ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಮೂಲಭಾವ ಹಿಡಿದಿಡುವ ‘ಸುನೀತಮಾಲೆ’

Last Updated 26 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಹಾಗೆ ನೋಡಿದರೆ ದೂರದ ಇಂಗ್ಲೆಂಡಿನ ಮಧ್ಯೆಭಾಗದಲ್ಲಿರುವ ಸ್ಟ್ರಾಟ್‌ಫರ್ಡ್‌ಗೂ, ಭಾರತದ ದಕ್ಷಿಣಾತ್ಯ ರಾಜ್ಯಗಳಲ್ಲೊಂದಾದ ಕರ್ನಾಟಕಕ್ಕೂ ಭೌಗೋಳಿಕವಾಗಿ ಬಹಳ ದೊಡ್ಡ ಅಂತರವಿದೆ. ಆದರೆ, ಸಾಹಿತ್ಯದ ವಿಚಾರಕ್ಕೆ ಬಂದಾಗ, ಅಲ್ಲಿನ ಸಾಹಿತ್ಯದೊಂದಿಗೆ ನಮ್ಮ ಕನ್ನಡ ಸಾಹಿತ್ಯ ನಿರಂತರವಾಗಿ ಅನುಸಂಧಾನ ಮಾಡುತ್ತಲೇ ಬಂದಿದೆ. ದೂರದ ಸ್ಟ್ರಾಟ್‌ಫರ್ಡ್‌ನಲ್ಲಿ ಹುಟ್ಟಿ–ಬೆಳೆದಷೇಕ್ಸ್‌ಪಿಯರನ ನಾಟಕ ಹಾಗೂ ಕಾವ್ಯವನ್ನು ಕನ್ನಡಕ್ಕೆ ತರುವ ಪ್ರಯತ್ನ ಕಾಲದುದ್ದಕ್ಕೂ ನಡೆದುಬಂದಿದೆ.ಷೇಕ್ಸ್‌ಪಿಯರನ ನಾಟಕಗಳಷ್ಟು ಅವನ ಸುನೀತಗಳು ಕನ್ನಡದ ಕನ್ನಡಿಯಲ್ಲಿ ಮೂಡಿಬಂದಿಲ್ಲವಾದರೂ ಆಗೀಗ ಕೆಲವು ಪ್ರಯತ್ನಗಳಂತೂ ನಡೆದಿವೆ. ಡಾ.ಬಸವರಾಜ ನಾಯ್ಕರರ ‘ಷೇಕ್ಸ್‌ಪಿಯರನ ಸುನೀತಮಾಲೆ’ ಅಂಥ ಗಂಭೀರ ಪ್ರಯತ್ನಗಳಲ್ಲೊಂದು.

ಸಾನೆಟ್‌ ಎನ್ನುವ ಇಂಗ್ಲಿಷಿನ ಹದಿನಾಲ್ಕು ಸಾಲುಗಳ ಭಾವಗೀತೆಯ ತೀವ್ರತೆ ಹೊಂದಿರುವ ಕಾವ್ಯರೂಪವನ್ನು ಅಷ್ಟೇ ಸಾಲುಗಳಲ್ಲಿ, ಅಷ್ಟೇ ಪದಗಳಲ್ಲಿ ಕನ್ನಡಕ್ಕೆ ಇಳಿಸುವುದು ಸವಾಲಷ್ಟೇ ಅಲ್ಲ, ಅಸಾಧ್ಯವೂ ಆಗಿದೆ. ಹೀಗಾಗಿ, ಈ ಲಕ್ಷ್ಮಣ ರೇಖೆಯನ್ನು ದಾಟಿ ತಮ್ಮದೇ ಶೈಲಿಯಲ್ಲಿ ಇಂಗ್ಲಿಷಿನ ಸಾನೆಟ್‌ಗಳ ಭಾವಭಂಗವಾಗದಂತೆ ಕನ್ನಡ ಓದುಗರ ಕೈಗಿಟ್ಟಿದ್ದಾರೆ ಡಾ. ಬಸವರಾಜ. ಈ ಸುನೀತಗಳನ್ನು, ಅರ್ಥವತ್ತಾಗಿ, ರಂಜನೀಯವಾಗಿ, ಮೂಲಭಾವಕ್ಕೆ ಕುಂದುಂಟಾಗದಂತೆ ಓದುಗರ ಮುಂದಿಡುವುದು ಅವರ ಮುಖ್ಯ ಉದ್ದೇಶವಾಗಿದೆ ಮತ್ತು ಈ ದಿಸೆಯಲ್ಲಿ ಅವರು ಬಹುಮಟ್ಟಿನ ಯಶಸ್ಸು ಸಾಧಿಸಿದ್ದಾರೆ.

ತೀವ್ರತೆ ಮತ್ತು ಆರ್ದ್ರತೆಷೇಕ್ಸ್‌ಪಿಯರನ ಬರಹಗಳಲ್ಲಿ ಅಯಾಚಿತವಾಗಿ ವ್ಯಕ್ತವಾಗುವ ಭಾವಗಳು. ಸಂಬಂಧಗಳ ಆಳವನ್ನು, ಸಿನಿಕತೆಯನ್ನು, ಅಸಹಾಯಕತೆಯನ್ನು, ಸ್ವಾರ್ಥವನ್ನುಷೇಕ್ಸ್‌ಪಿಯರ್ ತನ್ನ ಸುನೀತಗಳಲ್ಲಿ ದಾಖಲಿಸಿದ ರೀತಿ ಅನನ್ಯ. ಸಾನೆಟ್‌ಗಳಲ್ಲಿಷೇಕ್ಸ್‌ಪಿಯರ್‌ ಬಳಸಿದ ಪ್ರತಿಮೆಗಳನ್ನು, ರೂಪಕಗಳನ್ನು ಕನ್ನಡ ಭಾಷೆಗೆ ಒಗ್ಗಿಸಬೇಕಾದರೆ ಸಾಕಷ್ಟು ಅಧ್ಯಯನಶೀಲತೆ ಬೇಕಾಗುತ್ತದೆ. ದಶಕಗಳ ಕಾಲ ಇಂಗ್ಲಿಷ್‌ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಬಸವರಾಜ ಅವರು‘ಷೇಕ್ಸ್‌ಪಿಯರನ ಸುನೀತಮಾಲೆ’ಯಲ್ಲಿ ಮೂಲ ಭಾವ ಮುಕ್ಕಾಗದಂತೆ ಬಹಳಷ್ಟು ಎಚ್ಚರಿಕೆಯಿಂದ ಈ ಕೆಲಸ ಮಾಡಿದ್ದಾರೆ. ಪ್ರೀತಿ, ಸಾವು, ವೃದ್ಧಾಪ್ಯ, ಪ್ರೀತಿ ಮತ್ತು ಸ್ನೇಹದ ಹೆಸರಿನಲ್ಲಿ ನಡೆಯುವ ದ್ರೋಹದ ಬಗ್ಗೆಷೇಕ್ಸ್‌ಪಿಯರನ ಸುನೀತಗಳು ಬಹಳ ದೃಢವಾಗಿ, ಖಚಿತವಾಗಿ ಮಾತನಾಡುತ್ತವೆ. ಅಂತಹ 154 ಸುನೀತಗಳು ಹಾಗೂ ಅವುಗಳ ವಿವರಣೆ ಇಲ್ಲಿದೆ.ಈ ಪುಸ್ತಕ ಕನ್ನಡ ಓದುಗರ ಅನುಭವಕ್ಕೆ ಹೊಸ ಸೆಲೆ ಒದಗಿಸುತ್ತದೆ ಮತ್ತು ಓದುಗರ ತಿಳಿವಳಿಕೆಯನ್ನು ವಿಸ್ತೃತಗೊಳಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT