ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಒಳನೋಟ: ಜೆಸ್ಯೂಟ್‌ ಪತ್ರಗಳಲ್ಲಿ ಪುಟಿದೆದ್ದ ಮೈಸೂರು ಇತಿಹಾಸ

Last Updated 21 ಆಗಸ್ಟ್ 2022, 0:15 IST
ಅಕ್ಷರ ಗಾತ್ರ

ಹದಿನೇಳನೆಯ ಶತಮಾನದ ಮೈಸೂರಿನ ಇತಿಹಾಸವನ್ನು ಇಲ್ಲಿಯವರೆಗೆ ಹೆಚ್ಚಾಗಿ ಸ್ಥಳೀಯ ಮೂಲಗಳನ್ನು ಮಾತ್ರ ಬಳಸಿಕೊಂಡು ಬರೆಯಲಾಗಿದೆ. ಮತ್ತೊಂದೆಡೆ, ಈ ಮಿಷನರಿ ಪತ್ರಗಳು ಐತಿಹಾಸಿಕ ಘಟನೆಗಳ ಮೇಲೆ ವಿಭಿನ್ನ ನೋಟವನ್ನು ಬೀರುವುದು ಖಚಿತ. ಈ ಪತ್ರಗಳು ಇಂದಿಗೂ ಇತಿಹಾಸಕಾರರಿಗೆ ತಿಳಿದಿಲ್ಲದ ಹಲವಾರು ಮಾಹಿತಿಗಳನ್ನು ಒಳಗೊಂಡಿವೆ.

ಜೆಸ್ಯೂಟ್ ಪತ್ರಗಳು ಮತ್ತು ಮೈಸೂರು ಇತಿಹಾಸ (Jesuit Letters And Mysore History) ಶೀರ್ಷಿಕೆಯ ಈ ಕೃತಿ ಲೇಖಕಮಹಿಮೈ ದಾಸ್‌ ಅವರ ಡಾಕ್ಟರೇಟ್ ಪ್ರಬಂಧವಾಗಿದೆ. 1648ರಲ್ಲಿ ಮೈಸೂರಿನಲ್ಲಿ ತಮ್ಮ ಮಿಷನ್‌ ಅನ್ನು ಪ್ರಾರಂಭಿಸಿದ ಜೆಸ್ಯೂಟ್ ಮಿಷನರಿಗಳು (ಮತಪ್ರಚಾರಕರು), ಸಂಸ್ಥಾನದ ವಿವಿಧ ಭಾಗಗಳಲ್ಲಿ ಕ್ರಿಶ್ಚಿಯನ್ ಸಮುದಾಯಗಳ ನೆಲೆಗಳನ್ನೂ ಸ್ಥಾಪಿಸಿದರು. ಹದಿನೇಳನೆಯ ಶತಮಾನದಲ್ಲಿ ಮೈಸೂರು ಒಡೆಯರ್‌ಗಳ ಪ್ರೋತ್ಸಾಹದ ಮೂಲಕ ಕ್ರಿಶ್ಚಿಯನ್ ಸಮುದಾಯಗಳು ಸ್ಥಿರವಾಗಿ ಬೆಳೆದವು.

ಮಿಷನರಿಗಳು, ವಾರ್ಷಿಕ ಪತ್ರಗಳು ಮತ್ತು ವರದಿಗಳ ಮೂಲಕ ರೋಮ್ ನಗರದಲ್ಲಿರುವ ತಮ್ಮ ಪ್ರಧಾನ ಕಚೇರಿಯೊಂದಿಗೆ ನಿಯಮಿತವಾಗಿ ಪತ್ರ ವ್ಯವಹಾರ ನಡೆಸುತ್ತಿದ್ದರು. ಮಿಷನರಿ ಚಟುವಟಿಕೆಗಳ ಕುರಿತು ಮಾತ್ರವಲ್ಲದೆ ರಾಜಕೀಯ, ಮೈಸೂರು ಆಸ್ಥಾನದ ಕಲಾಪ, ಸೈನ್ಯ, ಯುದ್ಧ, ಭೌಗೋಳಿಕತೆ, ಜನ, ಸಾಮ್ರಾಜ್ಯದ ವಿಸ್ತರಣೆಯಂತಹ ಹಲವಾರು ಐತಿಹಾಸಿಕ ಮಾಹಿತಿಗಳನ್ನೂ ಈ ಪತ್ರಗಳು ಒಳಗೊಂಡಿರುತ್ತಿದ್ದವು. ಪೋರ್ಚುಗೀಸ್, ಲ್ಯಾಟಿನ್ ಮತ್ತು ಇಟಾಲಿಯನ್ ಭಾಷೆಗಳಲ್ಲಿ ಬರೆಯಲಾದ ಮೈಸೂರು ಮಿಷನ್‍ನ ಈ ಪತ್ರಗಳನ್ನು ರೋಮ್‍ನ ಜೆಸ್ಯೂಟ್ ಸಂಗ್ರಹಾಲಯದಲ್ಲಿ ಇರಿಸಲಾಗಿದೆ ಮತ್ತು ಇವುಗಳನ್ನು ಇಲ್ಲಿಯವರೆಗೆ ಯಾರೂ ವಿಮರ್ಶಾತ್ಮಕವಾಗಿ ಅಧ್ಯಯನ ಮಾಡಿಲ್ಲ.

ಲೇಖಕರು ಈ ಪತ್ರಗಳಿಂದ ಐತಿಹಾಸಿಕ ಮಾಹಿತಿಯನ್ನು ಹೊರತೆಗೆದು, ಅದನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವ ಮೂಲಕ, ಈ ಮಿಷನರಿ ಪತ್ರಗಳು ಹದಿನೇಳನೆಯ ಶತಮಾನದ ಮೈಸೂರು ಒಡೆಯರ್‌ಗಳ ಇತಿಹಾಸಕ್ಕೆ ಮೂಲವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತೋರ್ಪಡಿಸಿದ್ದಾರೆ. ಹದಿನೇಳನೆಯ ಶತಮಾನದ ಮೈಸೂರಿನ ಇತಿಹಾಸವನ್ನು ಇಲ್ಲಿಯವರೆಗೆ ಹೆಚ್ಚಾಗಿ ಸ್ಥಳೀಯ ಮೂಲಗಳನ್ನು ಮಾತ್ರ ಬಳಸಿಕೊಂಡು ಬರೆಯಲಾಗಿದೆ. ಮತ್ತೊಂದೆಡೆ, ಈ ಮಿಷನರಿ ಪತ್ರಗಳು ಐತಿಹಾಸಿಕ ಘಟನೆಗಳ ಮೇಲೆ ವಿಭಿನ್ನ ನೋಟವನ್ನು ಬೀರುವುದು ಖಚಿತ. ಈ ಪತ್ರಗಳು ಇಂದಿಗೂ ಇತಿಹಾಸಕಾರರಿಗೆ ತಿಳಿದಿಲ್ಲದ ಹಲವಾರು ಮಾಹಿತಿಗಳನ್ನು ಒಳಗೊಂಡಿವೆ.

ಈ ರೀತಿಯಾಗಿ, ಈ ಪುಸ್ತಕವು ಒಂದೆಡೆ ಮೈಸೂರಿನ ಇತಿಹಾಸದ ಮೆರುಗು ಹೆಚ್ಚಿಸಲು ಪ್ರಯತ್ನಿಸಿದರೆ, ಮತ್ತೊಂದೆಡೆ ಚರ್ಚಿನ ಸಾಹಿತ್ಯವನ್ನು ರಾಜಕೀಯ ಕ್ಷೇತ್ರದಲ್ಲೂ ಹೇಗೆ ಅತ್ಯುತ್ತಮವಾಗಿ ಬಳಸಿಕೊಳ್ಳಬಹುದು ಎಂಬುದನ್ನು ಸಾಬೀತುಪಡಿಸುತ್ತದೆ. ಈ ಪುಸ್ತಕವು ಮೂವರು ರಾಜರ ಆಳ್ವಿಕೆಯನ್ನು ಒಳಗೊಂಡಿದೆ: ನರಸರಾಜ ಒಡೆಯರ್ (1638-1659), ದೊಡ್ಡ ದೇವರಾಜ ಒಡೆಯರ್ (1659-1673) ಮತ್ತು ಚಿಕ್ಕ ದೇವರಾಜ ಒಡೆಯರ್ (1673-1704).

ಡಾ.ಎಂ.ವಿ. ಶ್ರೀನಿವಾಸ್, ತಮ್ಮ ಮುನ್ನುಡಿಯಲ್ಲಿ ಹೀಗೆ ಹೇಳಿದ್ದಾರೆ: ‘ಈ ಕೃತಿಯ ಅತ್ಯಂತ ಆಶಾದಾಯಕ ಮತ್ತು ಲಾಭದಾಯಕ ಭಾಗವೆಂದರೆ ಮೂಲಗಳ ಪರಿಶೀಲನೆಯ ಕಡೆಗಿನ ಲೇಖಕರ ಗಮನ. ಅವರು ಬಾಹ್ಯ ಮತ್ತು ಆಂತರಿಕ ಟೀಕೆಗಳ ಮೂಲಕ ಅವುಗಳನ್ನು ಸೂಕ್ಷ್ಮವಾಗಿ ಮತ್ತು ವಿಮರ್ಶಾತ್ಮಕವಾಗಿ ಪರಿಶೀಲಿಸಿ, ವೈಜ್ಞಾನಿಕವಾಗಿ ಸ್ಥಾಪಿಸಲಾದ ಐತಿಹಾಸಿಕ ಶೋಧನೆಗಳಿಂದ ಅವರು ತಮ್ಮ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ. ಈ ರೀತಿಯಾಗಿ, ಅವರ ಅಧ್ಯಯನವು ಇತಿಹಾಸ ಶಾಸ್ತ್ರಕ್ಕಾಗಿ ಮಿಷನರಿ ಮೂಲಗಳನ್ನು ಬಳಸಿಕೊಳ್ಳುವ ಪ್ರಯೋಜನಗಳನ್ನು ಮತ್ತು ಭಾರತದ ಜನರ ಸಂಸ್ಕೃತಿ ಮತ್ತು ಸಮಾಜದ ಅಧ್ಯಯನಕ್ಕೆ ಅವುಗಳ ಪ್ರಸ್ತುತತೆಯನ್ನು ತೋರಿಸುವಲ್ಲಿ ಯಶಸ್ವಿಯಾಗಿದೆ.’

ಆದರೂ, ಮೈಸೂರಿನ ಕೆಲವು ಇತಿಹಾಸಕಾರರು ಜೆಸ್ಯೂಟ್ ಪತ್ರಗಳ ಬಗ್ಗೆ ಸಂದೇಹ ವ್ಯಕ್ತಪಡಿಸುತ್ತಾರೆ. ಅವರು ಅವುಗಳನ್ನು ಮೇಲ್ನೋಟದಲ್ಲಿ ವೀಕ್ಷಿಸಿ, ಅವುಗಳನ್ನು ಧಾರ್ಮಿಕವಾಗಿ ಪಕ್ಷಪಾತದ ಹೇಳಿಕೆಗಳಾಗಿ ಪರಿಗಣಿಸುತ್ತಾರೆ. ಆದರೆ, ಈ ಪ್ರಸ್ತುತ ಅಧ್ಯಯನವು ಅಂತಹ ಆತಂಕ ಆಧಾರರಹಿತ ಎಂಬುದನ್ನು ಮತ್ತು ಜೆಸ್ಯೂಟ್ ಮೂಲಗಳು ನಂಬಲರ್ಹವಾದ ಹಲವಾರು ಐತಿಹಾಸಿಕ ವಿವರಗಳನ್ನು ಹೊಂದಿವೆ ಎಂಬುದನ್ನು ತೋರಿಸುತ್ತದೆ. ಸ್ಥಳೀಯ ಮೂಲಗಳೊಂದಿಗೆ ಈ ಮೂಲಗಳ ನಿರಂತರ ಹೋಲಿಕೆಯಿಂದ ಈ ಅಧ್ಯಯನದಲ್ಲಿ ಇದನ್ನು ಪ್ರದರ್ಶಿಸಲಾಗಿದೆ.

ಜೆಸ್ಯೂಟ್ ಪತ್ರಗಳಲ್ಲಿರುವ ದೋಷಗಳು, ಅಸ್ಪಷ್ಟತೆಗಳು ಮತ್ತು ಉತ್ಪ್ರೇಕ್ಷೆಗಳನ್ನು ಕಂಡುಹಿಡಿಯುವುದು ಸುಲಭವಾದರೂ, ಅವುಗಳನ್ನು ನಿಷ್ಪ್ರಯೋಜಕ ಧಾರ್ಮಿಕ ಮತಾಂಧತೆ ಎಂದು ತಳ್ಳಿಹಾಕುವುದು ದೊಡ್ಡ ತಪ್ಪು. ಮಿಷನರಿಗಳು ಭಾರತೀಯ ಧಾರ್ಮಿಕ ಸಂಪ್ರದಾಯಗಳಿಗೆ ಪ್ರತಿಕೂಲವಾದ ದೃಷ್ಟಿಕೋನವನ್ನು ಪ್ರದರ್ಶಿಸಿದರೂ, ಅವರ ಸ್ವಂತ ಧರ್ಮದಲ್ಲಿನ ಅವರ ನಂಬಿಕೆ ಮತ್ತು ಮತಾಂತರದ ಬಯಕೆಯು, ಈ ಮಿಷನರಿಗಳಿಗೆ ಸಮಾಜ, ಜನ, ಪದ್ಧತಿ, ಸಂಪ್ರದಾಯ ಮತ್ತು ಗತಕಾಲವನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಲು ಪ್ರೇರಣೆಯಾಯಿತು. ಈ ಮೂಲಗಳು ಸ್ಥಳೀಯ ಮತ್ತು ಇತರ ವಿದೇಶಿ ಮೂಲಗಳೊಂದಿಗೆ ಬಳಸಿದರೆ ಮೈಸೂರಿನ ಇತಿಹಾಸವನ್ನು ಮೆರುಗುಗೊಳಿಸುತ್ತವೆ ಎಂದು ದಾಸ್‌ ನಂಬುತ್ತಾರೆ.

ಜೆಸ್ಯೂಟ್ ಮೂಲಗಳಲ್ಲಿ ಕಂಡುಬರುವ ಐತಿಹಾಸಿಕ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸಲು ಮತ್ತು ಲೇಖಕರು ಸ್ಥಳೀಯ ಮೂಲಗಳನ್ನು ಬಳಸಿದ ವಿಧಾನವನ್ನು ವ್ಯಾಪಕವಾದ ಗ್ರಂಥಋಣ ತೋರಿಸುತ್ತದೆ. ಈ ಅಧ್ಯಯನವು ಜೆಸ್ಯೂಟ್ ಪತ್ರಗಳ ಮತ್ತು ಇತಿಹಾಸಕಾರರಿಗೆ ಲಭ್ಯವಾಗದ ಜೆಸ್ಯೂಟ್ ಮೂಲಗಳತ್ತ ಗಮನ ಸೆಳೆಯುವುದರಲ್ಲಿ ಯಶಸ್ವಿಯಾಗಿದೆ.

ಚರ್ಚ್‌ ಇತಿಹಾಸದ ಉತ್ತಮ ತಿಳಿವಳಿಕೆಗೆ ಮಾತ್ರವಲ್ಲದೆ, ದೇಶದ ನಾಗರಿಕ ಮತ್ತು ಸಾಮಾಜಿಕ ಇತಿಹಾಸದ ವರ್ಧನೆಗೂ ಕೊಡುಗೆ ನೀಡುತ್ತದೆ ಈ ಕೃತಿ. ಎಲ್ಲಕ್ಕಿಂತ ಹೆಚ್ಚಾಗಿ, ಇತರ ಇತಿಹಾಸಕಾರರಿಗೆ ಲೇಖಕರ ಸಲಹೆ ಹೆಚ್ಚು ಮಹತ್ವದ್ದಾಗಿದೆ. ಇತಿಹಾಸವನ್ನು ಬರೆಯಲು ಚರ್ಚಿನ ಮೂಲಗಳನ್ನು ಬಳಸಿಕೊಳ್ಳುವ ಅಗತ್ಯವನ್ನು ಲೇಖಕರು ಸೂಚಿಸಿದಂತೆ, ಅವರು ಈ ಕಾರ್ಯದಲ್ಲಿನ ತೊಂದರೆಗಳನ್ನು ವಿವರಿಸುತ್ತಾರೆ ಮತ್ತು ಲಭ್ಯವಿರುವ ಮೂಲಗಳ ಲಾಭವನ್ನು ಪಡೆಯಲು ವಿದ್ವಾಂಸ ಸಮುದಾಯಗಳಿಗೆ ಮನವಿ ಮಾಡುತ್ತಾರೆ. ಇದನ್ನು ಮಾಡಲು, ಈ ಮೂಲಗಳ ಪ್ರತಿಗಳನ್ನು ಇತಿಹಾಸಕಾರರು ಸುಲಭವಾಗಿ ಉಪಯೋಗಿಸಿಕೊಳ್ಳಲು ಅವುಗಳನ್ನು ಭಾರತಕ್ಕೆ ತರುವ ಅಗತ್ಯವನ್ನು ಅವರು ಮನಗಾಣುತ್ತಾರೆ. ಅವರ ಪ್ರಕಾರ, ಸೂಕ್ಷ್ಮಮಟ್ಟದಲ್ಲಿ ಮೈಸೂರಿನ ಈ ಅಧ್ಯಯನ ಮತ್ತು ಚರ್ಚ್‌ನ ಐತಿಹಾಸಿಕ ಮೂಲಗಳ ಬಗ್ಗೆ ಅವರ ಹೇಳಿಕೆಗಳು ಭಾರತದ ಉಳಿದ ಭಾಗಗಳಿಗೂ ಅನ್ವಯಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT