ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತಕೇರಿಯಲ್ಲಿ ಆರ್‌ಎಸ್‌ಎಸ್ ಬೆಳೆದ ಕಥನ

Last Updated 5 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಸಮಚಿತ್ತದ ಸಮದರ್ಶಿ
ಲೇ:
ಅಶೋಕಪುರಂ ಗೋವಿಂದರಾಜು
ಪುಟಗಳು: 336
ಬೆಲೆ: ₹ 200
ಪ್ರಕಾಶಕರು: ಶ್ರೀಮತಿ ನಾಗಮ್ಮ ಕೇಶವಮೂರ್ತಿ ವಿದ್ಯಾಸಂಸ್ಥೆ, ಹುಚ್ಚವ್ವನಹಳ್ಳಿ, ದಾವಣಗೆರೆ ಜಿಲ್ಲೆ

ಮೈಸೂರಿನ ಅಶೋಕಪುರಂ ಮಹಾಭಾರತದ ಹಸ್ತಿನಾಪುರವಿದ್ದಂತೆ. ಆ ಪರಿಯ ಸಮೃದ್ಧ ಬದುಕು ಸುಮಾರು ಎರಡು ಕಿ.ಮೀ. ವ್ಯಾಪ್ತಿಯ, ಹದಿಮೂರು ಬೀದಿಗಳ ನಡುವೆ ಹರಡಿಕೊಂಡಿರುವ ಆ ಪ್ರದೇಶವನ್ನು ಆವರಿಸಿಬಿಟ್ಟಿದೆ. ಹಿಂದೆ ಈ ಕೇರಿಯನ್ನು ದೊಡ್ಡಹೊಲಗೇರಿ ಎಂದು ಕರೆಯಲಾಗುತ್ತಿತ್ತು. ಹಲವು ಚರ್ಚೆ, ಸಂವಾದ, ಪ್ರತಿಭಟನೆ, ಸಂಘರ್ಷ, ತಿಕ್ಕಾಟ, ಬೀದಿರಂಪಗಳ ನಡುವೆ ಇಲ್ಲಿಯ ಜನರ ವ್ಯಕ್ತಿತ್ವಗಳು ರೂಪುಗೊಂಡಿವೆ. ಈ ಕೇರಿ, ಡಾಕ್ಟರೇಟ್‌ ಪಡೆದಿರುವ ಹದಿನೈದು ಜನರ ನೆಲೆಯೂ ಹೌದು. ರಾಜ್ಯಮಟ್ಟದ ಹತ್ತಾರು ಪೈಲ್ವಾನರನ್ನು ಕೊಟ್ಟ ಪ್ರದೇಶವೂ ಇದಾಗಿದೆ!

‘ಈಗ ಎದ್ದಿಯವ್ವ ಕೂಸೆ’, ‘ಏ ಮಾವ, ಯಾಕಡೆ’, ‘ಲೇ ಮೊಗಾ, ಬೀದಿಗೆ ವಸಿ ಮೆಲ್ಗೆ ಸಗಣಿ ಹಾಕಪ್ಪ’, ‘ದೂಳು ಎದ್ದುಬಿದ್ದು ಕುಣಿದಾಡ್ತಾದೆ, ನೀರ್ ಹಾಕ್ಬುಟ್ಟು ಗುಡುಸಪ್ಪ’, ‘ರಂಗೋಲಿ ನಗುವಂಗೆ ಬಿಡಿಸವ್ವಾ... ದೀಪ ಉರ್ದಂಗೆ ಇರಬೇಕು, ನಕ್ಷತ್ರ ಮಿಂಚ್ದಂಗೆ...’- ಇದು ಅಶೋಕಪುರಂನ ಬೀದಿಯಲ್ಲಿನ ಬೆಳಗು. ಇಂತಹ ವರ್ಣರಂಜಿತ ಪ್ರದೇಶದಲ್ಲಿ ಹುಟ್ಟಿ 80 ವರ್ಷಗಳ ತುಂಬುಜೀವನ ನಡೆಸಿದ ರಾಮಕೃಷ್ಣ, ಕಳೆದ ವರ್ಷ ಅಕ್ಟೋಬರ್ 3ರಂದು ತೀರಿಕೊಂಡರು. ಅಶೋಕಪುರಂನಲ್ಲಿ ಆರ್‌ಎಸ್‌ಎಸ್‌ ಅನ್ನು (1965) ಪರಿಚಯಿಸಿ, ನೂರಾರು ಜನರ ಬದುಕನ್ನು ರೂಪಿಸಿದವರು ಅವರು.

ರಾಮಕೃಷ್ಣ ಅವರ ಗೆಳೆಯರು ತಮ್ಮ ಜತೆಗಿದ್ದ ಈ ಸಾಧಕನ ಬದುಕನ್ನು ದಾಖಲಿಸಲು ನಿರ್ಧರಿಸಿದ ಪರಿಣಾಮ, ಅಶೋಕಪುರಂ ಗೋವಿಂದರಾಜು ಅವರ ಪರಿಶ್ರಮದಿಂದ ‘ಸಮಚಿತ್ತದ ಸಮದರ್ಶಿ’ ಕೃತಿ ಹೊರಬಂದಿದೆ. ಹೌದು, ಇದು ರಾಮಕೃಷ್ಣರೊಬ್ಬರ ನೆನಪಿನ ಯಾತ್ರೆಯಾಗುವುದು ಸಾಧ್ಯವಿರಲಿಲ್ಲ. ಏಕೆಂದರೆ ರಾಮಕೃಷ್ಣ, ವೆಂಕಟರಾಮು, ಶ್ರೀನಿವಾಸ ಪ್ರಸಾದ್ (ಈಗ ಲೋಕಸಭಾ ಸದಸ್ಯ)- ಸದಾ ಜೊತೆಗೇ ಇರುತ್ತಿದ್ದ ಜೀವದ ಗೆಳೆಯರು, ‘ಚಡ್ಡಿ ದೋಸ್ತ’ರು! ಪುಸ್ತಕ ಈ ಮೂವರ ಕಥೆಯನ್ನೂ ಹೇಳುತ್ತದೆ. ಮೂವರೂ ಆ ಕಾಲದಲ್ಲಿ ಅಶೋಕಪುರಂನಲ್ಲಿ ನಡೆಯುತ್ತಿದ್ದ ಆರ್‌ಎಸ್‌ಎಸ್‌ನ ಹನುಮಾನ್ ಶಾಖೆಯ ರೂವಾರಿಗಳಾಗಿದ್ದರಿಂದ ಇವರೊಂದಿಗೆ ದೊಡ್ಡ ಪಟಾಲಮ್ಮು ಸಹ ಇತ್ತು. ಪಟಾಲಮ್ಮಿನ ಭಾಗವಾಗಿದ್ದ ಜವರಯ್ಯ, ಮುದ್ದು ಚಲುವಯ್ಯ, ವುರ್ಗಿ ಜವರ, ರಘುನಾಥ, ಮಹದೇವ, ವೆಂಕಟರಾಜು, ರಾಮಸ್ವಾಮಿ ಮುಂತಾದವರ ಕಥೆಯೂ ಇಲ್ಲಿ ಸೇರಿಕೊಂಡಿದೆ.

ರಾಮಕೃಷ್ಣ ಅವರು ಆರ್‌ಎಸ್‌ಎಸ್‌ನಲ್ಲಿ ಕಲಿತ ‘ಸಂಕಟದಲ್ಲಿದ್ದವರ ನೆರವಿಗೆ ಧಾವಿಸುವ’ ಗುಣದಿಂದಾಗಿ ಕಥೆಯು ಎಲ್ಲ ಬೀದಿ- ಮನೆಗಳನ್ನೂ ಪ್ರವೇಶಿಸುತ್ತದೆ. ಓದಿ ಮುಗಿಸುವಾಗ ಇಡೀ ಅಶೋಕಪುರಂ ತನ್ನ ಕಥೆಯನ್ನೇ ಬಿಚ್ಚಿ ಹೇಳಿಕೊಂಡಂತೆ ಅನಿಸುತ್ತದೆ.

ರಾಮಕೃಷ್ಣ ಅವರು ಹನುಮಾನ್ ಶಾಖೆಯಲ್ಲಿ ಕಬಡ್ಡಿ, ದೊಣ್ಣೆವರಸೆ, ಕವಾಯತು ಕಲಿಸಿದ್ದಷ್ಟೇ ಅಲ್ಲ, ಊರ ಮಕ್ಕಳಿಗೆ ಮನೆಪಾಠ ಮಾಡಿದರು. ಮೈಸೂರಿನ ಪ್ರಸಿದ್ಧ ವೈದ್ಯರೆನಿಸಿದ್ದ ಡಾ. ಬಾಪಟ್, ಡಾ. ಸಮೀರ್‌ ಅವರನ್ನು ಆರ್‌ಎಸ್‌ಎಸ್‌ನ ಪ್ರಭಾವ ಬಳಸಿ ವಾರಕ್ಕೆರಡು ಸಲ ಕರೆಸಿ ವೈದ್ಯಕೀಯ ಶಿಬಿರ ಮಾಡಿದರು. ಬೀದಿಯಲ್ಲಿ ಹೆಂಡ ಮಾರುವುದನ್ನು ನಿಲ್ಲಿಸಿದರು. ಸಾವು - ನೋವುಗಳಿಗೆ ಹೆಗಲು ಕೊಟ್ಟರು.

ಕಡುಬಡತನದಿಂದಾಗಿ ಏಳನೇ ತರಗತಿಗೆ ಓದು ನಿಲ್ಲಿಸಿದ್ದ ಶಾಖೆಯ ಹುಡುಗ ಜವರಯ್ಯನಿಗೆ ಪಾಠ ಮಾಡಿದ ರಾಮಕೃಷ್ಣ, ಖಾಸಗಿಯಾಗಿ ಹತ್ತನೇ ತರಗತಿ ಪರೀಕ್ಷೆ ಕಟ್ಟಿಸಿದ್ದರು. ಕೊನೆಗೆ ಜವರಯ್ಯ ಅವರು ಡಾ. ಮನಜ ಆದರು. ಮಾನಸ ಗಂಗೋತ್ರಿಯಲ್ಲಿ ಪ್ರಾಧ್ಯಾಪಕರಾದರು. ವಿದ್ಯಾರ್ಥಿಯಾಗಿದ್ದಾಗಲೇ ಮನಜ ‘ಡಾ ಅಂಬೇಡ್ಕರ್– ವಿದ್ಯಾರ್ಥಿಜೀವನ’ ಎಂಬ 200 ಪುಟಗಳ ಪುಸ್ತಕ ಬರೆದರು. ರಾಮಕೃಷ್ಣ ಹಣ ಹೊಂದಿಸಿ ಪುಸ್ತಕ ಮುದ್ರಿಸಿದರು; ಮಾತ್ರವಲ್ಲ ಎಸ್‌.ಎಲ್‌. ಭೈರಪ್ಪ ಅವರನ್ನು ಅಶೋಕಪುರಂಗೆ ಕರೆಸಿ ಪುಸ್ತಕ ಬಿಡುಗಡೆಯನ್ನೂ ಮಾಡಿಸಿದರು.

ದೊಗಳೆ ಚಡ್ಡಿ ಧರಿಸಿ, ದೊಣ್ಣೆ ಹಿಡಿದು ಊರತುಂಬ ಠಳಾಯಿಸುವ ಈ ಹುಡುಗರ ಬಗ್ಗೆ ಊರ ಹಿರಿಯರಿಗೆ ಏನೋ ಅನುಮಾನ. ಅದೊಂದು ಭಾನುವಾರ ಆರ್‌ಎಸ್‌ಎಸ್‌ ಶಾಖೆ ನಡೆಸುತ್ತಿದ್ದ ರಾಮಕೃಷ್ಣ, ವೆಂಕಟರಾಮು ಅವರನ್ನು ಪಂಚಾಯಿತಿ ಎದುರು ವಿಚಾರಣೆಗೆ ನಿಲ್ಲಿಸಲಾಯಿತು. ಊರ ಯಜಮಾನರಾಗಿದ್ದ ಕೂಸಯ್ಯ, ದೊಡ್ಡವೆಂಕಟಯ್ಯ, ಪುಟ್ಟಸ್ವಾಮಣ್ಣ ಮತ್ತಿತರರು ವಿಚಾರಣೆ ನಡೆಸಿದರು.

‘ನಾವು ಒಳ್ಳೆಯದನ್ನು ಕಲಿಯುತ್ತಿದ್ದೇವೆ, ಕಲಿಸುತ್ತಿದ್ದೇವೆ’ ಎಂಬ ವೆಂಕಟರಾಮು ಅವರ ಮಾತು ಅಲ್ಲಿದ್ದವರಿಗೆ ಅರ್ಥವಾಗಲಿಲ್ಲ. ‘ಏನೂ ಕಾಸು ಗಿಟ್ಟಲ್ಲ ಅಂದ್ರೆ ನೀವ್ಯಾಕೆ ಈ ಸಂಘ ಮಾಡ್ತಾ ಇದ್ದೀರಿ?’- ಇದು ಪಂಚಾಯಿತಿ ಹಿರಿಯರ ತಕರಾರು. ಆರ್‌ಎಸ್‌ಎಸ್‌ ಶಾಖೆ ಮಾಡುವುದನ್ನು ನಿಲ್ಲಿಸುವಂತೆ ಪಂಚಾಯಿತಿ ಆದೇಶಿಸಿತು. ಹುಡುಗರು ಒಪ್ಪಲಿಲ್ಲ. ಕೊನೆಗೆ ಪಂಚಾಯಿತಿಯು ವೆಂಕಟರಾಮು, ರಾಮಕೃಷ್ಣ ಅವರ ಕುಟುಂಬಗಳಿಗೆ ಬಹಿಷ್ಕಾರ ಸಾರಿತು. ಆದರೂ ಆರ್‌ಎಸ್‌ಎಸ್‌ ಚಟುವಟಿಕೆ ನಿಲ್ಲಲಿಲ್ಲ.

ಕಾಲ ಸರಿದಿದೆ. ಈಗ ವೆಂಕಟರಾಮು ಆರ್‌ಎಸ್‌ಎಸ್‌ನ ರಾಜ್ಯ ಘಟಕದ ಅಧ್ಯಕ್ಷರು. ಕೆಲ ವರ್ಷಗಳ ಹಿಂದೆ ವೆಂಕಟರಾಮು, ಮೋಹನ ಭಾಗವತರೊಂದಿಗೆ ವೇದಿಕೆಯಲ್ಲಿ ಕುಳಿತ ವಿಶಾಲಸಭೆಯ ಫೋಟೊವನ್ನು ‘ಪ್ರಜಾವಾಣಿ’ಯ ಮುಖಪುಟದಲ್ಲಿ ನೋಡಿ ಇಡೀ ಅಶೋಕಪುರಂ ಸಂಭ್ರಮಿಸಿದೆ. ಮಾತ್ರವಲ್ಲ ವೆಂಕಟರಾಮು ಅವರನ್ನೇ ಪಂಚಾಯಿತಿಗೆ ಯಜಮಾನನನ್ನಾಗಿಯೂ ನೇಮಿಸಿಕೊಂಡಿದೆ.

ಅಸ್ಪೃಶ್ಯರು ಎನಿಸಿಕೊಂಡವರೇ ವಾಸ ಮಾಡುತ್ತಿದ್ದ ಅಶೋಕಪುರಂನಲ್ಲಿ ಸವರ್ಣೀಯರ ಒಂದೆರಡು ಮನೆಗಳೂ ಇದ್ದವು. ಆರನೇ ಬೀದಿಯ ಬಳ್ಳಮ್ಮನ ಮನೆಯ ಪಕ್ಕದಲ್ಲಿದ್ದ ಲಿಂಗಾಯತರೊಬ್ಬರು ನಡೆಸುತ್ತಿದ್ದ ಮನೆ ಹೋಟೆಲ್ಲಿನ ಬಗೆ ಬಗೆ ದೋಸೆಗಳು, ಮಲಯಾಳಿ ಶಂಕರನಾರಾಯಣ ಮಾಡುತ್ತಿದ್ದ ಕುಷ್ಕ ಪುಲಾವ್, ಬೋಟಿ ಸಾರು ಹೇಗೆ ಬೆಳಗಿನ ತಿಂಡಿಯ ಅಭ್ಯಾಸವಿಲ್ಲದ ಅಶೋಕಪುರಂ ಜನರನ್ನು ಬದಲಾಯಿಸಿತೆಂಬ ರಸಮಯ ವಿವರಗಳೂ ಕೃತಿಯಲ್ಲಿ ಬಂದು ಹೋಗುತ್ತವೆ. ಇಪ್ಪತೈದು ಪೈಸೆಯ ಬಾಜಿಗೆ ಬಿದ್ದು ಸಾವಿರ ಬಸ್ಕಿ ಹೊಡೆದಿದ್ದ ಶಿವಲಿಂಗು, ಸಿದ್ಧಪ್ಪಾಜಿ ದೇವಸ್ಥಾನದ ಹದಿನೈದು ಮೆಟ್ಟಿಲುಗಳನ್ನು ಸೈಕಲ್ಲಿನಲ್ಲಿ ಹತ್ತಿಸುತ್ತಿದ್ದ ಕಳ್ಳನಾಥನಂತಹ ಪಾತ್ರಗಳು ಸದಾ ನೆನಪಿನಲ್ಲಿ ಉಳಿಯುತ್ತವೆ.

ಆ ದಿನಗಳಲ್ಲಿ ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿದ್ದು, ಸಂಘದ ವಲಯದಲ್ಲಿ ವೆಂಕಣ್ಣ ಎಂದೇ ಜನಪ್ರಿಯರಾಗಿದ್ದ ಪ್ರೊ. ವೆಂಕೋಬರಾವ್, ಹನುಮಾನ್ ಶಾಖೆಗೆ ನಿರಂತರ ಭೇಟಿ ಕೊಟ್ಟು ಹುಡುಗರಲ್ಲಿ ಬೌದ್ಧಿಕ ಆಸಕ್ತಿ ರೂಪಿಸಿದವರು. ಈ ಪುಸ್ತಕಕ್ಕಾಗಿ ತಮ್ಮ ಅನುಭವ ಹಂಚಿಕೊಂಡಿರುವ ವೆಂಕಣ್ಣ, ‘ನಾನು ವೇದ, ಉಪನಿಷತ್ತು ಓದಿದವನಾದರೂ ದಲಿತಕೇರಿಯಲ್ಲಿ ಹುಟ್ಟಿ ಬೆಳೆದ ಹೃದಯ ಶ್ರೀಮಂತಿಕೆಯ ನಿನ್ನ ವ್ಯಕ್ತಿತ್ವವೇ ಪರಿಪೂರ್ಣವಾದದ್ದು, ನನ್ನದಲ್ಲ’ ಎಂದು ರಾಮಕೃಷ್ಣ ಅವರ ಕುರಿತು ಹೇಳಿದ್ದಾರೆ.

ದಲಿತ ಚಳವಳಿಯ ಕೇಂದ್ರವಾಗಿ ರೂಪುಗೊಂಡ ಅಶೋಕಪುರಂನಲ್ಲಿ ಆರ್‌ಎಸ್‌ಎಸ್‌ನ ಬೆಳವಣಿಗೆಯ ಕಥೆಯನ್ನು ಈ ಪುಸ್ತಕ ಚೊಕ್ಕವಾಗಿ ಹೇಳುತ್ತದೆ. ಸಾಮಾಜಿಕ ಅಧ್ಯಯನದ ಆಸಕ್ತರಿಗೆ ಒಳ್ಳೆಯ ಓದು, ಆಕರ.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT