ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮರ್ಶೆ: ಇಂಗ್ಲಿಷ್‌ಗೆ ದಕ್ಕಿದ ಮಧ್ಯಕಾಲೀನ ಕನ್ನಡ ಸಾಹಿತ್ಯ

ಅಕ್ಷರ ಗಾತ್ರ

ಕನ್ನಡವು ಆರಂಭದಿಂದಲೂ ಬೇರೆ ಭಾಷೆಗಳಿಂದ ತನಗೆ ಬೇಕಾದದ್ದನ್ನು ಮುಕ್ತವಾಗಿ ತೆಗೆದುಕೊಂಡು ಬೆಳೆದಿದೆ. ಹೀಗೆ ಕನ್ನಡದ ಒಳಬರುತ್ತಿರುವ ಕೃತಿಗಳಿಗೆ ಹೋಲಿಸಿದರೆ ಕನ್ನಡದಿಂದ ಅನುವಾದಗೊಂಡು ಹೊರಹೋಗುತ್ತಿರುವ ಕೃತಿಗಳ ಸಂಖ್ಯೆ ಇಲ್ಲವೆಂಬಷ್ಟು ಕಡಿಮೆ. ಅದರಲ್ಲೂ ಹಳಗನ್ನಡ ಮತ್ತು ನಡುಗನ್ನಡ ಪಠ್ಯಗಳನ್ನು ಕೇಳುವವರೇ ಇಲ್ಲ. ಮೇಲಿನ ಮಾತಿಗೆ ಅಪವಾದವೆಂಬಂತೆ ಹಿರಿಯ ವಿದ್ವಾಂಸರಾದ ಪ್ರೊ. ಸಿ. ಎನ್‌. ರಾಮಚಂದ್ರನ್‌ ಮತ್ತು ಪ್ರೊ. ವಿವೇಕ ರೈಯವರು 2015ರಲ್ಲಿ ಅಭಿಜಾತ ಕನ್ನಡ ಸಾಹಿತ್ಯದ ಬಗ್ಗೆ ಇಂಗ್ಲಿಷಿನಲ್ಲಿ ಉತ್ತಮವಾದ ಕೈಪಿಡಿಯೊಂದನ್ನು ಸಿದ್ಧಪಡಿಸಿದರು. ಆ ಕೆಲಸದ ಮುಂದುವರಿಕೆಯಾಗಿ ಅವರಿಬ್ಬರೂ ಇದೀಗ ಮಧ್ಯಕಾಲೀನ ಕನ್ನಡ ಸಾಹಿತ್ಯದ ಕುರಿತ ಸಮಗ್ರ ಅನ್ನಬಹುದಾದ ಕೈಪಿಡಿಯೊಂದನ್ನು ಇಂಗ್ಲಿಷ್‌ ಭಾಷೆಯಲ್ಲಿ ಸಿದ್ಧಪಡಿಸಿದ್ದಾರೆ.

ಮಧ್ಯಕಾಲೀನ ಕನ್ನಡ ಸಾಹಿತ್ಯವನ್ನು ಅನುವಾದಕ್ಕೆ ಆಯ್ದುಕೊಳ್ಳುವುದು ಅಷ್ಟು ಸುಲಭವಲ್ಲ. ಹಳಗನ್ನಡದ ವಸ್ತು ಮತ್ತು ಛಂದೋರೂಪಗಳಿಗಾದರೋ ಒಂದು ಶಾಸ್ತ್ರೀಯ ಚೌಕಟ್ಟಿದೆ. ಜೈನ ಕಾವ್ಯಗಳು ತಮಗೆ ತಾವೇ ಒಂದು ಮಾರ್ಗವನ್ನು ನಿರ್ಮಿಸಿಕೊಂಡಿವೆ. ಕಂದ, ಚಂಪೂ ಮತ್ತು ಖ್ಯಾತ ಕರ್ನಾಟಕಗಳನ್ನು ಹೆಚ್ಚಿನ ಕವಿಗಳು ಬಳಸಿಕೊಂಡಿದ್ದಾರೆ. ಆದರೆ ನಡುಗನ್ನಡ ಕಾವ್ಯಗಳು ಹೆಚ್ಚು ಮುಕ್ತ. ಅದರ ಛಂದೋ ವೈವಿಧ್ಯವೇ ಅಚ್ಚರಿ ಹುಟ್ಟಿಸುತ್ತದೆ. ಗಮಕ ಮತ್ತು ಹರಿಕತೆಗಳಿಗೆ ಪೂರಕವಾದ ದೇಸಿ ಛಂದಸ್ಸಿನತ್ತ ನಡುಗನ್ನಡ ಕವಿಗಳು ವಾಲಿಕೊಂಡರು. ಭಕ್ತಿಯು ಎಲ್ಲದರ ಕೇಂದ್ರದಲ್ಲಿದ್ದರೂ ಅದು ಏಕರೂಪದಲ್ಲಿರಲಿಲ್ಲ. ಸುಮಾರು 600 ವರ್ಷಗಳ ಕಾಲ ನಾಡಿನಾದ್ಯಂತ ಹರಡಿದ್ದ ನಡುಗನ್ನಡ ಸಾಹಿತ್ಯದ ಉತ್ತಮಾಂಶಗಳನ್ನು ಗ್ರಹಿಸಲು ವ್ಯಾಪಕ ಓದಿನ ಅಗತ್ಯವಿದೆ. ಜೊತೆಗೆ ಛಂದೋರೂಪಗಳಲ್ಲಿನ ವೈವಿಧ್ಯವನ್ನು ತಿಳಿಯುವ ಶಾಸ್ತ್ರಜ್ಞಾನವೂ ಬೇಕು. ಇವೆಲ್ಲವನ್ನೂ ವಿಸ್ತಾರವಾದ ಚೌಕಟ್ಟಿನಲ್ಲಿ ಗ್ರಹಿಸಿ, ಅಗತ್ಯವಾದದ್ದನ್ನು ಮಾತ್ರ ಆಯ್ದು ಅನುವಾದಿಸಲು ಅನುವಾದಕನಿಗೆ ನಡುಗನ್ನಡ ಸಾಹಿತ್ಯದ ಬಗ್ಗೆ ವಿಶೇಷ ಜ್ಞಾನ ಬೇಕು. ಈ ಕೆಲಸವನ್ನು ರಾಮಚಂದ್ರನ್‌ ಮತ್ತು ವಿವೇಕ ರೈಗಳು ಜೊತೆ ಸೇರಿ ಯಾವುದೇ ಲೋಪವಿಲ್ಲದೆ ನಿರ್ವಹಿಸಿದ್ದು ಮಹತ್ವದ ಘಟನೆಯಾಗಿದೆ.

ಪುಸ್ತಕದಲ್ಲಿ ಗಮನಿಸಬೇಕಾದ ಎರಡು ಮುಖ್ಯ ಅಂಶಗಳಿವೆ. ಮೊದಲನೆಯದು, ಅನುವಾದಕರು ನಡುಗನ್ನಡದ ಬಹುತೇಕ ಎಲ್ಲ ಪ್ರಕಾರಗಳನ್ನು ಎಚ್ಚರದಿಂದ ಆಯ್ದುಕೊಂಡಿರುವುದು. ವಚನ, ರಗಳೆ, ಷಟ್ಪದಿ, ಕೀರ್ತನೆ, ಸಾಂಗತ್ಯ, ತ್ರಿಪದಿ, ತತ್ವಪದ, ಶತಕ, ಮತ್ತು ಯಕ್ಷಗಾನ ಕಾವ್ಯಗಳು ಇಲ್ಲಿ ಸೇರಿಕೊಂಡಿವೆ. ಈ ಪ್ರಕಾರಗಳು ಬಹುಮಟ್ಟಿಗೆ ನಡುಗನ್ನಡ ಕಾವ್ಯದ ಪ್ರಾತಿನಿಧಿಕ ಛಂದೋರೂಪಗಳೂ ಹೌದು, ಕಾವ್ಯವನ್ನು ಜನರ ನಡುವೆ ಕೊಂಡೊಯ್ದ ವಾಹಕಗಳೂ ಹೌದು. ಇವೆಲ್ಲವುಗಳ ಬಗ್ಗೆ ಬಹಳ ಅಚ್ಚುಕಟ್ಟಾದ ಪ್ರವೇಶಿಕೆಯನ್ನು ಬರೆದಿರುವುದರಿಂದ ಕನ್ನಡೇತರರು ಇವುಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಎರಡನೆಯದಾಗಿ, ವಿಸ್ತಾರವಾಗಿರುವ ನಡುಗನ್ನಡ ಸಾಹಿತ್ಯದಲ್ಲಿಯ ಪ್ರಧಾನ ಕವಿಗಳನ್ನೂ, ಅವರ ಕಾವ್ಯಗಳ ಮುಖ್ಯ ಭಾಗಗಳನ್ನೂ ಬಹಳ ಎಚ್ಚರದಿಂದ ಅನುವಾದಕ್ಕೆ ಆಯ್ಕೆ ಮಾಡಿಕೊಂಡಿರುವುದು. ನಡುಗನ್ನಡ ಪಠ್ಯಗಳಿಗೆ ಅನೇಕ ಪಾಠ ಭೇದಗಳಿದ್ದರೂ ಬಹುಮಟ್ಟಿಗೆ ಜನರಿಂದ ಸ್ವೀಕೃತವಾದ ಪಠ್ಯಗಳನ್ನು ಮಾತ್ರ ಆರಿಸಿಕೊಂಡು ವಿವಾದಗಳಿಗೆ ಸಿಕ್ಕಿಕೊಳ್ಳದ ಎಚ್ಚರವನ್ನು ಅನುವಾದಕರು ಕಾಪಾಡಿಕೊಂಡಿದ್ದಾರೆ. ಉದಾಹರಣೆಗೆ, ಉತ್ತಂಗಿ ಚೆನ್ನಪ್ಪನವರ ಸರ್ವಜ್ಞನ ವಚನಗಳು, ಕಲಬುರ್ಗಿಯವರ ಹರಿಹರನ ರಗಳೆಗಳು ಇತ್ಯಾದಿ. ಅನುವಾದವು ಸಾಹಿತ್ಯಕ್ಕೆ ಸೀಮಿತವಾಗಿದ್ದರಿಂದ ಶಾಸ್ತ್ರ ಗ್ರಂಥಗಳನ್ನು ಸಹಜವಾಗಿ ಕೈಬಿಡಲಾಗಿದೆ.

ವಚನಕಾರರಲ್ಲಿ ಮಾದಾರ ಚೆನ್ನಯ್ಯ, ಜೇಡರ ದಾಸಿಮಯ್ಯ, ಅಲ್ಲಮ, ಬಸವಣ್ಣ, ಅಕ್ಕ ಮಹಾದೇವಿ, ಮತ್ತು ಚೆನ್ನಬಸವಣ್ಣನವರ ಒಟ್ಟು ಸುಮಾರು 91 ವಚನಗಳು ಇಲ್ಲಿವೆ. ಈ ವಚನಗಳಲ್ಲಿ ಹಲವನ್ನು ಎ.ಕೆ. ರಾಮಾನುಜನ್‌, ಎಚ್‌.ಎಸ್‌. ಶಿವಪ್ರಕಾಶ್‌, ಓ.ಎಲ್‌. ನಾಗಭೂಷಣಸ್ವಾಮಿ ಮೊದಲಾದವರು ಈಗಾಗಲೇ ಇಂಗ್ಲಿಷಿಗೆ ತಂದಿದ್ದರೂ ಅನುವಾದಕರು ಅವುಗಳನ್ನು ಎತ್ತಿಕೊಳ್ಳದೆ ತಮ್ಮದೇ ರೀತಿಯಲ್ಲಿ ಅನುವಾದ ಮಾಡಿದ್ದಾರೆ. ಈ ಎಲ್ಲ ಅನುವಾದಗಳನ್ನು ತೌಲನಿಕವಾಗಿ ಪರಿಶೀಲಿಸಲು ಇಲ್ಲಿ ಅವಕಾಶ ಇಲ್ಲ. ಅನುವಾದಗಳು ಮೂಲಕ್ಕೆ ನಿಷ್ಠವಾಗಿವೆ ಮತ್ತು ಸುಲಭವಾಗಿ ಓದುವಂತಿವೆ ಎಂದಷ್ಟೇ ಇಲ್ಲಿ ಹೇಳಬಯಸುತ್ತೇನೆ.

ರಗಳೆಗಳಲ್ಲಿ ಕೋಳೂರು ಕೊಡಗೂಸು, ಷಟ್ಪದಿಗಳಲ್ಲಿ ರಾಘವಾಂಕನ ಹರಿಶ್ಚಂದ್ರ ಕಾವ್ಯದ ಹೊಲತಿಯರ ಪ್ರಸಂಗ, ಕುಮಾರವ್ಯಾಸನ ಕರ್ನಾಟ ಭಾರತ ಕಥಾಮಂಜರಿಯ ವಸ್ತ್ರಾಪಹರಣ, ಕರ್ಣಾವಸಾನ ಪ್ರಸಂಗಗಳು, ಲಕ್ಷ್ಮೀಶನ ಜೈಮಿನಿ ಭಾರತದ ಸೀತಾ ಪರಿತ್ಯಾಗ ಪ್ರಸಂಗ, ಪ್ರಕೃತಿಯಿಂದ ಚಂದ್ರಹಾಸನ ರಕ್ಷಣೆ, ಕನಕದಾಸನ ರಾಮಧಾನ್ಯ ಚರಿತೆಯ ಗೌತಮನ ಆತಿಥ್ಯ ಭಾಗ – ಇವಿಷ್ಟು ಇಲ್ಲಿ ಸೇರಿವೆ. ಚಾಮರಸನ ಪ್ರಭುಲಿಂಗ ಲೀಲೆಯ ಬಗ್ಗೆ ಉಪಯುಕ್ತ ಟಿಪ್ಪಣಿಯನ್ನು ಕೊಡಲಾಗಿದೆ. ದಾಸ ಸಾಹಿತ್ಯದಲ್ಲಿ ಶ್ರೀಪಾದರಾಯ, ವ್ಯಾಸರಾಯ, ವಾದಿರಾಜ ತೀರ್ಥ, ಪುರಂದರ ದಾಸ, ಕನಕದಾಸ, ಹೆಳವನಕಟ್ಟೆ ಗಿರಿಯಮ್ಮ ಮತ್ತು ಹರಪನಹಳ್ಳಿ ಭೀಮವ್ವರ ಆಯ್ದ ಕೀರ್ತನೆಗಳನ್ನು ಅನುವಾದಿಸಲಾಗಿದೆ. ತಮಿಳು, ತೆಲುಗು ಮತ್ತು ಸಂಸ್ಕೃತ ಭಾಷೆಗಳಲ್ಲಿಯ ಭಕ್ತಿ ಹಾಡುಗಳ ಬಗ್ಗೆ ನಡೆದ ಅಧ್ಯಯನಗಳನ್ನು ಗಮನಿಸಿದರೆ ಕನ್ನಡ ಬಹಳ ಹಿಂದೆ ಬಿದ್ದಿದೆ. ಈ ಅನುವಾದಗಳು ಅಂತಹ ಅಧ್ಯಯನಗಳಿಗೆ ಪ್ರೇರಣೆ ನೀಡಬಲ್ಲುವು.

ನಂಜುಂಡನ ಕುಮಾರರಾಮ ಚರಿತೆ ಮತ್ತು ರತ್ನಾಕರವರ್ಣಿಯ ಭರತೇಶ ವೈಭವದಲ್ಲಿ ದೇಸಿ ಛಂದೋರೂಪವಾದ ಸಾಂಗತ್ಯವು ಬಳಕೆಯಾದದ್ದು ವಿಶೇಷ ಘಟನೆ. ಅದರಲ್ಲಿಯೂ ನಂಜುಂಡನು ಐತಿಹಾಸಿಕ ಕಾವ್ಯ ಬರೆದು ಪ್ರಸಿದ್ಧನಾದನು. ಈ ಇಬ್ಬರ ಕಾವ್ಯ ಭಾಗಗಳೂ ಇಲ್ಲಿವೆ. ಉಳಿದಂತೆ ಸರ್ವಜ್ಞನ ವಚನಗಳು, ಮುಪ್ಪಿನ ಷಡಕ್ಷರಿ, ರಾಮಾಪುರ ಬಕ್ಕಪ್ಪಯ್ಯ, ಕಡಕೋಳ ಮಡಿವಾಳಪ್ಪ, ಸರ್ಪಭೂಷಣ ಶಿವಯೋಗಿ ಮತ್ತು ಶಿಶುನಾಳ ಶರೀಫರ ತತ್ವಪದಗಳನ್ನೂ ಅನುವಾದಿಸಲಾಗಿದೆ. ಸೋಮೇಶ್ವರ ಶತಕದ ಬಗ್ಗೆಯೂ ಮಾಹಿತಿಯಿದೆ. ಕೊನೆಯಲ್ಲಿ ಪಾರ್ತಿಸುಬ್ಬನ ಪಂಚವಟಿ ಮತ್ತು ಮುದ್ದಣನ ರತ್ನಾವತಿ ಕಲ್ಯಾಣದ ಕೆಲವು ಯಕ್ಷಗಾನ ಪದ್ಯಗಳನ್ನೂ ಅನುವಾದಿಸಲಾಗಿದೆ. ಬಹುಶಃ ಇದೇ ಮೊದಲ ಬಾರಿಗೆ ಬಹಳ ಸಮರ್ಪಕವಾಗಿ ಯಕ್ಷಗಾನ ಪದ್ಯಗಳು ಇಂಗ್ಲಿಷಿಗೆ ಅನುವಾದಗೊಂಡಿವೆ. ಪುಸ್ತಕದ ಕೊನೆಯಲ್ಲಿ ನಡುಗನ್ನಡ ಭಾಷೆ ಮತ್ತು ಗದ್ಯದ ಕುರಿತಾಗಿಯೂ ಪರಿಚಯಾತ್ಮಕ ಮಾತುಗಳಿವೆ. ಕೊನೆಯಲ್ಲಿ ನೀಡಲಾದ ಸಾಂಸ್ಕೃತಿಕ ಪದಕೋಶವು ಬಹಳ ಉಪಯುಕ್ತ.

ಇಂಥ ಪುಸ್ತಕಗಳನ್ನು ಅನುವಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವುದಷ್ಟೇ ಕೆಲಸ ಆಗಬಾರದು. ಅನುವಾದಿತ ಕೃತಿಗಳ ಬಗ್ಗೆ ಅನುವಾದಗೊಂಡ ಭಾಷೆಯಲ್ಲಿ ವಿಚಾರ ಸಂಕಿರಣ, ಉಪನ್ಯಾಸ, ಚರ್ಚೆಗಳು ಏರ್ಪಡಬೇಕು. ಆಗಮಾತ್ರ ಇಂಥ ಪುಸ್ತಕಗಳ ಹಿಂದಿನ ಶ್ರಮಕ್ಕೆ ಗೌರವ ನೀಡಿದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT