ಮಂಗಳವಾರ, ಜುಲೈ 5, 2022
27 °C

ನುಡಿ ನಮನ: ಕಥಕ್ ತಕಧಿಮಿತ– ಬಿರ್ಜು ಸಾಧನೆ ಅಪರಿಮಿತ

ಉಮಾ ಅನಂತ್ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನೃತ್ತ, ನೃತ್ಯಗಳನ್ನೊಳಗೊಂಡ, ವಿಶಿಷ್ಟ ಬೋಲ್‌ಗಳ ಮೇಲೆ ಆಧರಿತವಾದ ಆಕರ್ಷಕ ನೃತ್ಯ ಪ್ರಕಾರ ಕಥಕ್. ಈ ನೃತ್ಯದಲ್ಲಿ ವಿಶ್ವವಿಖ್ಯಾತರಾದ ಪಂಡಿತ್ ಬಿರ್ಜು ಮಹಾರಾಜ್ ಅವರು ಹಿಂದೂಸ್ತಾನಿ ಗಾಯನ, ತಬಲಾ ಹಾಗೂ ಡ್ರಮ್ಸ್‌ ನುಡಿಸಾಣಿಕೆಯಲ್ಲೂ ಅಸಾಧಾರಣ ಸಾಧನೆ ಮಾಡಿದವರು.

ಬ್ರಿಜ್‌ ಮೋಹನ್‌ದಾಸ್‌ ಎಂಬುದು ಇವರ ಮೂಲನಾಮ. ಮುಂದೆ ಬಿರ್ಜು ಮಹಾರಾಜ್‌ ಎಂದೇ ಖ್ಯಾತರಾದವರು. ಉತ್ತರ ಪ್ರದೇಶದ ಹಂಡಿಯಾದಲ್ಲಿ 1937, ಫೆಬ್ರುವರಿ 4ರಂದು ಜನಿಸಿದ ಇವರ ಮನೆತನವೇ ಕಥಕ್ ಹಾಗೂ ಸಂಗೀತದ್ದು. ತಂದೆ ಜಗನ್ನಾಥ (ಅಚ್ಚನ್‌) ಮಹಾರಾಜ್‌ ಅವರಿಂದ 13ನೆ ವಯಸ್ಸಿಗೇ ನೃತ್ಯ ಕಲಿಯಲಾರಂಭಿಸಿದ, ಬಿರ್ಜು ಮಹಾರಾಜ್‌, ಬಹಳ ಬೇಗ ಕಥಕ್‌ ಕಲೆಯನ್ನು ಕರಗತ ಮಾಡಿಕೊಂಡರು. ಜೊತೆಗೆ ಗಾಯನ, ಅದರಲ್ಲೂ ಠುಮ್ರಿ, ದಾದ್ರಾ, ಭಜನ್ ಮತ್ತು ಗಜಲ್‌ಗಳನ್ನು ಬಹಳ ಸುಂದರವಾಗಿ ಪ್ರಸ್ತುತಪಡಿಸುತ್ತಿದ್ದರು. ಲಖನೌ ಘರಾಣದಲ್ಲಿ ಹೆಸರುವಾಸಿಯಾದ, ಬಿರ್ಜು ಮಹಾರಾಜ್ ಮುಂದೆ ಲಖನೌ ಕಲ್ಕಾ-ಬಿಂದಾದಿನ್ ಘರಾಣೆ ಎಂಬ ಹೊಸ ಶೈಲಿಯ ಗಾಯನದ ಪ್ರತಿಪಾದಕರೂ ಆಗಿದ್ದರು. 

ದೆಹಲಿಯ ಭಾರತೀಯ ಕಲಾ ಕೇಂದ್ರ ಹಾಗೂ ಕಥಕ್‌ ಸಂಸ್ಥೆಯಲ್ಲಿ ನೃತ್ಯ ಗುರುಗಳಾಗಿದ್ದರು. ನೃತ್ಯ ನಿರ್ದೇಶನದಲ್ಲಿಯೂ ಅಪಾರ ಜನಮನ್ನಣೆ ಗಳಿಸಿ, ನೃತ್ಯ ಕಲಾಶ್ರಮ ಕಟ್ಟಿದರು. ನೃತ್ಯ ಕಮ್ಮಟ, ಕಾರ್ಯಾಗಾರಗಳನ್ನೂ ನಡೆಸಿದ್ದಲ್ಲದೆ ದೇಶ ವಿದೇಶಗಳಲ್ಲಿ ಸಾವಿರಾರು ಕಥಕ್‌ ನೃತ್ಯ ಪ್ರದರ್ಶನ ನೀಡಿ ಜಗದ್ವಿಖ್ಯಾತರಾದರು. ಕಥಕ್‌ನ ‘ಚಕ್ಕರ್ಸ್‌’ಗಳಲ್ಲಿ ಚಮತ್ಕಾರವನ್ನೇ ಸೃಷ್ಟಿಸುತ್ತಿದ್ದ ಬಿರ್ಜು ಮಹಾರಾಜ್, ಕಥಕ್‌ ನೃತ್ಯ-ನಾಟಕಗಳನ್ನು ನವೀನ ಶೈಲಿಯಲ್ಲಿ ಸಂಯೋಜಿಸುವುದರ ಮೂಲಕ ಕಥಕ್‌ ನೃತ್ಯಕಲೆ ಮತ್ತು ಶೈಲಿಯನ್ನು ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ದವರು.

ಬಾಲಿವುಡ್‌ನಲ್ಲೂ...

ಹಿಂದಿ ಸಿನಿಮಾಗಳಿಗೆ ನೃತ್ಯ ಸಂಯೋಜನೆ ಮಾಡಿ, ಹಿನ್ನೆಲೆ ಸಂಗೀತದಲ್ಲೂ ತೊಡಗಿಸಿಕೊಂಡಿದ್ದ, ಈ ಬಹುಶ್ರುತ ವಿದ್ವಾಂಸರು, ಖ್ಯಾತ ನಿರ್ದೇಶಕ ಸತ್ಯಜಿತ್‌ ರಾಯ್‌ ಅವರ ‘ಶತರಂಜ್‌ ಕೆ ಖಿಲಾಡಿ’ ಸಿನಿಮಾ (1977) ದ ಎರಡು ನೃತ್ಯಗಳನ್ನು ಸಂಯೋಜಿಸಿದವರು. ಇದೇ ಸಿನಿಮಾಕ್ಕೆ ಕಂಠದಾನವನ್ನೂ ಮಾಡಿದರು. 2002ರಲ್ಲಿ ಶಾರುಕ್‌ಖಾನ್ ಅಭಿನಯದ ದೇವದಾಸ್ ಸಿನಿಮಾಕ್ಕೂ ನೃತ್ಯ ಸಂಯೋಜನೆ ಮಾಡಿದರು.

‘ಕಥಕ್‌ ನೃತ್ಯ ಮಾಡುವಾಗ ಯಾವುದೇ ಸನ್ನಿವೇಶ ಇರಲಿ, ಕಂಪೊಸಿಷನ್ ಇರಲಿ, ಅದಕ್ಕೆ ಜೀವ ತುಂಬು, ಮನಸ್ಸು ನೃತ್ಯದಲ್ಲೇ ಕೇಂದ್ರೀಕೃತವಾಗಿರಲಿ, ಆಗ ಅಭಿನಯ, ಭಾವನೆ ಅತ್ಯಂತ ನೈಜವಾಗಿ ಹೊರ
ಹೊಮ್ಮುತ್ತದೆ’ ಎಂದು ಕಥಕ್‌ ಕಲಿಸುವಾಗ ಹೇಳುತ್ತಿದ್ದರು. ಇದೇ ನನ್ನ ಕಥಕ್‌ ನೃತ್ಯ ಸಾಧನೆಗೆ ಸ್ಪೂರ್ತಿ
ಯಾಯಿತು’ ಎಂದು ಹೇಳುತ್ತಾರೆ, ಬಿರ್ಜು ಮಹಾರಾಜ್‌ ಅವರ ಹಿರಿಯ ಶಿಷ್ಯೆ ಬೆಂಗಳೂರಿನ ವಿದುಷಿ ಸಿಮ್ರನ್‌ ಗೋದ್ವಾನಿ.

ಕೇಂದ್ರ ಸಂಗೀತ, ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ, ಪದ್ಮವಿಭೂಷಣ ಗೌರವಗಳಿಗೆ ಭಾಜನರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು