ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ನವ್ಯ ಸಾಹಿತ್ಯದ ಮೌಲ್ಯಗಳ ಶೋಧನೆ

Last Updated 21 ಜನವರಿ 2023, 22:00 IST
ಅಕ್ಷರ ಗಾತ್ರ

‘ನವ್ಯ ಸಾಹಿತ್ಯ’ ಎಂಬ ಕೃತಿಯನ್ನು ‘ಕನ್ನಡ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು’ ಎಂಬ ಮಾಲಿಕೆಗಾಗಿ ಎಸ್.ಆರ್. ವಿಜಯಶಂಕರ ಅವರು ಬರೆದಿದ್ದಾರೆ. ಸಾಹಿತ್ಯದಲ್ಲಿ ಜೀವನ ಮೌಲ್ಯಗಳ ಬಗ್ಗೆ ಚರ್ಚಿಸುವುದೆಂದರೆ ಒಂದು ವಾದಗ್ರಸ್ತ ಪ್ರಶ್ನೆಗೆ ಉತ್ತರಿಸಿದಂತಾಗುತ್ತದೆ. ಜೀವನ ಮೌಲ್ಯಗಳು, ನೈತಿಕ ಮೌಲ್ಯಗಳು, ಆದರ್ಶಗಳನ್ನು ಒಳಗೊಳ್ಳುವಂತೆ ಸಾಹಿತ್ಯ ಕೃತಿಯನ್ನು ಚರ್ಚೆ ಮಾಡಬೇಕಾದ ಸಂದರ್ಭದಲ್ಲಿ ಮತ್ತಷ್ಟು ತೊಡಕುಗಳು ಎದುರಾಗುತ್ತವೆ.

ನವ್ಯ ಸಾಹಿತ್ಯದಲ್ಲಿ ಜೀವನ ಮೌಲ್ಯಗಳನ್ನು ವಿವರಿಸುವಾಗ ಈ ಎಚ್ಚರಿಕೆ ಇರಬೇಕಾಗುತ್ತದೆ. ಜೊತೆಗೆ ನವ್ಯ ಸಾಹಿತ್ಯದ ಪ್ರಮುಖ ಲಕ್ಷಣಗಳಲ್ಲಿ ಜೀವನ ಮೌಲ್ಯಗಳು ಯಾವ ಸ್ವರೂಪದಲ್ಲಿರುತ್ತವೆ ಎಂಬ ವಿಚಾರವೂ ಮುಖ್ಯವಾಗುತ್ತದೆ. ಇಲ್ಲದಿದ್ದರೆ ದಾರಿ ತಪ್ಪುವ ಸಂಭವಗಳಿರುತ್ತವೆ. ಅದರಲ್ಲೂ ನವ್ಯ ಕಾವ್ಯ, ಕಾದಂಬರಿ, ನಾಟಕದ ಪ್ರಕಾರಗಳ ಲಕ್ಷಣಗಳಲ್ಲಿ ಕಂಡು ಬರುವ ನವ್ಯತೆಯು ಬೇರೆ ಬೇರೆಯಾಗಿರುವುದನ್ನು ಕಾಣಬಹುದು.

ಅನುಭವವನ್ನು ಕೆದಕಿ ನೋಡುವುದು, ಭಾವನೆ ಮತ್ತು ಬುದ್ಧಿಯ ಪ್ರಾಧಾನ್ಯ, ಅನುಭವದ ಅಭಿವ್ಯಕ್ತಿಯ ಪ್ರಾಮಾಣಿಕತೆ, ಭಾಷೆ, ವೈಯಕ್ತಿಕತೆ, ಅಂತರ್ಮುಖತೆ, ದುರ್ಬಲತೆ, ಸಂದಿಗ್ಧತೆ ಮತ್ತು ದ್ವಂದ್ವ, ಭ್ರಷ್ಟತನದಲ್ಲಿ ತಾನೂ ಭಾಗಿ ಎಂಬ ತಿಳಿವಳಿಕೆ, ಮೌಲ್ಯಗಳ ಪುನರ್ವಿಮರ್ಶೆ, ತಂತ್ರನಾವೀನ್ಯತೆ, ಮನೋವಿಜ್ಞಾನದ ಪ್ರಭಾವ-ಇತ್ಯಾದಿ ಲಕ್ಷಣಗಳನ್ನು ನವ್ಯತೆಯಲ್ಲಿ ಗುರುತಿಸಬಹುದು. ಜೀವನ ಮೌಲ್ಯಗಳನ್ನು ನವ್ಯ ಸಾಹಿತ್ಯದಲ್ಲಿ ಅಧ್ಯಯನ ಮಾಡುವ ಸಂದರ್ಭದಲ್ಲಿ ಯಾವ ಲಕ್ಷಣಗಳನ್ನು ಅನ್ವಯಿಸಿ ಅಧ್ಯಯನ ಮಾಡಬೇಕೆಂಬ ಎಚ್ಚರಿಕೆಯೂ ಇರಬೇಕಾಗುತ್ತದೆ.

ಪ್ರಸ್ತುತ ಕೃತಿಯಲ್ಲಿ ಮುಖ್ಯವಾಗಿ ನಾಲ್ಕು ಭಾಗಗಳಿವೆ. ಪ್ರವೇಶ ಮತ್ತು ಜೀವನ ಮೌಲ್ಯವೆಂದರೇನು? ನವ್ಯ ಸಾಹಿತ್ಯ: ಹುಟ್ಟು ಬೆಳವಣಿಗೆ, ತಾತ್ವಿಕತೆ, ನವ್ಯದ ಮುಖ್ಯ ಧ್ವನಿಗಳು, ಉಪಸಂಹಾರ ಎಂಬ ವಿಭಾಗಗಳಡಿಯಲ್ಲಿ ಜೀವನ ಮೌಲ್ಯಗಳನ್ನು ಶೋಧಿಸಲು ಪ್ರಯತ್ನಿಸಲಾಗಿದೆ. ನವ್ಯ ಸಾಹಿತ್ಯದಲ್ಲಿ ವ್ಯಕ್ತವಾಗಿರುವ ಮತ್ತು ಕಾಣುವ ಕ್ರಮ, ಆಧುನಿಕ ಮಾನವನಿಗೆ ಅನಿವಾರ್ಯವಾದ ದ್ವಂದ್ವ ಸ್ಥಿತಿ, ಸ್ವಂತಿಕೆ ಮತ್ತು ಅಸ್ಮಿತೆ, ವ್ಯಕ್ತಿತ್ವ ರೂಪಿಸಿಕೊಳ್ಳಲು ಬೇಕಾದ ಸಮಾನತೆಯ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ, ಸಾಕ್ಷಿಪ್ರಜ್ಞೆ, ಅಸ್ತಿತ್ವವಾದಿ ನೆಲೆ, ಸಮಾನತೆ, ಶ್ರೇಷ್ಠತೆ, ಬೌದ್ಧಿಕತೆ, ವೈಚಾರಿಕ ನೆಲೆಗಳ ಕಡೆಗಿನ ಚಲನೆ, ತಂತ್ರಜ್ಞಾನ, ಕೌಶಲ್ಯ ಜ್ಞಾನ ಮತ್ತು ವೈಚಾರಿಕತೆಯಿಂದ ಹುಟ್ಟುವ ಜ್ಞಾನಗಳ ನಡುವಿನ ವ್ಯತ್ಯಾಸ, ನೀತಿ ಬೋಧೆ ಮತ್ತು ಜೀವನ ಮೌಲ್ಯಗಳ ನಡುವಿನ ವ್ಯತ್ಯಾಸ ಹಾಗೂ ಶೋಧನಾ ಪ್ರಜ್ಞೆ – ಈ ಅಂಶಗಳ ಹಿನ್ನೆಲೆಯಲ್ಲಿ ಮುಂದಿನ ಭಾಗಗಳಲ್ಲಿ ಜೀವನ ಮೌಲ್ಯಗಳನ್ನು ವಿವರಿಸಲಾಗಿದೆ.

ಜೀವನ ಮೌಲ್ಯವೆಂದರೇನು ಎಂಬುದನ್ನು ವಿವರಿಸಿರುವ ಕ್ರಮವೂ ಕೃತಿಯಲ್ಲಿರುವ ವಿಚಾರಗಳಿಗೆ ಪೂರಕವಾಗಿದೆ. ನವ್ಯ ಸಾಹಿತ್ಯದ ಹುಟ್ಟು, ಬೆಳವಣಿಗೆ, ತಾತ್ವಿಕತೆ ಎಂಬ ಭಾಗದಲ್ಲಿ ನವೋದಯ ಘಟ್ಟದಿಂದ ನವ್ಯತೆಗೆ ಹೊರಳಿದ ಸಂದರ್ಭ ಸನ್ನಿವೇಶವನ್ನು ಹಾಗೂ ಸಾಂಸ್ಕೃತಿಕ ಸಂದರ್ಭವನ್ನು ವಿವರಿಸುವಾಗ ಎರಡೂ ಘಟ್ಟಗಳ ಪ್ರಮುಖ ಲೇಖಕರಾದ ಕುವೆಂಪು, ಗೋಕಾಕ, ಅಡಿಗರ ವಿಚಾರಗಳನ್ನು ಮಂಡಿಸಿ ನವೋದಯದವರಾದ ಕುವೆಂಪು ಅವರ ವಿಚಾರಗಳು, ನವ್ಯದ ಹುಟ್ಟು ತಾತ್ವಿಕತೆಗೆ ಹೇಗೆ ಪೂರಕವಾಗಿದ್ದವು ಎಂಬುದರ ವಿವರಣೆ ನೀಡಿರುವುದು ಸೂಕ್ತವಾಗಿದೆ.

ನವ್ಯದ ಮುಖ್ಯ ಧ್ವನಿಗಳು ಎಂಬ ಭಾಗದಲ್ಲಿ ವಿ.ಕೃ. ಗೋಕಾಕ, ಅಡಿಗ, ಅನಂತಮೂರ್ತಿ, ಕಂಬಾರ, ಕಾರ್ನಾಡ, ಲಂಕೇಶ್, ಚಿತ್ತಾಲ, ತೇಜಸ್ವಿ, ಶಾಂತಿನಾಥ ದೇಸಾಯಿ, ರಾಮಚಂದ್ರ ಶರ್ಮ, ಕೆಎಸ್‌ನ, ರಾಮಾನುಜನ್, ತಿರುಮಲೇಶ್, ಚಂಪಾ ಸೇರಿದಂತೆ 18 ಪ್ರಸಿದ್ಧ ಲೇಖಕರ ಕೃತಿಗಳಲ್ಲಿನ ಜೀವನ ಮೌಲ್ಯಗಳು ಯಾವ ರೀತಿ ಅಭಿವ್ಯಕ್ತಿ ಪಡೆದಿವೆ ಎಂಬುದನ್ನು ವಿವರಿಸಲಾಗಿದೆ. ಹಾಗೆಯೇ ರಾಜಲಕ್ಷ್ಮಿ ಎನ್. ರಾವ್, ವೀಣಾ ಶಾಂತೇಶ್ವರ, ವೈದೇಹಿ, ವಿಜಯಾ ದಬ್ಬೆ ಮುಂತಾದ ಲೇಖಕಿಯರ ಕೃತಿಗಳಲ್ಲಿ ವ್ಯಕ್ತವಾಗಿರುವ ಜೀವನ ಮೌಲ್ಯಗಳನ್ನು ಸಮೀಕ್ಷೆ ಮಾಡಲಾಗಿದೆ. ಪುಟಗಳ ಮಿತಿ ಇದ್ದುದರಿಂದ ಈ ಭಾಗ ಹಕ್ಕಿನೋಟವೆಂದು ಲೇಖಕರೇ ಹೇಳಿರುವುದು ಗಮನಾರ್ಹ.

ಕನ್ನಡದ ಸಾಂಸ್ಕೃತಿಕ ಸಂದರ್ಭದ ಅಗತ್ಯತೆಗೆ ಅನುಗುಣವಾಗಿ ಹುಟ್ಟಿಕೊಂಡ ನವ್ಯ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಹೇಗೆ ವ್ಯಕ್ತವಾಗಿವೆ ಎಂಬುದನ್ನು ಪಾಶ್ಚಾತ್ಯ ಮತ್ತು ಭಾರತೀಯ ಚಿಂತಕರ ಚಿಂತನೆಗಳ ಹಿನ್ನೆಲೆಯಲ್ಲಿ ತೌಲನಿಕವಾಗಿ ವಿವರಿಸಲಾಗಿದೆ. ಸಾಹಿತ್ಯದಲ್ಲಿ ಶ್ರೇಷ್ಠತೆ ಎಂಬ ಪರಿಕಲ್ಪನೆಯ ಬಗ್ಗೆ ನಡೆದ ಚರ್ಚೆಯನ್ನು ಅದರ ಎಲ್ಲಾ ಆಯಾಮಗಳೊಂದಿಗೆ ವಿವರಣೆಗೆ ಒಳಪಡಿಸಿರುವುದು ಈಗಿನ ಓದುಗರಿಗೆ ಉಪಯುಕ್ತ ಮಾಹಿತಿಯಾಗಿದೆ. ಮುಕ್ತಾಯ ಎಂಬ ಕೊನೆಯ ಭಾಗದಲ್ಲಿ ಮತ್ತೆ ಜೀವನ ಮೌಲ್ಯಗಳ ಬಗ್ಗೆ ನೈತಿಕತೆಯ ಬಗ್ಗೆ ಪಾಶ್ಚಾತ್ಯ ಮತ್ತು ಭಾರತೀಯ ವಿದ್ವಾಂಸರಾದ ಎಂ. ಹಿರಿಯಣ್ಣ, ಡಿವಿಜಿ, ರಿಚರ್ಡ್ಸ್, ಲಿವೀಸ್, ಟ್ರಿಲಿಂಗ್, ಏಲಿಯಟ್, ಪಣಿಕ್ಕರ್ ಮುಂತಾದವರ ವಿಚಾರಗಳನ್ನು ಸಂಗ್ರಹಿಸಿ ಕೊಟ್ಟಿರುವುದು ಓದುಗರಿಗೆ ಅನುಕೂಲವಾಗಿದೆ.

ಕೃತಿ: ನವ್ಯ ಸಾಹಿತ್ಯ

ಲೇ: ಎಸ್‌.ಆರ್‌. ವಿಜಯಶಂಕರ್‌

ಪ್ರ: ಕರ್ನಾಟಕ ಸಾಹಿತ್ಯ ಅಕಾಡೆಮಿ

ಸಂ: 080–22211730

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT