ಸೋಮವಾರ, ಆಗಸ್ಟ್ 15, 2022
21 °C

ಗೆಜ್ಜೆನಾದದ ಹೆಜ್ಜೆ ಗುರುತು

ಪೂರ್ಣಿಮಾ ಶರ್ಮಾ Updated:

ಅಕ್ಷರ ಗಾತ್ರ : | |

Prajavani

ನಂದಿನಿ ಸಕ್ಸೆನಾ ವೈದ್ಯಕೀಯ ಸಲಹೆಗಾರರು. ಸುಮ್ಮನೆ ಇಂಟರ್‌ನೆಟ್‌ನಲ್ಲಿ ಏನೋ ಜಾಲಾಡುತ್ತಿದ್ದಾಗ ಅದರಲ್ಲಿ ಒಂದು ತಾಣ ಭಾರತೀಯ ನೃತ್ಯಕ್ಕೆ ಮೀಸಲಾಗಿತ್ತು. ಅದರಲ್ಲಿನ ಒಂದು ವಿಡಿಯೊದ ಮಾತು ಅವರಿಗೆ ತುಂಬಾ ಸ್ಫೂರ್ತಿ ನೀಡಿತಂತೆ. ಅದು ಖ್ಯಾತ ನೃತ್ಯಗಾರ್ತಿ ಅಲಾರ್ಮೆಲ್ ವಲ್ಲಿ‌ ಅವರ ಮಾತು. 

ಅಲಾರ್ಮೆಲ್‌ ಹೇಳುತ್ತಾರೆ: ‘ನೃತ್ಯ ಕಲೆಯಲ್ಲಿ ನಾನೊಬ್ಬಳು ಕವಿ ಎಂದು ಭಾಸವಾಗುತ್ತಿದೆ. ನನ್ನ ವೈಯಕ್ತಿಕ ಭಾವನೆಗಳ ಕವನಗಳನ್ನೇ ಬರೆಯುತ್ತಿದ್ದೇನೆ. ನೃತ್ಯ ನನಗೆ ಸ್ವಯಂ ಅಭಿವ್ಯಕ್ತಿಯ, ಉತ್ಸಾಹಭರಿತ ಸಂತೋಷವನ್ನು ಕೊಡುತ್ತದೆ. ನನ್ನ ಪೂರ್ಣ ಸ್ವಾತಂತ್ರ್ಯವನ್ನು ಅರಿಯಲು ಅದು ಅನುವು ಮಾಡಿಕೊಡುತ್ತದೆ’. 

ಈ ಸಾಲುಗಳಿಂದ ಸಕ್ಸೆನಾ ತುಂಬಾ ಪ್ರಭಾವಿತರಾಗಿದ್ದಾರಂತೆ. ‘ನಾನು ನೃತ್ಯ ವಿದ್ಯಾರ್ಥಿನಿಯಾಗಿದ್ದಾಗ ಅದರ ಕಲಿಕೆಗೆ ಇನ್ನೂ ಒತ್ತು ನೀಡಬೇಕಿತ್ತು. ಆದರೆ, ಅದು ನನ್ನ ಶಿಕ್ಷಣದ ಕಾರಣಕ್ಕಾಗಿ ಸಾಧ್ಯವಾಗಿರಲಿಲ್ಲ. ಮುದ್ರೆಗಳನ್ನು ಅಭ್ಯಾಸ ಮಾಡಿದ ಬಳಿಕ ನೃತ್ಯಾಭ್ಯಾಸ ಕೊನೆಗೊಂಡಿತು. ಈಗ ಅಲಾರ್ಮೆಲ್‌ ವಲ್ಲಿ ಅವರ ಮಾತುಗಳನ್ನು ಕೇಳಿಸಿಕೊಂಡಾಗ ನಾನು ನೃತ್ಯಾಭ್ಯಾಸವನ್ನು ಮುಂದುವರಿಸಬೇಕಿತ್ತು ಅನಿಸುತ್ತದೆ’ ಎನ್ನುತ್ತಾರೆ.

ಈ ತಾಣದಲ್ಲಿರುವುದು ವಲ್ಲಿಯವರೊಬ್ಬರ ಪ್ರದರ್ಶನವಷ್ಟೇ ಅಲ್ಲ. ಬೇರೆ ಬೇರೆ ನೃತ್ಯಪಟುಗಳ ಪ್ರದರ್ಶನಗಳೂ ಇವೆ. ಅವುಗಳನ್ನು ನೋಡಿದ ಬಳಿಕ ಶರ್ಮಾ ಎಂಬುವವರೂ ಕೂಡಾ ಭರತನಾಟ್ಯ ಕ್ಷೇತ್ರಕ್ಕೆ ವಾಪಸಾಗಲು ಸ್ಫೂರ್ತಿ ಪಡೆದರಂತೆ. ಅದು ಕೊಡುವ ಸಂತೋಷದ ಅನುಭವ ನನಗಾಗಬೇಕು ಎಂದು ಬಯಸುತ್ತಿದ್ದಾರೆ.  

ಇದು ಮೇರಿಲ್ಯಾಂಡ್‌ ಮೂಲದ ಕಲಾನಿಧಿ ನೃತ್ಯ ಸಂಸ್ಥೆಯ ವೇದಿಕೆ ‘ಇಂಡಿಯನ್‌ ರಾಗ’ದಿಂದ ‘ವೈ ಐ ಡಾನ್ಸ್‌ʼ (ನಾನೇಕೆ ನೃತ್ಯ ಮಾಡುತ್ತೇನೆ) ಹೆಸರಿನಲ್ಲಿ ನಡೆಸುತ್ತಿರುವ ಸಾಮಾಜಿಕ ಅಭಿಯಾನವದು.

‘ಲಾಕ್‌ಡೌನ್‌ ಅವಧಿಯು ಜಗತ್ತನ್ನು ಸ್ಥಗಿತಗೊಳಿಸಿರಬಹುದು. ಆದರೆ ನಮ್ಮ ಉತ್ಸಾಹ, ನೃತ್ಯ ಮಾಡುವ ಇಚ್ಛಾಶಕ್ತಿ ಕುಸಿಯಬಾರದು. ನಮ್ಮ ವೆಬ್‌ಸೈಟ್‌ನಲ್ಲಿ ವಿಶ್ವದಾದ್ಯಂತ ಭಾಗವಹಿಸುವ ನೃತ್ಯಪಟುಗಳು ನೀಡುವ ಸಂದೇಶ ಇದು’ ಎಂದು ‘ಇಂಡಿಯನ್‌ ರಾಗ’ದ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀರಾಮ್‌ ಎಮಾನಿ ಹೇಳುತ್ತಾರೆ.   

ಎಮಾನಿ ಅವರು ಮೆಸ್ಸಾಚುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ವಿದ್ಯಾರ್ಥಿಯಾಗಿದ್ದಾಗ 2013ರಲ್ಲಿ ಈ ವೇದಿಕೆಯನ್ನು ಸ್ಥಾಪಿಸಿದರು. ಸುಮಾರು ಮೂರು ತಿಂಗಳ ಹಿಂದೆ ‘ವೈ ಐ ಡಾನ್ಸ್‌ ಅಭಿಯಾನ ಆರಂಭವಾಗಿದೆ. ಈ ವರೆಗೆ 21 ಶಾಸ್ತ್ರೀಯ ನೃತ್ಯದ ಹಿರಿಯ ಕಲಾವಿದರು, 700ಕ್ಕೂ ಹೆಚ್ಚು ನೃತ್ಯಗಾರರು ಈ ವೇದಿಕೆಯಲ್ಲಿ ಭಾಗವಹಿಸಿದ್ದಾರೆ. 

ವೆಬ್‌ಸೈಟ್‌ನಲ್ಲಿರುವ ಸರಳಪ್ರಶ್ನೆಗೆ ಉತ್ತರಿಸುವಾಗಲೇ ನಮ್ಮ ಅಭಿವ್ಯಕ್ತಿಗೆ ದಾರಿ ತೆರೆದುಕೊಳ್ಳುತ್ತದೆ. ‘ನಾನೇಕೆ ನೃತ್ಯ ಮಾಡುತ್ತೇನೆ’ ಎಂಬುದೇ ಆ ಪ್ರಶ್ನೆ ಎಂದು ಬೋಸ್ಟನ್ ಮೂಲದ ಎಮಾನಿ ಹೇಳುತ್ತಾರೆ. ಮುಂಬೈನಲ್ಲಿ ವಿದ್ಯಾರ್ಥಿಯಾಗಿದ್ದ ಸಮಯದಿಂದಲೂ ಸ್ಪಿಕ್ ಮ್ಯಾಕೆ ವೇದಿಕೆಯ ಮೂಲಕ ಒಡನಾಟ ಹೊಂದಿದ್ದೆ. ನಂತರ ನ್ಯಾಷನಲ್‌ ಸೆಂಟರ್‌ ಫಾರ್‌ ದಿ ಪರ್ಫಾರ್ಮಿಂಗ್‌ ಆರ್ಟ್ಸ್‌‌ (ಎನ್‌ಸಿಪಿಎ) ಜತೆ ಒಡನಾಟ ಮುಂದುವರಿಯಿತು ಎನ್ನುತ್ತಾರೆ ಅವರು.   

ಸಮುದಾಯ ಬೆಸೆಯುವುದು: ನೃತ್ಯ ಕ್ಷೇತ್ರದ ಅನುಭವದ ಬಗ್ಗೆ ನರ್ತಕರನ್ನು ಮಾತನಾಡಿಸುವ ಯೋಚನೆ ಮೊದಲು ಬಂದದ್ದು ಅಮೆರಿಕದ ವರ್ಜಿನಿಯಾದ ಕೂಚಿಪುಡಿ ಯುವ ಕಲಾವಿದೆ ಸಾಹಿತ್ಯ ರಾಚಕೊಂಡ ಅವರಿಗೆ. 

‘ನಾವು ಆಲೋಚಿಸಿದಂತೆ ಈ ಕ್ಷೇತ್ರದ ಅನುಭವಿಗಳು ಮತ್ತು ಯುವ ಕಲಾವಿದರು ಏಕೆ ನೃತ್ಯ ಮಾಡುತ್ತಾರೆ ಎಂಬುದರ ಬಗ್ಗೆ ಮಾತನಾಡಿಸುವುದು ಮತ್ತು ಅವರ ಪ್ರದರ್ಶನದ ಪುಟ್ಟ ಕ್ಲಿಪ್‌ ಅನ್ನು ಈ ತಾಣದಲ್ಲಿ ಪ್ರದರ್ಶಿಸುವುದು... ಹೀಗೆ ಯೋಜನೆ ಹಾಕಿದೆವು. ಆದರೆ, ವೇದಿಕೆಗಳಲ್ಲಿ ನೇರ ಪ್ರದರ್ಶನಕ್ಕೆ ಅವಕಾಶ ಸಿಗದಿದ್ದಾಗ ನಿರಾಶೆಗೊಂಡ ಹಲವರನ್ನೂ ಕಂಡೆವು. ಅಂಥವರನ್ನು ಒಂದು ಕಡೆ ಸೇರಿಸಲು ಈ ವೇದಿಕೆ ಸಹಾಯ ಮಾಡಿತು’ ಎಂದು ಎಮಾನಿ ವಿವರಿಸುತ್ತಾರೆ. 

ಅಭಿಯಾನದಲ್ಲಿ ಭಾಗವಹಿಸಿದ್ದ ಕೂಚಿಪುಡಿ ಕಲಾವಿದೆ ಅನುರಾಧಾ ನೆಹರೂ ಅವರು ಕಲಾನಿಧಿ ನೃತ್ಯ ಸಂಸ್ಥೆಯ 25ನೇ ವಾರ್ಷಿಕೋತ್ಸವದಂದು ‘ನಾನೇಕೆ ನೃತ್ಯ ಮಾಡುತ್ತಿದ್ದೇನೆ’ ಎಂದು ಪ್ರಶ್ನಿಸಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ.

ಹೌದು ಈ ಪ್ರಶ್ನೆ ನನಗೆ ನೃತ್ಯ ಸ್ಫೂರ್ತಿಯ ಮೂಲವನ್ನು ಕಂಡು ಹಿಡಿಯಲು ಕಾರಣವಾಯಿತು. ನಾನು ಆತ್ಮಾವಲೋಕನ ಮಾಡಿಕೊಂಡೆ. ನಾನು ನನ್ನ ಸಹಕಲಾವಿದರ ಜತೆಗೆ ಅಧ್ಯಯನ ಮಾಡಿದ ಪ್ರಕಾರ, ‘ನಾವು ನಮ್ಮ ಆಯ್ಕೆಯ ಹಾದಿಯಲ್ಲಿ ನಡೆಯುತ್ತಿದ್ದೇವೆ. ನೃತ್ಯವು ನಮ್ಮ ಪರಂಪರೆಯೊಂದಿಗೆ ಬೆಸೆಯುತ್ತದೆ. ನಮಗೆ ಸ್ವಾತಂತ್ರ್ಯ ಎಂದರೇನು ಎಂಬುದರ ಅರ್ಥವನ್ನು ನೀಡುತ್ತದೆ. ಕಥೆ ಹೇಳಲು ಇದರಲ್ಲಿ ಅವಕಾಶವಿದೆ. ಕೊನೆಗೆ ಸಮುದಾಯದ ನಡುವೆ ಸ್ನೇಹ ಮತ್ತು ಬಂಧುತ್ವ ಬೆಳೆಸುತ್ತದೆ’ ಎನ್ನುತ್ತಾರೆ ಅನುರಾಧಾ. 

‘ವೈ ಐ ಡ್ಯಾನ್ಸ್‌’ ಸಣ್ಣಗೆ ಆರಂಭವಾಗಿ ಕೆಲಕಾಲ ಕಳೆಯುತ್ತಿದ್ದಂತೆಯೇ ಇಲ್ಲಿ ಶಾಸ್ತ್ರೀಯ ನೃತ್ಯಪಟುಗಳಾದ ಬಿರ್ಜು ಮಹಾರಾಜ್‌ ಮತ್ತು ರಾಜೇಂದ್ರ ಗಂಗಾನಿ (ಕಥಕ್‌), ರಾಮ ವೈದ್ಯನಾಥನ್‌ (ಭರತನಾಟ್ಯ) ಪ್ರತೀಷಾ ಸುರೇಶ್‌ (ಸತ್ರಿಯ–ಅಸ್ಸಾಮಿ) ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿದರು. ಅವರು ಮಾತ್ರವಲ್ಲ ಜ್ಯೋತಿ ಡಿ. ತೂಮರ್‌ (ಘೂಮರ್‌), ಆಸ್ತಾದ್ ಡೆಬೂ ಜನಪದ ನೃತ್ಯ ಪ್ರದರ್ಶಿಸಿದರು.  

‘ಇಲ್ಲಿ ಕುತೂಹಲವೆಂದರೆ 12 ವರ್ಷದ ಮಕ್ಕಳಿಂದ ಹಿಡಿದು 90 ವರ್ಷದ ಹಿರಿಯ ನಾಗರಿಕರವರೆಗೆ ಈ ವೇದಿಕೆಯಲ್ಲಿ ಭಾಗವಹಿಸಿದ್ದಾರೆ. ಅವರವರ ವಿಡಿಯೊ ತುಣುಕುಗಳನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ’ ಎಂದು ಎಮಾನಿ ನಗುತ್ತಾರೆ.

ಸರಪಣಿ ಪ್ರತಿಕ್ರಿಯೆ: ಹಿರಿಯ ಮಣಿಪುರಿ ಕಲಾವಿದೆ, ದರ್ಶನಾ ಜವೇರಿ, ಸೆಲ್ಫಿ ಮೋಡ್‌ನಲ್ಲಿ ತನ್ನನ್ನು ರೆಕಾರ್ಡ್ ಮಾಡುವ ಮೊದಲ ಕೆಲವು ಪ್ರಯತ್ನಗಳಲ್ಲಾದ ಅವಾಂತರಗಳ ಬಗ್ಗೆ ಹೇಳಿ ನಗುತ್ತಾರೆ. 

‘ಆದರೆ ನಾನು ಅದನ್ನೆಲ್ಲಾ ನಿರ್ವಹಿಸುತ್ತಿದ್ದೇನೆ - ಫೋನ್ ಅನ್ನು ಲ್ಯಾಂಡ್‌ಸ್ಕೇಪ್ ಮೋಡ್‌ನಲ್ಲಿ ಇರಿಸಿ ರೆಕಾರ್ಡ್‌ ಮಾಡುವ ವಿಧಾನಗಳನ್ನು ಕಲಿತಿದ್ದೇನೆ. ಕ್ಯಾಮೆರಾ ಸ್ಥಿರವಾಗಿ ಇದೆ ಎಂದು ಖಚಿತಪಡಿಸಿಕೊಳ್ಳುತ್ತೇನೆ. ಈಗಿನ ಫಲಿತಾಂಶದ ಬಗ್ಗೆ ನನಗೆ ಖುಷಿಯಿದೆ’ ಎಂದು ಹೇಳುತ್ತಾರೆ.

ಮುಂಬೈ ಮೂಲದ ನೃತ್ಯ ಅನುಭವಿಯೊಬ್ಬರ ಪ್ರಕಾರ, ಈ ನೃತ್ಯದ ಕ್ಲಿಪ್‌ ಕೂಡಾ ಆಂತರಿಕ ಸಂತೋಷವನ್ನು ಕೊಡುತ್ತದೆ. ಇದೇ ಮಾತನ್ನು ಅವರು ತಮ್ಮ ವಿಡಿಯೊ ಕ್ಲಿಪ್‌ನಲ್ಲಿ ಹೇಳಿಕೊಂಡಿದ್ದಾರೆ. ಜೀವನದ ಒತ್ತಡದ ದಿನಗಳ ಅವಧಿಯನ್ನು ನಿವಾರಿಸಲು ಇದು ನೆರವಾಗಿದೆ. ಈ ವಿಡಿಯೊ ಜನವರಿಯಲ್ಲಿ ಪ್ರದರ್ಶನಗೊಳ್ಳಲಿರುವ ನೃತ್ಯದ ಕೆಲವು ತುಣುಕುಗಳನ್ನೂ ಒಳಗೊಂಡಿದೆ. 

ದರ್ಶನಾ ಅವರಂತಹ ಹಿರಿಯ ಕಲಾವಿದರು ಮನೆಯಿಂದಲೇ ವಿಡಿಯೊ ಚಿತ್ರೀಕರಿಸುವ ವ್ಯವಸ್ಥೆ ಮಾಡಿಕೊಂಡಿರುವುದು, ಇಚ್ಛಾಶಕ್ತಿ ಪ್ರದರ್ಶಿಸಿರುವುದು ನಮ್ಮನ್ನು ವಿಸ್ಮಯಗೊಳಿಸಿದೆ ಎನ್ನುತ್ತಾರೆ ಎಮಾನಿ. 

ಕಲಾವಿದರ ವಿಡಿಯೋಗಳು ಅಪ್‌ಲೋಡ್‌ ಆಗುತ್ತಿದ್ದಂತೆಯೇ ಇನ್ನಷ್ಟು ಸಂಖ್ಯೆಯ ನೃತ್ಯಗಾರರು ತಾವು ಯಾಕೆ ನೃತ್ಯ ಮಾಡುತ್ತಿದ್ದೇವೆ ಎಂಬುದರ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಇದೊಂದು ಸರಪಣಿ ಪ್ರತಿಕ್ರಿಯೆ (ಚೈನ್‌ ರಿಯಾಕ್ಷನ್‌) ರೀತಿ ಇದೆ ಎಂದು ಇಂಡಿಯನ್‌ ರಾಗದ ಶರಣ್ಯ ಸ್ವಾಮಿನಾಥನ್‌ ಹೇಳುತ್ತಾರೆ. ಈ ವೇದಿಕೆಯಲ್ಲಿ ಈಗ 60ಕ್ಕೂ ಹೆಚ್ಚು ದೇಶಗಳ ಕಲಾವಿದರು ಇದ್ದಾರೆ. ನೃತ್ಯ ಕ್ಷೇತ್ರದಿಂದ ದೂರವಾದವರು ಮತ್ತೆ ಸೇರುವಂತಾಗಿದೆ. ಹಿರಿಯ ನೃತ್ಯಗಾರರಿಂದ ಪ್ರೇರಿತರಾಗಿ ತಮ್ಮ ನೃತ್ಯವನ್ನು ಮುಂದುವರಿಸುವ ಬಗ್ಗೆ ಆಲೋಚಿಸಿದ್ದಾರೆ. ಕಷ್ಟದ ಸಮಯದಲ್ಲಿ ಇನ್ನಷ್ಟು ಗಟ್ಟಿಯಾಗುವ ಬಗ್ಗೆ ಭಾವನೆ ವ್ಯಕ್ತಪಡಿಸಿದ್ದಾರೆ ಎಂದು ಅವರು ವಿವರಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು