ಶನಿವಾರ, ಸೆಪ್ಟೆಂಬರ್ 18, 2021
24 °C

ಶ್ವಾನ ಪಳಗಿಸಲೂ ಮಹಿಳೆಯರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪುರುಷರಿಗೇ ಸೀಮಿತ ಎಂದು ನಂಬಲಾಗಿದ್ದ ಸಾಕಷ್ಟು ಉದ್ಯಮಗಳಲ್ಲಿ ಇಂದು ಮಹಿಳೆಯರು ಕಾಲಿಟ್ಟಿದ್ದಾರೆ. ಅದರಲ್ಲಿ ಶ್ವಾನಗಳಿಗೆ ತರಬೇತಿ ನೀಡುವ ಉದ್ಯಮ ಕೂಡ ಹೊಸದಾಗಿ ಸೇರ್ಪಡೆಗೊಂಡಿದೆ.

ಬೆಂಗಳೂರಿಗರು ತಮ್ಮ ಪ್ರೀತಿಯ ಶ್ವಾನಗಳಿಗೆ ವಿಧೇಯತೆ ಕಲಿಸಲು ಈ ಮೊದಲು, ಪುರುಷ ತರಬೇತಿದಾರರನ್ನೇ ಹುಡುಕುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಈ ಉದ್ಯಮದಲ್ಲಿ ಮಹಿಳೆಯರು ಹೆಚ್ಚು ಹೆಸರು ಮಾಡುತ್ತಿದ್ದಾರೆ. 

ಮಹಿಳಾ ತರಬೇತಿದಾರರು ಶ್ವಾನಗಳಿಗೆ ಪ್ರೀತಿಯಿಂದ ತರಬೇತಿ ನೀಡುತ್ತಾರೆ ಎಂಬ ಭಾವನೆ ಹೆಚ್ಚಿದೆ. ‘ಶ್ವಾನಗಳಿಗೆ ಸಹಾಯ ಮಾಡಲು, ವಿಧೇಯತೆ ಕಲಿಸಲು ಖುಷಿಯಾಗುತ್ತದೆ. ಇದನ್ನು ನಾನು ಕೆಲಸ ಎಂದುಕೊಂಡಿಲ್ಲ, ಕಷ್ಟಪಟ್ಟು ಮಾಡುತ್ತೇನೆ’ ಎಂದು  ನಗರದಲ್ಲಿ ಶ್ವಾನ ತರಬೇತಿ ನೀಡುವ ನಿವೇದಿತಾ ಜತಿನ್‌ ಹೇಳುತ್ತಾರೆ.

ನಿವೇದಿತಾ ಜತಿನ್‌ ಅವರು ಮೊದಲಿನಿಂದಲೂ ಶ್ವಾನ ಪ್ರಿಯರು. ತಮ್ಮ ಮನೆಯ ಶ್ವಾನಕ್ಕೆ ವಿಧೇಯತೆ ಕಲಿಸುವುದಕ್ಕಾಗಿ ವೃತ್ತಿಪರ ತರಬೇತಿದಾರರನ್ನು ಹುಡುಕಿದರು. ಆದರೆ ಯಾರಿಂದಲೂ ಸರಿಯಾದ ಉತ್ತರ ಸಿಗಲಿಲ್ಲ. ಕ್ರಮೇಣ ಅವರೇ ಶ್ವಾನಗಳ ಮನಸ್ಥಿತಿ ಹಾಗೂ ವರ್ತನೆಗಳನ್ನು ಅಧ್ಯಯನ ಮಾಡಿದರು, ವೃತ್ತಿಪರ ತರಬೇತುದಾರರಾಗಿ ಬೆಳೆಯಲು ಅಗತ್ಯವಿರುವ ಕಲೆಗಳನ್ನು ಕಲಿತುಕೊಂಡರು. ಏಳು ವರ್ಷದ ಹಿಂದೆ ಸಾಫ್ಟ್‌ವೇರ್‌ ಕೆಲಸವನ್ನೂ ಬಿಟ್ಟು, ಇದೇ ವೃತ್ತಿಯಲ್ಲಿ ತೊಡಗಿಕೊಂಡರು. 

‘ಪ್ರಾಥಮಿಕ ಶಾಲೆಯ ಶಿಕ್ಷಕರು, ಹೇಗೆ ಮಕ್ಕಳ ಬೆಳವಣಿಗೆಯಲ್ಲಿ ಸಹಕರಿಸುತ್ತಾರೆ. ಏನೆಲ್ಲಾ ಪ್ರಾಥಮಿಕ ವಿದ್ಯೆಗಳನ್ನು ಕಲಿಸುತ್ತಾರೆ ಎಂಬುದನ್ನು ನೋಡಿದರೆ ಸಾಕು. ಅದನ್ನೇ ನಾವು ಶ್ವಾನಗಳಿಗೂ ವಿಸ್ತರಿಸಬಹುದು. ಅವುಗಳಿಗೂ ಅದೇ ರೀತಿ ತರಬೇತಿ ನೀಡಿದರೆ, ಶಿಕ್ಷಣ ಸಿಕ್ಕಂತೆಯೇ’ ಎಂಬುದು ಅವರ ಅಭಿಪ್ರಾಯ. 

ಮೊದಲಿಗೆ ಎದುರಾಗುವ ಸವಾಲುಗಳು?: ಶ್ವಾನಗಳ ತರಬೇತಿ ಅಷ್ಟು ಸುಲಭವಲ್ಲ. ಸಾಕಷ್ಟು ಸಂದರ್ಭಗಳಲ್ಲಿ ಶ್ವಾನದ ಮಾಲೀಕರು ತರಬೇತಿದಾರರೊಂದಿಗೆ ನಂಬಿಕೆ ಇಡುವುದಿಲ್ಲ. ಮನೆಯ ವಾತಾವರಣ ಕೂಡ ಶ್ವಾನಗಳ ಮೇಲೆ ಪರಿಣಾಮ ಬೀರಿರುತ್ತದೆ. ಬೇಗನೆ ಎಲ್ಲವನ್ನೂ ಕಲಿತುಕೊಳ್ಳಬೇಕು ಎಂಬ ಒತ್ತಡ ಹಾಕುತ್ತಾರೆ.

ಎಲ್ಲಾ ಶ್ವಾನಗಳಿಗೂ ತರಬೇತಿ ಅಗತ್ಯವಿದೆಯೇ?

ತರಬೇತುದಾರರ ಪ್ರಕಾರ ಹೌದು. ‘ಸೌಮ್ಯ ಸ್ವಭಾವದ ಶ್ವಾನಗಳಿಗೂ ತರಬೇತಿ ಬೇಕಾಗುತ್ತದೆ. ಎಲ್ಲಾ ಸಮಯದಲ್ಲಿಯೂ ಅವು ಒಂದೇ ರೀತಿ ವರ್ತಿಸುತ್ತವೆ ಎಂದು ಹೇಳಲಾಗುವುದಿಲ್ಲ. ಮಾಲೀಕರ ಮಾತುಗಳನ್ನು ಅವು ಕೇಳಬೇಕಾದರೆ ವಿಶೇಷವಾದ ತರಬೇತಿ ಬೇಕಾಗುತ್ತದೆ. ಎಲ್ಲಾ ವಯೋಮಾನದ ಶ್ವಾನಗಳಿಗೂ ತರಬೇತಿ ನೀಡಲಾಗುತ್ತದೆ’ ಎನ್ನುತ್ತಾರೆ ವರ್ತನಾಶಾಸ್ತ್ರಜ್ಞರಾದ ಸೈಲಿ ರಾಜಾಧ್ಯಕ್ಷ.

ತರಬೇತುದಾರರಿಗೆ ಇರಬೇಕಾದ ಲಕ್ಷಣಗಳು

‘ತಾಳ್ಮೆ ಇರಲೇಬೇಕು. ಶ್ವಾನಗಳ ವರ್ತನೆ ಅಧ್ಯಯನ ಮಾಡಿ, ಅವುಗಳಲ್ಲಿರುವ ಮಾನವೀಯ ಗುಣವನ್ನು ಹೆಚ್ಚಿಸುವುದು ಮುಖ್ಯ’ ಎಂದು ಸೈಲಿ ಹೇಳುತ್ತಾರೆ. 

ಶ್ವಾನಗಳಿಗೆ ಮುಖ್ಯವಾಗಿ ಕಲಿಸಬೇಕಾಗಿರುವುದು

‘ಬಹಳಷ್ಟು ಶ್ವಾನಗಳು ಮಾಲೀಕರೊಂದಿಗೆ ದಿನಪೂರ್ತಿ ಇರುತ್ತವೆ. ಅವರು ಕೆಲಸದಲ್ಲಿ ಬ್ಯುಸಿಯಾದ ಸಂದರ್ಭದಲ್ಲಿ ಶ್ವಾನಗಳ ವರ್ತನೆ ಕೂಡ ಬದಲಾಗುತ್ತದೆ. ಈ ವೇಳೆ ಸೌಮ್ಯವಾಗಿ ವರ್ತಿಸುವುದನ್ನು ಕಲಿಸಬೇಕಾಗುತ್ತದೆ. ವಾಯುವಿಹಾರಕ್ಕೆ ಹೋದ ಸಂದರ್ಭದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ಹೇಳಿಕೊಡಬೇಕು. ನಗರದ ಶ್ವಾನಗಳಾದರೆ, ಟ್ರಾಫಿಕ್‌ ಹಾಗೂ ಶಬ್ದಮಾಲಿನ್ಯಕ್ಕೆ ಹೊಂದಿಕೊಂಡಿರುತ್ತವೆ. ಮನೆಯಲ್ಲೇ ಇರುವ ಶ್ವಾನಗಳಾದರೆ ಇನ್ನೂ ಹೆಚ್ಚಿನ ತರಬೇತಿ ಬೇಕಾಗುತ್ತದೆ’ ಎನ್ನುತ್ತಾರೆ ನಿವೇದಿತಾ.

ಶುಲ್ಕ ಎಷ್ಟು?

ತರಬೇತುದಾರರು ಸಾಮಾನ್ಯವಾಗಿ ಒಂದು ಅವಧಿಗೆ ₹1,200ರವರೆಗೆ ಚಾರ್ಜ್‌ ಮಾಡುತ್ತಾರೆ. ಇದು ಆರಂಭಿಕ ತರಬೇತಿಯಾಗಿದ್ದರೆ ಮಾತ್ರ. ವರ್ತನೆ ಹಾಗೂ ಕ್ರೋಧವನ್ನು ತಡೆಯುವ ಅವಧಿಗಳಿಗೆ ಶುಲ್ಕ ಹೆಚ್ಚಿರುತ್ತದೆ.

ತರಬೇತಿ ವೇಳೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

ಚಿಕ್ಕ ವಯಸ್ಸಿನ ನಾಯಿಗಳಿಗೆ ತರಬೇತಿ ನೀಡುವಾಗ ಸುತ್ತಮುತ್ತಲಿನ ವಾತಾವರಣ ತುಂಬಾ ಮುಖ್ಯ. ಹೆಚ್ಚು ಜನರು ಇರುವ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳದಿರುವುದು ಒಳ್ಳೆಯದು.

ತರಬೇತಿ ವೇಳೆ ಶ್ವಾನಗಳಿಗೆ ಕ್ರೋಧ ಹೆಚ್ಚದಂತೆ ನೋಡಿಕೊಳ್ಳಬೇಕು. ಶ್ವಾನ ಹೆಚ್ಚು ಭಯದಿಂದ ಕೂಡಿದ್ದರೆ, ಯಾವುದಾದರೂ ವ್ಯಕ್ತಿ ಅಥವಾ ವಸ್ತು ನೋಡಿ ಹೆದರಿದ್ದರೆ, ಅಂತಹ ವೇಳೆ ತರಬೇತಿ ನೀಡದಿರುವುದು ಒಳ್ಳೆಯದು.

ಕೆಲವು ಶ್ವಾನಗಳು ಎಷ್ಟೇ ತರಬೇತಿ ನೀಡಿದರೂ ಬೇರೆಯವರನ್ನು ಕಚ್ಚುವುದು, ಹೆದರಿಸುವುದನ್ನು ಮುಂದುವರಿಸುತ್ತವೆ. ಅಂತಹ ಪ್ರಕರಣಗಳು ಇದ್ದಲ್ಲಿ, ಅದನ್ನು ನೇರವಾಗಿ ಶ್ವಾನಗಳ ಮಾಲೀಕರಿಗೆ ತಿಳಿಸುವುದು ಒಳ್ಳೆಯದು.
ಶಿರಿನ್‌ ಮರ್ಚೆಂಟ್ ಬಗ್ಗೆ

ಶ್ವಾನಗಳ ವರ್ತನೆ ಕುರಿತು ಅಧ್ಯಯನ ಮಾಡಿರುವ ಭಾರತದ ಮೊದಲ ಮಹಿಳೆ. 23 ವರ್ಷಗಳಿಂದ ಅವರು ತರಬೇತಿ ನೀಡುತ್ತಿದ್ದಾರೆ. ಸಾಂಪ್ರದಾಯಿಕ ತರಬೇತಿ ಪದ್ದತಿಗಳನ್ನು ಅವರು ಬದಲಾಯಿಸಿದರು. ಈ ಉದ್ಯಮಕ್ಕೆ ಸಕಾರಾತ್ಮಕತೆಯನ್ನು ಪರಿಚಯಿಸಿದರು.

‘ಥೆರಪಿ, ಚುರುಕುತನ ತರಬೇತಿ ಹಾಗೂ ವರ್ತನೆಯನ್ನು ಸರಿಪಡಿಸುವುದು ಹೆಚ್ಚು ಸವಾಲಿನಿಂದ ಕೂಡಿರುತ್ತದೆ. ತರಬೇತಿ ಹೊಂದಿದ ಶ್ವಾನಗಳು, ಅಂಗವಿಕಲರಿಗೆ, ವೃದ್ಧ ದಂಪತಿಗಳಿಗೆ ಸಹಾಯ ಮಾಡುತ್ತವೆ. ಪ್ರವಾಹದಂತಹ ಪರಿಸ್ಥಿತಿಯಲ್ಲಿ ಅವುಗಳನ್ನು ಬಳಸಲು ಕೂಡ ತರಬೇತಿ ನೀಡಬೇಕಾಗುತ್ತದೆ. ಮನೆಯಲ್ಲಿರುವ ಮಕ್ಕಳೊಂದಿಗೆ ಕೂಡ ಅವು ಹೊಂದಿಕೊಂಡು ಇರುತ್ತವೆ. ಈ ಎಲ್ಲಾ ಉದ್ದೇಶಗಳಿಂದ ತರಬೇತಿ ಅಗತ್ಯ’ ಎಂದು ಶಿರಿನ್ ಹೇಳುತ್ತಾರೆ.

ವಯಸ್ಸಾದ ಶ್ವಾನಗಳ ತರಬೇತಿ ಕಷ್ಟ

‘ಮೊದಲಿನಿಂದ ಇದ್ದ ವಾತಾವರಣ ಹಾಗೂ ವರ್ತನೆಯನ್ನು ವಯಸ್ಸಾದ ಶ್ವಾನಗಳು ಬೇಗನೆ ಮರೆಯುವುದಿಲ್ಲ. ನಮ್ಮ ಸಮಯ, ದುಡ್ಡು, ಬುದ್ದಿವಂತಿಕೆ ಎಲ್ಲವನ್ನೂ ಇವಕ್ಕೆ ಖರ್ಚು ಮಾಡಬೇಕಾಗುತ್ತದೆ’ ಎಂದು ಸೈಲಿ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು