ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಕೇಟ್‌ ಡಾನ್ಸರ್‌’ ರೋಶನಿ

Last Updated 24 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಸ್ಕೇಟಿಂಗ್‌ ಹೆಜ್ಜೆಯೊಂದಿಗೆ ನಾಟ್ಯ ಗೆಜ್ಜೆಯ ನಿನಾದವನ್ನು ಸಮ್ಮಿಲನಗೊಳಿಸಿ, ತೈ ತತ್ತೈ ತಕತೈತಕಜಿಮಿ ತಕಜಣು... ಎಂದು ಕುಣಿಯುತ್ತ ಪ್ರೇಕ್ಷಕರ ರಸಾನುಭವಕ್ಕೆ ಯಾವ ಕೊರತೆಯೂ ಕಾಡದಂತೆ ಪ್ರದರ್ಶನ ನೀಡುತ್ತಾರೆ ಹುಬ್ಬಳ್ಳಿಯ ‘ಸ್ಕೇಟ್‌ ಡಾನ್ಸರ್‌’ ರೋಶನಿ ಪವಾರ್‌.

ಭಾವ–ರಾಗ–ತಾಳಗಳ ಸಂಗಮವಾದ ‘ಭರತನಾಟ್ಯ’ದಲ್ಲಿ ಮುದ್ರೆ ಮತ್ತು ಮುಖಭಾವಗಳಿಗೆ ಪ್ರಾಶಸ್ತ್ಯ ಇದೆ. ಇವುಗಳಿಗೆ ಆಧಾರಸ್ತಂಭವಾದ ಹೆಜ್ಜೆ ವಿನ್ಯಾಸಕ್ಕೂ (ಅಡವು) ವಿಶೇಷ ಮಹತ್ವವಿದೆ. ಹೆಜ್ಜೆಗಳಿಂದ ಸಂಚರಿಸುವ ವಿಧಾನವಾದ ‘ಚಾರಿ’ಗೆ ವಿಶೇಷ ಆಯಾಮ ಕಂಡುಕೊಂಡಿದ್ದಾರೆ ಈ ನಾಟ್ಯ ಮಯೂರಿ.

ಶಾಸ್ತ್ರೀಯ ನೃತ್ಯ ಭರತನಾಟ್ಯಕ್ಕೆ ಸಮರ್ಥವಾದ ವೇಷಭೂಷಣ ಧರಿಸಿದ ಮೇಲೆ, ರೋಶನಿ ಅವರು ಕಟ್ಟ ಕಡೆಯದಾಗಿ ಕಾಲಿಗೆ ರೋಲರ್‌ ಸ್ಕೇಟಿಂಗ್‌ ಬೋರ್ಡ್‌ ಕಟ್ಟಿಕೊಳ್ಳುತ್ತಾರೆ! ಇದೇನಿದು ‘ಆಭಾಸ’ ಎನ್ನುತ್ತಿರಾ... ಇಲ್ಲ, ಇದು ಅವರ ‘ಅಭ್ಯಾಸ’. ಹೌದು, ಈ ಉರುಳುಗಾಲಿಯ ಮೇಲೆ ವೇದಿಕೆಯಲ್ಲಿ ಲೀಲಾಜಾಲವಾಗಿ ಸಂಚರಿಸುತ್ತಾ, ಏಕಕಾಲದಲ್ಲಿ ಭರತನಾಟ್ಯ, ಯೋಗಾಸನ ಮತ್ತು ಸ್ಕೇಟಿಂಗ್‌ ಎಂಬ ತ್ರಿವಳಿ ಕಲೆಯನ್ನು ಪ್ರದರ್ಶಿಸಿ, ಕಲಾರಸಿಕರನ್ನು ಆಶ್ಚರ್ಯಚಕಿತಗೊಳಿಸುತ್ತಾರೆ.

ಸ್ಕೇಟಿಂಗ್‌ ತರಬೇತಿ

ಹಳೇ ಹುಬ್ಬಳ್ಳಿಯ ಅಕ್ಕಸಾಲಿಗರ ಓಣಿಯ ನಿವಾಸಿಯಾದ ಲಕ್ಷ್ಮೀಕಾಂತ್‌ ಪವಾರ್‌ ಮತ್ತು ನಾಗವೇಣಿ ದಂಪತಿಯ ಕಿರಿಯ ಪುತ್ರಿ ರೋಶನಿ. ನಾಟ್ಯದಲ್ಲಿ ಆಸಕ್ತಿಯಿದ್ದ ನಾಗವೇಣಿ ಅವರು, ತಮ್ಮ ಮಗಳನ್ನು ನಾಲ್ಕನೇ ವಯಸ್ಸಿನಲ್ಲಿದ್ದಾಗಲೇ ಊರ್ಮಿಳಾ ಪಾತ್ರ ಅವರ ಬಳಿ ಭರತನಾಟ್ಯ ಕಲಿಯಲು ಸೇರಿಸಿದರು. ನಾಲ್ಕೈದು ವರ್ಷ ಶ್ರದ್ಧೆಯಿಂದ ಭರತನಾಟ್ಯ ಅಭ್ಯಾಸ ಮಾಡಿದ ನಂತರ, ಒಮ್ಮೆ ರೋಶನಿ ಅವರು ನೃತ್ಯ ಪ್ರದರ್ಶನ ನೀಡುತ್ತಿದ್ದರು. ಅಲ್ಲಿಗೆ ಅತಿಥಿಯಾಗಿ ಬಂದಿದ್ದ ಹಿರಿಯ ಸ್ಕೇಟಿಂಗ್‌ ತರಬೇತುದಾರ ಈರಣ್ಣ ಕಾಡಪ್ಪನವರ್‌, ರೋಶನಿ ಅವರ ಪೋಷಕರನ್ನು ಭೇಟಿ ಮಾಡಿ, ‘ಮಗಳು ಚುರುಕಾಗಿದ್ದಾಳೆ, ಸ್ಕೇಟಿಂಗ್‌ ತರಬೇತಿಗೆ ಕಳುಹಿಸಿ’ ಎಂದು ಆಹ್ವಾನಿಸಿದರು. ತಂದೆ–ತಾಯಿಗೆ ಮನಸ್ಸಿಲ್ಲದಿದ್ದರೂ ಸ್ಕೇಟಿಂಗ್‌ಗೆ ಕಳುಹಿಸಿದರು. ರಿಂಕ್‌ನಲ್ಲಿ ಮಕ್ಕಳ ಸ್ಕೇಟಿಂಗ್‌ ಪ್ರದರ್ಶನ ನೋಡಿ ರೋಶನಿ ಅವರಿಗೂ ಕಲಿಯಬೇಕೆಂಬ ಮನಸಾಯಿತು.

‘ಈರಣ್ಣ ಅವರು ಸ್ಕೇಟಿಂಗ್‌ ಜತೆಗೆ ಯೋಗಾಭ್ಯಾಸವನ್ನೂ ಮಾಡಿಸಿದರು. ಬೇಸಿಕ್‌ ಕ್ಯಾಂಪ್‌ ಪೂರ್ಣಗೊಳಿಸಿ, ಅಡ್ವಾನ್ಸ್‌ ಕ್ಯಾಂಪ್‌ಗೆ ಸೇರಿದ್ದ ನನಗೆ, ರೋಲರ್‌ ಸ್ಕೇಟಿಂಗ್‌ ಮೇಲೆ ಭರತನಾಟ್ಯ ಅಭ್ಯಾಸ ಮಾಡು ಎಂಬ ಸಲಹೆ ನೀಡಿದರು. ಸ್ವಲ್ಪ ವಿಚಿತ್ರವೆನಿಸಿದರೂ, ಗುರುಗಳ ಆಣತಿಯಂತೆ, ಮನೆಯಲ್ಲಿ ಸ್ಕೇಟಿಂಗ್‌ ಬೋರ್ಡ್‌ ಕಟ್ಟಿಕೊಂಡು ನೃತ್ಯ ಮಾಡಲು ಆರಂಭಿಸಿದೆ. ಆರಂಭಿಕ ಹಂತದಲ್ಲಿ ನೃತ್ಯ ಭಂಗಿಗಳನ್ನು ಮಾಡುವುದು ಕಷ್ಟವಾದರೂ, ದಿನ ಕಳೆದಂತೆ ಅದೇ ಇಷ್ಟವಾಯಿತು. 6 ತಿಂಗಳ ನಂತರ ಕಾರ್ಯಕ್ರಮ ಕೊಡಬಹುದು ಎಂಬ ಆತ್ಮವಿಶ್ವಾಸ ಬೆಳೆಯಿತು’ ಎನ್ನುತ್ತಾರೆ ರೋಶನಿ.

500 ಪ್ರದರ್ಶನ, 170 ಬಹುಮಾನ!

ಭರತನಾಟ್ಯದಲ್ಲಿ ಜೂನಿಯರ್‌ ಮತ್ತು ಸೀನಿಯರ್‌ ಪೂರ್ಣಗೊಳಿಸಿರುವ ರೋಶನಿ ಪ್ರಸ್ತುತ ಬಿ.ಕಾಂ. ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದುವರೆಗೂ 500ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿ, 170ಕ್ಕೂ ಹೆಚ್ಚು ಪದಕಗಳು ಮತ್ತು ಟ್ರೋಫಿಗಳನ್ನು ಪಡೆದುಕೊಂಡಿದ್ದಾರೆ. ಇವರ ಪ್ರತಿಭೆಯನ್ನು ಗುರುತಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ‘ಅಸಾಧಾರಣ ಪ್ರತಿಭೆ’ ಪುರಸ್ಕಾರ ನೀಡಿ ಗೌರವಿಸಿದೆ.

2011ರಲ್ಲಿ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ, 2013ರಲ್ಲಿ ಒಡಿಶಾದಲ್ಲಿ ನಡೆದ ಕುರ್ದಾ ಫೆಸ್ಟ್‌, ವಿಶ್ವವಿಖ್ಯಾತ ಮೈಸೂರು ದಸರಾ, ಕಿತ್ತೂರು ಉತ್ಸವ, ಹುಬ್ಬಳ್ಳಿ–ಧಾರವಾಡ ಜಿಲ್ಲಾ ಉತ್ಸವ, ಹೊನ್ನಾವರದಲ್ಲಿ ನಡೆದ ಮಲೆನಾಡು ಉತ್ಸವ, ವಿವಿಧ ಖಾಸಗಿ ವಾಹಿನಿಗಳ ಕಾರ್ಯಕ್ರಮ ಸೇರಿದಂತೆ ಹಲವಾರು ವೇದಿಕೆಗಳಲ್ಲಿ ರೋಲರ್‌ ಸ್ಕೇಟಿಂಗ್‌ ಮೇಲೆ ಭರತನಾಟ್ಯ, ಯೋಗಾಸನ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.

ಶೃಂಗಾರ, ಹಾಸ್ಯ, ರೌದ್ರ ಮುಂತಾದ ನವರಸಗಳನ್ನು ಪ್ರೇಕ್ಷಕರಿಗೆ ಉಣಬಡಿಸುತ್ತಾ, ಸಮಭಂಗ, ಅಭಂಗ, ಅತಿಭಂಗ ಮತ್ತು ತ್ರಿಭಂಗಗಳ ಭಂಗಿಗಳನ್ನು ಲೀಲಾಜಾಲವಾಗಿ ಪ್ರದರ್ಶಿಸುತ್ತಾರೆ. ರೋಲರ್‌ ಸ್ಕೇಟಿಂಗ್‌ ಮೇಲೆ ವೇದಿಕೆ ತುಂಬ ಸಂಚರಿಸುತ್ತಾ, ಯೋಗಾಸನಗಳನ್ನು ಮಾಡುತ್ತಾ, ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಾರೆ ರೋಶನಿ.

ವೇದಿಕೆ ಮೇಲೆ ದೇವರನಾಮ, ಜಾವಳಿ, ಶ್ಲೋಕ, ತಿಲ್ಲಾನಗಳಿಗೆ ನೃತ್ಯ ಮಾಡುವಷ್ಟೇ ಸಮರ್ಥವಾಗಿ, ರಿಂಕ್‌ ಮತ್ತು ರಸ್ತೆಯಲ್ಲಿ ರೋಲರ್‌ ಸ್ಕೇಟಿಂಗ್‌ ಕೂಡ ಮಾಡಬಲ್ಲರು. ಪರಿಸರ ಮಾಲಿನ್ಯದ ಕುರಿತು ಜಾಗೃತಿ ಮೂಡಿಸಲು ಮುಧೋಳದಿಂದ ಬಾಗಲಕೋಟೆ (65 ಕಿ.ಮೀ.), ಚಾಲುಕ್ಯದ ಉತ್ಸವದ ಅಂಗವಾಗಿ ಗದಗದಿಂದ–ಬಾದಾಮಿವರೆಗೆ (75 ಕಿ.ಮೀ.) ಸ್ಕೇಟಿಂಗ್‌ ಮ್ಯಾರಥಾನ್‌ಗಳಲ್ಲಿ ಭಾಗವಹಿಸಿದ್ದಾರೆ. ಜಿಲ್ಲಾ ಮಟ್ಟದ ಸ್ಕೇಟಿಂಗ್‌ ಸ್ಪರ್ಧೆಗಳಲ್ಲೂ ಪ್ರಶಸ್ತಿ ಗಳಿಸಿದ್ದಾರೆ.

ನೃತ್ಯ, ಸ್ಕೇಟಿಂಗ್ ಜತೆಗೆ ಹಿಂದಿ ಮತ್ತು ಕನ್ನಡ ಹಾಡುಗಳಿಗೆ ಕೊರಿಯೊಗ್ರಫಿ ಮಾಡುವ ಹವ್ಯಾಸವೂ ಇದೆ. ಇಂಥ ಬಹುಮುಖ ಪ್ರತಿಭೆ ರೋಶನಿ ಓದಿನಲ್ಲೂ ಜಾಣೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ 79, ಪಿಯುಸಿಯಲ್ಲಿ ಶೇ 80 ಹಾಗೂ ದ್ವಿತೀಯ ಬಿ.ಕಾಂ. ಪರೀಕ್ಷೆಯಲ್ಲಿ ಶೇ 83 ಫಲಿತಾಂಶ ಪಡೆದಿದ್ದಾರೆ.

ನೃತ್ಯಕ್ಕೆ ತಲೆದೂಗಿದ ಹೆಗ್ಗಡೆ...

‘2013ರಲ್ಲಿ ಧಾರವಾಡದ ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ರೋಶನಿ ಅವರು ರೋಲರ್‌ ಸ್ಕೇಟಿಂಗ್‌ ಮೇಲೆ ಭರತನಾಟ್ಯ ಮಾಡುವಾಗ, ಮುಂದಿನ ಸಾಲಿನಲ್ಲಿ ಕೂತಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಚಪ್ಪಾಳೆ ತಟ್ಟಿ, ಸಂತೋಷಪಟ್ಟರು. ಕಾರ್ಯಕ್ರಮ ಮುಗಿದ ನಂತರ ಅವರೇ ವೇದಿಕೆ ಹಿಂಭಾಗ ಬಂದು, ನನ್ನ ಮಗಳನ್ನು ಭೇಟಿಯಾಗಿ, ‘ಮಗು ಚೆನ್ನಾಗಿ ನೃತ್ಯ ಪ್ರದರ್ಶಿಸಿದೆ. ಆದರೆ, ನೀನು ನೃತ್ಯ ಮಾಡುವಾಗ, ಸ್ಕೇಟಿಂಗ್‌ ಬೋರ್ಡ್‌ ಮೇಲೆ ಕಟ್ಟಿಕೊಂಡಿರುವ ಶೂ ಸಭಿಕರಿಗೆ ಆಭಾಸ ಎನಿಸುತ್ತದೆ. ಅದನ್ನು ವಸ್ತ್ರದಿಂದ ಕವರ್‌ ಮಾಡು’ ಎಂದು ಹೇಳಿ ಹೋದರು. ‘ಸಭಿಕರು ಮತ್ತು ಅತಿಥಿಗಳತ್ತ ಶೂ ಕಾಲನ್ನು ತೋರಿಸಬಾರದು’ ಎಂಬುದನ್ನು ಸೂಕ್ಷ್ಮವಾಗಿ ಹೇಳಿದ ಹೆಗ್ಗಡೆಯವರ ಮಾತನ್ನು ಅರ್ಥಮಾಡಿಕೊಂಡು, ಅಂದಿನಿಂದ ಶೂಗೆ ವಸ್ತ್ರವನ್ನು ಹೊದಿಸುತ್ತೇವೆ. ಈಗ ಡ್ರೆಸ್‌ ಕೋಡ್‌ ಕೂಡ ಚೆನ್ನಾಗಿ ಕಾಣುತ್ತದೆ’ ಎಂದು ರೋಶನಿ ತಂದೆ ಲಕ್ಷ್ಮೀಕಾಂತ್‌ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡರು.

2011ರಲ್ಲಿ ಧಾರವಾಡದ ನಡೆದ ಕಾರ್ಯಕ್ರಮವೊಂದರಲ್ಲಿ ನನ್ನ ಮಗಳ ಪ್ರದರ್ಶನ ನೋಡಿದ ಯೋಗಗುರು ಬಾಬಾ ರಾಮ್‌ದೇವ್‌ ಅವರು ‘ನಾನು ಕೇವಲ ಯೋಗಾಸನ ಮಾಡುತ್ತೇನೆ. ನೀನು (ರೋಶನಿ) ಸ್ಕೇಟಿಂಗ್‌ ಮೇಲೆ ಯೋಗ ಮಾಡುತ್ತೀಯ. ಹಾಗಾಗಿ ನನಗಿಂತ ನೀನೇ ಗ್ರೇಟ್‌’ ಎಂದು ಮೆಚ್ಚುಗೆ ಸೂಚಿಸಿದರು’ ಎಂಬುದನ್ನು ಲಕ್ಷ್ಮೀಕಾಂತ್‌ ನೆನಪು ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT