ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಮಾತು–ಕೃತಿಗೆ ಜೀವದುಂಬುವ ಮಾತೃಪ್ರಯತ್ನ

Last Updated 6 ನವೆಂಬರ್ 2021, 19:31 IST
ಅಕ್ಷರ ಗಾತ್ರ

ಸಮಾಜಶಾಸ್ತ್ರೀಯ ಅಳತೆಪಟ್ಟಿಗಳ ಮೂಲಕ ಕೃತಿಯನ್ನು ಬಗೆಯುವ ಹಾಗೂ ಕೃತಿಯ ಸಾಧ್ಯತೆಗಳೊಂದಿಗೆ ಲೇಖಕನ ಜಾತಿಯನ್ನು ತಳಕು ಹಾಕುವ ಒಲವುಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಪ್ರಕಟವಾಗಿರುವ ತುಂಬಾಡಿ ರಾಮಯ್ಯನವರ ಕೃತಿ ‘ಓದೋರಂಗ’ – ಪೂರ್ವಗ್ರಹಗಳನ್ನೆಲ್ಲ ಮರೆತು ಓದಿರಿ ಎಂದು ಸಹೃದಯರಿಗೆ ನೀಡುತ್ತಿರುವ ಕರೆಯಂತಿದೆ.

‘ಓದೋರಂಗ’ ಕನ್ನಡಿಗರೆಲ್ಲ ಸಂಭ್ರಮಿಸಬೇಕಾದ ಕೃತಿ. ಕನ್ನಡದ ಚೆಲುವು ಹಾಗೂ ಧ್ವನಿಶಕ್ತಿಯನ್ನು ಓದುಗನ ಅರಿವಿಗೆ ತಂದು ಚಕಿತಗೊಳಿಸುವ ಈ ಕಲಾಕೃತಿ, ಬದುಕಿನ ಸಾರ್ಥಕ ಗಳಿಗೆಗಳು ಯಾವುವು ಎನ್ನುವುದನ್ನೂ ನಮಗೆ ಕಾಣಿಸುತ್ತದೆ. ಭಾಷೆ ಮತ್ತು ಬದುಕು – ಎರಡರ ಘನತೆಯನ್ನೂ ಅನುಭವವೇದ್ಯವಾಗಿಸಲು ಸಾಧ್ಯವಾಗಿರುವುದು ಕೃತಿಯ ಹೆಚ್ಚುಗಾರಿಕೆ.

‘ಮಣೆಗಾರ’, ‘ಮುತ್ತಿನ ಜೋಳ’ ಪುಸ್ತಕಗಳ ಮೂಲಕ ಸಹೃದಯರ ಪ್ರೀತಿ–ಗೌರವಕ್ಕೆ ಪಾತ್ರರಾಗಿರುವ ತುಂಬಾಡಿ ರಾಮಯ್ಯನವರ ಮೂರನೇ ಕೃತಿ ‘ಓದೋರಂಗ’. ಲೇಖಕರು ತಮ್ಮ ಹೊಸ ಕೃತಿಯನ್ನು ಕಾದಂಬರಿ ಎಂದು ಕರೆದಿದ್ದಾರೆ. ಕಾದಂಬರಿಯೊಂದು ಕೊಡುವ ಜೀವನದರ್ಶನ ಮತ್ತು ಲೋಕದರ್ಶನಗಳ ಕಾರಣದಿಂದಾಗಿ ‘ಓದೋರಂಗ’ ಕೃತಿಯನ್ನು ಕಾದಂಬರಿ ಎನ್ನಬಹುದು. ಆದರೆ, ಕಾದಂಬರಿಯ ಹರಹನ್ನು ಮೀರಿ, ಕಥೆ–ಕಾವ್ಯದ ಸ್ವರೂಪವನ್ನೂ ಕೃತಿ ತನ್ನದಾಗಿಸಿಕೊಂಡಿದೆ. ಮನುಷ್ಯಕುಲದ ತವಕತಲ್ಲಣಗಳನ್ನು ಹೇಳಲು ಕಥೆ–ಕಾವ್ಯ–ಕಾದಂಬರಿ–ಪುರಾಣಗಳ ಸಾಧ್ಯತೆಗಳನ್ನೆಲ್ಲ ರಾಮಯ್ಯನವರು ಬಳಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಪರಸ್ಪರ ಸಂಬಂಧವಿಲ್ಲದಂತೆ ಕಾಣಿಸುವ ಹಲವು ಕಥನಗಳು ಇಲ್ಲಿದ್ದು, ಅವುಗಳೆಲ್ಲ ಮತ್ತೆ ಮತ್ತೆ ಸಂಧಿಸುತ್ತಿರುವುದು ಹಾಗೂ ಒತ್ತಿಹೇಳುತ್ತಿರುವುದು ಒಂದೇ ಸಂಗತಿಯನ್ನು – ಒಂದು ಜೀವ ಮತ್ತೊಂದು ಜೀವದೊಂದಿಗೆ ಹೊಂದಿರಬೇಕಾದ ಪ್ರೀತಿ–ಗೌರವವನ್ನು. ‘ಸಂಬಂಜ ಅನ್ನೋದು ದೊಡ್ಡದು ಕನಾ’ ಎನ್ನುವ ದೇವನೂರರ ಕಾಣ್ಕೆಯ ಮಾನವೀಯತೆಯನ್ನೇ ರಾಮಯ್ಯನವರ ಕಥನಗಳೂ ಪಿಸುಗುಡುತ್ತಿವೆ.

ಕೃತಿಯ ಆಶಯ ಮೊದಲ ಅಧ್ಯಾಯ ‘ಓದೋರಂಗ’ದಲ್ಲಿಯೇ ಸ್ಪಷ್ಟವಾಗಿ ಕಾಣಿಸುತ್ತದೆ. ರಂಗ ಎನ್ನುವ ಜಾಣ ಹುಡುಗ ಇಲ್ಲಿದ್ದಾನಾದರೂ, ಆ ಭಾಗದಲ್ಲಿ ಹೆಚ್ಚಿನ ಅವಕಾಶ ದೊರೆತಿರುವುದು ತಾಯಿಕೋಳಿಯ ಬಾಣಂತನಕ್ಕೆ. ರಂಗನ ತಾಯಿ ತನ್ನ ಮಗಳ ಬಾಣಂತನವನ್ನು ಸಂಭ್ರಮಿಸಿದಷ್ಟೇ ಆಸ್ಥೆಯಿಂದ ಕೋಳಿಯ ಬಾಣಂತನ ನಡೆಸುತ್ತಾಳೆ. ಮೊಟ್ಟೆಗಳು ಮರಿಯಾಗುವ ಸಂಭ್ರಮದಲ್ಲಿ ರಂಗನ ಕುಟುಂಬ ಭಾಗಿಯಾಗುವುದರ ಹಿಂದೆ ವ್ಯಾವಹಾರಿಕ ಲೆಕ್ಕಾಚಾರ ಇಲ್ಲದಿಲ್ಲ; ಆದರೆ, ಆ ಗಣಿತವನ್ನು ಮೀರಿ, ಜೀವಜಗತ್ತು ಪರಸ್ಪರ ಸ್ಪಂದಿಸುವ ಬಗೆಯನ್ನು ‘ಓದೋರಂಗ’ ಆರ್ದ್ರವಾಗಿ ಕಟ್ಟಿಕೊಡುತ್ತದೆ.

ಕೋಳಿ, ನಾಯಿಗಳ ಪ್ರಾಣಿಜಗತ್ತಿನೊಂದಿಗೆ ಮನುಷ್ಯ ಜಗತ್ತಿನ ತಾಯ್ತನದ ತವಕತಲ್ಲಣಗಳನ್ನೂ ಕೃತಿ ಕಟ್ಟಿಕೊಡುತ್ತದೆ. ಕೋಳಿಯ ಬಾಣಂತನವನ್ನು ಮಾಡುವ ಹೆಣ್ಣು, ತಾನು ಬಸುರಿಯಾದಾಗ ಹೊಟ್ಟೆಗೆ ಅನ್ನವಿಲ್ಲದೆ ಅನುಭವಿಸುವ ಸಂಕಟ ಹಾಗೂ ಆ ನೋವನ್ನು ಮೀರುವ ದಿಟ್ಟತನ ತಾಯಿಯ ಕರುಣೆ–ಧಾರಣಾಶಕ್ತಿಯನ್ನು ಸೂಚಿಸುವಂತಿದೆ. ತಾಯ್ತನದ ಶಕ್ತಿ ಕೃತಿಯಲ್ಲಿ ಮತ್ತೊಮ್ಮೆ ಪ್ರಜ್ವಲಿಸುವುದು ‘ಒಂದಾನೊಂದು ಕಾಲದಲ್ಲಿ’ ಹಾಗೂ ‘ಕದಿರಿಗನುಣ್ಣಿಮೆ’ ಅಧ್ಯಾಯಗಳಲ್ಲಿನ ಬೆಳ್ಳಿಯ ಕಥೆಯಲ್ಲಿ. ದೊರೆತನದ ಅಧಿಕಾರದಲ್ಲಿ ಇರುವ ವ್ಯಕ್ತಿಯ ಕಣ್ಣು ಬೆಳ್ಳಿಯ ಮೇಲೆ ಬಿದ್ದಾಗ, ಅವನನ್ನು ಎದುರಿಸುವ ದಾರಿಯರಿಯದೆ, ಬೆಳ್ಳಿಯೊಂದಿಗೆ ಜೀವ ಕಳೆದುಕೊಳ್ಳಲು ಅವಳ ಸಹೋದರರು ನಿರ್ಧರಿಸುತ್ತಾರೆ. ಮಕ್ಕಳ ನಿರ್ಧಾರವನ್ನು ಒಪ್ಪದ ತಾಯಿ, ಮಗಳೊಂದಿಗೆ ಅರ್ಧ ರಾತ್ರಿಯಲ್ಲಿ ಊರು ತೊರೆಯುತ್ತಾಳೆ. ಅಸಹಾಯಕ ಹೆಣ್ಣುಮಕ್ಕಳಿಗೆ ಆಸರೆಯಾಗಿ ನಿಲ್ಲುವುದು ಕದಿರಿಗ ಎನ್ನುವ ಮಣೆಗಾರ. ಸುರಿಮಳೆಯ ಕಗ್ಗತ್ತಲ ಇರುಳಿನಲ್ಲಿ ಗುಡಿಸಲಿನ ಬಾಗಿಲಿನಲ್ಲಿ ಕಾಣಿಸುವ ತಾಯಿಮಗಳು – ಶಿವ ಪೂರ್ಣಪ್ರಮಾಣದ ಹೆಣ್ಣಾಗಿ ಗಿರಿಜೆಯೊಂದಿಗೆ ಬಂದಂತೆ ಕದಿರಿಗನಿಗೆ ಕಾಣಿಸುತ್ತಾರೆ.

ಅಪೂರ್ವ ಕಾವ್ಯಕ್ಷಣವೊಂದರ ಸಾಕ್ಷಾತ್ಕಾರದಂತೆ ಕಾಣಿಸುವ ಆ ಸನ್ನಿವೇಶ, ಜಗತ್ತಿನ ಕೇಡುಗಳಿಗೆಲ್ಲ ಹೆಣ್ಣಿನ ಅಂತಃಕರಣದಲ್ಲಿ ಮದ್ದಿದೆ ಎನ್ನುವುದನ್ನು ಹೇಳುವಂತಿದೆ. ತಾಯಿಮಗಳನ್ನು ನದಿ ದಾಟಿಸಲು ಮುಂದಾಗುವ ಕದಿರಿಗ, ಗೋದಾವರಿಯನ್ನು ಅಕ್ಕನೆಂದು ನಂಬಿ ನದಿಗಿಳಿಯುತ್ತಾನೆ. ‘ಅಕ್ಕ, ತಮ್ಮನ ಬಲಿ ಪಡೆದಳೆಂಬ ಅಪ್ರಿಯವಾದ ಸುದ್ದಿ ಯಾರೂ ಕೇಳಬಾರದು. ಅಕ್ಕ ತಮ್ಮನ ಸಂಬಂಧವೆಂದರೆ ಸಾಮಾನ್ಯದ್ದಲ್ಲ, ಅದು ಸ್ಥಿರಸ್ಥಾಯಿಯಾಗಲಿ’ ಎಂದು ನುಡಿಯುವ ಅಶರೀರವಾಣಿಯೂ ಸಂಬಂಧಗಳ ಮೌಲ್ಯವನ್ನು ಸ್ಥಿರೀಕರಿಸುತ್ತದೆ. ಅಶರೀರವಾಣಿಯಷ್ಟೇ ಅಲ್ಲ, ಮಾನವೀಯ ಮೌಲ್ಯಗಳ ಪ್ರತಿಪಾದನೆಗಾಗಿ ಲೇಖಕರು ಜಡ ವಸ್ತುಗಳಿಗೆಲ್ಲ ಮಾತು ಕರುಣಿಸಿದ್ದಾರೆ.

ಸಿರಿಯಜ್ಜಿ ಎನ್ನುವ ಕಥೆಗಾರ್ತಿ ಊರುಕೇರಿಗಳನ್ನು ಹೊಕ್ಕು, ಅಲ್ಲಿ ತಾನು ಓಗೊಟ್ಟ ಸುಖದುಃಖಗಳನ್ನೆಲ್ಲ ಕಥೆಯಾಗಿಸಿ ಮಂಗಳೆ ಎನ್ನುವ ಬಾಲಕಿಗೆ ಹೇಳುವ ತಂತ್ರ ಕೃತಿಯಲ್ಲಿದೆ. ರಾಮಯ್ಯನವರ ಈ ನಿರೂಪಣೆಗಳು ಒಂದಾನೊಂದು ಕಾಲದ ರಮ್ಯ ರೋಚಕ ಪ್ರಸಂಗಗಳಾಗಿಯಷ್ಟೇ ಉಳಿಯದೆ, ವರ್ತಮಾನದ ತವಕತಲ್ಲಣಗಳ ಕಥನಗಳೂ ಆಗಿವೆ. ಅನ್ನಕ್ಕೆ–ಅಕ್ಷರಕ್ಕೆ ಹಾತೊರೆಯುವ ದೀನದಲಿತರು ಇಲ್ಲಿದ್ದಾರೆ. ಕಾರ್ಮಿಕರು, ಬಾಲಕಾರ್ಮಿಕರಿದ್ದಾರೆ. ದೊಣ್ಣೆ ಬೀಸುವ ಸಂಘವಿದೆ. ಬಾವುಟಕ್ಕೆ ಕೈಮುಗಿಸಿ, ‘ನಾವೆಲ್ಲ ಒಂದು’ ಎಂದು ಬಾಯಿಪಾಠ ಮಾಡಿಸಿ, ಹಸಿವಿಗಿಂತ ಧರ್ಮ ಹೆಚ್ಚೆಂಬ ಪಾಠ ಹೇಳುವವರಿದ್ದಾರೆ. ತಾಯಿಯ ಸಾವಿನಲ್ಲಿ ಭಾಗಿಯಾಗಲು ಟಿಕೇಟಿಲ್ಲದೆ ರೈಲಿನಲ್ಲಿ ಪ್ರಯಾಣಿಸುವ ಕೆಂಚಮ್ಮನೆಂಬ ಮಹಿಳೆ ಕ್ಷಣಕ್ಷಣಕ್ಕೂ ಎದುರಿಸುವ ಅವಮಾನ, ಸಂಕಟ, ಹಸಿವುಗಳಿವೆ. ಅವಳ ಪುಟ್ಟ ಮಗಳಿಗೆ ಮಾನವೀಯತೆಯ ರೂಪದಲ್ಲಿ ತಬ್ಬಿಕೊಳ್ಳುವ ಕರುಳಬಳ್ಳಿ ಹಂಗಿಲ್ಲದ ಅಜ್ಜಿಯಿದ್ದಾಳೆ. ಉಸಿರು ನೀಡಬೇಕಾದ ಉದ್ಯಾನವೇ ಉಸಿರುಗಟ್ಟಿ ತನ್ನ ಸಂಕಟವನ್ನು ಹೇಳಿಕೊಳ್ಳುತ್ತ, ಮಹಾನಗರದ ನಾಗರಿಕರ ಬದುಕಿನ ಕಥೆಯನ್ನೂ ಒರೆಯುತ್ತಿದೆ. ಪರಿಸರಪ್ರೀತಿ ಕೃತಿಯುದ್ದಕ್ಕೂ ಜಿನುಗುತ್ತಿದೆ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್‌ ಮಹಾಶಯರು ಯಾವಯಾವುದೋ ರೂಪದಲ್ಲಿ ಎದುರಾಗುತ್ತಾರೆ. ಗ್ರಾಮಭಾರತ, ಮಹಾನಗರಗಳ ಭಾರತವನ್ನೊಳಗೊಂಡ ಆಧುನಿಕ ಪುರಾಣ ‘ಓದೋರಂಗ’ದಲ್ಲಿ ಸೃಷ್ಟಿಯಾಗಿ, ಆ ಪುರಾಣಕಥನದಲ್ಲಿ ಸಮಕಾಲೀನ ರಾಜಕಾಣಿಗಳೂ ಸಾಂಸ್ಕೃತಿಕ ವ್ಯಕ್ತಿತ್ವಗಳೂ ಪಾತ್ರಗಳಾಗಿದ್ದಾರೆ.

ಆದಿಜಾಂಬವ ಸಮುದಾಯದ ಸಾಂಸ್ಕೃತಿಕ ಅನನ್ಯತೆಯನ್ನು ಕಟ್ಟಿಕೊಡುತ್ತಲೇ, ಸಮುದಾಯವೊಂದರ ಸಂಸ್ಕೃತಿಯೂ ಮಾನವೀಯತೆಯೂ ಬೇರೆಬೇರೆಯಲ್ಲ ಎಂದು ಮನಗಾಣಿಸುವುದರಲ್ಲಿ ಈ ಕೃತಿಯ ಸಾರ್ಥಕತೆಯಿದೆ. ಈ ನೆಲದ ಸಂಸ್ಕೃತಿಯ ಆಕರಪಠ್ಯಗಳು ಎಂದು ನಾವು ಈವರೆಗೆ ನಂಬಿಕೊಂಡು ಬಂದ ಕೃತಿಗಳಷ್ಟೇ ಮಹತ್ವದ ಕಾವ್ಯಗಳು ಈ ಮಣ್ಣಿನಲ್ಲೇ ಅಜ್ಞಾತವಾಗಿದ್ದು, ಅವುಗಳನ್ನು ನಾವು ಗಮನಿಸಬೇಕಾದ ಅಗತ್ಯವನ್ನು ಸಹೃದಯರ ಗಮನಕ್ಕೆ ತರುವುದರಲ್ಲಿ ‘ಓದೋರಂಗ’ದ ಯಶಸ್ಸಿದೆ. ಪುರಾಣ ಸ್ಮೃತಿಗಳನ್ನು ಭಾವುಕತೆಗೆ ಸೀಮಿತಗೊಳಿಸದೆ, ಅವುಗಳನ್ನು ಸಮಕಾಲೀನ ಸಂದರ್ಭಕ್ಕೆ ಮುಖಾಮುಖಿಯಾಗಿಸಿ, ಇಂದಿನ ನಮ್ಮ ಬದುಕಿಗೆ ಅಗತ್ಯವಾದುದೇನು ಎನ್ನುವುದರ ಹುಡುಕಾಟದ ರೂಪವಾಗಿ ರಾಮಯ್ಯನವರ ಬರವಣಿಗೆಗೆ ವಿಶೇಷ ಮಹತ್ವವಿದೆ.

ವರ್ತಮಾನದ ಬಿಕ್ಕಟ್ಟುಗಳಿಗೆ ಸೃಜನಶೀಲ ಬರಹಗಾರನೊಬ್ಬನ ಸ್ಪಂದನದ ರೂಪದಲ್ಲೂ ಮುಖ್ಯವೆನ್ನಿಸುವ ‘ಓದೋರಂಗ’ – ಭಾಷೆ ಮತ್ತು ಬರವಣಿಗೆ ಆರ್ದ್ರತೆ ಕಳೆದುಕೊಳ್ಳುತ್ತಿರುವ ದಿನಗಳಲ್ಲಿ, ಮಾತು–ಕೃತಿಗೆ ಜೀವಶಕ್ತಿ ತುಂಬುವ ಮಾತೃಹೃದಯದ ಪ್ರಯತ್ನದಂತಿದೆ.

ಓದೋರಂಗ

ಲೇ: ತುಂಬಾಡಿ ರಾಮಯ್ಯ

ಪ್ರ: ಭೂಮಿ – ದಿ ಸೆಂಟರ್‌ ಫಾರ್‌ ಆರ್ಟ್‌ ಸ್ಟಡೀಸ್‌, ಬೆಂಗಳೂರು – 109.

ಫೋನ್: 98441 57982.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT