ಗುರುವಾರ , ಮಾರ್ಚ್ 23, 2023
28 °C

ಪುಸ್ತಕ ವಿಮರ್ಶೆ | ಲೈಂಗಿಕ ರಾಜಕಾರಣದ ಕೇಡಿತನ ಬಯಲು

ಎಚ್. ದಂಡಪ್ಪ Updated:

ಅಕ್ಷರ ಗಾತ್ರ : | |

Prajavani

ಅಮೆರಿಕದ ಕೇಟ್ ಮಿಲೆಟ್ ಅವರ ‘Sexual politics’ ಎಂಬ ಕೃತಿಯನ್ನು, ಎಚ್.ಎಸ್. ಶ್ರೀಮತಿ ಅವರು ‘ಅಧಿಕಾರ ಮತ್ತು ಅಧೀನತೆ: ಕೇಟ್ ಮಿಲೆಟ್ ಅವರ ವಿಚಾರಗಳು’ ಎಂಬ ಶೀರ್ಷಿಕೆಯಡಿಯಲ್ಲಿ ನಿರೂಪಣೆ ಮಾಡಿದ್ದಾರೆ. ಕೇಟ್ ಅವರ ಈ ಕೃತಿಯು ಎರಡನೇ ಹಂತದ ಸ್ತ್ರೀವಾದದ ಚಿಂತನೆಗಳಿಗೆ ತಳಪಾಯವನ್ನು ಹಾಕಿದ ಪ್ರಮುಖ ಕೃತಿ, ಹೀಗಾಗಿ ಇದೊಂದು ಪ್ರಮುಖವಾದ ಮೈಲಿಗಲ್ಲು ಎಂದೇ ಹೆಸರಾಗಿದೆ.

ಮಿಲೆಟ್ ಅವರು ಶಿಕ್ಷಣತಜ್ಞೆ, ಕಲಾವಿದೆ, ಕಾರ್ಯಕರ್ತೆ ಮತ್ತು ಲೇಖಕಿಯಾದ್ದರಿಂದ ಈ ಕೃತಿಯಲ್ಲಿ, ಸ್ತ್ರೀವಾದವನ್ನು ವಿವಿಧ ಆಯಾಮಗಳಲ್ಲಿ ವಿಶ್ಲೇಷಣೆ ಮಾಡಲು ಸಾಧ್ಯವಾಗಿದೆ. ಇವರು ಪಿತೃಪ್ರಧಾನ ಸಮಾಜ, ಸಂಸ್ಕೃತಿಯ ಅಧಿಕಾರದಲ್ಲಿ ಮಹಿಳೆಯರ ಅಧೀನತೆಯ ಸ್ವರೂಪವನ್ನು ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ, ವಿಜ್ಞಾನ, ಮಾನವಿಕ, ಮನಃಶಾಸ್ತ್ರ, ಮುಂತಾದ ಜ್ಞಾನ ವಿಜ್ಞಾನಗಳ ನೆರವಿನಿಂದ ವಿವರಿಸಿದ ಮೊದಲ ಲೇಖಕಿಯೂ ಆಗಿದ್ದಾರೆ.

ಅಧ್ಯಾಯ ಒಂದರಲ್ಲಿ ಲೈಂಗಿಕ ರಾಜಕಾರಣದ ಕೆಲವು ಸನ್ನಿವೇಶಗಳನ್ನು ಮತ್ತು ಲೈಂಗಿಕ ರಾಜಕಾರಣದ ಸಿದ್ಧಾಂತಗಳನ್ನು - ತಾತ್ವಿಕ, ಜೈವಿಕ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ನೆಲೆಗಟ್ಟಲ್ಲಿ ಮಾತ್ರವಲ್ಲದೆ ಬಲಪ್ರಯೋಗ, ಮಾನವಶಾಸ್ತ್ರ, ಮಿಥ್ ಮತ್ತು ಧರ್ಮ ಹಾಗೂ ಮಾನಸಿಕ ನೆಲೆಗಟ್ಟುಗಳ ನೆಲೆಗಳಲ್ಲಿ ವಿಶ್ಲೇಷಣೆ ಮಾಡಲಾಗಿದೆ. ಈ ಕೃತಿಯಲ್ಲಿ ಇದೊಂದು ಪ್ರಧಾನವಾದ ಭಾಗ.

ಲೈಂಗಿಕ ರಾಜಕಾರಣವು ಪ್ರಮುಖವಾಗಿ ಪುರುಷ ಕೇಂದ್ರಿತವಾದದ್ದು. ಮಹಿಳೆಯರು ಸಾಂಸ್ಥಿಕ ನೆಲೆಗಳಲ್ಲಿ ಮತ್ತು ವೈಯಕ್ತಿಕ ನೆಲೆಗಳಲ್ಲಿ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಯಾವ ಯಾವ ಬಗೆಯಲ್ಲಿ ಶೋಷಣೆಗೆ ಒಳಗಾಗುತ್ತಾರೆ ಎಂಬುದನ್ನು, ಅದರ ವಲಯಗಳನ್ನು ಗುರುತಿಸುತ್ತ, ಪಟ್ಟಿ ಮಾಡುತ್ತ ವಿಶ್ಲೇಷಣೆ ಮಾಡುವುದರಿಂದ ಲೈಂಗಿಕ ರಾಜಕಾರಣದ ಸ್ವರೂಪ ಅನಾವರಣಗೊಳ್ಳುತ್ತ ಹೋಗುತ್ತದೆ.

‘ರಾಜಕಾರಣ’ ಎಂಬ ಪರಿಕಲ್ಪನೆಯನ್ನು ವಿಸ್ತರಿಸಿ ಸಮಾಜದ ಎಲ್ಲಾ ವಲಯಗಳಲ್ಲಿ ವ್ಯಾಪಿಸಿರುವ ಅಧಿಕಾರ ಸಂರಚನೆಗಳೆಲ್ಲವಕ್ಕೂ ಯಾವ ಯಾವ ಬಗೆಗಳಲ್ಲಿ ಅನ್ವಯವಾಗುತ್ತದೆ ಎಂಬುವುದನ್ನು ಕೇಟ್ ಸೋದಾಹರಣವಾಗಿ ವಿವರಿಸಿರುವುದರಿಂದ ಅವರ ಬರಹ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಅಧಿಕಾರದ ಸಂರಚನೆಯಲ್ಲಿ ಒಂದು ಗುಂಪಿನ ವ್ಯಕ್ತಿಗಳಿಂದ ಮತ್ತೊಂದು ಗುಂಪಿನ ವ್ಯಕ್ತಿಗಳು ಕೆಲವು ನಿರ್ಬಂಧಗಳಿಗೆ ಒಳಗಾಗುವುದನ್ನು ‘ರಾಜಕಾರಣ’ ಎಂದು ಈ ಕೃತಿಯ ಸಂದರ್ಭದಲ್ಲಿ ಮಿಲೆಟ್ ವ್ಯಾಖ್ಯಾನಿಸುತ್ತಾರೆ.

ಪ್ರಬಲ ವ್ಯಕ್ತಿಗಳು ದುರ್ಬಲ ವ್ಯಕ್ತಿಗಳನ್ನು ನಿರ್ಬಂಧದಲ್ಲಿಡುವುದು ಸಾಮಾಜಿಕ ರಚನೆಯಲ್ಲಿದೆ. ಜಾತಿ, ವರ್ಗ, ವರ್ಣ, ಜನಾಂಗ, ಲಿಂಗತ್ವ ಮೊದಲಾದ ಶ್ರೇಣೀಕೃತ ಗುಂಪುಗಳಿವೆ. ಈ ಶ್ರೇಣೀಕೃತ ಗುಂಪುಗಳಲ್ಲಿ ಲಿಂಗತ್ವದ ಒಳಗೇ ಗಂಡು-ಹೆಣ್ಣೆಂಬ ಪ್ರಧಾನ-ಅಧೀನ ಶ್ರೇಣೀಕರಣ ಇದೆ. ಈ ಬಗೆಯ ಸಂಕೀರ್ಣ ಸ್ವರೂಪದ ರಾಜಕಾರಣದೊಂದಿಗೆ ಹೆಣ್ಣು ಸೆಣಸಬೇಕಾಗಿದೆ. ಪುರುಷನಿಂದ ಪುರುಷನಿಗಾಗಿ ಪುರುಷನೇ ರೂಪಿಸಿಕೊಂಡಿರುವ ರಾಜಕಾರಣವು ಪುರುಷನ ಅಗತ್ಯಗಳಿಗೆ ಒಂದು ಸಾಧನವಾಗಿ ಸ್ತ್ರೀಯನ್ನು ರೂಪಿಸಿದೆ. ಇದನ್ನು ಸ್ತ್ರೀವಾದ ಪ್ರಶ್ನಿಸುತ್ತದೆ ಮತ್ತು ಅದು ವ್ಯಕ್ತಿಕೇಂದ್ರಿತ ರಾಜಕಾರಣವನ್ನು ಆಯ್ಕೆ ಮಾಡಿಕೊಳ್ಳುತ್ತದೆ.

ಅಧ್ಯಾಯ ಎರಡರ ಭಾಗ ಒಂದರಲ್ಲಿ ಲೈಂಗಿಕ ಕ್ರಾಂತಿಯ ಸ್ವರೂಪದಲ್ಲಿರುವ ವಿವಾದಗಳನ್ನು ಅದರ ಎಲ್ಲಾ ವೈರುಧ್ಯಗಳೊಂದಿಗೆ ವಿವರಿಸಲಾಗಿದೆ. ರಸ್ಕಿನ್, ಮಿಲ್ಮತ್ತು ಏಂಗೆಲ್ಸ್ ಅವರು ಮಂಡಿಸಿರುವ ಸ್ತ್ರೀಯರ ಬಗೆಗಿನ ಚಿಂತನೆಗಳ ಸ್ವರೂಪ ಮತ್ತು ಕ್ರಾಂತಿಯ ಬಗೆಗಿನ ಚಿಂತನೆಗಳ ವಿಶ್ಲೇಷಣೆ ಇವೆ. ಭಾಗ ಎರಡರಲ್ಲಿ ಫ್ರಾಯ್ಡ್ ಮತ್ತು ಅವನ ನಂತರದ ಮನೋವಿಜ್ಞಾನಿಗಳು ಸ್ತ್ರೀಯರ ಬಗೆಗಿನ ಚಿಂತನೆಗಳನ್ನು ಮಂಡಿಸಿ ಅವುಗಳಲ್ಲಿರುವ ಸ್ತ್ರೀ ವಿರೋಧಿ ವಿಚಾರಗಳನ್ನು ವಿವರವಾಗಿ ಚರ್ಚೆಗೆ ಒಳಪಡಿಸಲಾಗಿದೆ.

ಮಿಲ್, ರಸ್ಕಿನ್ ಅವರ ವಿಚಾರಗಳನ್ನು ಚರ್ಚಿಸುತ್ತಾ ರಸ್ಕಿನ್ ಯಥಾಸ್ಥಿತಿವಾದಿ ಹಾಗೂ ಮಿಲ್ ಪ್ರಗತಿಪರ ಚಿಂತಕನೆಂದು ಗುರುತಿಸುವ ಕೇಟ್ ಅವರ ವಾದಸರಣಿಯಿಂದ ಓದುಗರಿಗೆ ಅಪಾರವಾದ ಒಳನೋಟಗಳು ದೊರೆಯುತ್ತವೆ. ಹಾಗೆಯೇ ಸ್ತ್ರೀಯರನ್ನು ಕುರಿತ ಏಂಗೆಲ್ಸ್ ಅವರ ವಿಚಾರಗಳು ಹೆಚ್ಚು ತರ್ಕಬದ್ದವೂ ಕ್ರಾಂತಿಕಾರಕವೂ ಆಗಿರುವುದನ್ನು ಸೋದಾಹರಣವಾಗಿ ವಿಶ್ಲೇಷಿಸುತ್ತ, ವಿವರಿಸುತ್ತ ಸ್ತ್ರೀವಾದವು ಏಂಗೆಲ್ಸ್ ಮತ್ತು ಮಿಲ್ ಅವರ ಚಿಂತನೆಗಳನ್ನು ಒಳಗೊಳ್ಳಬೇಕಾಗಿದೆ ಎಂಬ ತೀರ್ಮಾನಕ್ಕೆ ಬರಲಾಗಿದೆ.

ಅಧ್ಯಾಯ ಮೂರರಲ್ಲಿ, ಸಾಹಿತ್ಯದಲ್ಲಿ ಲೈಂಗಿಕ ರಾಜಕಾರಣದ ಪ್ರತಿಫಲನಗಳ ಸ್ವರೂಪವನ್ನು ಡಿ.ಎಚ್. ಲಾರೆನ್ಸ್, ಹೆನ್ರಿ ಮಿಲ್ಲರ್, ನಾರ್ಮನ್ ಮೆಯ್ಲರ್ ಮತ್ತು ಜೀನ್ ಜೀನೆ ಇವರ ಕೃತಿಗಳನ್ನು ಅಧ್ಯಯನ ಮಾಡುವುದರ ಮೂಲಕ ಗುರುತಿಸಲಾಗಿದೆ. ಜಗತ್ತಿನ ಎಲ್ಲ ಕಾಲ ಘಟ್ಟಗಳ ಸಾಹಿತ್ಯ ಚಳವಳಿಗಳಲ್ಲಿ ಗಂಡು-ಹೆಣ್ಣು ಎಂಬ ಲೈಂಗಿಕ ಗುಂಪುಗಳ ಸ್ಥಾನಮಾನಗಳನ್ನು ನೆನಪಿಸುತ್ತ ಅವುಗಳನ್ನು ಮುಂದುವರಿಯುವಂತೆ ಮಾಡುತ್ತ ಬರಲಾಗಿದೆ. ಇದನ್ನು ಕೃತಿ ಬಲವಾಗಿ ಪ್ರಶ್ನಿಸುತ್ತದೆ.

ಮಿಲೆಟ್, ಲಾರೆನ್ಸ್, ಹೆನ್ರಿ ಮಿಲ್ಲರ್ ಅವರ ಕೃತಿಗಳಲ್ಲಿನ ಪುರುಷ ಪ್ರಾಧಾನ್ಯ ಮತ್ತು ಸ್ತ್ರೀವಿರೋಧಿ ಧೋರಣೆಗಳನ್ನು ವಿಶ್ಲೇಷಣೆ ಮಾಡುವ ಕ್ರಮ ಮಹತ್ವದ ಒಳನೋಟಗಳನ್ನು ಒದಗಿಸುತ್ತದೆ. ಕೇಟ್ ಅವರ ‘Sex politics’ ಅನ್ನು ಕನ್ನಡದ ಓದುಗರಿಗೆ ಸುಲಭಗ್ರಾಹ್ಯವಾಗುವಂತೆ ಶ್ರೀಮತಿ ಅವರು ನಿರೂಪಣೆ ಮಾಡಿಕೊಟ್ಟಿದ್ದಾರೆ.

***

ಕೃತಿ: ಅಧಿಕಾರ ಮತ್ತು ಅಧೀನತೆ
ಲೇ: ಶ್ರೀಮತಿ ಎಚ್‌.ಎಸ್‌.
ಪ್ರ: ಆಕಾರ ಪ್ರಕಾಶನ
ಸಂ: 8073397463

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು