ಮಂಗಳವಾರ, ಅಕ್ಟೋಬರ್ 27, 2020
28 °C

‘ಮೊರಸು ಕನ್ನಡ’ದ ವಿರಾಟ್‌ ರೂಪ

ಎಸ್. ಆರ್. ವಿಜಯಶಂಕರ Updated:

ಅಕ್ಷರ ಗಾತ್ರ : | |

Prajavani

ಅವಿಭಜಿತ ಕೋಲಾರ ಜಿಲ್ಲೆಯ ಕನ್ನಡದ ರಚನೆ, ರೀತಿ, ಪ್ರಭಾವಗಳ ಕುರಿತಾದ ‘ಮೊರಸುನಾಡು ಕನ್ನಡ’ ಎಂಬ ಸ. ರಘುನಾಥ ಅವರ ಪುಸ್ತಕವೊಂದು ಈಚೆಗೆ ಪ್ರಕಟವಾಗಿದೆ. ‘ಮೊರಸುನಾಡು’ ಎಂಬುದು ರಾಜ್ಯದ ಇಂದಿನ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲದೆ ತಮಿಳುನಾಡಿನ ಹೊಸೂರನ್ನೂ ಸೇರಿದ ಪ್ರದೇಶ.

ಭಾಷಾವಾರು ವಿಂಗಡನೆ ಬಳಿಕ ಭೌಗೋಳಿಕವಾಗಿ ಮೊರಸುನಾಡು ಪೂರ್ಣಪ್ರದೇಶ ಒಂದೇ ರಾಜ್ಯದಲ್ಲಿ ಇಲ್ಲ. ಹಾಗಾಗಿ ಅದಕ್ಕೆ ರಾಜಕೀಯ ವ್ಯವಸ್ಥೆ ಇಲ್ಲ. ಆದರೆ, ಭಾಷೆ ಮತ್ತು ಸಂಸ್ಕೃತಿಗಳ ಕೆಲವು ಅವಿಭಜಿತ ರೂಪಗಳಲ್ಲಿ ಅವುಗಳ ಲಕ್ಷಣಗಳು ಉಳಿದುಕೊಂಡಿವೆ. ಆ ಭಾಷಾ ವೈವಿಧ್ಯದಲ್ಲಿ ಕನ್ನಡ, ತೆಲುಗು ಮತ್ತು ತಮಿಳಿನ ಸ್ವಲ್ಪ ಅಂಶಗಳು ಸೇರಿಕೊಂಡಿವೆ. ಒಂದು ರೀತಿಯಲ್ಲಿ ಭಾಷೆಗಳು ಬದಲಾಗುವ ಗಡಿಪ್ರದೇಶದಲ್ಲಿ ಕೂಡು ಭಾಷೆಯ ರೂಪದಲ್ಲಿ ಅದಕ್ಕೆ ಅಸ್ತಿತ್ವವಿದೆ. ಮಲಯಾಳ, ತುಳು ಮುಂತಾದವು ಕನ್ನಡದ ಸಮೀಪ ಬರುವ ಕೊಡಗು, ಸುಳ್ಯ ಮೊದಲಾದ ಕಡೆಗಳಲ್ಲೂ ಸೀಮಿತ ಭಾಷಾ ಪ್ರಭೇದಗಳನ್ನು ಕಾಣಬಹುದು.

ಬೆಳಗಾವಿ, ಕಲಬುರ್ಗಿ, ಬೀದರ, ಬಳ್ಳಾರಿ ಮುಂತಾದ ಗಡಿ ಭಾಗಗಳಲ್ಲೂ ನಾವು ಮಿಶ್ರ ಭಾಷಾ ಬಳಕೆಯನ್ನು ಕಾಣುತ್ತೇವೆ. ಪ್ರಸ್ತುತ ಪುಸ್ತಕದಲ್ಲಿ ವ್ಯಾಕರಣ, ಆಡುನುಡಿ, ದೇಸಿ ಪದ, ಶಿಷ್ಟ ಸಾಹಿತ್ಯ ರಚನೆಗಳಲ್ಲಿನ ಭಾಷಾ ಬಳಕೆ- ಹೀಗೆ ಹಲವು ಆಕರಗಳಿಂದ ಕೋಲಾರ ಜಿಲ್ಲೆಯ ಮೊರಸುನಾಡು ಕನ್ನಡದ ವಿಶೇಷಗಳನ್ನು ತೋರಿಸಿ, ಅವುಗಳ ಸ್ವರೂಪವನ್ನು ವಿವರಿಸಲು ಪ್ರಯತ್ನಿಸುತ್ತಾರೆ ಲೇಖಕರು.

ಕೋಲಾರ ಜಿಲ್ಲೆ ಸಂತಕವಿ ಕೈವಾರ ನಾರೇಯಣ, ಹಿರಿಯರಾದ ಡಿವಿಜಿ., ಮಾಸ್ತಿಯವರಿಂದ ಪ್ರಾರಂಭಿಸಿ ನಮ್ಮ ಕಾಲದಲ್ಲಿ ಕಾದಂಬರಿ, ಕತೆ, ಕಾವ್ಯ, ನಾಟಕ, ವಿಮರ್ಶೆ, ಬಾಲಸಾಹಿತ್ಯ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಬರೆದಿರುವ ಕಾಮರೂಪಿ, ಬಿ.ಆರ್. ಲಕ್ಷ್ಮಣರಾವ್, ಕೆ.ವೈ.ನಾರಾಯಣ ಸ್ವಾಮಿ, ಲಕ್ಷ್ಮೀಪತಿ ಕೋಲಾರ, ವಿಜಯ ರಾಘವನ್, ಕೋಟಗಾನಹಳ್ಳಿ ರಾಮಯ್ಯ, ಎಚ್. ದಂಡಪ್ಪ, ಶಿವಾರೆಡ್ಡಿ, ನಂಗಲಿ, ಗೋವಿಂದರೆಡ್ಡಿ, ಚೀಮನಹಳ್ಳಿ ರಮೇಶ್‌ ಬಾಬು, ಸ. ರಘುನಾಥ , ವಿ. ನಾಗರಾಜ- ಹೀಗೆ ಹಲವು ಬರಹಗಾರರನ್ನು ಕನ್ನಡಕ್ಕೆ ನೀಡಿದೆ. ಇವರ ಕೃತಿಗಳ ಭಾಷಾಧ್ಯಯನಗಳಿಂದ ಕೋಲಾರ ಕನ್ನಡದ ವಿಶಿಷ್ಟ ಸ್ವರೂಪಗಳನ್ನು ಕಾಣಿಸಲು ಸಾಧ್ಯವಿದೆ. ಪ್ರತ್ಯೇಕ ಜಿಲ್ಲೆಗಳ ಕನ್ನಡ ವೈಶಿಷ್ಟ್ಯಗಳ ಕುರಿತಾಗಿ ಮಾಡಿದ ಅಧ್ಯಯನಗಳೂ, ಪಿಎಚ್.ಡಿ ಸಂಶೋಧನಾ ಪ್ರಬಂಧಗಳೂ ಈಗಾಗಲೇ ಕನ್ನಡದಲ್ಲಿ ಪ್ರಕಟವಾಗಿವೆ. ಆದರೆ, ಕೋಲಾರ ಕನ್ನಡದ ಒಳಗೆ ಸೇರಿರುವ ತೆಲುಗು ಮತ್ತು ‘ತವಿಳಿ’ (ತಮಿಳು) ವಿಶಿಷ್ಟತೆ ಅದಕ್ಕೊಂದು ವಿಶಿಷ್ಟ ಸ್ವರೂಪವನ್ನು ನೀಡಿದೆ. ಅವುಗಳ ಬಗ್ಗೆ  ಇನ್ನೂ  ಹೆಚ್ಚಿನ ಅಧ್ಯಯನಗಳಿಗೆ ಅವಕಾಶಗಳಿವೆ.

ಸರಳ ವ್ಯಾಕರಣ ವಿವರಗಳಿಂದ ರಘುನಾಥ, ಅಲ್ಲಿನ ಭಾಷಾ ಉಚ್ಚಾರಣಾ ಸ್ವರೂಪವನ್ನು ಸೂಚಿಸುತ್ತಾರೆ. ಉದಾ. ಆ ಕಡೆಯ ಜನರು ಮಾತುಗಳಲ್ಲಿ ಸ್ವರಗಳು (12) ವರ್ಗೀಯ ಮತ್ತು ಅವರ್ಗೀಯ ವ್ಯಂಜನಗಳು (21) ಸೇರಿ ಒಟ್ಟು 33 ಅಕ್ಷರಗಳನ್ನು ಬಳಸಿ ಭಾಷೆಯನ್ನಾಡುವ ವಿವರಗಳನ್ನು ಹೇಳುತ್ತಾರೆ. ಅದಕ್ಕೆ ಪದಗಳ ಉದಾಹರಣೆಗಳನ್ನೂ ನೀಡಿ ವಿವರಿಸುತ್ತಾರೆ. ವತೀನೆ, ವತಾರೆ (ಬೆಳಿಗ್ಗೆ), ತಮಿಳಿನ ಸೀಪು (ಬಾಚಣಿಗೆ) ಊನೆ (ಬೆಳ್ಪು) ಪಾಟಿ (ಅಜ್ಜಿ) ಇತ್ಯಾದಿ ಪದ ವೈವಿಧ್ಯಗಳನ್ನೂ ಸೂಚಿಸುತ್ತಾರೆ.

ಕೋಲಾರ ಕನ್ನಡದ ಕಾವ್ಯಭಾಷೆಯ ವೈಶಿಷ್ಟ್ಯಕ್ಕಾಗಿ ಹಿಂದಿನ ಮತ್ತು ಇಂದಿನ ಒಂದೊಂದು ಉದಾಹರಣೆಗಳನ್ನು ನೋಡಬಹುದು. (i) ‘ನಿನ್ನ ಮೂರುತಿ ನೆನೆದು ಇಕನೇನು ಸುಖ ಪಡುದು/ ಯನ್ನಲಾಗಿ ನಿನ್ನ ಬಿರುದು ನಾಮಮೆ ಪೊಗಡುದು’ (ಕೀರ್ತನೆ: ಕೈವಾರ ತಾತಯ್ಯ.) (ii) "ಗಂಗೀಯ ಗ್ಯಾನಕ್ಕೆ ನಾಗ್ದಾಳೆ ಗಾಳ್ಯಾಗಿ/ ನೆತ್ತೀಯ ಕೆರುತಕ್ಕೆ ಕಲ್ಲವ್ವ ಸೀಗ್ಯಾಗಿ/ ಎದಿರಗುತ ನಾಕಿದ್ದ ಕತ್ತಿಗಾಳ ಯಿಡುಕಂಡು/ ಏಳೂರ ನೋಡೂಂಗೆ ಊರೊಳಕೆ ವಕ್ಕಿದ್ಲು/ ಗೆಜ್ಜಿಲುದ ಸದ್ದು ಬಾಣಾವು ಮುಟ್ತು/ ಕೂಸೆಜ್ಕೆ ಬೂಮ್ತಾಯಿ ಗೆಂಗ್ರೇಣಿ ಆದ್ಲು" (ನಾಗ್ದಾಳೆ- ಖಂಡಕಾವ್ಯ- ಚೀಮನಹಳ್ಳಿ ರಮೇಶಬಾಬು) ಹೀಗೆ ಕತೆ, ಕಾದಂಬರಿ, ಪ್ರಬಂಧ ಇತ್ಯಾದಿ ಸಾಹಿತ್ಯ ಪ್ರಕಾರಗಳಿಂದಲೂ ಕೋಲಾರದ ಮೊರಸುನಾಡು ಕನ್ನಡದ ವಿಶಿಷ್ಟ ಪ್ರಯೋಗಗಳನ್ನು ಉಲ್ಲೇಖಿಸಬಹುದು.

ಇಟ್ಟು, ಉಲ್ಟು, ಮೊದಲಾದ ಪದಗಳು; ಹಾಗೆಯೇ ‌‘ಇಟ್‌ ಮೇಲ್ ಅವರೆಕಾಳ್’ಯಂತಹ ಹಲವು ಪ್ರಯೋಗಗಳ ಮೂಲಕವೂ ಅಲ್ಲಿನ ಭಾಷೆಯ ವೈವಿಧ್ಯಗಳನ್ನು ಲೇಖಕರು ವಿವರಿಸುತ್ತಾರೆ. ‘ಶಾಲೆ’ ಅಂದರೆ ಕೋಲಾರದಲ್ಲಿ ‘ಸೀರೆ’ ಎಂದು ಅರ್ಥ. ಮಾಸ್ತಿಯವರು ‘ವೆಂಕಟಿಗನ ಹೆಂಡತಿ’, ‘ಮೊಸರಿನ ಮಂಗಮ್ಮ’ ಮುಂತಾದ ಕತೆಗಳಲ್ಲೂ ಈ ಪದವನ್ನು ಉಪಯೋಗ ಮಾಡುತ್ತಾರೆ. ಹೀಗೆ ಪ್ರಾದೇಶಿಕ ವಿಶಿಷ್ಟ ಪದಗಳ ಹಲವು ಉದಾಹರಣೆಗಳೂ ಸಾಹಿತ್ಯದಲ್ಲಿ ಇವೆ.

ಶಾಸ್ತ್ರೀಯ ಕನ್ನಡ ಭಾಷೆ ಎಂದಾಗ ನಾವು ಹಳೆಗನ್ನಡ, ನಡುಗನ್ನಡ ಮುಂತಾದ ಹಲವು ಹಂತಗಳ ಶಿಷ್ಟ ಸಾಹಿತ್ಯವನ್ನು ಅಧ್ಯಯನ ಮಾಡುವ ಕಡೆಗೆ ಮೊದಲ ಗಮನ ಹರಿಸುತ್ತೇವೆ. ಪ್ರಾದೇಶಿಕ ಕನ್ನಡ ಹಾಗೂ ಅವುಗಳ ಪ್ರಾಚೀನತೆಗೆ ಸಂಬಂಧಿಸಿದ ಅಧ್ಯಯನಗಳೂ ಕನ್ನಡದ ಆಳ ವಿಸ್ತಾರಗಳ ರೂಪವೇ ಆಗಿವೆ. ಕನ್ನಡ ಭಾಷೆ, ಸಂಸ್ಕೃತಿಗಳನ್ನು ಬೆಳೆಸುವುದರಲ್ಲಿ ಕೊಡುಗೆ ನೀಡಿದ ಈ ರೀತಿಯ ಪ್ರಾದೇಶಿಕ ಅಧ್ಯಯನಗಳೂ ಅವುಗಳಲ್ಲಿ ಸೇರಬೇಕು. ರಘುನಾಥ ಸ್ವತಃ ತೆಲುಗಿನಿಂದ ಕನ್ನಡಕ್ಕೆ ಹಾಗೂ ಕನ್ನಡದಿಂದ ತೆಲುಗಿಗೆ ಹಲವು ಕೃತಿಗಳನ್ನು ಅನುವಾದ ಮಾಡಿರುವವರು. ಈ ಎರಡೂ ಭಾಷೆಗಳಲ್ಲಿ ಅವರಿಗಿರುವ ಪ್ರಭುತ್ವದಿಂದಾಗಿ ತಮಿಳಿಗೆ ಹೋಲಿಸಿದರೆ ತೆಲುಗು ಕನ್ನಡ ವಿವರಗಳು ಈ ಪುಸ್ತಕದಲ್ಲಿ ಹೆಚ್ಚಿವೆ. ವಿದ್ವಾಂಸರ ತಂಡವೊಂದು ಮಾಡಬಹುದಾದ ಕೆಲಸವನ್ನು ಅವರು ಪ್ರಾರಂಭಿಸಿ ಸಾಕಷ್ಟು ಅಧ್ಯಯನ ಮಾಡಿ ಈ ಪುಸ್ತಕವನ್ನು ಬರೆದಿದ್ದಾರೆ. 

ಮೊರಸುನಾಡು ಕನ್ನಡ

ಲೇ: ಸ.ರಘುನಾಥ

ಪ್ರ: ನಿವೇದಿತ ಪ್ರಕಾಶನ, 9448733323

ಪುಟಗಳು: 92, ಬೆಲೆ: ₹100

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು