ಬುಧವಾರ, ಜೂನ್ 3, 2020
27 °C

ವೈದ್ಯ ವಿದ್ಯಾರ್ಥಿಗಳ ರಂಗಪ್ರೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕಿಮ್ಸ್‌) ರಂಗಾಸಕ್ತ ವೈದ್ಯ ವಿದ್ಯಾರ್ಥಿಗಳು ಹುಟ್ಟು ಹಾಕಿದ ’ಮಂಥನ’ ರಂಗ ತಂಡವು ಮಾನಸಿಕ ರೋಗಗಳ ಹತ್ತು, ಹಲವು ಮುಖಗಳ ಕಥೆಯನ್ನು ‘ಮೈಂಡ್‌ ಯೂ’ ಎಂಬ ಹೆಸರಿನಲ್ಲಿ ಅಚ್ಚುಕಟ್ಟಾಗಿ ರಂಗದ ಮೇಲೆ ತರಲು ಸಜ್ಜಾಗಿದೆ.  

ವಿಚಿತ್ರ ಮತ್ತು ವಿಕ್ಷಿಪ್ತ ವ್ಯಕ್ತಿತ್ವಗಳನ್ನು ಅನಾವರಣಗೊಳಿಸುತ್ತ ಸಾಗುವ ‘ಮೈಂಡ್‌ ಯೂ’ ನಾಟಕ ಮಾನಸಿಕವಾಗಿ ಸ್ವಸ್ಥ ಸಮಾಜದ ಅಗತ್ಯವನ್ನು ಪ್ರತಿಪಾದಿಸುತ್ತದೆ. ಇಂಗ್ಲಿಷ್‌ ಮತ್ತು ಕನ್ನಡದಲ್ಲಿರುವ ಒಂದು ಗಂಟೆ ಅವಧಿಯ ನಾಟಕದಲ್ಲಿ ಅಲ್ಲಲ್ಲಿ ಬರುವ ನೃತ್ಯ, ಸಂಗೀತದಿಂದಾಗಿ ನಾಟಕ ನೃತ್ಯ ರೂಪಕದಂತೆ ಭಾಸವಾಗುತ್ತದೆ. 

ಮದ್ಯ ವ್ಯವಸನಿಗಳು, ಮಾನಸಿಕ ಒತ್ತಡ, ಖಿನ್ನತೆಗೆ ಒಳಗಾದ ಮನೋರೋಗಿಗಳ ತವಕ, ತಲ್ಲಣಗಳಿಗೆ ಸುಂದರ ಚೌಕಟ್ಟು ಒದಗಿಸುವ ಪ್ರಯತ್ನ ಮಾಡಲಾಗಿದೆ. ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿನಿ ಯೋಗಿತಾ ಕದಂ ರಚಿಸಿ, ನಿರ್ದೇಶಿಸಿದ‘ಮೈಂಡ್‌ ಯೂ’ ನಾಟಕದಲ್ಲಿ ಮನೋರೋಗಿಗಳ ಮತ್ತೊಂದು ವಿಕ್ಷಿಪ್ತ ಮುಖವನ್ನು ನೋಡುಗರ ಮನಸ್ಸುಗಳಿಗೆ ಆಪ್ತವಾಗುವಂತೆ ನವಿರಾಗಿ ಕಟ್ಟಿಕೊಟ್ಟಿದ್ದಾರೆ.

ರಂಗಸಜ್ಜಿಕೆ, ವಸ್ತ್ರ ವಿನ್ಯಾಸ, ಧ್ವನಿ ಮತ್ತು ಬೆಳಕು ಹಾಗೂ ಸಂಗೀತ ಎಲ್ಲ ವಿಭಾಗಗಳ ಹೊಣೆಯನ್ನು ಮಂಥನ ತಂಡದ ವಿದ್ಯಾರ್ಥಿಗಳು ನಿರ್ವಹಿಸುತ್ತಿರುವುದು ಈ ನಾಟಕದ ಮತ್ತೊಂದು ವಿಶೇಷ.   

ಮಂಥನ ತಂಡ ಈಗಾಗಲೇ ಬೀದಿ ನಾಟಕಗಳ ಮೂಲಕ ಜನರನ್ನು ತಲುಪುವ ಪ್ರಯತ್ನ ಮಾಡಿದೆ. ಸ್ತನ ಕ್ಯಾನ್ಸರ್‌, ತೊನ್ನು, ತಂಬಾಕು ವ್ಯಸನದ ದುಷ್ಪರಿಣಾಮ ಕುರಿತ ನಾಟಕಗಳು ಅಂತರ್‌ ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿವೆ. 

ಪ್ರಶಸ್ತಿ ರೂಪದಲ್ಲಿ ಬಂದ ಹಣವನ್ನು ಹಾಕಿ ಮೊದಲ ಬಾರಿಗೆ ರಂಗಪ್ರಯೋಗಕ್ಕೆ ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ. ಆದರೆ, ಮಾರ್ಕೆಂಟಿಂಗ್‌ ಗೊತ್ತಿಲ್ಲದೆ ಸೋತಿದ್ದಾರೆ. ಟಿಕೆಟ್‌ ಕೊಂಡು ತಮ್ಮ ಸಾಹಸವನ್ನು ಪ್ರೋತ್ಸಾಹಿಸುವ ರಂಗಾಸಕ್ತರಿಗಾಗಿ ವಿದ್ಯಾರ್ಥಿಗಳು ಎದುರು ನೋಡುತ್ತಿದ್ದಾರೆ.     

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು