ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಜನಸಂಘ ಜನಕನ ಬದುಕಿನ ಚಿತ್ರಣ

Last Updated 26 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಕಾಂಗ್ರೆಸ್‌ ಪಕ್ಷಕ್ಕೆ ಪರ್ಯಾಯವಾಗಿ ‘ಭಾರತೀಯ ಜನಸಂಘ’ (ಈಗಿನ ಭಾರತೀಯ ಜನತಾ ಪಕ್ಷ) ಎಂಬ ಪಕ್ಷವನ್ನು ಅಸ್ತಿತ್ವಕ್ಕೆ ತಂದ ಶಾಮಪ್ರಸಾದ್‌ ಮುಖರ್ಜಿ ಅವರ ವ್ಯಕ್ತಿತ್ವದ ಚಿತ್ರಣವನ್ನು ಕಟೆದಿಡುವ ಕೃತಿ ‘ಶಾಮಪ್ರಸಾದ್‌ ಮುಖರ್ಜಿ–ಸಮಗ್ರ ಜೀವನ ಚರಿತ್ರೆ’.

ಪಶ್ಚಿಮ ಬಂಗಾಳದ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿದ್ದ, ಬಳಿಕ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದ ಲೇಖಕ ತಥಾಗತ ರಾಯ್‌ ಅವರು ಇಂಗ್ಲಿಷ್‌ನಲ್ಲಿ ರಚಿಸಿದ್ದ ಕೃತಿಯನ್ನು,ಬಿ.ಎಸ್‌.ಜಯಪ್ರಕಾಶ ನಾರಾಯಣ ಅವರು ಕನ್ನಡಕ್ಕೆ ತಂದಿದ್ದಾರೆ. ಕಥಾನಾಯಕ ಶಾಮಪ್ರಸಾದ್‌ ಮುಖರ್ಜಿ, ಅವರ ಪೂರ್ವಜರ ಬದುಕು, ಶಾಮಪ್ರಸಾದ್‌ ಅವರ ವಿದ್ಯಾರ್ಥಿ ಜೀವನದಿಂದ ಹಿಡಿದು ಅವರ ನಿಧನದವರೆಗೆ ಮತ್ತು ನಂತರದ ಬೆಳವಣಿಗೆಗಳ ಸಮಗ್ರ ಚಿತ್ರಣವನ್ನೂ ಈ ಕೃತಿ ಕಟ್ಟಿಕೊಟ್ಟಿದೆ.

‘ಈ ಕೃತಿಯ ಮೂಲಕ ತಥಾಗತ ರಾಯ್‌ ಅವರು ಇತಿಹಾಸಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಮುಖರ್ಜಿಯವರ ಜೀವನ–ಸಾಧನೆಗಳ ಕುರಿತು ಅಪಾರ ಮಾಹಿತಿಯನ್ನು ಕಲೆ ಹಾಕಿರುವ ರಾಯ್‌ ಅವರು, ನಿಜವಾದ ಅರ್ಥದಲ್ಲಿ ಒಂದು ಸಮಗ್ರ ಜೀವನಚರಿತ್ರೆಯನ್ನು ಕಟ್ಟಿಕೊಟ್ಟಿದ್ದಾರೆ’ ಎಂದು ಎಲ್‌.ಕೆ.ಅಡ್ವಾಣಿ ಅವರು ಮುನ್ನುಡಿ ಬರೆದಿದ್ದಾರೆ. ಮುಖರ್ಜಿ ಅವರ ರಾಜಕೀಯ ಪ್ರವೇಶ, ಪೂರ್ವ ಬಂಗಾಳದ ನರಮೇಧ ಹಾಗೂ ಈ ಘಟನೆ ಬೆನ್ನಲ್ಲೇ ಮುಖರ್ಜಿ ಅವರ ರಾಜೀನಾಮೆ, ಹೊಸ ಪಕ್ಷದ ಸ್ಥಾಪನೆ, ಜಮ್ಮು–ಕಾಶ್ಮೀರದ ಪೊಲೀಸರಿಂದ ಮುಖರ್ಜಿ ಅವರ ಬಂಧನ, ಕಾರಾಗೃಹದ ದಿನಗಳು ಕುರಿತಂತೆ ಪ್ರತಿಯೊಂದು ವಿವರವೂ ಇಲ್ಲಿದೆ. 1950ರ ಏಪ್ರಿಲ್‌ 19ರಂದು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಲೋಕಸಭೆಯನ್ನು ಉದ್ದೇಶಿಸಿ ಮುಖರ್ಜಿ ಅವರು ಮಾಡಿದ ಭಾಷಣ, ನರಮೇಧದ ಸಂತ್ರಸ್ತರ ಮೇಲಿದ್ದ ಅವರ ಕಾಳಜಿಯನ್ನು ವ್ಯಕ್ತಪಡಿಸಿತ್ತು. ಈ ಭಾಷಣ ಸೇರಿದಂತೆ ಹಲವು ವಿಷಯಗಳನ್ನು ಇಲ್ಲಿ ದಾಖಲೆಯನ್ನು ಉಲ್ಲೇಖಿಸಿ ಬರೆಯಲಾಗಿದೆ. ಮೂಲ ಕೃತಿಯ ಅನುವಾದದೊಂದಿಗೆ ಈಗಿನ ಬೆಳವಣಿಗೆಗಳನ್ನೂ ಅನುವಾದಕರು ಇಲ್ಲಿ ಸೇರಿಸಿದ್ದಾರೆ.

ಮುಖರ್ಜಿ ಅವರ ನಿಧನ ಇನ್ನೂ ಒಗಟಾಗಿಯೇ ಇದೆ. ಕಾರಾಗೃಹದಲ್ಲಿದ್ದ ಸಂದರ್ಭದಲ್ಲಿ ಮುಖರ್ಜಿ ಅವರಿಗೆ ದೊರೆತ ಚಿಕಿತ್ಸೆ, ಔಷಧಿಗಳ ಬಗ್ಗೆ ಇನ್ನೂ ಹಲವು ಸಂದೇಹಗಳಿವೆ. ಮುಖರ್ಜಿ ಅವರ ನಿಧನಕ್ಕೆ ಸಂಬಂಧಿಸಿದಂತೆ ‘ಆರ್ಗನೈಸರ್‌’ ಪತ್ರಿಕೆಯಲ್ಲಿ ಬಂದ ವರದಿ, ಕಾಶ್ಮೀರ ಸರ್ಕಾರದ ವರದಿ, ಮುಖರ್ಜಿ ಅವರಿಗೆ ಚಿಕಿತ್ಸೆ ನೀಡಿದ್ದ ಶುಶ್ರೂಷಕಿಯ ಜೊತೆ ಮುಖರ್ಜಿ ಅವರ ಹಿರಿಯ ಮಗಳು ಸವಿತಾ ಅವರು ನಡೆಸಿದ ಮಾತುಕತೆ, ನಿಧನದ ಕುರಿತು ಸ್ವತಂತ್ರ ತನಿಖೆ ನಡೆಸಬೇಕೆಂದು ಮುಖರ್ಜಿ ಅವರ ತಾಯಿ ಜೋಗೋಮಾಯಾ ಅವರು ಅಂದಿನ ಪ್ರಧಾನಿ ನೆಹರೂ ಅವರಿಗೆ ಬರೆದ ಪತ್ರ, ಇದಕ್ಕೆ ನೆಹರೂ ಅವರ ಉತ್ತರ... ಹೀಗೆ ಸುದೀರ್ಘವಾದ ವಿವರಣೆ, ಮಾಹಿತಿಯನ್ನು ಈ ಕೃತಿ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT