ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರು ಹಿಲ್ಲದಂತೆ ಕೂಡಿದ ಪ್ರೇಮಕಾವ್ಯ

Last Updated 26 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಜೇನು ಮಲೆಯ ಹೆಣ್ಣು

(ಕವನ ಸಂಕಲನ)

ಲೇ: ಎಚ್ ಆರ್ ಸುಜಾತಾ

ಪ್ರ: ನಗುವನ ಕ್ರಿಯೇಷನ್ಸ್,

ಬೆಲೆ: ₹ 100, ಪುಟಗಳು: 98

ಉತ್ತರದ ಮೀಮಾಂಸೆಗೆ ಪ್ರೇಮ–ಕಾಮಗಳು ನೈವೇದ್ಯಕ್ಕಿಟ್ಟ ರಸ. ಇಲ್ಲಿ ತಯಾರಾಗುವ ಎಲ್ಲಕ್ಕೂ ಪರವೇ ಗಂತವ್ಯ. ಇಲ್ಲಿ ನಡೆಯುವುದೇನಿದ್ದರೂ ಅಭಿನಯ. ಸತ್ಯ ಸಂಭವಿಸುವುದು ಪ್ರತ್ಯಭಿಜ್ಞೆಯಲ್ಲಿ ಮಾತ್ರ. ಈ ನಿಲುವಿನ ಕಾವ್ಯವೇ ‘ಭಾರತೀಯ ಕಾವ್ಯ’. - ಇಂತಹ ಪೊಳ್ಳು ಸಮೀಕರಣಗಳ ‘ಉತ್ತರ ಮಾರ್ಗದ’ ಕಾವ್ಯ ಮತ್ತು ಮೀಮಾಂಸೆಗಳನ್ನು ದಕ್ಷಿಣ ಒಪ್ಪಿಕೊಂಡಿಲ್ಲ.

ಇದು ಸ್ವೀಕಾರ-ನಿರಾಕರಣೆಯಾಚೆಗಿನ ನಿಸರ್ಗದೊಂದಿಗೆ ಸಮರಸದಿಂದ ಬಾಳುವುದನ್ನು ಸರಿ-ತಪ್ಪು ಎಂಬ ತಕ್ಕಡಿಗೆ ಇಡದ ವಿವೇಕ. ಇದು ‘ಸಂಗಂ’ ಸಾಹಿತ್ಯದ ನಿಲುವು. ತಾನು ಮತ್ತು ಇದಿರನ್ನು ಅವಿರುವಂತೆ ಸರಿಯಾಗಿ ಅರಿತುಕೊಂಡರೆ ಬಾಳುವ ಸರಿಯಾದ ದಾರಿ ತೆರೆದುಕೊಳ್ಳುತ್ತದೆ ಎನ್ನುವ ವಿವೇಕ. ಎರಡನ್ನೂ ಬಿಟ್ಟು ಮೇಲಕ್ಕೆ ದೃಷ್ಟಿ ನೆಟ್ಟರೆ ಇಲ್ಲಿಯ ಎರಡನ್ನೂ ಕಳೆದುಕೊಳ್ಳುವುದು ಖಾತರಿ. ಹಾಗಾಗಿ ದಕ್ಷಿಣದ ಕಾವ್ಯ ಮೀಮಾಂಸೆಯ ಪ್ರಧಾನ ನಿಲುವು ಇದೇ ಆಗಿರುವುದು ಸಹಜವೇ ಇದೆ.

ಜೇನುಮಲೆಯ ಹೆಣ್ಣು – ಎಂಬ ‘ಸಂಗಂ’ ಕಾವ್ಯ ಪ್ರಭಾವದಿಂದ ರೂಪುತಳೆದ ಈ ಕೃತಿಗೆ ಮೇಲಿನ ಪ್ರವೇಶದ ಸಾಲುಗಳು ಕೈಮರ ಎಂದು ಭಾವಿಸಬಹುದು. ‘ಎಟ್ಟುತ್ತೊಗೈ’ ಮತ್ತು ‘ಪತ್ತುಪಾಟ್ಟು’ ಎಂಬ ಎರಡು ವಿಭಾಗಗಳಲ್ಲಿ ಹರಿದಿರುವ ‘ಸಂಗಂ’ ಕಾವ್ಯ ಹಾಗೂ ದಕ್ಷಿಣದ ಕಾವ್ಯ ಮೀಮಾಂಸೆಯ ಮುಖ್ಯ ಪರಿಕಲ್ಪನೆಗಳನ್ನು ಸೂತ್ರೀಕರಿಸಿರುವ ‘ತೋಲ್ಗಾಪ್ಪಿಯಂ’ ಎಂಬ ಮೀಮಾಂಸಾ ಕೃತಿ ಪ್ರಸ್ತುತ ಕಾವ್ಯಕೃತಿಯ ತಾತ್ವಿಕ ಆಕರವಾಗಿದೆ. ಕವಿಯತ್ರಿ ಇವುಗಳಿಂದ ಒದಗಿದ ಸ್ಫುರಣೆಗೆ ಋಣಿಯಾಗಿದ್ದಾರೆ. ಅವರಿಗೆ ಅದೊಂದು ಚಿಮ್ಮುಹಲಗೆಯಾಗಿ ಒದಗಿಬಂದಿದೆ.

ನಾವು ಬದುಕುವ ಆವರಣವು ಮೀಮಾಂಸೆಯ ನಿಲುವುಗಳನ್ನು ನಿರ್ದೇಶಿಸುತ್ತದೆ. ಅಂತೆಯೇ ‘ತೋಲ್ಗಾಪ್ಪಿಯಂ’ ಕಡಲದಂಡೆಯನ್ನು ಬೇರೆಯದೇ ಆದ ಮೀಮಾಂಸೆಯ ಆವರಣ ಎನ್ನುತ್ತದೆ. ಆ ಆವರಣದ ‘ಅಗಂ’ನ ಒಂದು ತುಣುಕನ್ನು ಕವಿಯತ್ರಿ ಸುಜಾತಾ ಅವರು ಕಾವ್ಯವಾಗಿಸಿರುವ ಪರಿ ಇದು:

ಬೇಸಿಗೆಯಲ್ಲಿವರು ಬಂದೇ

ಬರುವರು ಮೀನುಬುಟ್ಟಿಯ ನಾತ!

ಹೊತ್ತವರ ಹಿಂದೆಯೇ ಉಪ್ಪು ಬೆವರ ಮೂಟೆ ಹೊತ್ತವರು

ಕಡಲ ತಡಿಯವಳು, ಮೀನ

ಕಣ್ಣವಳು, ಉಪ್ಪು ಮೈಯ್ಯಿನ

ಹುಡುಗಿಗೆ ಒಪ್ಪು ಆ ಉಪ್ಪಾರ ಹುಡುಗನ ಸ್ನೇಹ!

. . .

ಇಬ್ಬರಿಗೂ ತಪ್ಪದು ಕೂಗು

ತಾಗು! ಉಪ್ಪುಮೂಟೆ ಹೊತ್ತು ಬರುವನಿವನು

ಮೀನುಬುಟ್ಟಿಯ ವೈಯ್ಯಾರದಿ ತರುವಳಿವಳು

ನಿಧಾನದಲ್ಲಿ ಬಿಡಿಸಬೇಕು ಮೀನಮುಳ್ಳ!

ಕೊಕ್ಕರೆ ತನ್ನ ಕೊಕ್ಕಲ್ಲಿ ಮೀನ ಜಾರಿಹೋಗದೆ

ಹಿಡಿವಂತೆ ಬಾಯಿಗಿಡಬೇಕು! ಮಾತು ಮರೆತು ಮೌನದಲ್ಲಿ.. (ಕಡಲ ಮೀನೂ ಉಪ್ಪಾರ ಹುಡುಗನೂ)

ಏಳು ತೆನೆಗಳ ಈ ಸಂಕಲನದಲ್ಲಿ ಆರು ‘ಅಗಂ’, ಒಂದು ಮಾತ್ರ ‘ಪರಂ’ ಕುರಿತಾದ ನಿರೂಪಣೆಗಳು. ‘ಅಗಂ’ ಅಂತರಂಗವನ್ನು ಕುರಿತ ನಿರೂಪಣೆಯಾದರೆ ‘ಪರಂ’ ಬಾಹ್ಯಲೋಕವನ್ನು ಉದ್ದೇಶಿಸಿದ ಕಾವ್ಯ. ಪ್ರೇಮ, ವಿರಹ, ಅಪ್ಪುಗೆ, ಕಾಮದ ಮಾಧುರ್ಯಗಳು ಒಂದರ ಜಗತ್ತಾದರೆ, ಅಸೂಯೆ, ದಂಗೆ, ಮತ್ಸರ, ದ್ವೇಷ, ಕೊಲೆ, ಸುಲಿಗೆ, ಹಿಂಸೆ ಇನ್ನೊಂದರ ಜಗತ್ತು. ಎರಡೂ ಒಂದೇ ಜೀವದ ಒಳ-ಹೊರಗು.

‘ಅಗಂ’ ಕುರಿತ ಕಾವ್ಯವೇ ಜಾಸ್ತಿ ಇರುವ ತಾರತಮ್ಯಕ್ಕೆ ಕವಿಯತ್ರಿ ಮತ್ತು ಓದುಗರು ಒಪ್ಪಿಗೆ ಸೂಚಿಸುವುದೇನೂ ಆಶ್ಚರ್ಯವಲ್ಲ. ಆದರೆ, ಲೋಕವಾಸ್ತವ ಹಾಗಿಲ್ಲ. ಅಂತರಂಗವು ಪ್ರೀತಿಯಲ್ಲಿ ಮಿಂದೇಳುತ್ತಿದ್ದರೆ ಹೊರಜಗತ್ತು ಯುದ್ಧಕ್ಕೆ ಕುದಿಯುತ್ತಿದೆ. ಈ ಹೊತ್ತಂತೂ ಮನುಷ್ಯರ, ದೇಶಗಳ ಮತ್ತು ಧರ್ಮಗಳ ನಡುವೆ ಕುದಿಯುತ್ತಿರುವ ವೈಷಮ್ಯದ ಕುದಿಗೆ ಚಿಮುಕಿಸುವ ತಣ್ಣೀರು ನಾಲ್ಕೇ ಹನಿಯಾದರೂ ಸರಿ, ಅತ್ಯಗತ್ಯವೆನ್ನುವುದರಲ್ಲಿ ಸಂಶಯವಿಲ್ಲ. ಮೈತ್ರಿಗೇ ತುಡಿಯುವ ಕಾವ್ಯಕ್ಕೆ ಮತ್ತು ಓದುವ ಮನಸ್ಸಿಗೆ ಯುದ್ಧರಂಗ ಬೇಗ ದಣಿವಾಗಿಸುತ್ತದೆನ್ನುವುದನ್ನು ಒಪ್ಪಬೇಕು.

ಇಡಿಯಾಗಿ ಮಲೆನಾಡಿನ ಜೀವಾವರಣವನ್ನು ದುಡಿಸಿಕೊಂಡಿರುವ ಕವಿಯತ್ರಿಗೆ ಅಲ್ಲಿಯ ನುಡಿವಿಶೇಷ, ಅನ್ನಾಹಾರ, ಬದುಕಿನ ಲಯಗಳೊಡನೆ ಗಾಢವಾದ ಅಂತಸ್ಸಂಬಂಧವಿದೆ. ಹಾಗಾಗಿ ಆ ನೆಲಕ್ಕೆ ಒಪ್ಪುವ ಛಂದಸ್ಸಿನ ನಡೆಯೊಂದು ತಾನಾಗಿ ಬಂದು ಜೊತೆಯಾಗಿದೆ. ಹರೆಯದ ಹೆಣ್ಣಿನ ತಿರುಗಿ ನೋಡದೆಯೂ ಹಿಂದನ್ನು ನೋಡುತ್ತ ಮುಂದೆ ನಡೆಯುವ ನಡೆಯೊಂದು ಚರಣದಿಂದ ಚರಣಕ್ಕೆ ಸಿದ್ಧಿಸಿದೆ. ಇದರ ಒಂದು ಮಾದರಿಯನ್ನು ಗಮನಿಸಬಹುದು:

ನಿನ್ನ ಶ್ರದ್ಧೆಗೆ ಮನಸಾರೆ

ಮಣಿದಿಹೆನು ಅಲುಗದಂತೆ!

ಒಮ್ಮೆ ಕಿರುಬೆರಳಿನುಗುರ ತಾಕಿಸಿ ಕೂತಾಗ

‘ತಾಕಬೇಕು, ತಾಕದಂತಿರಬೇಕು’

ಎಂದವನ ಕಂಡು ಬಿದ್ದು ಬಿದ್ದು ನಕ್ಕವಳ

ಮರೆಯಬಹುದೇನೇ? ತುಟಿಗಿಟ್ಟ ತುಟಿಯ ಸವರು

ನವಿರಿಗೆ ... ಅಲುಗಿ ಹೋದ

ನಿನ್ನ ಕಣ್ಣರೆಪ್ಪೆಗಂಟಿ ನೀರ ಹರಳನ್ನಿಡಿದ

‘ಆ ಚಣವೊಂದೆನಗೆ ದಿಟದ ಕಾಣ್ಕೆ!’ ಜಗದೊಲವಿನ (ನನ್ನವಳೇ.. ಕಕ್ಕೆ ಹೂವಿನ ಚೆಲುವೆ)

ಗಂಡು-ಹೆಣ್ಣಿನ ಪ್ರೇಮದಲ್ಲಿ ನಿಸರ್ಗವೇ ಇಡಿಯಾಗಿ ಪಾಲ್ಗೊಳ್ಳುವುದು ಈ ಕಾವ್ಯದ ವಿಶೇಷ. ‘ಸಂಗಂ’ ಕಾವ್ಯವು ಕೂಡ ‘ಒಳಗನ್ನು’ ಪ್ರತಿಫಲಿಸಲು ತನ್ನ ಸುತ್ತಲಿನ ಜೀವಾಜೀವ ಪ್ರಾಣಿ ಸಸ್ಯ ಸಂಕುಲವನ್ನೆಲ್ಲ ಬಳಸಿಕೊಳ್ಳುತ್ತದೆ. ಒಳಗಿನ ಪ್ರೇಮ, ವಿರಹಾದಿಗಳಾಗಲೀ ಹೊರಗಿನ ಶೌರ್ಯ ಸಾಹಸಗಳಾಗಲೀ ಸಂಬಂಧವೇ ಎಲ್ಲವನ್ನೂ ರೂಪಿಸುವ ಕೊಂಡಿಯಾಗಿರುವುದರಿಂದ ಪ್ರತೀ ನಡೆಯಲ್ಲಿ ಎಲ್ಲವೂ ಪಾಲ್ಗೊಳ್ಳುತ್ತವೆ. ನಾಯಿಗುತ್ತಿ, ಪೀಂಚಲು, ತಿಮ್ಮಿಯರು ಹೇಗೆ ಕುವೆಂಪು ಅವರನ್ನು ತಮ್ಮ ನಡೆದಾಟಕ್ಕೆ ಜೊತೆಯಾಗಿಸಿಕೊಂಡರೋ ಹಾಗೇ ಜೇನುಮಲೆಯ ಹೆಣ್ಣು, ಬೆಸ್ತರ ಹುಡುಗಿ, ಉಪ್ಪಾರ ಹುಡುಗರು ಈ ಕವಿಯತ್ರಿಯನ್ನು ಕರೆದುಕೊಂಡು ಹೋಗಿದ್ದಾರೆ.

ಮೀನು, ಮಿಂಚುಳ್ಳಿ, ಮೂಗೇ ಹೂಬಿಟ್ಟಂತಿರುವ ಮೂಗುಬೊಟ್ಟು, ನೆಲಸಂಪಿಗೆ, ಹರಿಣದರಳುಗಣ್ಣು, ತೂಗಾಡುವ ಕರಿದುಂಬಿ, ಕಚ್ಚಾಡುವ ಗಿಳಿಗೊರವಂಕಗಳು ಇಡಿಕಿರಿದಿರುವ ‘ಇಲ್ಲಿಯ’ ಮಾತೇ ಎಲ್ಲ. ಬನದವ್ವ, ಬೆಟ್ಟದ ಭೈರವನ ಹೊರತಾಗಿ ಎಲ್ಲೂ ‘ಅಲ್ಲಿಯ’ ಮಾತಿಲ್ಲ. ಪ್ರೇಮಕ್ಕಿಂತ ದೊಡ್ಡದು ಇನ್ನೊಂದು ಇದೆ ಎನ್ನುವವರು ಯಾರೂ ಇಲ್ಲ. ಒಂದಿಷ್ಟು ‘ಇದಿರಿನ’ ಮಾತು. ಕರುಣಾಮೈತ್ರಿಯ ಸಹಜ ನಿಸರ್ಗಕ್ಕೆ ಯುದ್ಧ ಸಹ್ಯವಲ್ಲ. ಯುದ್ಧ ಹೊರಗಷ್ಟೇ ಇಲ್ಲ. ಪ್ರೇಮವಿಲ್ಲದ ಒಳಗು ರಣರಂಗ. ದ್ವೇಷಿಸಲೂ ಜಾಗವಿಲ್ಲದಂತೆ ಪ್ರೇಮದಿಂದ ತುಂಬಿಹೋಗಿರುವ ಮನಸ್ಸು ಈ ಕೃತಿಯ ಜೀವದ್ರವ್ಯ. ಯುದ್ಧವನ್ನು ಕುರಿತು ಹೆಚ್ಚು ಮಾತಾಡಲೂ ಬಯಸದು.

ಗೆದ್ದವರುಂಟೇ? ಇದ್ದಲ್ಲೇ

ಇರುವ ಭೂಮಿಯನ್ನು ಇದುವರೆಗೂ...

ಕಚ್ಚಾಡಿ ಸತ್ತವರನ್ನು ಯುಗಯುಗವೂ ಕಂಡಿಹುದು

ಭೂಮಿಯ ಕರುಳಲ್ಲಿ ಗೆರೆ

ಎಳೆಯ ಬಂದವರು, ಹುಗಿದ ಕುಣಿಯಲ್ಲಿ

ಅಟ್ಟೆಗಳನ್ನೊಟ್ಟಿ ನೆಲಪದರದಲ್ಲಿ ಕಣ್ಣುಮುಚ್ಚಿ ಮಲಗಿಹರು.

ಕಾವ್ಯ, ಕವಿಯತ್ರಿ ಮತ್ತು ನುಡಿ- ಮೂರೂ ಕುರುಹಿಲ್ಲದಂತೆ ಬೆರೆತು ಕರಗಿಹೋಗಿರುವ ಕಾವ್ಯದ ಉದಾಹರಣೆಯನ್ನಾಗಿಸಲು ಈ ಕೃತಿಯ ಯಾವೊಂದು ಪುಟದ ಮೇಲೂ ಬೆರಳಿಡಬಹುದು. ಆದರೂ ನನಗೆ ಸಿಕ್ಕ ಕೊನೆಯ ಪ್ರಾಶಸ್ತ್ಯವೆನ್ನುವ ಸಾಲುಗಳು ಕೂಡಾ ಹೀಗೆ ಇವೆ:

ಒಲವೆಂಬುದು ಒಂಬತ್ತು

ಸುತ್ತಿನ ಕೋಟೆ! ಹತ್ತೊಂಬತ್ತು

ದಾರಂದದಲಿ ನೇದ ಮಧುರ ನೋವು! ಹಾಯಬೇಕದನು

ಒಳಸೇರಬೇಕು! ಗಾಳಿ ಮುಟ್ಟನು

ತಟ್ಟಿ ಒಳಮೈ ಮುಟ್ಟಬೇಕು!

ಹೊರಗೆ ಸುಳಿದಾಡುವ ಗಾಳಿಯ ಒಳಮುಟ್ಟನ್ನು ಮುಟ್ಟಿ

ಗಂಧ ಬಟ್ಟಲ ತಾಕಿ

ಉಸಿರುಸಿರ ಒಳಹೊರಗೆ

ಹೆಣೆದು ಜೀವಜೀವದ ಗುಟ್ಟನ್ನೊಡೆಯಬೇಕು (ಒಲವೆಂದರೆ ವಿರಹವೇ ನಲ್ಲೆ)

ಕವನಗಳನ್ನು ಓದಿದ ಮೇಲೆ ಈ ನೆಲದ ತಾಯಿಬೇರನ್ನು ಕಂಡು ಮಾತನಾಡಿಸಿಕೊಂಡು ಬಂದ ಕವಿಯತ್ರಿಯ ಬಗೆಗೆ ಅಭಿಮಾನವೆನ್ನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT