ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿರಂಗಭೂಮಿ: ‘ಒಂಟಿಸಲಗ’ದ ಕಥೆ

Last Updated 11 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಕರ್ನಾಟಕದ ರಂಗಭೂಮಿಯ ಇತಿಹಾಸ ನಿಜಕ್ಕೂ ರೋಚಕವಾದದ್ದು. ಆಧುನಿಕ ಕನ್ನಡ ರಂಗಭೂಮಿಗೆ ಚಾಲನೆ ದೊರೆತದ್ದು ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರು ಮೈಸೂರು ಅರಮನೆಯಲ್ಲಿ ಚಾಮರಾಜೇಂದ್ರ ನಾಟಕ ಸಭಾ ಆರಂಭಿಸಿದಾಗ (1882) ಎನ್ನುವುದು ನಿಜವಾದರೂ, ಅದಕ್ಕೂ ಮುನ್ನ ಬೆಂಗಳೂರಿನಲ್ಲಿದ್ದ ಪಾರ್ಸಿ ಕಂಪೆನಿ ನಮ್ಮ ಆಧುನಿಕ ರಂಗಭೂಮಿಗೆ ಪ್ರೇರಣೆ ಒದಗಿಸಿದ್ದು ಸುಳ್ಳಲ್ಲ. ಅಲ್ಲಿಂದೀಚೆಗೆ ಇವತ್ತಿನವರೆಗೆ ಕನ್ನಡ ರಂಗಭೂಮಿ ನಡೆದು ಬಂದ ದಾರಿಯನ್ನು ನೋಡಿದರೆ ಕಾಣುವ ವೈವಿಧ್ಯತೆಯ ಲೋಕ ಬೆರಗು ಹುಟ್ಟಿಸುತ್ತದೆ. ವೃತ್ತಿ ಮತ್ತು ಹವ್ಯಾಸಿ ಹೀಗೆ ಎರಡೂ ವಿಭಿನ್ನ ದಿಕ್ಕುಗಳಲ್ಲಿ ಕನ್ನಡಿಗರು ನಡೆಸಿರುವ ಸಾಧನೆ ದೊಡ್ಡ ಮಟ್ಟದ್ದು. ವೃತ್ತಿನಾಟಕ ಧಾರೆಯಲ್ಲೊಂದು ಒಂಟಿ ಸಲಗದ ನಡಿಗೆ ಮಾಸ್ಟರ್‌ ಹಿರಣ್ಣಯ್ಯ ಅವರದ್ದು.

ಅಪ್ಪ ಕೆ.ಹಿರಣ್ಣಯ್ಯ ಅವರು ಸ್ಥಾಪಿಸಿದ ‘ಹಿರಣ್ಣಯ್ಯ ಮಿತ್ರ ಮಂಡಲಿ’ಯನ್ನು 70 ದಶಕಗಳ ಕಾಲ ಮುನ್ನಡೆಸಿ ಕರ್ನಾಟಕದಾದ್ಯಂತ ಮನೆಮಾತಾದ ನಟ, ಅವರ ಪುತ್ರ ನರಸಿಂಹಮೂರ್ತಿ ಅರ್ಥಾತ್‌ ಮಾಸ್ಟರ್‌ ಹಿರಣ್ಣಯ್ಯ. ಬರೇ ಮಾಸ್ಟರ್‌ ಅಲ್ಲ, ನಟರತ್ನಾಕರ. ಕೆ.ಹಿರಣ್ಣಯ್ಯ ಮಿತ್ರ ಮಂಡಲಿ ಒಟ್ಟು 28 ನಾಟಕಗಳ ಸಾವಿರಾರು ಪ್ರದರ್ಶನಗಳನ್ನು ನೀಡಿದೆ. ಎಲ್ಲ ನಾಟಕಗಳ ಹೆಸರನ್ನು ಕನ್ನಡಿಗರು ನೆನಪಿಟ್ಟುಕೊಂಡಿಲ್ಲ ಹೌದು. ಆದರೆ ಲಂಚಾವತಾರ, ಭ್ರಷ್ಟಾಚಾರ, ಮಕ್ಮಲ್‌ ಟೋಪಿ, ನಡುಬೀದಿ ನಾರಾಯಣ, ದೇವದಾಸಿ, ಕಪಿಮುಷ್ಠಿ, ಸದಾರಮೆ ನಾಟಕಗಳ ಹೆಸರನ್ನು ಯಾರೂ ಮರೆಯಲಾಗದು. 60ರ ದಶಕದಿಂದ ಶುರುವಾಗಿ 21ನೇ ಶತಮಾನದ ಮೊದಲ
ದಶಕದವರೆಗೂ ಈ ನಾಟಕಗಳನ್ನು ನೋಡಿ ಆನಂದಿಸಿದ ಪ್ರೇಕ್ಷಕರ ಸಂಖ್ಯೆ ದೊಡ್ಡದು.

‘ಮಾಸ್ಟರ್‌ ಹಿರಣ್ಣಯ್ಯ ಅವರದ್ದು ನಾಟಕವೇ ಅಲ್ಲ, ಕೇವಲ ಬೈಗುಳ ಅಥವಾ ಏಕಪಾತ್ರಾಭಿನಯ’ ಎನ್ನುವ ಒಂದು ವರ್ಗವಿದೆ. ಹಾಗೆಯೇ ‘ಇಂತಹ ನಾಟಕಕಾರ ಇದ್ದುದರಿಂದಲೇ ಈ ನಾಡಿನ ರಾಜಕಾರಣಿಗಳು ಮೈಮೇಲೆ ಎಚ್ಚರ ಇಟ್ಟುಕೊಂಡು ಆಡಳಿತ ನಡೆಸಿದರು’ ಎಂದು ಹಾಡಿ ಹೊಗಳುವ ಪ್ರೇಕ್ಷಕ ವೃಂದವೂ ಇದೆ. ಸತ್ಯ ಇವೆರಡರ ಮಧ್ಯೆ ಇದೆ.

ಸತತ ಮೂರು ಗಂಟೆಗಳ ಕಾಲ ರಂಗದ ಮೇಲೆ ನಿಂತು ತಾನೊಬ್ಬನೇ ಕೇಂದ್ರವಾಗಿ ಪ್ರೇಕ್ಷಕರನ್ನು ರಂಜಿಸುವುದು ಸುಲಭದ ಕೆಲಸವಲ್ಲ. ಈ ಓತಪ್ರೋತ ಮಾತಿನ ಮಧ್ಯೆಯೇ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು ತಮ್ಮನ್ನು ತಾವೇ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ್ದೂ ಸುಳ್ಳಲ್ಲ. ‘ಲಂಚಾವತಾರ’ ನಾಟಕದ ಹನ್ನೊಂದು ಸಾವಿರ ಪ್ರದರ್ಶನಗಳು ನಡೆದಿವೆ ಎಂದರೆ ಮಾಸ್ಟರ್‌ ಹಿರಣ್ಣಯ್ಯ ಅವರ ಜನಪ್ರಿಯತೆಯ ಅರಿವಾದೀತು.

700 ಪುಟಗಳ ಈ ಬೃಹತ್‌ ಕೃತಿಯಲ್ಲಿ ಮಾಸ್ಟರ್‌ ಹಿರಣ್ಣಯ್ಯ ತಮ್ಮ ಜೀವನಕಥೆಯನ್ನು ಹೇಳುತ್ತಾ ಹೋಗಿದ್ದಾರೆ. ಅಜ್ಜ ಅನಂತರಾಮಯ್ಯ, ಅಪ್ಪ ಕೆ.ಹಿರಣ್ಣಯ್ಯ ಮತ್ತು ಮಾಸ್ಟರ್‌ ಹಿರಣ್ಣಯ್ಯ– ಮೂರು ತಲೆಮಾರುಗಳ ಈ ಕಥೆಯ ಆರಂಭದ ನಿರೂಪಣೆ ಸ್ವಲ್ಪ ವಾಚಾಳಿತನ ಎನ್ನಿಸುತ್ತದೆ. ಆದರೆ ಓದುಗನ ಜೊತೆಗೆ ಸಂಭಾಷಣೆ ನಡೆಸಿದಂತೆಯೇ ಕೃತಿಯ ನಿರೂಪಣೆ ಇರುವುದು ಕೃತಿಕಾರನ ಜೊತೆಗೆ ತಾದಾತ್ಮ್ಯ ಸಂಬಂಧವನ್ನು ಬೆಳೆಸುತ್ತದೆ. ಓದುತ್ತಾ ಹೋದಂತೆ ಕಳೆದ ಐದಾರು ದಶಕಗಳ ಕನ್ನಡ ವೃತ್ತಿ ರಂಗಭೂಮಿಯ ಚರಿತ್ರೆಯ ಹಲವು ಸ್ವಾರಸ್ಯಕರ ಅಧ್ಯಾಯಗಳು ಮತ್ತು ರಾಜಕೀಯ– ಸಾಂಸ್ಕೃತಿಕ ಕ್ಷೇತ್ರದ ಘಟನೆಗಳು ಗರಿ ಬಿಚ್ಚಿಕೊಳ್ಳುತ್ತವೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಯಾವತ್ತೂ ಪರಿಪೂರ್ಣ ಅಲ್ಲ, ನಿರ್ಬಂಧಿತ. ಪ್ರಜಾಪ್ರಭುತ್ವದ ಮೂಲ ನಿಯಮಗಳನ್ನು ಪಾಲಿಸಿಕೊಂಡೇ ಈ ಸ್ವಾತಂತ್ರ್ಯವನ್ನು ಅನುಭವಿಸಬೇಕು. ಆದರೆ ಮಾಸ್ಟರ್‌ ಹಿರಣ್ಣಯ್ಯ ಈ ವಿಷಯದಲ್ಲಿ ಕಿಲಾಡಿ. ಮಂತ್ರಿ, ಶಾಸಕರನ್ನು ಎದುರಿಗೆ ಕೂರಿಸಿಕೊಂಡೇ ಪ್ರಭುತ್ವದ ಹುಳುಕುಗಳನ್ನು ಎತ್ತಿ ತೋರುವುದರಲ್ಲಿ ನಿಸ್ಸೀಮ. ಅದರಲ್ಲೂ ಸಾರ್ವಜನಿಕ ಭ್ರಷ್ಟಾಚಾರದ ಕುರಿತು ಅವರ ಮಾತುಗಳು ಕಳ್ಳಿಮುಳ್ಳಿನ ಚುಂಬನದಂತೆ. ಮಾತನಾಡುವಾಗ ಸಜ್ಜನಿಕೆಯ ಎಲ್ಲೆ ಮೀರಿದ್ದಕ್ಕೆ ಲೆಕ್ಕವಿಲ್ಲ. ಹಾಗೆಯೇ ಅದು ಎಲ್ಲೆ ಮೀರಿತೆಂದು
ಗೊತ್ತಾದ ತಕ್ಷಣ ಅದನ್ನು ಸಾರ್ವತ್ರಿಕಗೊಳಿಸಿ ಬಚಾವಾಗುವ ಕಲೆಯೂ ಅವರಿಗೆ ಗೊತ್ತಿತ್ತು. ಹಾಗೆಂದೇ ಅವರ ನಾಟಕ ಪ್ರದರ್ಶನಗಳಲ್ಲಿ ಎಷ್ಟೋ ಸಲ ಪ್ರೇಕ್ಷಕರ ಕೂಗಾಟ, ಬೈದಾಟಗಳೂ ನಡೆದದ್ದುಂಟು.

1962ರಲ್ಲಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಅವರು ‘ಲಂಚಾವತಾರ’ ನಾಟಕವನ್ನು ನಿಷೇಧಿಸಲು ವಿಧಾನಸಭೆಯಲ್ಲಿ ಚರ್ಚೆ ನಡೆಸಿದರೂ ವಿರೋಧಪಕ್ಷದ ಮುಖಂಡರು ಒಪ್ಪಲಿಲ್ಲ. ಬಳಿಕ ನಿಜಲಿಂಗಪ್ಪ ನಾಟಕದ ವಿರುದ್ಧ ಕೋರ್ಟು ಮೆಟ್ಟಿಲೇರಿದರು. ಅಲ್ಲೂ ನಿಷೇಧ ಸಾಧ್ಯವಾಗಲಿಲ್ಲ. ಮಾತು ಕೊಟ್ಟಂತೆ ನಿಜಲಿಂಗಪ್ಪ ರಾಜೀನಾಮೆ ಕೊಡಲು ಹೊರಟಾಗ ಅವರ ಮನವೊಲಿಸಿದ ಘಟನೆಯನ್ನು ಹಿರಣ್ಣಯ್ಯ ಇಲ್ಲಿ ಬಣ್ಣಿಸಿದ್ದಾರೆ. ಹಾಗೆಯೇ 1975ರಲ್ಲಿ ‘ಕಪಿಮುಷ್ಠಿ’ ನಾಟಕದಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ಹೋಲುವ ಮಾತಾಜಿ ಪಾತ್ರ ಸೃಷ್ಟಿಸಿದ ವಿವಾದವೂ. ಅಂದಿನ ವಾರ್ತಾ ಸಚಿವ ಐ.ಕೆ.ಗುಜ್ರಾಲ್‌ ಅಧಿಕಾರಿಗಳ ಜೊತೆಗೆ ಮಫ್ತಿಯಲ್ಲಿ ಬಂದು ನಾಟಕ ನೋಡಿದ್ದು, ನಾಟಕದ ಫೋಟೋಗಳನ್ನು ತೆಗೆದಾಗ ಗಲಾಟೆಯಾದದ್ದು; 18 ತಿಂಗಳ ಕಾಲ ತುರ್ತುಪರಿಸ್ಥಿತಿಯಲ್ಲಿ ಬಂಧನಕ್ಕೆ ಒಳಗಾಗದಂತೆ ಆ ನಾಟಕದ ಅನೇಕ ಪ್ರದರ್ಶನಗಳನ್ನು ಕದ್ದುಮುಚ್ಚಿ ನಡೆಸಿದ್ದು; ಕೆಂಗಲ್‌ ಹನುಮಂತಯ್ಯನವರು ಮುಖ್ಯಮಂತ್ರಿಯಾದ ಬಳಿಕ ಅ.ನ.ಕೃಷ್ಣರಾಯರ ಆಶೀರ್ವಾದ ಪಡೆಯಲು ಅವರ ಮನೆಗೆ ಬಂದದ್ದು; ಅಲ್ಲಿ ನಿಮಗೇನು ಬೇಕು ಎಂದು ಕೇಳಿದಾಗ ಮೊದಲ ಬಾರಿಗೆ ಕನ್ನಡ–ಸಂಸ್ಕೃತಿ ಇಲಾಖೆಗೆ ಪ್ರತ್ಯೇಕ ಕ್ಯಾಬಿನೆಟ್‌ ಸಚಿವರನ್ನು ನೇಮಿಸಿ ಎಂಬ ಅನಕೃ ಬೇಡಿಕೆಯನ್ನು ಒಪ್ಪಿದ್ದು– ಹೀಗೆ ಅನೇಕ ಘಟನೆಗಳು ದಾಖಲಾಗಿವೆ.

ಮಾಸ್ಟರ್‌ ಹಿರಣ್ಣಯ್ಯನವರ ಕೈಬರಹ, ಬಳಿಕ ಕ್ಯಾಸೆಟ್‌ಗಳಲ್ಲಿ ನಡೆಸಿದ ಧ್ವನಿಮುದ್ರಣ ಎಲ್ಲವನ್ನೂ ಮಗ ಬಾಬು ಹಿರಣ್ಣಯ್ಯ ಕೃತಿರೂಪಕ್ಕೆ ಇಳಿಸಲು ಶ್ರಮಪಟ್ಟಿದ್ದಾರೆ. ಪತ್ರಕರ್ತ ಲಕ್ಷ್ಮಣ ಕೊಡಸೆ ಕೃತಿಯನ್ನು ತಿದ್ದಿ ತೀಡಿ ಸಾಹಿತ್ಯಕ ರೂಪ ಕೊಟ್ಟಿದ್ದಾರೆ. ಕೃತಿಯ ಕೊನೆಯಲ್ಲಿ ಅಪರೂಪದ ಚಿತ್ರಸಂಪುಟವಿದೆ. ರಂಗಾಸಕ್ತರು ಮಾತ್ರವಲ್ಲ, ರಾಜ್ಯದ ಸಾಂಸ್ಕೃತಿಕ ಇತಿಹಾಸದ ಕುರಿತು ಒಲವುಳ್ಳವರೂ ಓದಬೇಕಾದ ಕೃತಿಯಿದು.

***

ನಾನು ಮಾಸ್ಟರ್‌ ಹಿರಣ್ಣಯ್ಯ–
ನನ್ನ ಕಥೆ ಹೇಳ್ತೀನಿ

ಲೇ: ಮಾಸ್ಟರ್‌ ಹಿರಣ್ಣಯ್ಯ

ಪ್ರ: ವಿಕ್ರಂ ಪ್ರಕಾಶನ, ಬೆಂಗಳೂರು

ಮೊ: 9740994008

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT