ಶುಕ್ರವಾರ, ಮೇ 20, 2022
19 °C

ವಿಮರ್ಶೆ: ಮೂಲ ಶೋಧದ ರೋಚಕ ಇತಿಹಾಸ

ಎಸ್.ಎಲ್. ಶ್ರೀನಿವಾಸಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮಹಾಭಾರತ ಬೆಳೆದ ಬಗೆ

ಲೇ: ಎಸ್‌. ಆರ್‌. ರಾಮಸ್ವಾಮಿ

ಪ್ರಕಾಶಕರು: ಅಭಿಜ್ಞಾನ

ಮೊ: 94484 94949

ಪುಟಗಳು: 176

ಬೆಲೆ: ₹ 195

ಗುಣ-ಗಾತ್ರಗಳೆರಡರಲ್ಲಿಯೂ ಮಹತ್ತಾಗಿರುವ ಮಹಾಭಾರತಕ್ಕೆ ಭಾರತೀಯ ಜನಮಾನಸದಲ್ಲಿ ಮಹತ್ವದ ಸ್ಥಾನವಿದೆ. ಅನಕ್ಷರಸ್ಥರಾದ ಜನಪದರಿಂದ ಮೊದಲುಗೊಂಡು ಪ್ರಕಾಂಡ ಪಂಡಿತರವರೆಗೆ ಪ್ರತಿ ವರ್ಗದ ಜನರೂ ತಮ್ಮ ಅರಿವಿನ ಮಟ್ಟಕ್ಕೆ ತಕ್ಕಂತೆ ಅದನ್ನು ಅರ್ಥೈಸಿಕೊಳ್ಳಲು, ಅರಗಿಸಿಕೊಳ್ಳಲು ಯತ್ನಿಸಿದ್ದಾರೆ. ನೂರಾರು ತಲೆಮಾರುಗಳ ಕಾಲದಿಂದ ಭಾರತೀಯ ಪ್ರಜ್ಞಾಪರಂಪರೆಯಲ್ಲಿ ಅವಿಚ್ಛಿನ್ನವಾಗಿ ಹರಿದು ಬಂದಿರುವ ಈ ಕೃತಿ ಹಲವು ರೂಪಗಳನ್ನು ತಾಳಿರುವುದು ಸಹಜವೇ ಆಗಿದೆ.

ಶತಮಾನಗಳಿಂದ ಸಾವಿರಾರು ಲೇಖಕರು, ಕಥನಕಾರರು ತಮಗೆ ತೋಚಿದಂತೆ ಕಥೆಯನ್ನು ಹಿಗ್ಗಿಸಿದ್ದಾರೆ, ಕುಗ್ಗಿಸಿದ್ದಾರೆ, ತಿರುಚಿದ್ದಾರೆ ಮತ್ತು ತಾವು ನಿರೂಪಿಸುತ್ತಿರುವುದೇ ನಿಜವಾದ ಮಹಾಭಾರತವೆಂದು ಬಿಂಬಿಸಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮೂಲಮಹಾಭಾರತದ ಸ್ವರೂಪವೇನಿತ್ತು; ಕಾಲದಿಂದ ಕಾಲಕ್ಕೆ ಅದು ಬದಲಾದದ್ದು ಹೇಗೆ ಮತ್ತು ಏಕೆ ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಯತ್ನಿಸುವುದು ಹುಲ್ಲಿನ ಬಣವೆಯಲ್ಲಿ ಸೂಜಿ ಹುಡುಕಿದಷ್ಟೇ ಕಷ್ಟಕರ. ಆದರೂ ಹತ್ತಾರು ಮಂದಿ ಅಂತರರಾಷ್ಟ್ರೀಯ ಖ್ಯಾತಿಯ ಮಹಾವಿದ್ವಾಂಸರು ಇಂತಹದೊಂದು ಮಹತ್ಸಾಹಸಕ್ಕೆ ಕೈಹಾಕಿ ಅದನ್ನು ಆಗಮಾಡಿದ್ದನ್ನು ನಿರೂಪಿಸುವ ರೋಮಾಂಚಕ ಕೃತಿಯೇ ಎಸ್.ಆರ್. ರಾಮಸ್ವಾಮಿಯವರ ‘ಮಹಾಭಾರತ ಬೆಳೆದ ಬಗೆ’.

ಮಹಾಭಾರತದ ಕಾವ್ಯಸೌಂದರ್ಯ, ಪಾತ್ರವೈಶಿಷ್ಟ್ಯ, ಸಾಂಸ್ಕೃತಿಕ ಮಹತ್ವ ಮುಂತಾದ ವಿಷಯಗಳನ್ನು ಕುರಿತಂತೆ ಈವರೆಗೆ ಕನ್ನಡದಲ್ಲಿಯೇ ನೂರಾರು ಪುಸ್ತಕಗಳು ಹೊರಬಂದಿವೆ. ಆದರೆ ಪ್ರಸ್ತುತ ಕೃತಿಯ ಉದ್ದೇಶ ಅವೆಲ್ಲಕ್ಕಿಂತ ಭಿನ್ನವೂ ಅನನ್ಯವೂ ಆದದ್ದು. ಮಹಾಭಾರತದ ಶುದ್ಧಪಾಠದ ನಿರ್ಣಯದ ಹಿಂದಿನ ರೋಚಕ ಇತಿಹಾಸ ವಿವರಿಸುವುದು ಲೇಖಕರ ಆಶಯ.

ಯಾವುದೇ ಒಂದು ಕೃತಿಯನ್ನು ಬಹುಮಟ್ಟಿಗೆ ಮೂಲಲೇಖಕ ಬರೆದ ಸ್ವರೂಪದಲ್ಲಿಯೇ ವಿದ್ವಾಂಸರು ಅಧ್ಯಯನ ಮಾಡಬಯಸುತ್ತಾರೆ. ಹಾಗಾಗಿಯೇ ‘ಗ್ರಂಥಸಂಪಾದನಶಾಸ್ತ್ರ’ವೆಂಬ ಶಾಸ್ತ್ರೀಯ ವಿಧಾನವೊಂದು ರೂಪುಗೊಂಡಿದೆ. ಪ್ರಸ್ತುತ ಲಭ್ಯವಿರುವ ಎಲ್ಲ ಪ್ರಾಚೀನ ಹಸ್ತಪ್ರತಿಗಳನ್ನು ಒಂದೆಡೆ ಸಂಗ್ರಹಿಸಿ, ಅದರಲ್ಲಿಯ ಪಾಠಭೇದಗಳನ್ನು ಗುರುತಿಸಿ ಮೂಲಕ್ಕೆ ಅತ್ಯಂತ ನಿಕಟವೆನ್ನಬಹುದಾದ ಪಾಠವನ್ನು ನಿರ್ಧರಿಸುವ ಅತ್ಯಂತ ತ್ರಾಸದಾಯಕ ವಿಧಾನವದು. ಅಗಾಧವಾದ ವಿದ್ವತ್ತನ್ನೂ, ಅಪಾರವಾದ ತಾಳ್ಮೆಯನ್ನೂ ಬೇಡುವ ಇಂತಹ ಮಹದುದ್ಯಮಕ್ಕೆ ಕೈಹಾಕಿ ಯಶಸ್ವಿಯಾದ ವಿಷ್ಣು ಸೀತಾರಾಮ ಸುಕ್ತಂಕರ್ ಮತ್ತವರ ತಂಡದ ಸಾರ್ಥಕ ಪ್ರಯತ್ನದ ಪರಿಚಯ ಈ ಕೃತಿಯಲ್ಲಿದೆ.

ಮಹಾಭಾರತದ ಮೂಲಸ್ವರೂಪ ಹೇಗೆ ಇದ್ದಿರಬಹುದೆಂಬ ಪ್ರಶ್ನೆಗೆ ವಿವಿಧ ವಿದ್ವಾಂಸರು ನೀಡಿರುವ ವಿಭಿನ್ನ ಸಿದ್ಧಾಂತಗಳ ನಿರೂಪಣೆ ಈ ಕೃತಿಯ ಪ್ರಮುಖ ಭಾಗಗಳಲ್ಲೊಂದು. ದೇವಬೋಧ, ವಿಮಲಬೋಧ, ಸರ್ವಜ್ಞನಾರಾಯಣ, ಅರ್ಜುನಮಿಶ್ರ, ನೀಲಕಂಠ ಮೊದಲಾದ ಭಾರತೀಯ ಪ್ರಾಚೀನ ಲೇಖಕರು; ಆರ್.ಜಿ. ಭಂಡಾರ್‍ಕರ್, ವಿ.ಎಸ್. ಅಗರ್‍ವಾಲ್, ಎಸ್.ಎಸ್. ಕತ್ರೆ, ಬಿ.ಬಿ. ಕೋಸಾಂಬಿ, ಟಿ.ಕೆ. ಗೋಡೆ, ಹರಿಪ್ರಸಾದ ಶಾಸ್ತ್ರೀ ಮುಂತಾದ ಆಧುನಿಕ ವಿದ್ವಾಂಸರು; ಫ್ರಾನ್ಜ್ ಬಾಪ್, ಲ್ಯಾಸನ್, ವೆಬರ್, ಲುಡ್ವಿಂಗ್, ಹೋಲ್ಟ್ಸ್‌ಮನ್, ಷ್ರೋಡರ್, ಗ್ರಿಯರ್‍ಸನ್, ಬ್ಯೂಲರ್, ದಾಲ್ಮನ್, ವಿಂಟರ್‍ನಿಟ್ಸ್ ಮುಂತಾದ ಪಾಶ್ಚಾತ್ಯ ವಿದ್ವಾಂಸರು ಈ ಕುರಿತಂತೆ ನಡೆಸಿರುವ ಚಿಂತನ ಮಂಥನಗಳು ಮತ್ತು ಮಂಡಿಸಿರುವ ವಿವಿಧ ವಿವರಣೆಗಳ ಸ್ಥೂಲ ಚಿತ್ರಣ ಇಲ್ಲಿದೆ.

‘ವೇದಗಳ ಆಲಂಕಾರಿಕ ಕಥನರೂಪವೇ ಮಹಾಭಾರತ’ವೆಂಬ ವೆಬರ್ ಮತ್ತು ಲುಡ್ವಿಂಗ್‍ರ ವಾದ, ‘ಮೂಲ ಮಹಾಭಾರತವು ಕೌರವರನ್ನು ನಾಯಕರನ್ನಾಗಿ ಹೊಂದಿದ ವೀರಗಾಥೆ, ಕರ್ಣನೇ ಆ ಮೂಲಕಥೆಯ ನಾಯಕ. ಅಶೋಕನ ಆಸ್ಥಾನದ ಬೌದ್ಧಕವಿಯೊಬ್ಬ ಬಹುಶಃ ಇದರ ರಚಯಿತ, ಮುಂದೆ ಬ್ರಾಹ್ಮಣಕವಿಗಳು ವೈಷ್ಣವಮತಾನುಕೂಲ ಭಾಗಗಳನ್ನು ವಿಪುಲವಾಗಿ ಸೇರಿಸಿ ಅದನ್ನು ಪಾಂಡವಪ್ರಧಾನವಾದ ಮಹಾಕಾವ್ಯವನ್ನಾಗಿ ಮಾಡಿದರು’ ಎಂಬ ಷ್ರೋಡರ್, ಹೋಲ್ಟ್ಸ್‌ಮನ್ ಮುಂತಾದವರ ಸಿದ್ಧಾಂತ; ‘ಸರಳವಾದ ವೀರರ ಕಥೆಯು ಲಕ್ಷಶ್ಲೋಕ ವಿಸ್ತಾರವಾದ ಬೃಹತ್ಸಂಹಿತೆಯಾಗಲು ಭಾರ್ಗವ ವಂಶೀಯರು ಕಾರಣ’ ಎಂಬ ವಿ.ಎಸ್. ಸುಕ್ತಂಕರ್ ಅವರ ‘ಭಾರ್ಗವವಾದ’ ಮೊದಲಾದವು ಓದುಗರನ್ನು ಚಿಂತನೆಗೆ ಹಚ್ಚುತ್ತವೆ, ಈ ವಿಷಯವನ್ನು ಕುರಿತ ಹೆಚ್ಚಿನ ವ್ಯಾಸಂಗಕ್ಕೆ ಪ್ರೇರೇಪಿಸುತ್ತವೆ.

ಮಹಾಭಾರತದ ಪಾಠಪರಿಕ್ಷರಣೆಯ ಇತಿಹಾಸವನ್ನು ಲೇಖಕರು ಮುಂದಿನ ಅಧ್ಯಾಯದಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ‘1897ರಲ್ಲಿ ಪ್ಯಾರೀಸಿನಲ್ಲಿ ನಡೆದ ಪ್ರಾಚ್ಯಶಾಸ್ತ್ರಜ್ಞರ 11ನೆಯ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ವಿಂಟರ್‍ನಿಟ್ಸ್ ಎಂಬ ವಿದ್ವಾಂಸರು ಮಹಾಭಾರತದ ಪರಿಷ್ಕೃತ ಪಾಠವೊಂದನ್ನು ಸಿದ್ಧಪಡಿಸಬೇಕಾದ ಅಗತ್ಯತೆಯನ್ನು ಒತ್ತಿ ಹೇಳಿದರು. 1918-19ರಲ್ಲಿ ಪುಣೆಯ ಭಂಡಾರ್‍ಕರ್ ಪ್ರಾಚ್ಯವಿದ್ಯಾ ಸಂಶೋಧನಾ ಸಂಸ್ಥೆ ಈ ಭೀಮಸಾಹಸಕ್ಕೆ ಕೈ ಹಾಕಿತು. ವಿ.ಎಸ್. ಸುಕ್ತಂಕರ್, ಫ್ರಾಂಕ್ಲಿನ್ ಎಜರ್ಟನ್, ರಘುವೀರ, ಎಸ್.ಕೆ. ಡೇ, ಬೇಳ್ವಾಲ್ಕರ್, ಪಿ.ಎಲ್. ವೈದ್ಯ, ದಂಡೇಕರ್, ವೇಲಣಕರ್, ಕರಮಕರ್ ಮುಂತಾದ ಸಮರ್ಥ ಸಂಪಾದಕರ ಸತತ ಪರಿಶ್ರಮದಿಂದ 45 ವರ್ಷಗಳಲ್ಲಿ ಈ ಯೋಜನೆ ಪೂರ್ತಿಗೊಂಡಿತು’ ಎಂಬುದನ್ನು ಇಲ್ಲಿ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.

ವ್ಯಾಸರ ಮುಖದಿಂದ ಯಾವ ಮಾತುಗಳು ಹೊರಟವೋ ಅವನ್ನು ಕಂಡುಹಿಡಿಯಬೇಕೆಂಬುದು ಪರಿಷ್ಕೃತಪಾಠದ ಸಂಪಾದಕರ ಉದ್ದೇಶವಲ್ಲ. ಇಷ್ಟು ಶತಮಾನಗಳ ತರುವಾಯ ಅದು ಶಕ್ಯವೂ ಅಲ್ಲ. ದೊರೆತಿರುವ ಹಸ್ತಪ್ರತಿಗಳೆಲ್ಲದರ ಆಧಾರದ ಮೇಲೆ ಪಾಠ ಸಂಕುಲತೆಯನ್ನೂ ಗ್ರಂಥವಿಕಾಸವನ್ನೂ ಆಮೂಲಾಗ್ರವಾಗಿ ವ್ಯಾಸಂಗ ಮಾಡಿ ಕಳೆದ ಸಾವಿರ ವರ್ಷಗಳಲ್ಲಿ ಮೂಲಕೃತಿಗೆ ಸೇರಿಸಲ್ಪಟ್ಟಿರುವ `ಖೋಟಾ’ ಪಾಠಗಳನ್ನು ಬೇರೆ ಮಾಡಿ ಪ್ರಾಮಾಣಿಕ ಪಾಠವೊಂದನ್ನು ಸಿದ್ಧಪಡಿಸುವುದಷ್ಟೇ ಸಂಪಾದಕರು ಯತ್ನಿಸಿದ ಕಾರ್ಯ. ಅಂತಿಮವಾಗಿ ಸಿದ್ಧಗೊಂಡ ಪಾಠದಲ್ಲಿ ಗಣಪತಿಯು ವ್ಯಾಸರು ಹೇಳಿದ ಕಥೆಯನ್ನು ಬರೆದುಕೊಂಡಿದ್ದು. ಅರ್ಜುನನಿಗೆ ಊರ್ವಶಿಯು ನಪುಂಸಕನಾಗೆಂದು ಶಪಿಸಿದ್ದು, ದ್ರುಪದನ ಜನ್ಮವೃತ್ತಾಂತ, ಪರಾಶರ-ಮತ್ಸ್ಯಗಂಧಿಯರ ವಿವಾಹ, ದ್ರೌಪದಿಯ ಅಕ್ಷಯವಸ್ತ್ರ ಮುಂತಾದ ಜನಪ್ರಿಯ ಕಥಾನಕಗಳೇ ಇಲ್ಲದ್ದನ್ನು ಕಂಡು ಓದುಗರಿಗೆ ಅಚ್ಚರಿಯಾಗಬಹುದು! 

ತೆಂಗಿನ ಮಟ್ಟೆಯನ್ನು ಸುಲಿದು, ಅದರ ಸಿಪ್ಪೆಗಳನ್ನ ತೆಗೆದು ಕಠಿಣವಾದ ಚಿಪ್ಪನ್ನು ಒಡೆದು ರುಚಿಕರವಾದ ಕಾಯಿ, ಎಳೆನೀರುಗಳನ್ನಷ್ಟನ್ನೇ ಬಿಡಿಸಿಕೊಟ್ಟಂತೆ ಕಟ್ಟುಕಥೆಗಳ ಗೊಂಡಾರಣ್ಯದಲ್ಲಿ ಸಿಲುಕಿ ನಲುಗಿ ಹೋಗಿದ್ದ ಮೂಲ ಮಹಾಭಾರತವನ್ನು ಪತ್ತೆಹಚ್ಚಿ ಹೊರತೆಗೆದಿದ್ದರ ಕಥಾನಕವನ್ನು ಓದಿಮುಗಿಸುವ ವೇಳೆಗೆ ಒಂದು ವಿಶಿಷ್ಟವಾದ ಕಾಲಯಾನ ಮಾಡಿ ಬಂದ ಅನುಭವವಾಗುತ್ತದೆ. ಅರ್ಧಶತಮಾನದ ಹಿಂದೆ ‘ಪ್ರಜಾವಾಣಿ’ಯಂತಹ ದಿನಪತ್ರಿಕೆ ಇಂತಹ ವಿದ್ವತ್ ಕೃತಿಯನ್ನು ಸರಣಿಯಾಗಿ ಪ್ರಕಟಿಸಿತ್ತು ಎನ್ನುವುದು ಪ್ರಕಾಶಕರ ಮನೋಧರ್ಮಕ್ಕೂ, ಆ ಕಾಲದ ಓದುಗರ ಚಿಂತನ ಶಕ್ತಿಗೂ ಹಿಡಿದ ಕನ್ನಡಿಯಾಗಿದೆ. ನಾಲ್ಕು ದಶಕಗಳಿಗೂ ಹಿಂದೆ ಗ್ರಂಥರೂಪದಲ್ಲಿ ಪ್ರಕಟವಾಗಿದ್ದ ಈ ಕೃತಿಯನ್ನು ಮತ್ತೆ ಬೆಳಕಿಗೆ ತಂದ ಲೇಖಕರು, ಪ್ರಕಾಶಕರಿಬ್ಬರೂ ಅಭಿನಂದನಾರ್ಹರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು