ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ ಹೆಗಲ ಮೇಲೆ ಭಾವಕಥನ

Last Updated 23 ನವೆಂಬರ್ 2019, 19:30 IST
ಅಕ್ಷರ ಗಾತ್ರ

ವೃತ್ತಿಯಲ್ಲಿ ಆರ್ಕಿಟೆಕ್ಟೂ ಪ್ರವೃತ್ತಿಯಲ್ಲಿ ಬರಹಗಾರರೂ ಆಗಿರುವ ನಾಗರಾಜ ವಸ್ತಾರೆ, ತಮ್ಮ ವಿಶಿಷ್ಟ ನುಡಿಸಾಣಿಕೆಯಿಂದಲೇ ಗಮನಸೆಳೆದವರು. ಅವರ ಎರಡನೆ ಕಾದಂಬರಿ ‘ಪ್ರಿಯೇ ಚಾರುಶೀಲೆ’.

‘ನನಗೆ ಕಥನ ಮುಖ್ಯವಲ್ಲ; ಭಾಷೆಯ ಸಾಧ್ಯತೆಗಳನ್ನು ಶೋಧಿಸಲು ಕಥನ ಒಂದು ನೆಪ ಅಷ್ಟೆ’ ಎಂಬರ್ಥದ ಮಾತುಗಳನ್ನು ಅವರೇ ಹಿಂದೆ ಆಡಿಕೊಂಡಿದ್ದಿದೆ. ಅವರ ಹಿಂದಿನ ಕೃತಿಗಳನ್ನು ಓದಿದಾಗ ಅದು ಸತ್ಯವೆಂದೂ ಅನಿಸುತ್ತದೆ. ಆದರೆ ಈ ಕಾದಂಬರಿ ಬರೆಯುವ ಹೊತ್ತಿಗೆ ಅವರಿಗೇ ಗೊತ್ತಿಲ್ಲದೇ ಕಥನದ ಪ್ರಾಣ ಮತ್ತು ಭಾಷೆಯ ಸ್ಥಾನ ಎರಡೂ ತಮ್ಮ ತಮ್ಮ ಜಾಗ ಬದಲಿಸಿ ತುಸು ಅತ್ತಿತ್ತ ಜರುಗಿದಂತಿದೆ. ವಸ್ತಾರೆಯವರ ಮೊದಲಿನ ಕೃತಿಗಳಲ್ಲಿರುವಂತೆ ಇಲ್ಲಿಯೂ ಭಾಷೆಯೇ ದಾಪುಗಾಲು ಹಾಕಿಕೊಂಡು ನಡೆಯುತ್ತಿರುತ್ತದೆ. ಆದರೆ ಯಾವಾಗಲೂ ಈ ಭಾಷೆಯ ಕಿರುಬೆರಳು ಹಿಡಿದು, ಅದರ ಸಮಸಮ ನಡೆಯಲಾರದೆ ಹಿಂದು ಹಿಂದೇ ಓಡುನಡಿಗೆಯಲ್ಲಿ ಬರುತ್ತಿದ್ದ ಕಥನ ಇಲ್ಲಿ ಹೆಗಲೇರಿ ಕೂತಿದೆ. ಹಾಗಾಗಿ ಭಾಷೆಯೊಟ್ಟಿಗೇ ಕಥೆಯೂ ಸಾಗುತ್ತಿರುತ್ತದೆ. ಬರಿಯ ಭಾಷೆಗೆ ಕಾಣಲಾರದ ಹಲವು ಸಂಗತಿಗಳನ್ನು ಹೆಗಲ ಮೇಲಿನ ಕಥನ ಕಾಣುತ್ತದೆ; ನಮಗೂ ಕಾಣಿಸುತ್ತದೆ.

ಬರೀ ಎರಡು ದಿನಗಳಲ್ಲಿ ನಡೆಯುವ ಕಥೆ ಇದು. ಐಳ ಮತ್ತು ಮಾತಂಗಿ ಎಂಬಿಬ್ಬರು ಪುರಿಯ ಸಮುದ್ರತೀರದಲ್ಲಿ ಭೇಟಿಯಾಗುತ್ತಾರೆ. ತಮ್ಮ ಎಲ್ಲ ‘ಇಮೇಜು’ಗಳನ್ನು ಮರೆತು ಹಾಗೆ ಸುಮ್ಮನೆ ಇದ್ದುಬಿಡಬೇಕು ಎಂದು ಊರು ಬಿಟ್ಟು ಬಂದ ಅವರಿಬ್ಬರ ಜೋಡಿ ನಡಿಗೆಯಲ್ಲಿ ಅವರ ಒಳಹೊರಗಿನ ಜಗತ್ತು ತೆರೆದುಕೊಳ್ಳುತ್ತ ಹೋಗುತ್ತದೆ.

ಈ ಕಾದಂಬರಿಯಲ್ಲಿ ಮೂರು ಕವಲುಗಳ ನಿರೂಪಣಾ ದಾರಿಗಳಿವೆ.ಒಂದು, ಪಾತ್ರಗಳು ಅಥವಾ ಕಥಾನಾಯಕನ ನಡಿಗೆಯ ಮೂಲಕ ತೆರೆದುಕೊಳ್ಳುವ ವರ್ತಮಾನದ ನಿರೂಪಣೆ. ಇನ್ನೊಂದು ಕಾದಂಬರಿಕಾರನಿಗೆ ಇರುವ ಭಾಷೆಯ ಕುರಿತ ವ್ಯಾಮೋಹ ಅಥವಾ ಕುತೂಹಲದ ಮೂಲಕ ಆಗಾಗ ತೆರೆದುಕೊಳ್ಳುವ ಶಬ್ದದ ಬೆನ್ನತ್ತಿದ ಕಾಲುದಾರಿಗಳ ನಿರೂಪಣೆ. ಮೂರನೆಯದ್ದು, ಈ ಎರಡರ ನಡುವಿನ ಗ್ಯಾಪಿನಲ್ಲಿ ಒಮ್ಮೆ ಆಳಕ್ಕೂ ಇನ್ನೊಮ್ಮೆ ಎತ್ತರಕ್ಕೂ ಜಿಗಿಯುತ್ತ ಹೋಗುವ ಪ್ರೇಮ–ಕಾಮದ, ಗಂಡು–ಹೆಣ್ಣಿನ ಸಂಬಂಧಗಳ ಮನೋಲೋಕದ ನಿರೂಪಣೆ. ಈ ಮೂರೂ ನರೇಶನ್ನುಗಳು ಒಮ್ಮೆ ಒಂದರ ಹಿಂದೆ ಇನ್ನೊಂದಾಗಿ, ಮತ್ತೊಮ್ಮೆ ಒಂದರ ಮೇಲೆ ಇನ್ನೊಂದು ಹತ್ತಿ, ದಬ್ಬಾಳಿಕೆ ನಡೆಸಿ, ಮಗದೊಮ್ಮೆ ಒಂದು ಇನ್ನೊಂದನ್ನು ಜಗ್ಗಾಡುತ್ತ ಚಲಿಸುತ್ತವೆ; ಕಾದಂಬರಿಯನ್ನು ನಡೆಸುತ್ತವೆ. ಈ ನಡಿಗೆ ಮುನ್ನಡೆಯೋ ಹಿನ್ನಡೆಯೋ ವಿಸ್ತರಣೆಯೋ ಸ್ಪಷ್ಟವಾಗಿ ಗೊತ್ತಾಗದ ಕ್ರಮದಲ್ಲಿಯೇ ಕಥನ ಜರುಗುತ್ತಿರುತ್ತದೆ.

ಸಸ್ಪೆನ್ಸ್ ಥ್ರಿಲ್ಲರ್‌ನ ಹರಿತಗುಣವನ್ನು ಇಟ್ಟುಕೊಂಡೇ ಗಂಡು ಹೆಣ್ಣಿನ ಸಂಬಂಧದ ಹಲವು ಆಯಾಮಗಳನ್ನು ಶೋಧಿಸುತ್ತ ಸಾಗುವ ಈ ಕಾದಂಬರಿ ಓದುವ ಖುಷಿಯನ್ನಂತೂ ಧಾರಾಳವಾಗಿ ಕೊಡುತ್ತದೆ. ಆದರೆ ಮುನ್ನೂರು ಪುಟಗಳ ಈ ಕಾದಂಬರಿಯಲ್ಲಿ ಇನ್ನೂರು ಪುಟಗಳನ್ನು ಕ್ರಮಿಸಿದ ನಂತರ ಈ ಖುಷಿ ಒಮ್ಮಿಂದೊಮ್ಮೆಲೇ ಇಳಿಮುಖಗೊಳ್ಳುತ್ತ ಸಾಗುತ್ತದೆ. ಅಷ್ಟರವರೆಗೆ ಉಜ್ವಲವಾಗಿ ಉರಿಯುತ್ತಿದ್ದ ದೀಪವೊಂದು ನಂದಿಹೋಗಿ ಸೊಡರ ವಾಸನೆಯಷ್ಟೇ ಉಳಿಯುವಂತೆ, ಅದನ್ನು ಮತ್ತೆ ಉರಿಸಲು ವೃಥಾ ಉಸಿರೂದುತ್ತಿರುವ ಹಾಗೆ ಭಾಸವಾಗುತ್ತದೆ.

ಇದಕ್ಕೆ ಒಂದು ಬಗೆಯ ಓದಿನ ಕ್ರಮಕ್ಕೆ, ಕಾದಂಬರಿಯ ದೌರ್ಬಲ್ಯವೆಂದು ಕಾಣಬಹುದಾದ ಕೆಲವು ಅಂಶಗಳು ಇದಕ್ಕೆ ಕಾರಣವಾಗಿರಬಹುದು. ಕಥಾನಾಯಕ ಐಳ, ಆಗೀಗ ಒಂದು ಶಬ್ದದ, ನುಡಿಗಟ್ಟಿನ ಬೆನ್ನೇರಿ ಹೊರಟುಬಿಡುವುದು ಕೆಲವು ಕಡೆಗಳಲ್ಲಿ ಕಥನದ ಓಘದಲ್ಲಿ ಸಹಜವಾಗಿ ಮೂಡಿಬಂದಿದೆ; ಇನ್ನು ಕೆಲವು ಕಡೆ ಆರೋಪಿಸಿದಂತೆ ಕಾಣುತ್ತದೆ. ಮಾತಂಗಿಯಂಥ ಪರಮಸುಂದರಿಯ ಜೊತೆಯಲ್ಲಿ ಪ್ರಣಯದ ಸೂಚನೆಗಳನ್ನು ಪಡೆದುಕೊಳ್ಳುತ್ತ – ನೀಡುತ್ತ ಅದರ ಅಮಲನ್ನು ಅನುಭವಿಸುತ್ತ ಸಾಗುತ್ತಿರುವವನು ಒಮ್ಮಿಂದೊಮ್ಮೆಲೇ ಯಾವುದೋ ಶಬ್ದ ಕೇಳಿ ಅದರ ಹಿನ್ನೆಲೆಯೇನು ಎಂಬ ವ್ಯಾಕರಣಲಹರಿಗೆ ಬೀಳುವುದು ಅಸಹಜ ಅಷ್ಟೇ ಅಲ್ಲ; ತನ್ನ ಜೊತೆಗಿದ್ದ ಜವ್ವನೆಗೆ ಮಾಡುವ ಅಪಚಾರವೂ ಅಲ್ಲವೇ?

ಈ ಕಾದಂಬರಿಯ ಶೃಂಗಬಿಂದು ಇರುವುದು ಐಳ–ಮಾತಂಗಿಯರು ಹೋಟೆಲಿನಲ್ಲಿ ಕೂಡುವ ಸನ್ನಿವೇಶದಲ್ಲಿ. ಅದರ ನಂತರ ಮತ್ತೆ ಕಥನ ಇಳಿಮುಖ ಚಲನೆಗೆ ತೊಡಗುತ್ತದೆ. ಇದನ್ನು ಹಿಮ್ಮುಖ ಚಲನೆ ಅಂದರೂ ಅಡ್ಡಿಯಿಲ್ಲ. ಯಾಕೆಂದರೆ ಕಥನದ ವರ್ತಮಾನದ ನಿರೂಪಣೆಯಲ್ಲಿ ಇರುವ ಕುತೂಹಲ, ಹಾದು ಬಂದ ದಾರಿಯನ್ನೇ ಮತ್ತೊಮ್ಮೆ ನೆನಪಿಸಿಕೊಳ್ಳುವಾಗ ಇರುವುದಿಲ್ಲ. ಮೇಲೆಯೇ ಉಲ್ಲೇಖಿಸಿದ ಹಾಗೆ ಒಂದು ಬಗೆಯ ಓದಿನ ಕ್ರಮಕ್ಕೆ ಇವು ಪುನರಾವರ್ತನೆ ಅನಿಸಿದ್ದೂ ಇದಕ್ಕೆ ಕಾರಣವಾಗಿರಬಹುದು.

ಮತ್ತೆ ಕಾದಂಬರಿಯಲ್ಲಿ ಮೊದಲಿನ ಭಾಗದ ಹೊಳಪು ಕಾಣಿಸಿಕೊಳ್ಳುವುದು ಕೊನೆಯ ಹಂತದಲ್ಲಿ (ಮಾತಂಗಿ ದೇಗುಲದ ಶಿಖರದ ಮೇಲೆ ಹತ್ತುವ ಸನ್ನಿವೇಶ). ಇಡೀ ಕಾದಂಬರಿಯ ತೀವ್ರ ಸನ್ನಿವೇಶಗಳಲ್ಲಿ ಇದೂ ಒಂದು. ಇದ್ದೂ ಇಲ್ಲದಂತೆ, ದಕ್ಕಿಯೂ ದಕ್ಕದಂತೆ, ಒಲಿದೂ ಒಲಿಯದ ಹಾಗೆ ಇರುವ ಮಾತಂಗಿ, ದೇಗುಲ ಶಿಖರ ಏರುವ ದೃಶ್ಯ... ಐಳನಿಗೆ ತನ್ನನ್ನು ಮೀರಿ ಬೆಳೆದು ಬೆರಗು ಹುಟ್ಟಿಸುವ ಅವಳು ಎಂಥ ರೂಪಕವಾಗಿಬಿಡುತ್ತಾಳೆಂದರೆ, ಕೊನೆಯಲ್ಲಿ ಅವಳು ಅವನಿಗೆ ಪೋನಿಗೆ ಸಿಕ್ಕಾಗ ನಿರಾಸೆಯೇ ಆಗಿಬಿಡುತ್ತದೆ. ಅಮೂರ್ತವಾಗಿ, ಮನಸೊಳಗೇ ಮುಂದುವರಿಯುವ ಸಾಧ್ಯತೆಯುಳ್ಳ ಪದ್ಯಕ್ಕೆ ಕವಿ ಒತ್ತಾಯಪೂರ್ವಕವಾಗಿ ಮೂರ್ತ ಮುಕ್ತಾಯ ಕೊಟ್ಟಾಗ ಉಂಟಾಗುವ ಕಸಿವಿಸಿಯನ್ನೂ, ಖುಷಿಯನ್ನೂ ಈ ಕಾದಂಬರಿಯ ಅಂತ್ಯ ಒಟ್ಟೊಟ್ಟಿಗೇ ಹುಟ್ಟಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT