 1.ಪಾಡ್ಡನಗಳ ಸಂಗ್ರಹ, ಪ್ರಕಟಣೆ 2.‘ಸಾಹಿತ್ಯ ಪಠ್ಯ’ವಾಗಿ ಅವಲೋಕನ 3.‘ಜನಪದ ಪಠ್ಯ’ವಾಗಿ ವಿಶ್ಲೇಷಣೆ 4.‘ಸಾಂಸ್ಕೃತಿಕ ಪಠ್ಯ’ವಾಗಿ ಪರಿಗಣಿಸಿ ಅಧ್ಯಯನ. ಈ ಕೃತಿಯಲ್ಲಿ ನಾಲ್ಕನೆಯ ಹಂತದ ಪರಿಶೀಲನೆ ಇದೆ. ಆ ಮಟ್ಟಿಗೆ ತುಳು ಸಾಹಿತ್ಯದ ಮತ್ತು ಅಧ್ಯಯನದ ಒಂದು ಬಹುಮುಖ್ಯ ಆಕರ ಗ್ರಂಥವಾಗಿದೆ ಈ ಕೃತಿ.

ಮೊದಲನೆಯ ಲೇಖನದಲ್ಲಿ ನಾಲ್ಕು ಪಾಡ್ದನಗಳನ್ನು ಸಾಂಸ್ಕೃತಿಕ ಪಠ್ಯವಾಗಿ ವಿಶ್ಲೇಷಿಸಲಾಗಿದೆ. ‘ಪಾಡ್ದನವನ್ನು ‘ಸಾಂಸ್ಕೃತಿಕ ಪಠ್ಯ’ ಎಂದು ಪರಿಗಣಿಸಿ ಕೆಲವು ಪಾಡ್ಡನಗಳನ್ನು ವಿಶ್ಲೇಷಿಸಲು ಪ್ರಯತ್ನಿಸಿದ್ದೇನೆ. ಈ ಪಾಡ್ದನಗಳಲ್ಲಿ ದುಡಿಯುವ ಸಮುದಾಯಗಳ ಧ್ವನಿಗಳಿವೆ. ಅನ್ಯಾಯ, ಮೋಸ, ವಂಚನೆ, ಅವಮಾನಗಳ ವಿರುದ್ಧ ನಡೆದ ಪ್ರತಿಭಟನೆ ಮತ್ತು ಹೋರಾಟಗಳ ನಿರೂಪಣೆಯಿದೆ. ಪಾಡ್ದನಗಳಲ್ಲಿ ಬರುವ ಪಾತ್ರಗಳು ಸಾಂಸ್ಕೃತಿಕ ನಾಯಕರಾಗಿ ಬೆಳೆದು ನಿಂತ ವಿನ್ಯಾಸಗಳಿವೆ. ಇವುಗಳಲ್ಲಿ ನಿರ್ದಿಷ್ಟ ಚಾರಿತ್ರಿಕ ಕಾಲಘಟ್ಟದ ಇತಿಹಾಸವಿದೆ. ಈ ಇತಿಹಾಸವನ್ನು ಜನರೇ ಕಟ್ಟಿದ್ದಾರೆ’ ಎಂದು ಲೇಖಕರು ಹೇಳುತ್ತಾರೆ.

ಹಿಂದೆ ಭೂತಾರಾಧನೆಯ ಕುರಿತಾದ ಅಧ್ಯಯನದಲ್ಲಿ, ಪಾಡ್ದನವನ್ನು (ದೈವಗಳ ಹುಟ್ಟು, ಪ್ರಸಾರ ಮತ್ತು ಕಾರ್ಣಿಕಗಳ ಕಥೆಯನ್ನು ಹೇಳುವ ಲಾವಣಿಯ ರೂಪದ ತುಳು ಹಾಡುಗಳು) ಸಾಂದರ್ಭಿಕ ಪಠ್ಯವಾಗಿ ಅಧ್ಯಯನ ಮಾಡಿದ್ದ ಲೇಖಕರು ಇಲ್ಲಿ ನಾಲ್ಕನೆಯ ವಿಧಾನವನ್ನು ಅನುಸರಿಸಿ, ಕಲ್ಕುಡ – ಕಲ್ಲುರ್ಟಿ, ಕೊರಗ ತನಿಯ, ಬಿಲ್ಲರಾಯ ಬಿಲ್ಲಾರ್ತಿ ಮತ್ತು ಪಂಜುರ್ಲಿ – ಈ ನಾಲ್ಕು ಪಾಡ್ದನಗಳನ್ನು ಪರಿಶೀಲಿಸಿದ್ದಾರೆ. ಈ ಗ್ರಂಥದ ದೊಡ್ಡ ಪ್ರಬಂಧಗಳಲ್ಲಿ ಇದೂ ಒಂದು. ಇದೇ ರೀತಿಯ, ಉಳ್ಳಾಳ್ತಿ ಪರಂಪರೆಯ ಕುರಿತಾದ ಒಂದು ಪ್ರತ್ಯೇಕ ಲೇಖನ ಕೂಡ ಇದೆ.

‘ಕೆಲಸ ಮತ್ತು ಕುಣಿತಗಳ ಹಾಡುಗಳು’ ಒಂದು ಮುಖ್ಯ ಪ್ರಬಂಧವಾಗಿದೆ. ತುಳು ಜಾನಪದ ಹಾಡುಗಳ ಅರ್ಥವಂತಿಕೆಯನ್ನು ಪರಿಚಯ ಮಾಡುವ ಜತೆಗೆ ವಿಶ್ಲೇಷಣೆಯನ್ನೂ ಮಾಡುತ್ತದೆ. ಈ ಕವಿತೆಗಳ ಸಾಂಕೇತಿಕತೆ ಅದ್ಭುತವಾಗಿದೆ; ಜಗತ್ತಿನ ಯಾವ ಭಾಗದ ಕಾವ್ಯಕ್ಕಿಂತಲೂ ಕಡಿಮೆಯಿಲ್ಲದೆ ಪ್ರತಿಮಾಲೋಕ ತುಳು ಜಾನಪದ ಕಾವ್ಯಗಳಲ್ಲಿದೆ. ಚಿನ್ನಪ್ಪ ಗೌಡರ ಒಂದು ವಿಶ್ಲೇಷಣೆ ನೋಡಿ:

‘ಸಮಾಜದಲ್ಲಿ ಅಂಗೀಕೃತವಲ್ಲದ ನಡವಳಿಕೆ ಮತ್ತು ಅನಧಿಕೃತ ಆಕ್ರಮಣವನ್ನು ಸಾಂಕೇತಿಕ ಪ್ರತಿಮೆಗಳ ಮೂಲಕ ಪ್ರಶ್ನಿಸುವ ಹಲವು ಕಬಿತಗಳಿವೆ. ಬೇಲಿ, ಬೇಲಪ್ಪ, ಜಗ್ಗಯಿನೇರ್ಯಾ (ಬೇಲಿ ಮುಳ್ಳಿನ ಬೇಲಿ ತಗ್ಗಿಸಿದವರು ಯಾರು?) ಕಬಿತವು ಸಮಾಜದಲ್ಲಿ ಇರುವ ಮಾನವ ನಿರ್ಮಿತ ಬೇಲಿಗಳ ಬಗ್ಗೆ ಮಾತನಾಡುತ್ತದೆ. ಗಂಡಸರು ಬೇಲಿಗಳನ್ನು ಹಾಕುತ್ತಾರೆ. ಅದನ್ನು ಎತ್ತರಕ್ಕೆ ಏರಿಸುತ್ತಾರೆ, ಅದನ್ನು ಕೆಳಕ್ಕೆ ತಗ್ಗಿಸುತ್ತಾರೆ. ಅದೇ ಬೇಲಿಯನ್ನು ಅವರಿಗೆ ಬೇಕಾದಾಗ ಅವರ ಆಕಾಂಕ್ಷೆಯಂತೆ ದಾಟುತ್ತಾರೆ. ಬೇಲಿ ಮುರಿಯುವುದು ಅವರಿಗೆ ಅಭ್ಯಾಸವಾಗಿಬಿಟ್ಟಿದೆ.

ಸೂಳೆಗೆ ತಲೆಗೆ ಎಣ್ಣೆ ಕೊಡಿಸಿದವರು ಯಾರು / ಸೂಳೆಗೆ ಬಾಚಣಿಗೆ ಕೊಡಿಸಿದವರು ಯಾರು /

ಸೂಳೆಗೆ ಮಲ್ಲಿಗೆ ಕೊಡಿಸಿದವರು ಯಾರು........ /ಸೂಳೆಗೆ ಶೇಂದಿ ಕುಡಿಸಿದವರು ಯಾರು?

ಮುಖ್ಯವಾದ ಸಂಗತಿ ಕಾಮದ ತೀಟೆಯನ್ನು ತೀರಿಸಲು ಹೆಣ್ಣನ್ನು ಸೂಳೆಯನ್ನಾಗಿ ಮಾಡಿದವರು ಯಾರೆಂದರೆ ಜಗ್ಗ ಬೈಲಿನ ಜವ್ವನಿಗರು! ಜಗ್ಗ ಬೈಲಿನ ಜವ್ವನಿಗರೇ ಬೇಲಿಯನ್ನು ಏರಿಸುತ್ತಾರೆ, ಏರಿಸಿದ ಬೇಲಿಯನ್ನು ತಗ್ಗಿಸುತ್ತಾರೆ. ಈ ಯುವಕರು ಅವಳಿಗೆ ಬೇರೆ ಬೇರೆ ಹೂಗಳನ್ನು, ದೇಹದ ವಿವಿಧ ಭಾಗಗಳಿಗೆ ಧರಿಸುವ ಆಭರಣಗಳನ್ನು ತಂದುಕೊಡುತ್ತಾರೆ. ಕೊನೆಗೆ ಮದ್ಯಪಾನದ ಅಭ್ಯಾಸವನ್ನೂ ಮಾಡಿಸುತ್ತಾರೆ. ಸಮಾಜದ ರಕ್ಷಣೆಗೆ ಕಾನೂನುಗಳ ಬೇಲಿ ಕಟ್ಟುವ ಊರ ಗಂಡಸರು ಅದನ್ನು ಕಟ್ಟುನಿಟ್ಟುಗೊಳಿಸುವ ಮತ್ತು ತಮ್ಮ ಸ್ವಾರ್ಥಕ್ಕೆ ಸಡಿಲಿಸುವ ಕೆಲಸವನ್ನು ಅವರೇ ಮಾಡುತ್ತಾರೆ. ಕಾನೂನು ಮಾಡುವವರೇ ಅದರ ಉಲ್ಲಂಘನೆ ಮಾಡಿ ಬಚಾವಾಗುವ ದುರಂತವನ್ನು ಈ ಕಬಿತೆ ಧ್ವನಿಸುತ್ತದೆ.’

‘ತುಳು ಅಜ್ಜಿಕಥೆಗಳು ಸಾಂಸ್ಕೃತಿಕ ಪಠ್ಯಗಳಾಗಿ ಮುಖ್ಯವಾಗುತ್ತವೆ. ಅಜ್ಜಿ ಹೇಳುವ ಮಕ್ಕಳ ಕಥೆಗಳು ಬಡವರ ಮತ್ತು ಅಶಕ್ತರ ಆಯುಧಗಳು. ಅವು ಅವುಗಳನ್ನೇ ಸೃಷ್ಟಿಸಿದ ಸಮಾಜಕ್ಕೆ ಕನ್ನಡಿ ಹಿಡಿಯುತ್ತವೆ. ಈ ಕನ್ನಡಿಗಳು ಕಿಟಕಿಗಳೂ ಆಗಬಲ್ಲುವು’ – ಎನ್ನುವ ಚಿಂತನೆಯ ದೀರ್ಘ ಪ್ರಬಂಧ ಮಾಹಿತಿಪೂರ್ಣವೂ, ಸಾಂಸ್ಕೃತಿಕ ಪಠ್ಯ ಪರಿಕಲ್ಪನೆಯ ವಿಶ್ಲೇಷಣೆಗಳನ್ನು ಒಳಗೊಂಡದ್ದೂ ಆಗಿದೆ.

ಆಧುನಿಕ ಕಾಲಘಟ್ಟದಲ್ಲಿ ರಚನೆಯಾಗುತ್ತಿರುವ ತುಳು ಕಾವ್ಯ ಮತ್ತು ಸಣ್ಣಕಥೆಗಳ ಕುರಿತಾದ ಬರಹ ಮತ್ತು ಅನುವಾದದ ದೃಷ್ಟಿಯಿಂದ ತುಳು ಸಾಹಿತ್ಯದಲ್ಲಿ ನಡೆಯುತ್ತಿರುವ ಕೊಡುಕೊಳ್ಳುವಿಕೆಗಳು ಮತ್ತು ಅವುಗಳ ಮೂಲಕ ತುಳು ಭಾಷೆ-ಸಾಹಿತ್ಯ ತಲೆ ಎತ್ತಿ ನಿಲ್ಲಲು ಸಾಧ್ಯ ಎಂಬ ವಿಶಿಷ್ಟ – ಚಾರಿತ್ರಿಕ ಗ್ರಹಿಕೆಯನ್ನು ಇಲ್ಲಿನ ಮೂರು ಪ್ರಬಂಧಗಳು ಪ್ರತಿಪಾದಿಸುತ್ತವೆ. ಸ್ವತಃ ತುಳು ಸಾಹಿತ್ಯವನ್ನು ಇಂಗ್ಲಿಷಿಗೆ ಅನುವಾದಿಸಿ ಜಾಗತಿಕ ಅಧ್ಯಯನಕ್ಕೆ ತುಳು ಸಾಹಿತ್ಯವನ್ನು ತೆರೆದಿಟ್ಟ ಚಿನ್ನಪ್ಪ ಗೌಡರು ತಮ್ಮ ಅನುವಾದದ ಹಿಂದಿರುವ ಗ್ರಹಿಕೆಗಳು, ವಿಮರ್ಶನ ಪ್ರಜ್ಞೆ ಮತ್ತು ಉದ್ದೇಶಗಳನ್ನು ಇಲ್ಲಿ ದಾಖಲಿಸಿದ್ದಾರೆ. ತುಳು ಸಾಹಿತ್ಯದಲ್ಲಿ ನಡೆದಿರುವ ವಿವಿಧ ಭಾಷೆಗಳ ನಡುವೆ ನಡೆದಿರುವ ಕೊಡು-ಕೊಳು ಭಾಷಾಂತರ ಚಟುವಟಿಕೆಗಳನ್ನೆಲ್ಲ ದಾಖಲಿಸಿದ್ದಾರೆ.

ಕನ್ನಡ ಸಾಹಿತ್ಯದ ಚರಿತ್ರಕಾರರು ಕನ್ನಡ ಸಾಹಿತ್ಯದ ಆಧುನಿಕ ಪೂರ್ವ ಯುಗವನ್ನು ಕನ್ನಡ ಸಾಹಿತ್ಯದ ಕತ್ತಲಯುಗ ಎಂದು ಕರೆಯಲು, ಯಕ್ಷಗಾನ ಕಾವ್ಯದ ಕುರಿತು ಹೊಂದಿದ್ದ ಅವಜ್ಞೆಯೇ ಕಾರಣ. ಯಕ್ಷಗಾನ ಪ್ರಸಂಗ ಸಾಹಿತ್ಯವನ್ನು ಪರಿಗಣಿಸಿ ನೋಡಿದರೆ ಆಧುನಿಕ ಪೂರ್ವ ಯುಗವನ್ನು ಕನ್ನಡ ಸಾಹಿತ್ಯದ ಕತ್ತಲಯುಗ ಎಂದು ಕರೆಯಲು ಸಾಧ್ಯವಿಲ್ಲ ಎಂದು ಗೌಡರು ಹೇಳುತ್ತಾರೆ. ದಾಸ ಸಾಹಿತ್ಯ - ಭಾಗವತ ಸಂಪ್ರದಾಯದ ಕೃತಿಗಳ ಮುಂದುವರಿಕೆಯಾಗಿ ರಚಿತವಾದ ಪಠ್ಯಗಳನ್ನು ಜನರ ನಡುವೆ ಒಯ್ಯುವ ಪ್ರದರ್ಶನ ಕಲೆಯಾಗಿ ಯಕ್ಷಗಾನ ಕಲೆ (ರಂಗಕಲೆ) ರೂಪುಗೊಂಡಿತು ಎನ್ನುವುದು ಅವರ ಅಭಿಮತ.

ಹೀಗೆ ಪ್ರಸ್ತುತ ಗ್ರಂಥವು ತುಳು ಭಾಷೆ-ಸಾಹಿತ್ಯ-ಜಾನಪದ ಕ್ಷೇತ್ರಗಳಲ್ಲಿ ಆಸಕ್ತಿಯಿರುವವರೆಲ್ಲರೂ ಓದಬೇಕಾದ ಕೃತಿಯಾಗಿದೆ.

ಕೃತಿ: ಕರಾವಳಿ ಕಥನಗಳು

ಲೇ: ಡಾ.ಕೆ.ಚಿನ್ನಪ್ಪ ಗೌಡ

ಪ್ರ: ಸಂತ ಅಲೋಶಿಯಸ್ ಪ್ರಕಾಶನ, ಮಂಗಳೂರು.

ಸಂ: 0824 4117701

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT