ಶನಿವಾರ, ಮೇ 15, 2021
24 °C

ಪುಸ್ತಕ ವಿಮರ್ಶೆ: ಕನ್ನಡಕ್ಕೆ ಬಂದರು ಸೆಬಾಸ್ಟಿಯನ್ & ಸನ್ಸ್!

ಸುಮಂಗಲಾ Updated:

ಅಕ್ಷರ ಗಾತ್ರ : | |

Prajavani

ಕಳೆದ ವರ್ಷ ಸಾಕಷ್ಟು ಸದ್ದು, ಸುದ್ದಿ ಮಾಡಿದ ಮಹತ್ವದ ಇಂಗ್ಲಿಷ್‌ ಕೃತಿ ಎಂದರೆ ಸಂಗೀತಗಾರ, ಚಿಂತಕ, ಟಿ.ಎಂ.ಕೃಷ್ಣರ ಸೆಬಾಸ್ಟಿಯನ್ & ಸನ್ಸ್. ಕರ್ನಾಟಕ ಸಂಗೀತದಲ್ಲಿ, ಮೃದಂಗ ಎಂದರೆ ವಾದ್ಯಗಳ ರಾಜ, ಲಯದ ನಿರ್ಣಾಯಕ ವಾದ್ಯ. ಚರ್ಮ ಸಂಗ್ರಹಿಸಿ, ಒಣಗಿಸಿ, ಹದಮಾಡುವುದರಿಂದ ಹಿಡಿದು ಮುಚ್ಚಿಗೆ ಮಾಡಿ, ಅಂತಿಮವಾಗಿ ವಾದಕರ ಅಗತ್ಯಕ್ಕೆ ತಕ್ಕಂತೆ ಶ್ರುತಿಗೊಳಿಸಿ, ಮೃದಂಗವನ್ನು ಮಾಡುವುದು ಬಹುಹಂತಗಳ ಸಂಕೀರ್ಣ ಪ್ರಕ್ರಿಯೆ. ‘ಇಷ್ಟಾಗಿಯೂ ನಾವು ಎಂದಿಗೂ ಈ ಅದ್ಭುತ ತಯಾರಕರ ಕುರಿತು, ಅವರ ಹಸ್ತಕೌಶಲದ ಕುರಿತು ಮಾತಾಡುವುದೇ ಇಲ್ಲ’ ಎಂದರಿವಾದ ಕೃಷ್ಣ ಮೂರು ವರ್ಷ ಕ್ಷೇತ್ರ ಅಧ್ಯಯನ, ಸಂಶೋಧನೆ ಮಾಡಿ ಈ ಅಗೋಚರ ಮೃದಂಗ ಶಿಲ್ಪಿಗಳ ಚರಿತೆಯನ್ನು ಅಕ್ಷರಕ್ಕಿಳಿಸಿದ್ದಾರೆ. ಶೀಘ್ರವೇ ಅಹರ್ನಿಶಿ ಪ್ರಕಾಶನದಿಂದ ಕನ್ನಡದಲ್ಲಿ ಪ್ರಕಟಗೊಳ್ಳಲಿರುವ ಕೃತಿಯಿಂದ ಆಯ್ದ ಕಿರುಭಾಗದೊಂದಿಗೆ ಅನುವಾದಿಸುವಾಗಿನ ಲೇಖಕಿಯ ಅನುಸಂಧಾನ, ಪಯಣ ಇಲ್ಲಿದೆ…

2019 ರಲ್ಲಿ ಯು.ಆರ್. ಅನಂತಮೂರ್ತಿ ಸ್ಮರಣೆಯ ಉಪನ್ಯಾಸಮಾಲಿಕೆಯಲ್ಲಿ ಟಿ.ಎಂ. ಕೃಷ್ಣ ಮಾತನಾಡುತ್ತ ಮಡಿ-ಮೈಲಿಗೆ, ಶುದ್ಧ-ಅಶುದ್ಧದ ಕುರಿತು ನಮ್ಮ ಗ್ರಹಿಕೆಗಳನ್ನು ಮೃದಂಗ ಮತ್ತು ಅದನ್ನು ತಯಾರಿಸುವವರ ಉದಾಹರಣೆ ಕೊಟ್ಟು ವಿವರಿಸುತ್ತಿದ್ದರು. ಅವರು ಮಾಡಿದ ಕ್ಷೇತ್ರ ಅಧ್ಯಯನದ ವಿವರ ಹಸಿಮಣ್ಣೊಳಗೆ ಊರಿದ ಬೀಜದಂತೆ ನನ್ನೊಳಗೆ ನೆಟ್ಟಿತು. ಅವರು ಅಕ್ಷರಗಳಲ್ಲಿ ಪಡಿಮೂಡಿಸಿದ ‘ಸೆಬಾಸ್ಟಿಯನ್ & ಸನ್ಸ್’ ಜೊತೆ ನನ್ನ ಪಯಣವೂ ಶುರುವಾಯಿತು.

***

ಕೃಷ್ಣ ಕೃತಿಯಲ್ಲಿ ಬರೆಯುತ್ತಾರೆ: ಮೃದಂಗ ತಯಾರಿಕೆಯಲ್ಲಿ ಪರ‍್ಲಾಂಡುವಿನ ಸಾಟಿಯಿಲ್ಲದ ನೈಪುಣ್ಯದ ಕುರಿತು ಲೆಕ್ಕವಿಲ್ಲದಷ್ಟು ಕಥೆಗಳಿವೆ. ಅವರ ಮಗ ಸೆಲ್ವರಾಜ ಹೇಳಿದ, ಗಾಢವಾದ ಒಳನೋಟ ಹೊಂದಿದ ಒಂದು ಚಿತ್ರಣದೊಂದಿಗೆ ಶುರು ಮಾಡುವೆ: ‘ಆತ ಒಬ್ಬೊಬ್ಬ ಗಾಯಕನನ್ನು ಪ್ರತಿನಿಧಿಸಲು ಒಂದೊಂದು ರಾಗವನ್ನು ತನ್ನೊಳಗೆ ಇಟ್ಟುಕೊಂಡಿದ್ದ.’ ಅಂದರೆ ಪರ‍್ಲಾಂಡು ತಾನು ಸಂಬಂಧವಿಟ್ಟುಕೊಂಡಿದ್ದ ಪ್ರತೀ ಸಂಗೀತಗಾರರ ಗಾಯನ ಅಥವಾ ವಾದನದ ಕೃತಿಯೊಂದನ್ನು ನೆನಪಿಟ್ಟುಕೊಂಡಿದ್ದರು. ಈ ಸಂಗೀತಾತ್ಮಕ ನೆನಪಿನಿಂದ ಅವರು ಕಲಾವಿದರ ಶಾರೀರದ ವ್ಯಾಪ್ತಿ, ಅವರ ಸಂಗೀತದ ವಿಸ್ತಾರ ಮತ್ತು ಶ್ರುತಿ, ಇವುಗಳನ್ನು ಚೆನ್ನಾಗಿ ಗ್ರಹಿಸಿ ಅಂತರ್ಗತಗೊಳಿಸಿಕೊಂಡಿದ್ದರು. ‘ತಂಬೂರಾವನ್ನು ಸುಮ್ಮನೆ ಮೀಟಿದರೂ ಸಾಕು, ಆತನ ಮೃದಂಗವು ಪಕ್ಕಾ ಶ್ರುತಿಯಲ್ಲಿರುತ್ತಿತ್ತು’ ಎಂದರು ಸೆಲ್ವರಾಜ್. ಪರ‍್ಲಾಂಡುವಿಗೆ ಕಿವಿ ಅಷ್ಟು ಸರಿಯಾಗಿ ಕೇಳಿಸುತ್ತಿರಲಿಲ್ಲ ಎನ್ನುವುದರ ಹಿನ್ನೆಲೆಯಲ್ಲಿ ಈ ಅಂಶವು ಇನ್ನಷ್ಟು ಬೆಕ್ಕಸಬೆರಗಾಗುವಂತೆ ಮಾಡುತ್ತದೆ. ತಾನು ಕೇಳದಿದ್ದಾಗ ಕೂಡ ಸಂಗೀತ ಸಂಯೋಜನೆ ಮಾಡಿದ ಬೀಥೋವನ್ ಹಾಗೆ, ಪರ‍್ಲಾಂಡು ತಾನು ಮನಸ್ಸಿನಲ್ಲಿ ಜತನ ಮಾಡಿಟ್ಟುಕೊಂಡಿದ್ದ ಸಂಗೀತಕ್ಕೆ ಲಕ್ಷ್ಯಗೊಡುವ ಮೂಲಕ ಮೃದಂಗಗಳನ್ನು ತಯಾರು ಮಾಡಿದರು.

***

ಮೃದಂಗ ತಯಾರಿಕೆ ಇತಿಹಾಸದಲ್ಲಿ ಅಪ್ರತಿಮ ಪ್ರತಿಭೆಯ ಶ್ರೇಷ್ಠ ತಯಾರಕ ಎಂದರೆ ಎಸ್. ಪರ‍್ಲಾಂಡು. ತಂಜಾವೂರಿನಲ್ಲಿ ಅವರ ಮನೆಯನ್ನೊಮ್ಮೆ ನೋಡಬೇಕು ಎನ್ನುವುದು ನನ್ನ ಆಳದ ಬಯಕೆಯಾಗಿತ್ತು. ಕಚೇರಿಯ ಕೆಲಸಕ್ಕೆಂದು ತಂಜಾವೂರಿಗೆ ಹೋದಾಗ, ನಾನು, ಸಹೋದ್ಯೋಗಿ ಹೇಮಾ, ಕೀತುಕಾರ ಬೀದಿಯನ್ನು ಹುಡುಕಿ ಹೊರಟೆವು. ತಮಿಳು ಮನೆಮಾತಿನ ಹೇಮಾ ಮತ್ತು ಕಾರಿನ ಚಾಲಕನಿಗೆ ಚೆನ್ನೈಯಲ್ಲಿರುವ ಪರ‍್ಲಾಂಡು ಮೊಮ್ಮಗ ಸೂಸೈನಾಥನ್ ಸೂಚನೆಗಳನ್ನು ಕೊಡುತ್ತಲೇ ಇದ್ದರು.

ಸುಮಾರು ಆರು ದಶಕಗಳ ಹಿಂದೆ ಮಣಿ ಅಯ್ಯರ್, ಪಳನಿ ಸುಬ್ರಮಣ್ಯ ಪಿಳ್ಳೈ, ಇನ್ನಿತರ ಘಟಾನುಘಟಿ ವಾದಕರಿಗೆ ಅದ್ಭುತ ನಾದವೈಭವವನ್ನು ಹೊಮ್ಮಿಸಲು ಸಾಧ್ಯವಾಗುವಂತಹ ಮೃದಂಗಗಳನ್ನು ಸೃಜಿಸಿದ ಪರ‍್ಲಾಂಡು ಎಂಬ ಅಪ್ರತಿಮ ಪ್ರತಿಭೆಯ ತಯಾರಕ ನಡೆದಾಡಿದ್ದ ಅದೇ ಕೀತುಕಾರ ಬೀದಿಯಲ್ಲಿ ನಾನು ಹೆಜ್ಜೆಯಿಟ್ಟಿದ್ದೆ. ನನ್ನ ಮಟ್ಟಿಗೆ ಅದೊಂದು ಪದಗಳಲ್ಲಿ ಕಟ್ಟಿಕೊಡಲಾಗದ ಅನುಭವ.

ಕೀತುಕಾರ ಬೀದಿಯು ಥಟ್ಟನೆ ಎಡಕ್ಕೆ ತಿರುಗುವಲ್ಲಿ ಪರ‍್ಲಾಂಡುವಿನ ಮನೆ ಇದೆ. ಕೃಷ್ಣ ಕೃತಿಯಲ್ಲಿ ವಿವರಿಸಿದ್ದಾರೆ: ‘ದೊಡ್ಡ ಬೇವಿನ ಮರದ ನೆರಳಿನಲ್ಲಿದ್ದ ಒಂದೇ ಮಹಡಿಯ ಮನೆಯ ಬಾಗಿಲುಗಳಿಗೆ ನೀಲಿ ಬಣ್ಣ ಬಳಿದಿತ್ತು, ಒಂದು ಚಿಕ್ಕ ಕಿಟಕಿ ಬೀದಿಗೆ ಮುಖಮಾಡಿತ್ತು, ಮೇಲಿನ ತಾರಸಿಗೆ ಹುಲ್ಲಿನ ಮಾಡು ಇತ್ತು. ಅಲ್ಲಿ ಇದೊಂದೇ ಮನೆ ಇನ್ನೂ ಹಳೆಯ ಕಾಲದ ಘಮವನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡು ನಿಂತಿತ್ತು. ಮೃದಂಗದ ಕೆಲಸವನ್ನು ಪ್ರಾಯಶಃ ತಾರಸಿಯ ಮೇಲೆ ಮಾಡುತ್ತಿದ್ದಿರಬೇಕು. ಪರ‍್ಲಾಂಡು ಹುಟ್ಟಿದ ಸಮಯದಲ್ಲಿ ಈ ಬೇವಿನ ಮರವೂ ಸಸಿಯಾಗಿದ್ದಿರಬಹುದು. ಇಂದು ಅದೇ ಮರ ಅದ್ಭುತ ಮೃದಂಗ ತಯಾರಕನ ಮನೆಯನ್ನು ಎತ್ತರದಿಂದ ದಿಟ್ಟಿಸಿ ನೋಡುತ್ತಿದೆ.’ 


ಎ. ಪ್ರಕಾಶ್‌... ವಾದ್ಯ ಪರಂಪರೆಯ ಈಗಿನ ಕೊಂಡಿ

ರಸ್ತೆಯ ಬದಿಯಲ್ಲಿ ಪರ‍್ಲಾಂಡು ಅವರ ಮಗಳು ಜೆಸಿಂತಮೇರಿ, ಅಳಿಯ ಗೇಬ್ರಿಯಲ್ ನಿಂತಿದ್ದರು. ಇವರೇ ಸೂಸೈನಾಥನ್ ಅಪ್ಪ, ಅಮ್ಮ. ಅವರೊಂದಿಗೆ ಮಾತನಾಡಿ, ನಂತರ ಅಲ್ಲಿಂದ ತುಸು ದೂರದಲ್ಲಿ ಮತ್ತೊಂದು ಬೀದಿಯಲ್ಲಿರುವ ಎಸ್. ಆಂಟನಿಯವರ ಮಗಳು ಸೆಲೆತ್ ಮೇರಿ ಮತ್ತು ಪ್ರಕಾಶ್ ಅವರನ್ನು ನೋಡಲು ಹೋದೆವು. ನಿಜವೆಂದರೆ ಮೊತ್ತಮೊದಲು ನಾನು ಮೃದಂಗವನ್ನು ಮುಟ್ಟಿ, ತಟ್ಟಿ ನೋಡಿದ್ದು ಅಲ್ಲಿಯೇ. ನಗೆಮೊಗದ ಪ್ರಕಾಶ್ ಮೃದಂಗದ ಎಲ್ಲ ಭಾಗಗಳನ್ನು ವಿವರಿಸುತ್ತ, ನುಡಿಸಿಯೂ ತೋರಿಸಿದರು.   

ನನಗೆ ಜೆಸಿಂತಮೇರಿಯವರ ಮನೆಯನ್ನು ನೋಡಲೇಬೇಕಿತ್ತು. ಹೀಗಾಗಿ ಕಾರನ್ನು ಮತ್ತೆ ಕೀತುಕಾರ ಬೀದಿಯತ್ತ ತಿರುಗಿಸಿದೆವು. ಅಲ್ಲಿಂದ ಎಡಕ್ಕೆ ತಿರುಗಿ, ಇನ್ನಷ್ಟು ಕಿರಿದಾದ ಬೀದಿಯಲ್ಲಿ ಅವರ ಮನೆಯಿತ್ತು. ಚಿಕ್ಕ ಮನೆಗಳು, ಬೀದಿಯಲ್ಲಿ ಹರಿಯುತ್ತಿದ್ದ ಮೋರಿನೀರು... ಕಾರಿಳಿದು ನಾಕು ಹೆಜ್ಜೆ ಬಂದ ಹೇಮಾ ವಾಪಸು ಹೋಗಿಯಾಗಿತ್ತು. ಜೆಸಿಂತಮೇರಿಯವರ ಹಳೆಯ ಮನೆಯ ಗೋಡೆಯ ಮೇಲೆ ಜೀಸಸ್, ಮೇರಿ ಇನ್ನಿತರ ಸಂತರ ಫೋಟೊಗಳಿದ್ದವು. ಜೊತೆಗೆ ಸೆವಿಟ್ಟಿಯನ್ (ಸೆಬಾಸ್ಟಿಯನ್) ಕುಟುಂಬಕ್ಕೆ ಮೃದಂಗದ ದಾರಿ ತೋರಿದ ಅವರ ದಾಯಾದಿ ಮಧುರೆ ರತ್ನಂ ಫೋಟೊ, ಹರೆಯದ ಸೂಸೈನಾಥನ್ ಪಾಲ್ಘಾಟ್ ರಘು ಜೊತೆ ಮೃದಂಗದೊಂದಿಗೆ ಇದ್ದ ಫೋಟೊ, ಇನ್ನಿತರ ಫೋಟೊಗಳ ಹಳೆಯ ಫ್ರೇಮಿನೊಳಗೆ ಬಂದಿಯಾದ ಮಸುಕಾದ ಚಿತ್ರಗಳಲ್ಲಿ ಯಾವುದೋ ಕಾಲಘಟ್ಟವೊಂದು ಹೆಪ್ಪುಗಟ್ಟಿ ನಿಂತಿತ್ತು. ಜೆಸಿಂತಮೇರಿ ತಮಿಳಿನಲ್ಲಿ ಮಾತನಾಡಿದ್ದು ಅರೆಬರೆ ಅರ್ಥವಾಗುತ್ತಿತ್ತು. ಆದರೆ ಅವರ ಮಾತುಕತೆಯಲ್ಲಿ ತಂದೆಯ ಕಾಲದ ಹೆಸರಾಂತ ಮೃದಂಗವಾದಕರ ಹೆಸರುಗಳು ಹಾದುಹೋಗುತ್ತಿದ್ದವು... ಅರೆ... ಆ ಎಲ್ಲ ಶ್ರೇಷ್ಠ ಕಲಾವಿದರ ಕೈಬೆರಳುಗಳು ಮೈಮರೆಸುವ ನಾದಝೇಂಕಾರವನ್ನು ಅಲೆಅಲೆಯಾಗಿ ಹಬ್ಬಿಸಿದ ಸಂಗೀತ ಕಛೇರಿಗಳ ಝಗಮಗಿಸುವ ವೇದಿಕೆಗಳಿಗೂ ಮತ್ತು ಅದಕ್ಕಾಗಿ ಎಳ್ಳಷ್ಟೂ ಕುಂದಿಲ್ಲದ ಮೃದಂಗಗಳನ್ನು ಸಿದ್ಧಪಡಿಸಿಕೊಟ್ಟ ಈ ಅಪ್ರತಿಮ ಕುಶಲಿಗರಿಗೂ ಸಂಬಂಧದ ತಂತುವೇ ಇಲ್ಲ ಎಂಬಂತೆ ಕಿರಿದಾದ ಕೀತುಕಾರ ಬೀದಿ ಹತ್ತುಹಲವು ಜಂಜಡಗಳಲ್ಲಿ ಬಸವಳಿದು ನಿಂತಿತ್ತು. 


ಅಪ್ರತಿಮ ಪ್ರತಿಭೆಯ ವಾದ್ಯ ತಯಾರಕ ಪರ‍್ಲಾಂಡು ಅವರ ‘ಮನೆ’ ಇದು... ಚಿತ್ರ: ವಿಕ್ರಂ ರಾಘವನ್‌

***

ಕೃಷ್ಣ ಕೃತಿಯಲ್ಲಿ ತಯಾರಕರೊಬ್ಬರು ಹೇಳಿದ್ದನ್ನು ಬರೆಯುತ್ತಾರೆ: ‘ನಾವು ಹಸುಗಳು ಮತ್ತು ಮೇಕೆಗಳ ಕುರಿತು ಮಾತನಾಡುತ್ತೇವೆ. ಬಹುತೇಕ ಕಲಾವಿದರು ಬ್ರಾಹ್ಮಣರು. ಅವರಿಗೆ ವಾಸನೆ ಆಗಿಬರುವುದಿಲ್ಲ. ನಾವು ಚರ್ಮವನ್ನು ಹೇಗೆ ಹದಗೊಳಿಸುತ್ತೇವೆ ಎಂಬ ಬಗ್ಗೆ ಎಳ್ಳಷ್ಟೂ ಗೊತ್ತಿಲ್ಲ. ಆದರೆ ವಾದ್ಯ ಅವರ ದೇವರಕೋಣೆಯಲ್ಲಿರುತ್ತದೆ. ತಯಾರಕರಿಗೆ ಮಾತ್ರ ಆ ಗೌರವವಿಲ್ಲ.’

ಹಿಂದಿನ ಸಂಗತಿಗಳ ಕುರಿತು ಮಾತಾಡುವಾಗ ಅರುಳರಾಜರ ಮಾತುಗಳಲ್ಲಿ ಹೆಚ್ಚಿನ ಪ್ರತಿರೋಧ ವ್ಯಕ್ತವಾಗುತ್ತಿತ್ತು. ‘ಒಂದು ದೊಡ್ಡ ಹಾಲ್‌ನಲ್ಲಿ, ನಾವೊಂದು ಮೂಲೆಯಲ್ಲಿ ಕೂತು ಕೆಲಸ ಮಾಡಬೇಕಿತ್ತು. ಅದು ನಿಜಕ್ಕೂ ಅವಮಾನಕಾರಿ, ಅಸಹ್ಯ ಅನ್ನಿಸ್ತಿತ್ತು. ನಮ್ಮನ್ನು ಮೂಲೆಗೆ ದಬ್ಬಿದ್ದರು. ನಮ್ಮ ಪ್ರಯತ್ನ, ಕೆಲಸಗಳಿಂದಾಗಿ ಹೆಸರು, ಕೀರ್ತಿ ಗಳಿಸಿದವರು ನಮ್ಮನ್ನು ತಾರತಮ್ಯದಿಂದ ನಡೆಸಿಕೊಳ್ಳುತ್ತಿದ್ದರು.’

***

ಇದು ದಶಕಗಳ ಹಿಂದೆ ಮಾತ್ರವೇ... ಈಗ ಪರಿಸ್ಥಿತಿ ಬದಲಾಗಿರಬಹುದಲ್ಲವೇ? ನನ್ನೊಳಗೆ ಪ್ರಶ್ನೆಗಳು.

 ‘ಯಲಹಂಕದ ಬಳಿ ಯುವವಾದಕರೊಬ್ಬರಿಗೆ ಮೃದಂಗ ಮಾಡಿಕೊಡಲು ಬಂದಿದ್ದೇನೆ, ನೀವು ಬೇಕಿದ್ದರೆ ಬನ್ನಿ’ ಎಂದು ಸೂಸೈನಾಥನ್ ನನಗೆ ಫೋನು ಮಾಡಿದ್ದಾರೆ. ನನಗೆ ಇನ್ನಿಲ್ಲದ ಪುಳಕ. ಅವರು ಹೇಳಿದ ವಿಳಾಸ ಹುಡುಕಿಕೊಂಡು ಹೋದ ನಾನು ನಿಂತಿದ್ದು ದೊಡ್ಡಮನೆಯೊಂದರ ಮುಂದೆ. ಆ ಮನೆಯ ಬೇಸ್ಮೆಂಟಿನಲ್ಲಿ ಸೂಸೈನಾಥನ್ ಮೂರ್ನಾಲ್ಕು ಮೃದಂಗ ಇಟ್ಟುಕೊಂಡು, ಫೈನಲ್ ಟಚ್ ಕೊಡುತ್ತ ಕೂತಿದ್ದರು. ಯಾಕೋ ನಾನು ಕಲ್ಪಿಸಿಕೊಂಡಂತೆ ಕೋಣೆಯೊಂದರಲ್ಲಿ ಅಚ್ಚುಕಟ್ಟಾಗಿ ಕುಳಿತು ಕೆಲಸ ಮಾಡುತ್ತಿರುವ ಸೂಸೈನಾಥನ್ ಚಿತ್ರಕ್ಕೂ, ಇಲ್ಲಿ ಕಾರು ನಿಲ್ಲಿಸಿದ, ಅಷ್ಟೇನೂ ಸ್ವಚ್ಛವಾಗಿಲ್ಲದ ಬೇಸ್ಮೆಂಟಿನಲ್ಲಿ ನೆಲದ ಮೇಲೆ ಕೂತು ಕೆಲಸದಲ್ಲಿ ಮಗ್ನರಾಗಿದ್ದ ಸೂಸೈನಾಥನ್ ಚಿತ್ರಕ್ಕೂ ತಾಳೆಯೇ ಆಗುತ್ತಿರಲಿಲ್ಲ. ಆದರೆ ಅವರು ಮಾತ್ರ ತುಂಬು ಲವಲವಿಕೆಯಿಂದ ಮಾತನಾಡುತ್ತಲೇ, ವಾರುಪಿಡಿ ಎಳೆಯುವುದನ್ನು, ಕರಣೆ ಹಚ್ಚುವುದನ್ನು ತೋರಿಸಿದರು.

ಅಷ್ಟರಲ್ಲಿಯೇ ಅವರಿಗೆ ಫೋನ್ ಬಂತು. ಮಾತಾಡಿ ಮುಗಿಸಿದ ಸೂಸೈನಾಥನ್ ಮುಖ ಕಂದಿಹೋಯಿತು. ಅವರಿಗೆ ಮಾವನಾಗಿದ್ದ  ಎ. ಆರೋಗ್ಯಂ ತೀರಿಕೊಂಡಿದ್ದರು. ‘ನನಗೆ ಕೆಲಸ ಕಲಿಸಿದವನು, ನನ್ನ ಮಾವ’ ಎನ್ನುತ್ತ, ತನಗೆ ತಂಜಾವೂರಿಗೆ ಹೋಗಲು ಟಿಕೆಟ್ ವ್ಯವಸ್ಥೆ ಮಾಡುವಂತೆ ಯುವವಾದಕನಿಗೆ ಹೇಳುತ್ತಲೇ, ‘ಹೋಗುವ ಅವಸರದಲ್ಲಿ ಹೆಂಗ್ಹೆಂಗೋ ಮಾಡಿದೆ ಎಂದುಕೋಬೇಡಿ. ಎಲ್ಲ ಸರಿಮಾಡಿಯೇ ಹೊರಡ್ತೀನಿ’ ಎಂದು ಮತ್ತೆ ಮತ್ತೆ ಹೇಳಿದ ಸೂಸೈನಾಥನ್ ಧ್ವನಿಯಲ್ಲಿ ಮೃದಂಗದ ಕೆಲಸದ ಕುರಿತು ಆಳದ ಬದ್ಧತೆ, ಮಾಡುವ ಕೆಲಸವನ್ನು ಎಂಥದೇ ಸಮಯದಲ್ಲಿಯೂ ಪರಿಪೂರ್ಣವಾಗಿ ಮುಗಿಸಬೇಕೆಂಬ ಕಾಳಜಿ ಒಡೆದು ತೋರುತ್ತಿತ್ತು. ಎಷ್ಟೇ ಆಗಲಿ ಸೂಸೈನಾಥನ್ ಕೂಡ ಆ ಸೆವಿಟ್ಟಿಯನ್ ಕುಟುಂಬದ ಕುಡಿಯಲ್ಲವೇ?


ಪರ‍್ಲಾಂಡು ಅವರ ಮಗಳ ಮನೆಯಲ್ಲಿ... ಜೆಸಿಂತಮೇರಿ ಮತ್ತು ಗೇಬ್ರಿಯಲ್‌

ಹತ್ತು ನಿಮಿಷಗಳ ಮೊದಲಷ್ಟೇ ನನ್ನ ಕೈಯಲ್ಲಿದ್ದ ‘ಸೆಬಾಸ್ಟಿಯನ್ಸ್ & ಸನ್ಸ್’ ಕೃತಿಯಲ್ಲಿ ಮೃದಂಗದ ಕೆಲಸ ಮಾಡುತ್ತಿದ್ದ ಆರೋಗ್ಯಂ ಫೋಟೊ ತೋರಿಸಿದ ಸೂಸೈನಾಥನ್ ‘ನನ್ನ ಗುರು’ ಎಂದು ಅಭಿಮಾನದಿಂದ ನೆನೆದಿದ್ದ ವ್ಯಕ್ತಿ ಹೀಗೆ ಥಟ್ಟನೆ ‘ತಂಜಾವೂರಿಗೇ ಬಾಡಿ ತೆಗೆದುಕೊಂಡು ಬರ್ತಾರಂತೆ’ ಎಂಬ ವಾಕ್ಯದಲ್ಲಿ ಬರಿಯ ‘ಬಾಡಿ’ ಮಾತ್ರ ಆಗುವುದೆಂದರೆ... ನಾನು ತಲ್ಲಣಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು