ಗುರುವಾರ , ಜನವರಿ 28, 2021
15 °C

ಪುಸ್ತಕ ವಿಮರ್ಶೆ: ಸಾವನ್ನು ಮೀರಿದ ಬದುಕಿನ ಕಥನ

ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಹಲ್ಲಾ ಬೋಲ್‌ (ಸಫ್ದರ್‌ ಹಾಶ್ಮಿ ಸಾವು ಮತ್ತು ಬದುಕು)
ಲೇ:
ಸುಧನ್ವ ದೇಶಪಾಂಡೆ
ಕನ್ನಡಕ್ಕೆ: ಎಂ.ಜಿ. ವೆಂಕಟೇಶ್‌
ಪ್ರ: ಕ್ರಿಯಾ ಪುಸ್ತಕ
ಮೊ: 90360 82005
ಪುಟಗಳು: 280
ಬೆಲೆ: 200

ಪಟ್ಟಭದ್ರ ವ್ಯವಸ್ಥೆಯೇ ಹಾಗೆ. ತನ್ನ ವಿರುದ್ಧ ಮಾತನಾಡುವವರ ಧ್ವನಿಯನ್ನೇ ಅಡಗಿಸಿ ಬಿಡುವಂತಹ ಕ್ರೌರ್ಯ ಅದಕ್ಕೆ. ಇಂತಹ ಕ್ರೌರ್ಯದ ಪ್ರವೃತ್ತಿಗೆ ಶತಮಾನಗಳ ಇತಿಹಾಸವೇ ಇದೆ. ಉದಾಹರಣೆಗೆ ಬೇಕಾದರೆ ಬಡವರ ಪರ ಧ್ವನಿ ಎತ್ತಿದ ಕ್ರಾಂತಿಕಾರಿ ಹಾಡುಗಾರ ಚಿಲಿಯ ವಿಕ್ಟರ್‌ ಹಾರಾ ಅವರ ಅಂತ್ಯದ ವಿವರವನ್ನೇ ನೋಡಬಹುದು. ಬರೋಬ್ಬರಿ 46 ಗುಂಡು ಹಾರಿಸಿ ಅವರನ್ನು ಕೊಲ್ಲಲಾಗಿತ್ತು. ಅದಕ್ಕೂ ಮೊದಲು ಗಿಟಾರ್‌ ಬಾರಿಸುತ್ತಿದ್ದ ಅವರ ಕೈಬೆರಳುಗಳನ್ನೆಲ್ಲ ಕತ್ತರಿಸಿ ಹಾಕಲಾಗಿತ್ತು.

ನಡುಬೀದಿಯಲ್ಲಿ ನಾಟಕ ಪ್ರದರ್ಶನ ನೀಡುತ್ತಿದ್ದ ಕಲೆಗಾರನ ಕೊಲೆಗೆ ಸಾಕ್ಷಿಯಾದ ನಮ್ಮ ದೇಶ ಕೂಡ ಇಂತಹ ಕ್ರೌರ್ಯದಿಂದ ಏನೂ ಹೊರತಾಗಿಲ್ಲ. ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್‌, ಗೋವಿಂದ ಪಾನ್ಸರೆ, ನರೇಂದ್ರ ದಾಭೋಲ್ಕರ್‌... ಹೀಗೆ ಸೈದ್ಧಾಂತಿಕ ಬದ್ಧತೆಯನ್ನು ಪ್ರದರ್ಶಿಸಿದ್ದಕ್ಕಾಗಿ ಜೀವ ಕಳೆದುಕೊಂಡವರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಗಾಜಿಯಾಬಾದ್ ನಗರಸಭೆ ಚುನಾವಣೆ ಕಾಲಕ್ಕೆ (1989) ಸಿಪಿಎಂ ಅಭ್ಯರ್ಥಿಯ ಪರ ಪ್ರಚಾರಾರ್ಥ ಝಂಡಾಪುರದಲ್ಲಿ ‘ಹಲ್ಲಾ ಬೋಲ್‌’ ಎಂಬ ಬೀದಿನಾಟಕವನ್ನು ಪ್ರದರ್ಶಿಸುವಾಗ ಏಕಾಏಕಿ ನಡೆದ ಎದುರಾಳಿಗಳ ದಾಳಿಯಲ್ಲಿ ಕೊಲೆಗೀಡಾದ ಅಸಾಮಾನ್ಯ ರಂಗಪ್ರತಿಭೆ ಸಫ್ದರ್‌ ಹಾಶ್ಮಿ. ಅಂದಿನ ಪೈಶಾಚಿಕ ಕೃತ್ಯಕ್ಕೆ ಪ್ರತ್ಯಕ್ಷ ಸಾಕ್ಷಿಯಾದ ಸಫ್ದರ್‌ ಅವರ ಪ್ರೀತಿಯ ಗೆಳೆಯ ಸುಧನ್ವ ದೇಶಪಾಂಡೆ, ಆಗಿನ ಘಟನಾವಳಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟ, ಆ ಕಲಾವಿದನ ಬದುಕಿನ ಪುಟಗಳನ್ನೂ ತೆರೆದಿಟ್ಟ ಕೃತಿಯೇ ‘ಹಲ್ಲಾ ಬೋಲ್‌’.

ಸಫ್ದರ್‌ ಕುರಿತು ಅವರ ಅಮ್ಮ ಖಮರ್‌ ಆಜಾದ್‌ ಹಾಶ್ಮಿ ತುಂಬಾ ಹಿಂದೆಯೇ ‘ಪಾಂಚವಾ ಚಿರಾಗ್‌’ ಕೃತಿ ಹೊರತಂದಿದ್ದಾರೆ. ಪ್ರಭಾತ್‌ ಉಪ್ರೇತಿಯವರ ‘ಸಫ್ದರ್‌: ಏಕ್‌ ಆದಮ್‌ ಕದ್‌ ಇನ್ಸಾನ್‌’, ಹಬೀಬ್‌ ತನ್ವೀರ್‌ ಅವರ ‘ಮೆಮೋರ‍್ಸ್‌’ ಕೃತಿಗಳು ಕೂಡ ನಮ್ಮ ನಡುವೆ ಇವೆ. ಆದರೆ, ನಟ, ನಿರ್ದೇಶಕ ಹಾಗೂ ಸಫ್ದರ್‌ ಅವರೇ ಹುಟ್ಟುಹಾಕಿದ್ದ ಜನ ನಾಟ್ಯ ಮಂಚ್‌ನ (ಜನಮ್‌) ಹಾಲಿ ಸಂಚಾಲಕ ಸುಧನ್ವ ಅವರ ಈ ಕೃತಿ ಉಳಿದವುಗಳಿಗಿಂತ ಸಂಪೂರ್ಣವಾಗಿ ಭಿನ್ನ.

ಮಾರಣಾಂತಿಕ ಪೆಟ್ಟುತಿಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಫ್ದರ್‌ ಅವರನ್ನು ಉಳಿಸಿಕೊಳ್ಳಲು ಅವರ ಗೆಳೆಯರು ಮಾಡಿದ ಸಾಹಸ ಹಾಗೂ ಆಸ್ಪತ್ರೆಯಿಂದ ಆಸ್ಪತ್ರೆಗೆ ನಡೆಸಿದ ಅಲೆದಾಟದ ವಿವರಗಳು ಸಿನಿಮೀಯವಾಗಿವೆ. ಓದುಗರ ಮೈ ಜುಮ್‌ ಎನ್ನುವಂತೆ ಮಾಡುತ್ತವೆ. ಆದರೆ, ಯಾವುದೇ ಉದ್ವೇಗಕ್ಕೆ ಒಳಗಾಗದೆ ಸುಧನ್ವ ಕಥೆ ಹೇಳುತ್ತಾ ಹೋಗುತ್ತಾರೆ. ಹೌದು, ಸಫ್ದರ್‌ ಅವರೇ ನಾಟಕಕ್ಕಾಗಿ ಬರೆದಿದ್ದ ಹಾಡಿನ ಸಾಲನ್ನು ಅವರದೇ ಅಂತಿಮ ಯಾತ್ರೆಯಲ್ಲಿ ಸಂಗಾತಿಗಳು ಹಾಡುತ್ತಾರೆ: ‘ತುಮ್‌ ನಹೀ ರಹೇ ಇಸ್‌ ಕಾ ಗಮ್‌ ಹೈ, ಪರ್‌ ಫಿರ್‌ ಭೀ ಬಡತೆ ಜಾಯೇಂಗೆ... (ನೀನು ಇಲ್ಲಿ ಇಲ್ಲ ಎಂಬ ದುಃಖವಿದೆ. ಆದರೂ ಮುಂದೆ ಸಾಗುತ್ತಲೇ ಇರುತ್ತೇವೆ).’

ಏಕಾಏಕಿ ನಡೆದ ದಾಳಿಯಿಂದ ಅರ್ಧಕ್ಕೆ ನಿಂತಿದ್ದ ‘ಹಲ್ಲಾ ಬೋಲ್‌’ ನಾಟಕವನ್ನು ಪೂರ್ಣಗೊಳಿಸಲು ಸಫ್ದರ್‌ ಅವರ ಪತ್ನಿ ಮಲಯಶ್ರೀ (ಮಾಲಾ), ಪತಿ ಕೊನೆಯುಸಿರೆಳೆದ ಕೇವಲ 48 ಗಂಟೆಗಳಲ್ಲಿ ಅದೇ ಝಂಡಾಪುರ ಪ್ರದೇಶಕ್ಕೆ ತಂಡವನ್ನು ಕಟ್ಟಿಕೊಂಡು ಬರುತ್ತಾರೆ. ಆಗ ಮಾಲಾ ಹೇಗಿದ್ದರು ಎಂಬುದನ್ನು ಸುಧನ್ವ ಹೀಗೆ ಚಿತ್ರಿಸುತ್ತಾರೆ:

‘ಆ ದಿನ ಮಾಲಾ ಮೌನ ಧಿಕ್ಕಾರದ ಚಿತ್ರದಂತಿದ್ದಳು. ಅವಳ ಕಣ್ಣುಗಳಲ್ಲಿ ದೃಢನಿರ್ಧಾರವಿತ್ತು ಮತ್ತು ಅವಳ ಆತ್ಮವನ್ನೇ ಹಾಳುಗೆಡವಿದ ಶೋಕದ ಗುರುತೇ ಇರಲಿಲ್ಲ. ಅವಳ ತೆಳುವಾದ ಶರೀರದಲ್ಲಿ ಉಕ್ಕಿನಿಂದ ಮಾಡಿದ ಬೆನ್ನೆಲುಬು ಇತ್ತೇನೋ ಅನಿಸುತ್ತಿತ್ತು. ಅವಳು ಸಲಾಕೆಯಂತೆ ನೆಟ್ಟಗೆ ನಿಂತಿದ್ದಳು. ಅವಳ ಚಿಕ್ಕ ಆಕಾರದಲ್ಲಿ ನಂಬಲಾಗದ ಎತ್ತರವಿತ್ತು.’

ಪರಸ್ಪರ ಹೆಣೆದುಕೊಂಡು ಇಡುಕಿರಿದಿರುವ ವಿವರಗಳು ಒಟ್ಟು ಕಥನದ ಸಾವಯವ ಶಿಲ್ಪದ ಭಾಗವಾಗಿದ್ದರಿಂದ ಕೃತಿಯು ಕೇವಲ ಸಾವಿನ ವರದಿಯಾಗಿ ಉಳಿಯದೆ ಕಲಾಕೃತಿಯ ಸೊಬಗನ್ನೂ ತೊಟ್ಟುಕೊಂಡಿದೆ. ಸಫ್ದರ್‌ ಅವರನ್ನು ಬೀದಿ ನಾಟಕಗಳಿಗೆ ಒಂದು ಸ್ಪಷ್ಟ ದಿಸೆಯನ್ನು ತೋರಿದ ಸಾಧಕ ಎಂದು ರಂಗಪ್ರಪಂಚ ನೋಡುತ್ತದೆ. ಅವರ ಕಥೆಯನ್ನು ಹೇಳುತ್ತಲೇ ಬೀದಿ ನಾಟಕಗಳ ದಶಕಗಳ ಇತಿಹಾಸವನ್ನೇ ಈ ಕೃತಿ ತೆರೆದಿಟ್ಟಿದೆ. ಉತ್ತರದ ‘ಜನಮ್‌’ನ ಜತೆಗೆ ದಕ್ಷಿಣದ ‘ಸಮುದಾಯ’ ಹಾಕಿದ ಯಶಸ್ಸಿನ ಹೆಜ್ಜೆಗಳ ಮೆಲುಕು ಕೂಡ ಇಲ್ಲಿದೆ. ಅಂದಹಾಗೆ, ಬೀದಿ ನಾಟಕಗಳ ಕುರಿತು ಸಫ್ದರ್‌ ಅವರು ಸಂದರ್ಶನವೊಂದರಲ್ಲಿ ಮಾಡಿದ ಸುದೀರ್ಘ ವ್ಯಾಖ್ಯಾನವನ್ನೂ ಕೃತಿ ಒಳಗೊಂಡಿದೆ.

‘ಹಲ್ಲಾ ಬೋಲ್‌’ ಓದುವುದೆಂದರೆ ಸಫ್ದರ್‌ ಅವರ ಜೀವನಗಾಥೆಯ ಜತೆಗೆ ಕಳೆದ ಶತಮಾನದ ಉತ್ತರಾರ್ಧದ ರಂಗ ಚಟುವಟಿಕೆಗಳ –ಅದರಲ್ಲೂ ಜನಮ್‌ನ ಏಳು–ಬೀಳುಗಳ– ಅಧ್ಯಯನ, 1970–90ರ ಅವಧಿಯಲ್ಲಿ ದೆಹಲಿಯಲ್ಲಿದ್ದ ರಾಜಕೀಯ ಹಾಗೂ ಸಾಂಸ್ಕೃತಿಕ ವಾತಾವರಣದ ಮೆಲುಕು, ಆಗಿನ ಕಾರ್ಮಿಕ ಚಳವಳಿಗಳ ಮೇಲಿನ ಇಣುಕುನೋಟ… ಹೀಗೆ ಏಕಕಾಲಕ್ಕೆ ಎಲ್ಲವೂ ಆಗಿದೆ. ಕಲಾವಿದ, ಕವಿ, ಲೇಖಕ, ಕಾರ್ಯಕರ್ತ – ಹೀಗೆ ಬಹುಪಾತ್ರಗಳಲ್ಲಿ ತೊಡಗಿಸಿಕೊಂಡಿದ್ದ ಆ ದೈತ್ಯ ಪ್ರತಿಭೆಯ ಕೊಲೆ ನಡೆದಾಗ ಕೇಂದ್ರದಲ್ಲಿ ಇದ್ದುದು ರಾಜೀವ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸರ್ಕಾರ. ಮುಂದೆ ರಾಜೀವ್‌ ಗಾಂಧಿ ಅವರೂ ಚುನಾವಣಾ ರ‍್ಯಾಲಿಯಲ್ಲಿ ಅಂತಹದ್ದೇ ದುರಂತ ಸಾವನ್ನಪ್ಪಿದ್ದು ಕಾಕತಾಳೀಯ.

ಸುಧನ್ವ ಅವರೇ ಹೇಳುವಂತೆ ಇದು ಸಾವಿನ ಕಥೆಯಲ್ಲ; ಬದುಕಿನ ಕಥನ. ಇಲ್ಲಿ ನೋವಿನ ಜತೆಗೆ ಜೀವನೋತ್ಸಾಹವೂ ಇರುವುದನ್ನು ಮರೆಯುವಂತಿಲ್ಲ. ‘ಎಂತಹ ಚಂದದ ಹುಡುಗ ಇಲ್ಲವಾದನಲ್ಲ’ ಎನ್ನುವ ಕೊರಗಿಗಿಂತ, ‘ಆತ ಎಲ್ಲರ ಹೃದಯದೊಳಗೆ ಜೀವಂತವಾಗಿದ್ದಾನೆ’ ಎಂಬ ಅಭಿಮಾನವೇ ಇಲ್ಲಿ ಎದ್ದುಕಾಣುತ್ತದೆ. ‘ಸಮುದಾಯ’ದ ಸುದೀರ್ಘ ಕಾಲದ ಒಡನಾಡಿ ಎಂ.ಜಿ. ವೆಂಕಟೇಶ್‌ ಅವರು ಈ ಕೃತಿಯನ್ನು ಸಮರ್ಥವಾಗಿ ಕನ್ನಡಕ್ಕೆ ತಂದಿದ್ದಾರೆ. ಅಗತ್ಯವಾದೆಡೆ ಟಿಪ್ಪಣಿಗಳನ್ನು ಕೊಡುವ ಮೂಲಕ ಮೂಲ ವಿವರಗಳಿಗೆ ಹೆಚ್ಚಿನ ಸ್ಪಷ್ಟತೆ ಸಿಗುವಂತೆಯೂ ಮಾಡಿದ್ದಾರೆ. ಆದರೆ, ಕೃತಿಯಲ್ಲಿ ಉಳಿದಿರುವ ಕಾಗುಣಿತ ದೋಷಗಳು ಊಟದಲ್ಲಿ ಸಿಗುವ ಕಲ್ಲಿನಂತೆ ಕಿರಿಕಿರಿ ಕೊಡುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು