ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮರ್ಶೆ: ಶೃಂಗಾರದ ಒಳಬಂಡಾಯ

Last Updated 25 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಶಯ್ಯಾಗೃಹದ ಸುದ್ದಿಗಳು
ಲೇ:
ಶೋಭಾ ನಾಯಕ
ಪ್ರ: ಮನೋರಮಾ ಬುಕ್‌ ಹೌಸ್‌
ಸಂ: 80883 80327
ಬೆಲೆ: 100 ಪುಟಗಳು: 105

**
ಶೋಭಾ ನಾಯಕ ಅವರ ಮೂರನೇ ಕವನ ಸಂಕಲನ ‘ಶಯ್ಯಾಗೃಹದ ಸುದ್ದಿಗಳು’. ಪುಟ ತಿರುವಿದರೆ ಬೆಚ್ಚಿಬೀಳಿಸಿ ಯೋಚನೆಗೆ ಹಚ್ಚುವಂತಹ ಐವತ್ತು ಕವಿತೆಗಳು ಇಲ್ಲಿವೆ. ವಸ್ತು, ಮಂಡನೆ, ಅಲ್ಲಿಲ್ಲಿ ಮಿಂಚುವ ಆಡುಭಾಷೆ, ಹೆಣ್ಣು ಅಭಿವ್ಯಕ್ತಿಯ ಪಾರದರ್ಶಕತೆಗಳ ಕಾರಣದಿಂದ ಈ ಸಂಕಲನ ಮಹಿಳಾ ಕಾವ್ಯಕ್ಕೊಂದು ಗಮನಾರ್ಹ ಸೇರ್ಪಡೆಯಾಗಿದೆ.

ಜೀವಿಗಳಿಗೆ ಕಾಮ ಒಂದು ಗುಂಗು. ಮನುಷ್ಯರಿಗೆ ಶೃಂಗಾರ ಒಂದು ವಿಸ್ಮಯ, ಭಾರತೀಯರಿಗದು ಗುಟ್ಟಿನ ಸುಖ. ಕಾಮದ ಬಗೆಗೆ ಭಾರತೀಯರು ವಿಪುಲವಾಗಿ ಬರೆದಿದ್ದಾರೆ. ಕವಿಗಳೂ, ಸಂತರೂ, ಯತಿವರೇಣ್ಯರೂ ಕುಂಭಕುಚಗಳ ಹೆಣ್ಣಿನ ದೇಹವರ್ಣನೆ ಮಾಡಿದ್ದಾರೆ. ಮಿಥುನ ಶಿಲ್ಪಗಳನ್ನು ಗುಡಿಯಲ್ಲೂ ಕೆತ್ತಿಸಿದ್ದಾರೆ. ಯೋನಿಯನ್ನು ಮನರಂಜನೆಯ ಅಂಗವಾಗಿ ನೋಡಿದಷ್ಟೇ ಫಲವತ್ತತೆಯ ಸಂಕೇತವಾಗಿ ಪೂಜಿಸಿದ್ದಾರೆ.

ಸ್ತ್ರೀಪುರುಷ ಮಿಲನಕ್ಕೆ ಹೊಸ ಅರ್ಥ, ಸಾಧ್ಯತೆಗಳನ್ನು ಅಧ್ಯಾತ್ಮ ಪರಂಪರೆಗಳು ಕೊಟ್ಟಿದ್ದಾವೆ. ಇಲ್ಲೆಲ್ಲ ಗಂಡು ಕಣ್ಣೋಟದಲ್ಲಿ ಹೆಣ್ಣು ದೇಹವನ್ನು, ಕಾಮದನುಭವವನ್ನು ಕಟ್ಟಿಕೊಡಲಾಗಿದೆ. ಹೆಣ್ಣುಗಳಿಗೆ ಅದೊಂದು ಆಡಬಾರದ ಗುಟ್ಟಿನ ಸಂಗತಿಯಾಗಿ ಉಳಿದಿದೆ. ಮಾತನಾಡಿದರೂ ಒಂದೋ ಅನುಭಾವಿ ಹಿನ್ನೆಲೆಯಲ್ಲಿ ಅಥವಾ ಅಭಿಸಾರಿಕಾ ಮನೋವೃತ್ತಿಯಾಗಿ ಅರ್ಥೈಸಲಾಗುತ್ತದೆ.

ಆದರೆ, ಅಕ್ಕಮಹಾದೇವಿಯ ಕನ್ನಡ ನೆಲದ ಹೆಣ್ಣುಗಳು ದೇಹತುಮುಲಗಳನ್ನು ಸಂಕೇತಾರ್ಥದಲ್ಲಿ ಬಿಡಿಸಿಡುತ್ತಲೇ ಇದ್ದಾರೆ. ಎನ್.ವಿ. ಭಾಗ್ಯಲಕ್ಷ್ಮಿ 1970ರ ದಶಕದಲ್ಲಿ ‘ಬೆರಳ ಸಂದಿಯ ಬದುಕು’ ಸಂಕಲನದಲ್ಲಿ ‘ಹುಡುಗಿಯರು ಕಾಮದ
ಬಗ್ಗೆ ಪದ್ಯ ಬರೆದರೆ...’ ಏನೇನು ಆಗುತ್ತದೆಂದು ಬರೆದರು. ಶೃಂಗಾರ, ಪ್ರೇಮ, ವಿರಹಗಳು ಕನ್ನಡ ಮಹಿಳಾ ಕಾವ್ಯದಲ್ಲಿ
ಒಂದೇಸಮ ಕಂಡುಬರುತ್ತಿವೆ. ಈ ನಿಟ್ಟಿನಿಂದ ‘ಶಯ್ಯಾಗೃಹದ ಸುದ್ದಿಗಳು’ ದಿಟ್ಟವಾದೊಂದು ತಿರುವು ತೆಗೆದುಕೊಂಡಿದೆ. ಹೆಣ್ಣು ಬರೆದಿದ್ದನ್ನೆಲ್ಲ ಆತ್ಮಚರಿತ್ರಾತ್ಮಕವಾಗಿ ನೋಡಿ, ಅಲ್ಲಿರುವ ‘ಅವನು’ ಯಾರಿರಬಹುದೆಂದು ಭೂತಕನ್ನಡಿಯಲ್ಲಿ ಹುಡುಕುವ ಲೋಕಕ್ಕೆ ‘ಬಟ್ಟೆಯನ್ನಷ್ಟೇ ತೊಟ್ಟವರ ಮಾನ ಕಾಯಲು ತಾನು ಬೆತ್ತಲನ್ನುಟ್ಟಿ’ರುವುದಾಗಿ ಕವಿತೆ ಹೇಳುತ್ತದೆ.

ಹೆಣ್ಣಿಗೆ ಲಜ್ಜೆಯೇ ಆಭರಣವೆಂದು ಕಾಮದ ನಿಷ್ಕ್ರಿಯ ಪಾಲುದಾರಳನ್ನಾಗಿಸಿರುವ ಸಮಾಜಕ್ಕೆ, ‘ಮುಟ್ಟಿನ ಹೊಲೆಗೆ,
ಕಟ್ಟಿನ ಮೊಲೆಗೆ ಹುಟ್ಟಿದವನೇ, ಮುಟ್ಟಿದರೆ ಮುನಿವ ಎಲೆಯಂತೆ ಮುದುರಿಕೊಳ್ಳುವುದನು ಬಯಸಬೇಡ ನನ್ನಿಂದ’ ಎಂದು ಕವಿತೆಗಳ ನಾಯಕಿ ತನ್ನನ್ನು ಪರಿಚಯಿಸಿಕೊಳ್ಳುತ್ತಾಳೆ. ‘ಬ್ರೈಲ್ ಲಿಪಿಯಲ್ಲಿ ಬರೆದ ಶೃಂಗಾರ ಕಾವ್ಯ ನಾನು. ಆದರೆ ಓದುವ ನೀನು ಕುರುಡನಲ್ಲ’ ಎಂದು ಲಿಂಗಸಂಬಂಧದ ತಕರಾರುಗಳನ್ನು ಎತ್ತುತ್ತಾಳೆ. ‘ಶಯ್ಯಾಗೃಹದಲ್ಲಿ ಹೆಣ್ಣು ನರಳುವಾಗ ಗಂಡಸಿಗೆ ಸಿಗುವ ಸುಖದ ಹೆಸರು ಅಹಂ’ ಎನ್ನುತ್ತ ಪುರುಷ ಲೈಂಗಿಕತೆಯನ್ನು ಕಟುವಿಮರ್ಶೆಗೊಡ್ಡುತ್ತಾಳೆ.

ಬಹುಸಂಗಾತಿ ಸಂಬಂಧವನ್ನು ಗಂಡಸು ಹೆಮ್ಮೆಯಿಂದ ಹೇಳಿಕೊಂಡಂತೆ ಹೆಣ್ಣು ಹೇಳಿಕೊಂಡದ್ದಿಲ್ಲ. ಇಲ್ಲಿನ ಕಾವ್ಯ ನಾಯಕಿಯು ತನ್ನಿನಿಯನಿಗೆ, ‘ನಾನು ಒಬ್ಬಳೇ ಅಲ್ಲ. ಕಣ್ಣಲ್ಲಿ ಕಣ್ಣೂರಿದಾಗ ನನ್ನೆಲ್ಲ ಪೂರ್ವಪ್ರೇಮಿಗಳನ್ನು ಭೇಟಿಯಾಗುವುದು, ಅವರೆಲ್ಲರೊಳಗೆ ನೀನೂ ಒಬ್ಬನಾಗುವುದು ಅನಿವಾರ್ಯ’ವೆಂದು ಬಹುಸಂಗಾತಿಗಳ ನಂಟನ್ನು ತೆರೆದಿಡುತ್ತಾಳೆ. ತನ್ನನ್ನು ಕಾಮುಕಿ ಎನ್ನುವ ಮತ್ತೊಬ್ಬನಿಗೆ, ‘ನಿನ್ನಂತೆ ನನಗೂ ಸೊಬಗು ಬೇಕು ಮಾರಾಯಾ’ ಎಂದುತ್ತರಿಸಿ ದಂಗುಬಡಿಸುತ್ತಾಳೆ. ಕಾಮವಿಲ್ಲದೆ ಬರಿಯ ಪ್ರೇಮಿಗಳಾಗಿರೋಣ ಎನ್ನುವ ಗೆಳೆಯನಿಗೆ, ‘ಅದು ಐಷಾರಾಮಿ ಕಲ್ಪನೆ; ತೊಗಲ ಆಯುಧಗಳೇ ವಾಸ್ತವ’ ಎನ್ನುತ್ತಾಳೆ. ಮುಟ್ಟು ನಿಂತ ನಂತರವೂ ಮುಟ್ಟುವವನು, ಮುಗಿಲಾಗಬಲ್ಲವನು, ಬೆನ್ನುಹಾಕಿ ಮಲಗದವನು ಇರಬಾರದಿತ್ತೇ ಎಂದು ಕನಲುತ್ತಾಳೆ.

ಶೃಂಗಾರ ಸಂಬಂಧದ ಸಾಂಪ್ರದಾಯಿಕ ಮಡಿವಂತಿಕೆಯ ಚೌಕಟ್ಟನ್ನು ಮುರಿಯಲು ಇಲ್ಲಿನ ಕವಿತೆಗಳು ಯತ್ನಿಸಿವೆ. ಮದುವೆ, ಪಾತಿವ್ರತ್ಯ, ಲಜ್ಜೆ ಮೊದಲಾಗಿ ಏಕಪಕ್ಷೀಯವಾಗಿ ಹೆಣ್ಣಿನ ಮೇಲೆ ಹೇರಲ್ಪಟ್ಟ ಮೌಲ್ಯಗಳನ್ನು ಮಿಕ್ಕು ಮೀರಿ ಒಳಬಂಡಾಯ ಹೂಡಿವೆ. ‘ತನ್ನದು ಮಾತ್ರ’ ಆದ ಜೀವವೊಂದನ್ನು ಪಡೆಯಲು ಗಂಡುಹೆಣ್ಣುಗಳು ಯತ್ನಿಸುವ ನಾಗರಿಕ ಸಮಾಜದಲ್ಲಿ ದೈಹಿಕ ಸಂಬಂಧ ಕುರಿತ ಈ ಧೋರಣೆಯನ್ನು ಎಲ್ಲರೂ ಒಪ್ಪಬೇಕೆಂದಿಲ್ಲ. ಒಪ್ಪುವುದೂ ಇಲ್ಲ. ನೀತಿ ಅನೀತಿಗಳ ಆಚೆಗೂ ಪ್ರಶ್ನೆಗಳಿಲ್ಲದೇ ಇಲ್ಲ. ಅದೇನೇ ಇರಲಿ, ಒಳ್ಳೆಯತನವೆಂಬ ರಥವನೇರಿರುವ ಹೆಣ್ಣುಗಳು ಇಂಥ ಕವಿತೆ ಬರೆಯುವುದು, ಪ್ರಕಟಿಸುವುದು ಎದೆಗಾರಿಕೆಯ ಮಾತೇ ಆಗಿದೆ. ಕವಿಗೆ ಸಾಧ್ಯವಾದ ಜಿಗಿತವು ಗಂಡು ಠೇಂಕಾರವನ್ನು ಕ್ಷೀಣಗೊಳಿಸಿ ಸಮಾಜವನ್ನು ಆತ್ಮಾವಲೋಕನಕ್ಕೆ ಹಚ್ಚುವಷ್ಟು ಶಕ್ತವಾಗಿದೆ.

ಆದರೆ ದೇಹವನ್ನು ಚಲಾವಣೆಯಲ್ಲಿಡಲು ತಾರುಣ್ಯ, ಸೌಂದರ್ಯಗಳೇ ನಾಣ್ಯವಾದರೆ ಮನುಷ್ಯರಿಗಿಂತ ವಸ್ತು
ಗಳೇ ಮುಖ್ಯವಾಗುವ ಅಪಾಯವಿದೆ. ಅದರಿಂದ ಪಾರಾಗಬೇಕೆಂದರೆ ದೇಹದ ಮೀರುವಿಕೆಯನ್ನು ಬದುಕಿಗೂ ವಿಸ್ತರಿಸಿಕೊಳ್ಳಬೇಕಾಗುತ್ತದೆ. ಚೆಲುವಿಕೆಯ ವ್ಯಾಖ್ಯಾನಗಳನ್ನೂ ಮನುಷ್ಯಚೇತನ ಮೀರಬೇಕಾಗುತ್ತದೆ. ಯಾಕೆಂದರೆ ಸಮಾಜದ ಚೌಕಟ್ಟುಗಳು ಬರಿಯ ಹೆಣ್ಣನ್ನಷ್ಟೇ ಬಾಧಿಸಿಲ್ಲ.

ಗೌರಿಯರ ದುಃಖ ಒಂದು ತರಹವಾದರೆ ಗಂಡು ದುಃಖದ ಆಳ ಬೇರೆಯದೇ ಆಗಿದೆ. ಗಡಸುದನಿ, ಬಲಿಷ್ಠ ದೇಹ, ಹುಚ್ಚು ಕೆಚ್ಚು ಇಲ್ಲದಿದ್ದಕ್ಕೆ; ಮೀಸೆ ಗಡ್ಡ ಮೂಡದಿದ್ದಕ್ಕೆ; ಬೇಗನೇ ಆರ್ದ್ರಗೊಂಡು ಕಣ್ಣೀರು ಮಿಡಿಯುವುದಕ್ಕೆ; ಅಂಗಾಂಗಗಳ ಉದ್ದಗಲ ಕಡಿಮೆಯಿರುವುದಕ್ಕೆ; ಹೆಣ್ಣಿನ ತನುಮನಧನಗಳ ದಾಹವನ್ನು ತೀರಿಸಲಾಗದ್ದಕ್ಕೆ ಗಂಡಸರೂ ಅವಮಾನ, ಕೀಳರಿಮೆಗಳನ್ನು ಅನುಭವಿಸುತ್ತಿದ್ದಾರೆ. ಹೆಣ್ಣುಗಳು ಹೆಣ್ಣುತನದ ಚೌಕಟ್ಟುಗಳನ್ನು ಕಿತ್ತು ಬಿಸಾಡುವಂತೆಯೇ ತನ್ನ ಜೊತೆಗಾರನ ಗಂಡಸುತನವೆಂಬ ಕಣ್ಕಟ್ಟನ್ನು ಕಿತ್ತು, ಅವರನ್ನೂ ಮುಕ್ತಗೊಳಿಸುವ ಕೆಲಸ ಮಾಡಬೇಕು. ಕರುಣಾ, ಮೈತ್ರಿ ಭಾವವನ್ನು ಬಂಡಾಯ ಗುಣದ ಜೊತೆಗೇ ಮಿಳಿತಗೊಳಿಸಿ ಸ್ತ್ರೀಪುರುಷ ಸಂಬಂಧಗಳು ಕೆಳೆತನದ ಬಯಲನ್ನು ತಲುಪಲು ಸಾಧ್ಯ ಮಾಡಬೇಕು.

ಆಗ ಮೀರುವಿಕೆಯ ಆಯಾಮ ಬೇರೆಯದೇ ಆಗಿರುತ್ತದೆ. ನಾವು ಕನಸುವ ಸಮತೆಯ ಬಯಲಿನೆಡೆಗೆ ಮನುಷ್ಯರನ್ನು ನಡೆಸುತ್ತದೆ. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT