ಭಾನುವಾರ, ಮೇ 9, 2021
19 °C

ಪುಸ್ತಕ ವಿಮರ್ಶೆ: ಅಧ್ಯಾತ್ಮದ ಹಾದಿಯಲ್ಲಿ ‘ಮಾಣಿಕ್ಯ’ದ ಬೆಳಕು

ಹರೀಶ ಹಾಗಲವಾಡಿ Updated:

ಅಕ್ಷರ ಗಾತ್ರ : | |

Prajavani

ಶಾರದಾಪೀಠದ ಮಾಣಿಕ್ಯ

ಲೇಖಕರು: ಸಾ. ಕೃ. ರಾಮಚಂದ್ರರಾವ್‌

ಪ್ರಕಾಶಕರು: ಅಭಿಜ್ಞಾನ

ದೂರವಾಣಿ: 94484 94949

***

ಅಂತರಂಗದ ದರ್ಶನದ ಬೆಳಕಿನಲ್ಲಿ ನಮ್ಮ ಹೊರಗಿನ ಬಾಳನ್ನು ನಡೆಸಬೇಕು ಎಂಬುದು ನಮ್ಮ ಪೂರ್ವಜರ ಆಶಯವಾಗಿದ್ದಿತು. ಈ ದರ್ಶನವನ್ನೇ ಸತ್ಯ, ಪರಮಾತ್ಮ, ದೇವರು ಇತ್ಯಾದಿಯಾಗಿ ಸಂಪ್ರದಾಯವು ವ್ಯವಹರಿಸುತ್ತದೆಯಷ್ಟೆ. ಈ ಸತ್ಯವನ್ನು ಕಂಡುಕೊಳ್ಳುವುದೇ ಪರಮಧರ್ಮ, ಆದ್ಯಕರ್ತವ್ಯ ಎಂದು ಒತ್ತಿ ಹೇಳುತ್ತದೆ ಕೂಡ. ಇಂತಹ ಅಂತರಂಗದ ಸತ್ಯದ ಶೋಧಕ್ಕೆ ತೆತ್ತುಕೊಂಡವರು, ಆ ಹಂಬಲದಲ್ಲಿ ‘ಕೃತಕೃತ್ಯ’ರಾದವರು ಶೃಂಗೇರಿಯ ಆಮ್ನಾಯಪೀಠದ 34ನೆಯ ಅಧಿಪತಿಗಳಾಗಿದ್ದ ಚಂದ್ರಶೇಖರಭಾರತೀ ಮಹಾಸ್ವಾಮಿಗಳು.

ಶ್ರೀಗಳು ಜೀವನ್ಮುಕ್ತರೆಂದು ಹೆಸರಾದವರು, ಮಠಾಧಿಪತಿಗಳಾಗಿದ್ದರೂ ಬಹುತೇಕ ಅವಧೂತ ಪ್ರವೃತ್ತಿಯಲ್ಲೇ ನೆಲೆ ನಿಂತವರು, ಅನೇಕ ಸಾಧಕರ ಬಾಳಿಗೆ ಬೆಳಕಾದ ಮಹಾಗುರುಗಳು. ಅವರ ಜೀವನಚರಿತ್ರೆಯನ್ನು ಸಾ. ಕೃ. ರಾಮಚಂದ್ರರಾಯರು ‘ಶಾರದಾಪೀಠದ ಮಾಣಿಕ್ಯ’ ಕೃತಿಯಲ್ಲಿ ಹೃದಯಂಗಮವಾಗಿ ನಿರೂಪಿಸಿದ್ದಾರೆ. ‘ಅಭಿಜ್ಞಾನ’ ಪ್ರಕಾಶನ ಇದೀಗ ಈ ಕೃತಿಯನ್ನು ಮರುಮುದ್ರಿಸಿದೆ. ಇದು ಜೀವನಚರಿತ್ರೆಯಷ್ಟೇ ಆಗದೆ ಉಪಶಾಂತಿಯ ಸಾಧನವಾದ ‘ಸತ್ಕಾವ್ಯ’ವೂ, ಅನುಸಂಧಾನಕ್ಕೆ ಸೇತುವಾದ ‘ಶಾಸ್ತ್ರಾರ್ಥ’ವೂ ಆಗಿದೆ ಎಂಬುದು ಎಳ್ಳಷ್ಟೂ ಉತ್ಪ್ರೇಕ್ಷೆಯಲ್ಲ.

ಶ್ರೀರಾಮಕೃಷ್ಣ ಪರಮಹಂಸರು ನಿಜವಾಗಿ ದೇವರನ್ನು ಪಡೆಯಬೇಕೆನ್ನುವ ಭಕ್ತನ ಉತ್ಕಟತೆಯು, ನೀರಿನಲ್ಲಿ ಮುಳುಗಿ ಉಸಿರುಗಟ್ಟಿದವನು ಉಸಿರಿಗಾಗಿ ಪರಿತಪಿಸುವಂತೆ ಇರಬೇಕು ಎನ್ನುತ್ತಾರೆ. ಶ್ರೀಗಳ ಜೀವನವನ್ನು ಕಂಡಾಗ ಈ ಅವಸ್ಥೆಯ ತೀವ್ರತೆ ಎಂಥದ್ದು ಎಂಬುದರ ಕಲ್ಪನೆ ಮೂಡುತ್ತದೆ. ಮಠಮಾನ್ಯಗಳೆಂಬವು ನಿಜವಾದ ಸಂನ್ಯಾಸಕ್ಕೆ ಪೂರಕವಾಗಿದ್ದಕ್ಕಿಂತಲೂ ಕಂಟಕವೇ ಆಗಿದ್ದಕ್ಕೆ ಇತಿಹಾಸದುದ್ದಕ್ಕೂ ನಿದರ್ಶನಗಳಿವೆಯಷ್ಟೆ. ಹೀಗೇ ತಮ್ಮ ಗುರುಗಳ ಆಜ್ಞೆಯಂತೆ ಮಠಾಧಿಪತಿಗಳಾದ ಶ್ರೀಗಳಿಗೂ ಈ ಕಂಟಕ ತೊಡರಿಕೊಂಡಿತು, ಹೈರಾಣಾಗಿಸಿತು ಕೂಡ. ಆದರೂ ಸಮಾಜದ ಶಿಕ್ಷಣಕ್ಕೆ, ಸಾಂತ್ವನಕ್ಕೆ ಇಂತಹ ಸಂಸ್ಥೆಗಳು ಬೇಕು ಎಂದು ಸಮಾಜ ಬಯಸುವುದು ತಪ್ಪೇನಲ್ಲ.

ಪ್ರವಾಹದಿಂದ ತಪ್ಪಿಸಿಕೊಳ್ಳಲು ದಡ ಕಣ್ಣಿಗಾದರೂ ಕಾಣಬೇಕಷ್ಟೆ. ಆದರೆ ಇಂತಹ ಸಮಯಯಲ್ಲಿ ಶ್ರೀಗಳು ನಿಜವಾದ ಸಾಧಕನಿಗೆ ಮುಖ್ಯವಾದ ಪ್ರಶ್ನೆಯನ್ನು ಕೇಳಿಕೊಂಡವರು. ಅವರದೇ ಮಾತಿನಲ್ಲಿ ಹೇಳುವುದಾದರೆ ‘ತನಗೇ ಈಜು ಬಾರದವನು ಮುಳುಗುತ್ತಿರುವ ಬೇರೆಯವರನ್ನು ದಡಕಾಣಿಸುವುದು ಹೇಗೆ?’ ಎಂದು. ಅದಕ್ಕೇ ಮಠದ ಬಾಹ್ಯ ಲಕ್ಷಣಕ್ಕೆ ಬೆನ್ನುಮಾಡಿದವರಂತೆ ಅಂತರಂಗಕ್ಕೆ ಮುಳುಗುಹಾಕಿದರು, ತಪಸ್ಸಿನಲ್ಲಿ ನಿಂತರು, ಕೃತಕೃತ್ಯರಾದರು. ಕೃತಕೃತ್ಯನೆಂದರೆ ‘ಮಾಡಬೇಕಾದುದನ್ನೆಲ್ಲ ಮಾಡಿಯಾಯಿತು, ಪಡೆದುಕೊಳ್ಳಬೇಕಾದುದನ್ನೆಲ್ಲ ಪಡೆದುಕೊಂಡಾಯಿತು; ಇನ್ನುಮುಂದೆ ಮಾಡಬೇಕಾದುದೂ ಪಡೆಯಬೇಕಾದುದೂ ಏನೂ ಇರದು ಎಂಬ ಧನ್ಯತೆ...’  ಹೀಗೆ ಧನ್ಯರಾದವರಿಂದ ಮಾತ್ರ ಅಲ್ಲವೇ ಬದುಕು ಧನ್ಯವಾಗುವುದು!

ಅವರ ಸಾಧನಾಜೀವನಕ್ಕೊಂದು ವಿಶೇಷವೊದಗಿದ್ದು ಅವರ ವಿಶಿಷ್ಟ ಚರ್ಯೆಯಿಂದ. ಇದೂ ಅವರ ಆಧ್ಯಾತ್ಮಿಕ ತೀವ್ರತೆಯ ಒಂದು ಲಕ್ಷಣವೇ ಆಗಿದೆ. ಇದನ್ನು ಪರಂಪರೆಯಲ್ಲಿ ಅವಧೂತಾವಸ್ಥೆ ಎನ್ನುತ್ತಾರೆ (ಕೃತಿಯಲ್ಲಿ ಇದರ ಬಗ್ಗೆಯೂ ಮಾಹಿತಿಯಿದೆ). ಶ್ರೀಗಳಿಗೆ ಮಠದ ಚಟುವಟಿಕೆಗಳಲ್ಲಿದ್ದ ಅನಾಸಕ್ತಿ, ಅವರ ಅಂತರ್ಮುಖ ಸ್ಥಿತಿ, ಅದರ ಪರಿಣಾಮವಾಗಿ ಕಾಣಿಸಿಕೊಳ್ಳುತ್ತಿದ್ದ ಬಾಹ್ಯಲಕ್ಷಣಗಳು ಅವರ ಸುತ್ತಲಿದ್ದವರಿಗೆ ಹುಚ್ಚು ಎಂದು ಕಂಡಿದ್ದರಲ್ಲಿ ಆಶ್ಚರ್ಯವೇನಿಲ್ಲ. ಶಾಸ್ತ್ರಗಳೂ ಅವಧೂತನನ್ನು ಮಗುವಿನಂತೆ, ಉನ್ಮತ್ತನಂತೆ ಎಂದೆಲ್ಲಾ ನಿರೂಪಿಸಿವೆ. ಕಡೆಗೂ ಇವರಿಬ್ಬರೇ ತಾನೆ ಬದುಕಿನ ಜಂಜಡದಿಂದ ಮುಕ್ತರು! ಮುಕ್ತಿಗೆ ಲೋಕದ ಭಾಷೆಯಲ್ಲಿ ದಕ್ಕುವ ಉಪಮೆ ಇಷ್ಟೇ ಎನಿಸುತ್ತದೆ.

ಈ ಅಂತರ್ಮುಖ-ಬಹಿರ್ಮುಖ ಅವಸ್ಥೆಗಳಲ್ಲಿ ಹೊಕ್ಕಾಡುತ್ತಿದ್ದ ಶ್ರೀಗಳು ಆಮೇಲೂ ದೊಡ್ಡ ದೊಡ್ಡ ಗ್ರಂಥಗಳನ್ನೇನೂ ಬರೆದವರಲ್ಲ. ಅವರು ‘ಶಾಸ್ತ್ರಗಳಿರುವುದು ಪ್ರವಚನಕ್ಕಲ್ಲ, ಅನುಷ್ಠಾನಕ್ಕೆ’ ಎಂದೇ ಕಂಡವರು. ಮುಂದೆ ವಿವೇಕಚೂಡಾಮಣಿಗೆ ವ್ಯಾಖ್ಯಾನವೊಂದನ್ನು ಬರೆಯಲೆತ್ತಿಕೊಂಡರೂ ಪೂರ್ಣಗೊಳಿಸಲಿಲ್ಲ. ಮುಗಿಯುವ ಮೊದಲೇ ಹೇಳುವುದನ್ನೆಲ್ಲಾ ಹೇಳಿಯಾಗಿದೆ ಎಂದುಬಿಟ್ಟರು. ಆದರೆ ಅವರ ಒಂದೊಂದು ಮಾತೂ ಗ್ರಂಥಸಹಸ್ರದ ತೂಕವುಳ್ಳದ್ದು. ಉದಾಹರಣೆಗೆ ನಿಜವಾದ ಗುರು ಯಾರು ಎಂಬುದನ್ನು ಅವರು ಎಷ್ಟು ಯಥಾರ್ಥವಾಗಿ, ಮಾರ್ಮಿಕವಾಗಿ ನುಡಿಯುತ್ತಾರೆ - ‘ಗುರುವಿನ ಕೆಲಸ ಇನ್ನು ಗುರುವಿನ ಅಗತ್ಯ ಶಿಷ್ಯನಿಗಿಲ್ಲದಿರುವಂತೆ ಮಾಡುವುದು. ತನ್ನನ್ನೇ ಎಂದೆಂದಿಗೂ ಶಿಷ್ಯ ಅವಲಂಬಿಸಿರಲಿ ಎಂದರೆ ಅವನು ದಿಟವಾದ ಗುರುವಲ್ಲ’ ಎಂದು.

ಇನ್ನೊಮ್ಮೆ ಪರಮತಖಂಡನೆಯ ಗ್ರಂಥವೊಂದನ್ನು ಬರೆದುಕೊಂಡು ಬಂದ ವಿದ್ವಾಂಸರೊಬ್ಬರಿಗೆ ‘ಇಂಥ ಗ್ರಂಥವನ್ನು ಬರೆದು ಏನು ಸಾಧಿಸುತ್ತೀರಿ? ಅಹಿಂಸೆಯು ಪರಮಧರ್ಮವೆಂದು ನೀವು ಕೇಳಿಲ್ಲವೇ? ಎರಡನೆಯವರ ಮನಸ್ಸನ್ನು ನೋಯಿಸುವ ಒಂದು ಮಾತನ್ನೂ ಆಡಲು ಪ್ರಾಜ್ಞರು ಹಿಂಜರಿಯುತ್ತಾರೆ. ಹೀಗಿರುವಾಗ ಇಡೀ ಒಂದು ಮತವನ್ನೇ ಖಂಡಿಸುವ ಈ ಗ್ರಂಥದಿಂದ ಎಷ್ಟು ಮಂದಿಯ ಮನಸ್ಸು ನೋಯುತ್ತದೆ ಎಂಬುದನ್ನೂ ಯೋಚಿಸೋಣವಾಗಲಿ’ ಎನ್ನುತ್ತಾರೆ. ಭಾರತೀಯ ಇತಿಹಾಸವೆಂದರೆ ಭಿನ್ನಮತಗಳ ಬಡಿದಾಟವೆಂದೇ ಚಿತ್ರಿಸಿಕೊಂಡಿರುವ ನಮ್ಮ ಕಾಲಕ್ಕೆ ಸಂಪ್ರದಾಯದೊಳಗಿದ್ದ ಇಂತಹ ವಿವೇಕ ಕಾಣಲಾರದಿದ್ದರೆ ಆಶ್ಚರ್ಯವೇನಿಲ್ಲ. ಈ ಸಾಂಪ್ರದಾಯಿಕ ವಿವೇಕಕ್ಕೆ ಇನ್ನೊಂದು ಉತ್ಕೃಷ್ಟ ಉದಾಹರಣೆಯೆಂದರೆ ರಾಮಾನುಜಾಚಾರ್ಯರ ಬದುಕಿನ ಒಂದು ಮುಖ್ಯ ಘಟನೆಯಾದ ಸಾರ್ವಜನಿಕ ಮಂತ್ರೋಪದೇಶವನ್ನು ಶ್ರೀಗಳು ಅರ್ಥೈಸುವ ವಿಧಾನ. ಈ ಭಾಗವನ್ನು ಕೃತಿಯಲ್ಲಿ ಓದಿಯೇ ಸವಿಯಬೇಕಷ್ಟೆ.

ಹಾಗೆಯೇ ಎಥ್ನಿಸಿಟಿ, ರಾಜಕೀಯಗಳಿಂದಾಚೆಗೆ ಯೋಚಿಸಲಾರದ ಇಂದಿನ ಭಾರತಕ್ಕೆ ಅವರು ನಿಜವಾದ ಜ್ಞಾನಿಯಂತೆ ‘ಜಗತ್ತಿನ ಎಲ್ಲರೂ ಹಿಂದೂಗಳೇ ಎಂಬುದು ನಮ್ಮ ಅಭಿಪ್ರಾಯ’ ಎಂದದ್ದು ತುಂಬಾಮನನೀಯವಾದದ್ದು. ಅಷ್ಟಕ್ಕೇ ನಿಲ್ಲದೆ ‘ಅದ್ವೈತಾನುಭವವೆನ್ನುವುದು ಶಂಕರಾಚಾರ್ಯರ ಶಿಷ್ಯರ ಸ್ವತ್ತೋ? ಯಾರಾದರೂ ಯಾವ ಕಾಲದಲ್ಲಿಯಾದರೂ ಎಲ್ಲಿಯಾದರೂ ಅದನ್ನು ಪಡೆದುಕೊಳ್ಳುವುದು ಸಾಧ್ಯ’ ಎನ್ನುತ್ತಾರೆ. ಇಂತಹ ಮಾತುಗಳನ್ನು ಬೇರೆಡೆಯೂ ಕೇಳಿರಬಹುದು, ಓದಿರಬಹುದು. ಆದರೆ ಜ್ಞಾನಿಗಳ ಅನುಭವದಿಂದ ಇವಕ್ಕೆ ಮಂತ್ರತ್ವ ಒದಗುತ್ತದೆ. ಅದಕ್ಕಾಗಿಯೇ ಇದು ಅಧ್ಯಯನ ಮತ್ತು ಪಾರಾಯಣಗಳೆರಡಕ್ಕೂ ಒದಗುವ ಕೃತಿಯಾಗಿದೆ. ಶ್ರೀಗಳು ಶೃಂಗೇರಿಯ ಪರಂಪರೆಯಲ್ಲಿ ಮಾಣಿಕ್ಯವಾದರೆ, ಈ ಕೃತಿಯು ರಾಯರ ಕೃತಿಗಳಲ್ಲಿಯೇ ಮಾಣಿಕ್ಯ ಎನಿಸಿಕೊಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು