ಮಂಗಳವಾರ, ಜೂನ್ 15, 2021
24 °C

ಚೊಕ್ಕಾಡಿ ಸಾಂಸ್ಕೃತಿಕ ಜಗತ್ತಿನ ದರ್ಶನ

ಎಸ್‌.ಆರ್‌. ವಿಜಯಶಂಕರ Updated:

ಅಕ್ಷರ ಗಾತ್ರ : | |

Prajavani

‘ಕಾಲದೊಂದೊಂದೇ ಹನಿ’ ಕವಿ ಸುಬ್ರಾಯ ಚೊಕ್ಕಾಡಿಯವರ ಅನುಭವ ಕಥನ. ತಮ್ಮ ‘ಇರುಳ ಸದ್ದುಗಳು’ ಎಂಬ ಕವನದ ಸಾಲೊಂದನ್ನು ಶೀರ್ಷಿಕೆಯಾಗಿ ಇರಿಸಿರುವ ಈ ಕೃತಿಯನ್ನು ಚೊಕ್ಕಾಡಿಯವರು ಆತ್ಮಕಥನವೆಂದು ಕರೆಯದೆ ‘ಅನುಭವ ಕಥನ’ ಎನ್ನಲು ಮುಖ್ಯ ಕಾರಣ, ಇವುಗಳೆಲ್ಲ ಬದುಕಿನ ಪಯಣದಲ್ಲಿ ಪಡೆದ ವೈಯಕ್ತಿಕ, ಸಾಮಾಜಿಕ ಅನುಭವಗಳ ದಾಖಲೆ ಎಂಬ ತಾತ್ವಿಕ ನಿಲುವು. ಆತ್ಮಕಥೆ ಬರೆಯುವಷ್ಟು ದೊಡ್ಡ ವ್ಯಕ್ತಿಯಾಗಲಿ ಅಥವಾ ಅಂತಹ ದೊಡ್ಡ ಜೀವನದರ್ಶನವಾಗಲಿ ತನ್ನದಲ್ಲ ಎನ್ನುವುದು ಅವರ ವಿನಯ. ಆದರೆ ತಾನು ಹುಟ್ಟಿ, ಬೆಳೆದು, ಬಾಳಿ, ಬದುಕುತ್ತಿರುವ ತನ್ನ ಊರಾದ ಚೊಕ್ಕಾಡಿ ಎಂಬ ಸ್ಥಳ ಕೇಂದ್ರವಾಗಿ ತನ್ನ ಬಾಳಿನಲ್ಲಿ ಕಂಡ ಒಂದು ಕಾಲಘಟ್ಟವನ್ನು (1950–2020), ಅದರ ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ನೆಲೆಗಳಲ್ಲಿ ಈ ಕೃತಿ ದಾಖಲಿಸುತ್ತದೆ. ಆ ಮೂಲಕ ಸ್ವಾತಂತ್ರ್ಯೋತ್ತರದ ಕನ್ನಡ ಪರಿಸರದಲ್ಲಿ ಏಳು ದಶಕಗಳ ಸಾಂಸ್ಕೃತಿಕ ಚರಿತ್ರೆ ವಿಕಾಸಗೊಂಡ ಕ್ರಮವನ್ನೂ ಸೂಚಿಸುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕುಗ್ರಾಮವಾಗಿದ್ದ ಊರು ಚೊಕ್ಕಾಡಿ. ಶಿವರಾಮ ಕಾರಂತರ ‘ಬೆಟ್ಟದ ಜೀವ’ದ ಪರಿಸರ. ಬಂಟಮಲೆ ಶ್ರೇಣಿಯ ಸುತ್ತಲಿನ ಗುಡ್ಡಕಣಿವೆಗಳ ನಡುವೆ ಹಬ್ಬಿರುವ ಭತ್ತ, ಕಂಗು, ತೆಂಗುಗಳ ಈ ಕೃಷಿಪ್ರದೇಶ ಯಕ್ಷಗಾನದ ಮೂಲಕ ಕಲಾಭಿರುಚಿಯನ್ನು ಬೆಳೆಸಿಕೊಂಡ ಊರು. ಅಲ್ಲಿ ಅಜ್ಜನಗದ್ದೆ ಗಣಪಯ್ಯ ಭಾಗವತರ ಹಿರಿಯ ಮಗನಾಗಿ ಜನಿಸಿದ ಸುಬ್ರಾಯರು ಬಡತನದಲ್ಲಿ ಓದಿ, ಶಾಲಾ ಮಾಸ್ತರರಾಗಿ ಸ್ವಾಧ್ಯಾಯದಿಂದ ಪದವಿಗಳನ್ನು ಪಡೆದವರು. ಸಾಹಿತ್ಯಾಭಿರುಚಿಯನ್ನೂ ಬೆಳೆಸಿಕೊಂಡವರು. ತಂದೆ ಉಪವೃತ್ತಿಯಾಗಿ ಮಾಡುತ್ತಿದ್ದ ಪುಸ್ತಕ ವ್ಯಾಪಾರ ಅವರ ಸಾಹಿತ್ಯ ಓದಿನ ಮೊದಲ ಪ್ರೇರಣೆ. ಮುಂದೆ ಗೋಪಾಲಕೃಷ್ಣ ಅಡಿಗರ ಕಾವ್ಯದಿಂದ ಪ್ರಭಾವಿತರಾದ ಅವರು ಸುಳ್ಯದ ನಡುವಿರುವ ನವಸಾಹಿತಿಗಳ ‘ಸುಮನಸಾ’ ವಿಚಾರವೇದಿಕೆ ಕಟ್ಟಿ ತಮ್ಮ ಸುತ್ತಮುತ್ತಲಿನ ಊರುಗಳಲ್ಲಿ ಹೊಸ ಸಾಹಿತ್ಯಾಭಿರುಚಿಯನ್ನು ಬೆಳೆಸಿದರು.

1970ರ ದಶಕದಲ್ಲಿ ಜಿ.ಎಸ್‌.ಉಬರಡ್ಕ, ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಕಿರಣ, ಪ್ರಸಾದ್‌ ರಕ್ಷಿದಿ, ಪುರುಷೋತ್ತಮ ಬಿಳಿಮಲೆ, ಕೆ.ಪಿ.ಸುರೇಶ, ಅರವಿಂದ ಚೊಕ್ಕಾಡಿ, ಸಂತೋಷ ಚೊಕ್ಕಾಡಿ ಮೊದಲಾದ ಇಂದಿನ ಹಲವು ಬರಹಗಾರರು ಚೊಕ್ಕಾಡಿಯವರ ಒಡನಾಟದಲ್ಲಿ ಇದ್ದವರು. ಪಿ.ಲಂಕೇಶರ ಮೊದಲ ನಾಟಕ ‘ನನ್ನ ತಂಗಿಗೊಂದು ಗಂಡು ಕೊಡಿ’ ಚೊಕ್ಕಾಡಿಯಿಂದ ಪ್ರಕಟವಾಯಿತು ಎಂಬುದು ಆ ಕಾಲದಲ್ಲಿ ಕನ್ನಡ ಸಾಹಿತ್ಯದ ಹೊಸ ಚಿಂತನೆಯ ಜೊತೆ ಚೊಕ್ಕಾಡಿಯಂತಹ ಒಂದು ಟಾರು ರಸ್ತೆಯೂ ಇಲ್ಲದ ಪುಟ್ಟಹಳ್ಳಿಗೆ ಇದ್ದ ಸಾಂಸ್ಕೃತಿಕ ಸಂಪರ್ಕಗಳನ್ನು ಸೂಚಿಸುತ್ತದೆ. ಕಾರಂತ, ಮಾಸ್ತಿ, ಅಡಿಗ, ತಿರುಮಲೇಶ್‌ ಹೀಗೆ ಹಲವು ಲೇಖಕರ ಪರಿಚಯ, ಭೇಟಿ ಇತ್ಯಾದಿ ವಿವರಗಳು ಆಗಿನ ಸಾಹಿತ್ಯ–ಸಂಸ್ಕೃತಿಗಳ ಚರಿತ್ರೆ, ಚಿಂತನಾ ಕ್ರಮಗಳಿಗೊಂದು ದಿಕ್ಸೂಚಿ.

‘ಚೋಮನ ದುಡಿ’ ಕಾದಂಬರಿಯ ನಾಟಕ ಅವತರಣಿಕೆಯಲ್ಲಿ ‘ಚೋಮ’ನಾಗಿ ಸುಳ್ಯದಲ್ಲಿ ಅಭಿನಯಿಸಿದ ಚೊಕ್ಕಾಡಿ (ನಿರ್ದೇಶನ ಆರ್‌.ನಾಗೇಶ್‌) ಹಲವು ನಾಟಕ ತಂಡಗಳ ಮೂಲಕ ಸುಳ್ಯದ ಸುತ್ತಮುತ್ತ ಹೊಸ ಅಲೆಯ ನಾಟಕಗಳ ಅಭಿರುಚಿಯನ್ನು ಬೆಳೆಸಿದರು. ಸಾಹಿತ್ಯ, ಸಾಂಸ್ಕೃತಿಕ ನೆಲೆಗಳಲ್ಲಿ ತಮ್ಮ ಹಳ್ಳಿಯಲ್ಲಿದ್ದೇ ತಾವೂ ಬೆಳೆಯುತ್ತಾ ತಮ್ಮ ಸುತ್ತಲೂ ಸಾಹಿತ್ಯದ ಸದಭಿರುಚಿಯನ್ನು ಪ್ರೋತ್ಸಾಹಿಸುತ್ತಾ, ಸಾಂಸ್ಕೃತಿಕ ವಿಕೇಂದ್ರೀಕರಣದ ಇನ್ನೊಂದು ಸಾಧ್ಯತೆಯನ್ನು ಅವರು ಕಾಣಿಸಿದರು. ಆರ್ಥಿಕ ಕಾರಣಗಳಿಂದ ವಿದ್ಯಾಭ್ಯಾಸ ಕುಂಠಿತವಾಗಿ ಉದ್ಯೋಗಕ್ಕೆ ಸೇರಿ ಕಾಡಿನ ಮಧ್ಯೆ ಬದುಕಿದ ಚೊಕ್ಕಾಡಿ ಅವರು, ತಮ್ಮ ಸಾಹಿತ್ಯ ಹಾಗೂ ಓದುವ ಹುಚ್ಚನ್ನು ತಾವು ಕಾಡಿಗೆ ಸ್ಪಂದಿಸಿದ ರೀತಿ ಎಂದೇ ತಿಳಿಯುತ್ತಾರೆ.

ಮನೆಯ ಹಿರಿಯ ಮಗನಾಗಿ, ಕೃಷಿಕನಾಗಿ, ಶಿಕ್ಷಕನಾಗಿ, ಸಾಹಿತಿಯಾಗಿ ಇರುವುದೇ ತನ್ನ ಪುರುಷಾರ್ಥಗಳು ಎಂದು ಭಾವಿಸಿ ಬರೆದಿರುವ ಈ ಅನುಭವ ಕಥನದಲ್ಲಿ 47 ವಿಶಿಷ್ಟ ಅಧ್ಯಾಯಗಳಿವೆ. ಒಂದು ಕಾಲಘಟ್ಟದ ವಿವರಗಳನ್ನು ಈ ನಾಲ್ಕೂ ನೆಲೆಗಳಲ್ಲಿ ದಾಖಲಿಸುವ ಈ ಅಧ್ಯಾಯಗಳನ್ನು ಬಿಡಿ ಲೇಖಗಳಂತೆಯೂ ಓದಲು ಸಾಧ್ಯ. ಇಲ್ಲಿನ ಬರವಣಿಗೆ ಚೊಕ್ಕಾಡಿ ಅವರು ನೇರವಾಗಿ ಬರೆದುದಲ್ಲ. ಕೈನೋವಿನಿಂದ ಬಳಲುತ್ತಿದ್ದ ಅವರು ಲಾಕ್‌ಡೌನ್‌ ಕಾಲದಲ್ಲಿ ಚೊಕ್ಕಾಡಿಯಿಂದ ಮೊಬೈಲ್‌ ಫೋನ್‌ನಲ್ಲಿ ಹೇಳಿದ್ದನ್ನು ಬೆಂಗಳೂರಿನಲ್ಲಿ ರೆಕಾರ್ಡ್‌ ಮಾಡಿಕೊಂಡು ಅಂಜನಾ ಹೆಗಡೆ ಅವರು ಟೈಪ್‌ ಮಾಡಿ ರಚಿತವಾದ ಪುಸ್ತಕವಿದು. ಹಾಗಾಗಿ ಅನುಭವ ಕಥನ ನೇರ ಬರವಣಿಗೆಯ ನಿರೂಪಣಾ ಶೈಲಿಗಿಂತ ತುಸು ಭಿನ್ನವಾದ ಸಂಭಾಷಣಾ ಶೈಲಿಯನ್ನು ಒಳಗೊಂಡಿದೆ. ಇದರಿಂದಾಗಿ ಕಥನ ಕ್ರಮಕ್ಕೊಂದು ಆಪ್ತಧಾಟಿ ಲಭಿಸಿದೆ. ಅದು ಕಾಲಘಟ್ಟದ ವಿವರಗಳನ್ನು ಓದುಗನ ಆಪ್ತ ಅನುಭವವನ್ನಾಗಿಸುತ್ತದೆ.

ಶಿಕ್ಷಕನಾಗಿ ಸುದೀರ್ಘ ‍ಕೆಲಸ ಮಾಡಿದ ಚೊಕ್ಕಾಡಿ, ಶಿಕ್ಷಣಕ್ರಮದ ಬದಲಾವಣೆಗೆ ಸಂಬಂಧಿಸಿದಂತೆ ಹಲವು ಒಳನೋಟಗಳನ್ನು ನೀಡುತ್ತಾರೆ. ಉದಾಹರಣೆಗೆ ಹರ್ಬರ್ಟ್‌ನ ಪಂಚಸೋಪಾನದ ಹಳೆಯ ಶೈಲಿಯಲ್ಲಿ ಪಾಠ ಮಾಡುವ ಕ್ರಮದ ಪುನರವಲೋಕನ ರೀತಿಯನ್ನು ವಿದ್ಯಾರ್ಥಿಗಳ ಕಲಿಕೆಗೆ ಅನುಗುಣವಾಗಿ ಹೇಗೆ ಬದಲಾಯಿಸಿಕೊಳ್ಳಬಹುದು ಎಂಬುದು ಅವುಗಳಲ್ಲಿ ಒಂದು. ಈ ಕೃತಿಯಲ್ಲಿರುವ ಇಂತಹ ಹಲವು ಒಳನೋಟಗಳನ್ನು ಶಿಕ್ಷಣ ಇಲಾಖೆ ಮುಂದಿನ ಶೈಕ್ಷಣಿಕ ಕ್ಷೇತ್ರದ ಬದಲಾವಣೆಗಳ ಸಂದರ್ಭದಲ್ಲಿ ಚರ್ಚಿಸಿ, ಪರಿಶೀಲಿಸಿ ಬಳಸಿಕೊಂಡರೆ ಎಷ್ಟು ಉತ್ತಮ ಎಂಬ ಭಾವನೆ ಓದುಗರಿಗೆ ಬಾರದಿರದು.

ಚೊಕ್ಕಾಡಿಯವರ ಕೃಷಿಲೋಕದ ಅನುಭವ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬದಲಾಗುತ್ತಾ ಹೋದ ಗ್ರಾಮೀಣ ಕೃಷಿ ಆರ್ಥಿಕತೆಯ ಸಂಕೇತದಂತಿದೆ. ಕುಟುಂಬದ ಹಿರಿಯ ಮಗನಾಗಿ ಸಿಕ್ಕಿದ ಸಿಹಿಕಹಿಗಳ ವಿವರಗಳು ಅವರ ಮನಸ್ಸಿನೊಳಗೆ ಹಲವು ವರುಷಗಳ ಕಾಲ ಮನುಷ್ಯ ಸ್ವಭಾವದ ಬಗೆಗಿನ ಹೊಯ್ದಾಟಗಳಿಂದ ಹುಟ್ಟಿದ ಒತ್ತಡದ ಬಿಡುಗಡೆ. ಕರ್ತವ್ಯ ಮತ್ತು ಹಕ್ಕುಗಳ ಪರಸ್ಪರ ಸಂಬಂಧಗಳ ನೈತಿಕ ನೆಲೆಗಳಿಗೆ ಉತ್ತರ ಯಾವುದು ಎಂಬುದು ಈ ಇಳಿವಯಸ್ಸಿನಲ್ಲೂ ಅವರಿಗೆ ಬಗೆಹರಿಯದ ಚಿಂತನೆ.

‘ಕವಿತೆ ಎನ್ನುವುದೊಂದು ಕಾಮರೂಪಿ’ ಎನ್ನುವುದು ಇಲ್ಲಿ ಚೊಕ್ಕಾಡಿಯವರ ಮಾತು. ಅಡಿಗರ ಕಾವ್ಯಮಾರ್ಗದ ಸಂಕೀರ್ಣ ಶೋಧನೆಗಳನ್ನು ಬಿಟ್ಟು ತಮ್ಮ ಪುಟ್ಟ ಪ್ರಪಂಚದಲ್ಲಿ ಬದುಕು ಹೇಗೆ ಬಂತೋ ಹಾಗೆ ಸ್ವೀಕರಿಸುತ್ತಾ, ಅವರ ಧ್ಯಾನಸ್ಥ ಕವನದ ‘ಪಾರಿಜಾತ’ ಗಿಡದಂತೆ ಇದ್ದಲ್ಲೇ ಆಕಾಶಕ್ಕೆ ಲಗ್ಗೆ ಇಟ್ಟು ಸುತ್ತಲೂ ಪರಿಮಳ, ಸುಂದರ ಹೂವುಗಳ ನೆರಳಿನ ಪುಟ್ಟ ನೆಲೆ ನಿರ್ಮಿಸಿಕೊಳ್ಳಬೇಕೆಂದು ಹೊರಟವರು ಚೊಕ್ಕಾಡಿ. ಸುಗಮಸಂಗೀತದ ಕಾವ್ಯ ಕವಲು ಅವರಿಗೆ ಹೆಚ್ಚಿನ ಕೀರ್ತಿ ತಂದಿದೆ. ಉತ್ತಮ ಭಾವಗೀತೆಗೆ ಸಂಗೀತವನ್ನು ಅಳವಡಿಸುವುದಕ್ಕೆ ಮತ್ತು ನಿರ್ಮಿಸಿದ ಸಂಗೀತಕ್ಕೆ ಗೀತೆ ಬರೆಯುವುದಕ್ಕೆ ಗುಣಮಟ್ಟದಲ್ಲಿ ವ್ಯತ್ಯಾಸವಿರುತ್ತದೆ ಎಂಬುದನ್ನು ಸ್ವತಃ ವಿಮರ್ಶೆಗಳನ್ನು ಬರೆಯುವ ಚೊಕ್ಕಾಡಿ ಅರಿತಿದ್ದಾರೆ. ಚೊಕ್ಕಾಡಿಯವರ ಕಾವ್ಯ ಪಯಣದ ಅನುಭವ ಕಥನವು ಅವರ ಕಾವ್ಯ ರಚನೆ ಮತ್ತು ಸುಗಮಸಂಗೀತ ಲೋಕ ಎರಡನ್ನೂ ಸಮಾನಾಂತರ ರೇಖೆಗಳಂತೆ ಕಾಣಿಸುತ್ತದೆ. ನಮ್ಮ ಸಾಹಿತ್ಯ–ಸಂಸ್ಕೃತಿ ಚರಿತ್ರೆಯ ದಾಖಲೆಯಾಗಿ ಕವಿಯೊಬ್ಬನ ಆ ವಿವರಣೆಗಳೂ ಮುಖ್ಯವಾಗುತ್ತವೆ.

v

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು