ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೇಸುವೆಂಬ ಚೈತನ್ಯ ಮೊಗೆದ ಎಪ್ಪತ್ತೊಂಬತ್ತು ಬೊಗಸೆಗಳು...

Last Updated 19 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಮನುಕುಲದ ಕತ್ತಲಕೂಪಕ್ಕೆ ಪ್ರೇಮದೀಪವನ್ನೂ ಕ್ಷಮೆಯ ದೂಪವನ್ನೂ ಕೊಟ್ಟವನು ಯೇಸುಕ್ರಿಸ್ತ. ತನ್ನ ಕೊಲ್ಲಲು ನಿಂತವರಲ್ಲಿಯೂ ಭಗವಂತನನ್ನೇ ಕಂಡ ಆ ಮಹಾತ್ಮನ ಬದುಕು ಬೀರಿದ ಬೆಳಕು ಜಗದ ಎಲ್ಲೆಡೆಯೂ ಇಂದಿಗೂ ಬೆಳಗುತ್ತಿದೆ. ಕನ್ನಡದ ಸಂವೇದನೆಯಲ್ಲಿಯೂ ಕ್ರಿಸ್ತನ ಬೆಳಕಿನ ಧಾರೆ ಇದ್ದೇಇದೆ. ಆ ಧಾರೆಗೆ ಎರಡು ಕವಲುಗಳು. ಒಂದು ಧರ್ಮಪ್ರಚಾರಕರಿಂದ ಸೇರಿಕೊಂಡ ಧಾರೆ. ಅದು ಯೇಸು ದೇವಪುತ್ರ. ನಮ್ಮೆಲ್ಲರ ನೋವಿಗೆ ಅವನನ್ನು ಪ್ರೀತಿಸುವುದು, ನಂಬುವುದೇ ಪರಿಹಾರ ಎಂಬ ಭಕ್ತಿರೂಪದ ಧಾರೆ.

ಇನ್ನೊಂದು ಧಾರೆ ಯೇಸುವಿನ ಬದುಕಿನ ದಾರಿಯಿಂದ ಪ್ರಭಾವಿತರಾಗಿ, ಅದರಲ್ಲಿನ ಮೌಲ್ಯಗಳನ್ನು ನುಡಿಯಲ್ಲಿ ಎತ್ತಿಹಿಡಿದ ಸಾಹಿತ್ಯದ ಧಾರೆ. ಯೇಸುವಿನ ಕಡೆಯ ದಿನಗಳನ್ನು ಚಿತ್ರಿಸುವ ಗೋವಿಂದ ಪೈಗಳ ಖಂಡಕಾವ್ಯ ‘ಗೋಲ್ಗೊಥಾ’, ಜಿ.ಪಿ. ರಾಜರತ್ನಂ ಅವರು ಮಕ್ಕಳಿಗಾಗಿ ಬರೆದ ಯೇಸುವಿನ ಜೀವನಚರಿತ್ರೆಯಷ್ಟೇ ಅಲ್ಲದೆ ಹಲವು ಸಾಹಿತ್ಯಕೃತಿಗಳಿಗೆ ಯೇಸು ವಸ್ತುವಾಗಿದ್ದಾನೆ. ಹೀಗಾಗಿ ಕನ್ನಡದ ಮನಸ್ಸುಗಳನ್ನು ಯೇಸು ಧರ್ಮದ ಕಣ್ಣು ಮತ್ತು ಜೀವನಮೌಲ್ಯದ ಹೃದಯ ಎರಡರಿಂದಲೂ ತಾಕಿದ್ದಾನೆ.

‘ಮಾನವಪುತ್ರ’ ಎರಡೂ ಧಾರೆಗಳ ನಡುವೆ ಸೇತುವೆ ಕಟ್ಟುವಂಥ ಕೃತಿ. ಇಲ್ಲಿ ಆರಾಧನೆಯ ಭಾವವೂ ಕಾಣುತ್ತದೆ. ಜೊತೆಗೆ ಪರೀಕ್ಷಕ ದೃಷ್ಟಿಯೂ ಇದೆ. ಹಾಗಾಗಿ ಮೇಲೆ ಉಲ್ಲೇಖಿಸಿದ ಎರಡು ಧಾರೆಗಳ ಕೂಡುಬಿಂದುವಿನಲ್ಲಿ ಈ ಕೃತಿ ರೂಪುತಳೆದಿದೆ ಎನ್ನಬಹುದು.

ಖಲೀಲ್ ಗಿಬ್ರಾನ್‌ನ ‘Jesus the son of Man: His words and His deeds as told and recorded by those who knew Him' ಪುಸ್ತಕವನ್ನು ಟಿ.ಎನ್. ವಾಸುದೇವಮೂರ್ತಿ ಮತ್ತು ಗೂಳಪ್ಪ ವಕ್ಕುಂದ ಕನ್ನಡಕ್ಕೆ ತಂದಿದ್ದಾರೆ. ವಾಸುದೇವಮೂರ್ತಿ ಈ ಪುಸ್ತಕವನ್ನು ಅನುವಾದಿಸಿದ್ದರೆ, ಗೂಳಪ್ಪ ವಕ್ಕುಂದ ಅಗತ್ಯ ಸಂಶೋಧನೆಗಳನ್ನು ಮಾಡಿ ಪುಸ್ತಕದ ವಿಸ್ತಾರವನ್ನು ಹೆಚ್ಚಿಸಿದ್ದಾರೆ.

ಈ ಪುಸ್ತಕದಲ್ಲಿ ಒಟ್ಟು ಎಪ್ಪತ್ತೊಂಬತ್ತು ಅಧ್ಯಾಯಗಳಿವೆ. ಒಂದೊಂದು ಅಧ್ಯಾಯದಲ್ಲಿಯೂ ಒಂದೊಂದು ಪಾತ್ರ ಯೇಸುವಿನ ಒಡನಾಟದ ಬಗ್ಗೆ ಹೇಳುತ್ತ ಹೋಗುತ್ತದೆ. ಬರೀ ಭಕ್ತಿಯಷ್ಟೇ ಅಲ್ಲ, ಯೇಸುವಿನ ವ್ಯಕ್ತಿತ್ವದ ಬೇರೆ ಬೇರೆ ಆಯಾಮಗಳನ್ನು ಆ ಪಾತ್ರಗಳು ನಮಗೆ ಕಾಣಿಸುತ್ತಾ ಹೋಗುತ್ತವೆ. ಯೇಸುವನ್ನು ಪವಾಡಪುರುಷನಾಗಿ, ಪ್ರೇಮಮಯಿಯಾಗಿ, ಕರುಣಾಮಯಿಯಾಗಿ, ಪರದ ದಾರಿ ಕಾಣಿಸುವ ಸ್ನೇಹಿತನಾಗಿ, ದೈವಪುತ್ರನಾಗಿ, ಬಡಗಿಯಾಗಿ, ಮನುಷ್ಯರ ಮನಸ್ಸಿಗೆ ಬಲೆಹಾಕಿ ಹಿಡಿಯುವ ಜಲಗಾರನಾಗಿ, ವೈದ್ಯನಾಗಿ ಕಂಡ ಹಾಗೆಯೇ ಧರ್ಮದ್ರೋಹಿಯಾಗಿ, ಪುತ್ರಶೋಕ ಕೊಟ್ಟುಹೋದ ಕ್ರೂರಿಯಾಗಿ, ಹುಂಬನಾಗಿ ಕಂಡವರ ನುಡಿಗಳೂ ಇಲ್ಲಿವೆ. ಹಾಗಾಗಿ ಇದು ಅಸಾಧಾರಣ ಚೇತನವೊಂದನ್ನು ಬೇರೆ ಬೇರೆ ದಿಕ್ಕುಗಳಲ್ಲಿ ನಿಂತು ನೋಡಿದವರ ಉದ್ಗಾರದಂತೆ ಭಾಸವಾಗುತ್ತದೆ.

ಕೃತಿಯ ಶೀರ್ಷಿಕೆಯ ಜೊತೆಗಿನ ಉಪಶೀರ್ಷಿಕೆ ಗೊಂದಲ ಮೂಡಿಸುತ್ತದೆ. ಅದು ಹೀಗಿದೆ: ‘ಅವನನ್ನು ಕಣ್ಣಾರೆ ಕಂಡವರು ಯಥಾವತ್ತಾಗಿ ದಾಖಲಿಸಿರುವ ಅವನ ನಡೆ–ನುಡಿಗಳು’. ಈ ವಾಕ್ಯ, ಕೃತಿಯಲ್ಲಿರುವ ಎಲ್ಲ ಪಾತ್ರಗಳೂ ನೈಜ ಎಂಬ ಭಾವವನ್ನು ಮೂಡಿಸುತ್ತದೆ. ಇದಕ್ಕೆ ಪೂರಕವಾಗಿ ಮುನ್ನುಡಿಯಲ್ಲಿ ಡಾ. ಬಿ.ಸಿ. ನಾಗೇಂದ್ರಕುಮಾರ್ ಅವರು ‘ಇದನ್ನು ಪ್ರತ್ಯಕ್ಷ ಸಾಕ್ಷಿ ಇತಿಹಾಸವೆಂದು ಕರೆಯಬಹುದೆನಿಸುತ್ತದೆ‘ ಎಂದೂ ಹೇಳಿದ್ದಾರೆ. ಆದರೆ, ಈ ಕೃತಿಯ ಹಲವು ಅಧ್ಯಾಯಗಳನ್ನು ನಿರೂಪಿಸುವ ಪಾತ್ರಗಳು, ಯೇಸುವಿನ ಕಥೆ ಹೇಳಲು ಗಿಬ್ರಾನ್‌ ಮಾಡಿದ ಕಾಲ್ಪನಿಕ ಸೃಷ್ಟಿಗಳು. ಹಲವು ಪಾತ್ರಗಳ ಉಲ್ಲೇಖ ಬೈಬಲ್ಲಿನಲ್ಲಿ ಬರುತ್ತದಾದರೂ, ಆ ಅಧ್ಯಾಯಗಳಲ್ಲಿ ಬರುವ ಮಾತುಗಳ ಉಲ್ಲೇಖವೂ ಬೈಬಲ್ಲಿನಲ್ಲಿ ಸಿಗುತ್ತದಾದರೂ ಕೃತಿಯ ವಿವರಗಳನ್ನು ಚರಿತ್ರೆ ಎಂದು ಪರಿಭಾವಿಸುವುದು ಕಷ್ಟ. ಈ ಕೃತಿಯ ಸ್ವರೂಪದ ಬಗ್ಗೆ ಪ್ರಸ್ತಾವನೆಯಲ್ಲಿ ವಿವರ ಇದೆಯಾದರೂ ಇನ್ನಷ್ಟು ಸ್ಪಷ್ಟವಾದ ಟಿಪ್ಪಣಿಯೊಂದು ಇದ್ದಿದ್ದರೆ ಚೆನ್ನಾಗಿತ್ತು.

ಮುನ್ನುಡಿಯ ಆರಂಭದಲ್ಲಿಯೇ ‘ಧಾರ್ಮಿಕ ಮಹಾನ್ ಚೇತನಗಳ ಇತಿಹಾಸ ಕಥನಗಳು ಸಾಮಾನ್ಯವಾಗಿ ಚರಿತ್ರೆಯ ಪುರಾಣೀಕರಣಗೊಳ್ಳದೆ ಅಂತ್ಯವಾಗುವುದೇ ಇಲ್ಲ’ ಎಂಬ ಮಾತುಗಳು ಬರುತ್ತವೆ. ಅಂಥ ಚೇತನಗಳನ್ನು ಮನುಷ್ಯ ಮಾತ್ರರಾಗಿ ಕಾಣುವುದರಲ್ಲಿಯೇ ಹೆಚ್ಚು ಒಳಿತಿದೆ ಎಂಬರ್ಥದ ಮಾತುಗಳೂ ಬರುತ್ತವೆ. ಆದರೆ ಆ ಮಾತುಗಳು ಈ ಕೃತಿಯ ಕೆಲವು ಅಧ್ಯಾಯಗಳಿಗೇ ಅನ್ವಯಿಸುವುದಿಲ್ಲ. ಯೇಸುವನ್ನು ದೇವಪುತ್ರನಾಗಿ, ಪವಾಡಗಳನ್ನು ಮಾಡಿದವನಾಗಿ ಕಾಣುವ ಈ ಕೃತಿಯ ಅಧ್ಯಾಯಗಳನ್ನು ಈ ಮಾತುಗಳ ಹಿನ್ನೆಲೆಯಲ್ಲಿ ಹೇಗೆ ಅರ್ಥೈಸಿಕೊಳ್ಳುವುದು?

ಪ್ರತೀ ಅಧ್ಯಾಯದ ಪ್ರಾರಂಭದಲ್ಲಿಯೂ ಒಂದು ಟಿಪ್ಪಣಿಯನ್ನು ನೀಡಲಾಗಿದೆ. ಈ ಟಿಪ್ಪಣಿ ಕೆಲವು ಕಡೆಗಳಲ್ಲಿ ಆ ಅಧ್ಯಾಯವನ್ನು ನಿರೂಪಿಸುವ ಪಾತ್ರದ ಪರಿಚಯವಾದರೆ, ಇನ್ನು ಕೆಲವು ಕಡೆ ಸಂದರ್ಭವನ್ನು ಸೂಚಿಸುತ್ತದೆ. ಮತ್ತೆ ಕೆಲವೆಡೆ ಒಂದು ಉಕ್ತಿಯನ್ನಷ್ಟೇ ಉಲ್ಲೇಖಿಸಿ ಸುಮ್ಮನಾಗುತ್ತದೆ.

ಈ ಮಿತಿಗಳ ನಡುವೆಯೂ ಈ ಕೃತಿ ಏಸು ಎಂಬ ಚೈತನ್ಯದ ಬೆಳಕನ್ನು ಹಲವು ಬೊಗಸೆಗಳಲ್ಲಿ ಮೊಗೆಯುವ ಪ್ರಯತ್ನವಾಗಿ ಗಮನಾರ್ಹಪ್ರಯತ್ನ. ಇಂಥ ಪ್ರಯತ್ನಗಳು ಇನ್ನಷ್ಟು ಸ್ಪಷ್ಟತೆಯೊಟ್ಟಿಗೆ ಬಂದರೆ ಕನ್ನಡದ ಸಂವೇದನೆಯ ಕೆಲವಾದರೂ ಕೊರತೆಗಳನ್ನು ನೀಗಿಸಬಲ್ಲವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT