ಶುಕ್ರವಾರ, ಏಪ್ರಿಲ್ 10, 2020
19 °C

‘ಗ್ರಾಮೊಫೋನ್ ಗರ್ಲ್‌’ ಗೌಹರ್‌ ಜಾನ್‌ಗೆ ಗೂಗಲ್‌ ಡೂಡಲ್‌ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಸಿದ್ಧ ಗಾಯಕಿ ಹಾಗೂ ನೃತ್ಯ ಕಲಾವಿದೆ ಮತ್ತು ‘ಗ್ರಾಮೊಫೋನ್‌ ಗರ್ಲ್‌’ ಎಂದೇ ಹೆಸರಾಗಿದ್ದ ಗೌಹರ್‌ ಜಾನ್‌ ಅವರ 145ನೇ ಜನ್ಮದಿನವಾದ ಇಂದು (ಜೂನ್ 26) ಗೂಗಲ್ ಅವರಿಗೆ ಡೂಡಲ್‌ ಗೌರವ ಸಲ್ಲಿಸಿದೆ. ಗೌಹರ್ ಜಾನ್ ಮೈಸೂರು ಸಂಸ್ಥಾನದ ಆಸ್ಥಾನ ಗಾಯಕಿಯಾಗಿದ್ದರು.

ಗೌಹರ್ ಜಾನ್‌ ಅವರು ತಮ್ಮ ಜೀವಿತಾವಧಿಯಲ್ಲಿ 10ಕ್ಕೂ ಹೆಚ್ಚು ಭಾಷೆಗಳಲ್ಲಿ 600ಕ್ಕಿಂತ ಹೆಚ್ಚಿನ ದಾಖಲೆಗಳನ್ನು ನಿರ್ಮಿಸಿದ್ದಾರೆ. ತಮ್ಮ ಕಲೆಯ ಪ್ರದರ್ಶನ ವೇಳೆ ಅವರು ‘ನನ್ನ ಹೆಸರು ಗೌಹರ್‌ ಜಾನ್‌’ ಎಂದು ಹೇಳಿಕೊಂಡಿದ್ದರು.
ಗೌಹರ್‌ ಜಾನ್‌ ಅವರನ್ನು ನೆನಪಿಸಿಕೊಂಡಿರುವ ಗೂಗಲ್ ತನ್ನ ಡೂಡಲ್‌ ಅನ್ನು ಭಾರತದ ಪ್ರಸಿದ್ಧ ಗಾಯಕಿ ಮತ್ತು ನೃತ್ಯ ಕಲಾವಿದೆಯಾಗಿರುವ ಅವರಿಗೆ ಮೀಸಲಿಟ್ಟಿದೆ. 

ಗೌಹರ್‌ ಜಾನ್‌ 1873ರ ಜೂನ್‌ 26ರಂದು ಜನಿಸಿದ್ದರು. ಭಾರತ ಪ್ರಸಿದ್ಧ ಗ್ರಾಮೊಫೋನ್ ಕಂಪನಿಯೊಂದರಲ್ಲಿ ಹಾಡಿದ ಮೊದಲ ಗಾಯಕಿ ಹಾಗೂ ಅದು ಗ್ರಾಮೊಫೋನ್‌ನ ಮೊದಲ ಸಂಗೀತ ಧ್ವನಿ ಮುದ್ರಣವೂ ಆಗಿದೆ. ಇದಕ್ಕಾಗಿ ಕಂಪನಿ ಅವರನ್ನು ‘‍ಗ್ರಾಮೊಫೋನ್‌ ಗರ್ಲ್‌’ ಎಂದೇ ಹೆಸರಿಸಿತ್ತು. 

ಏಂಜಲೀನಾ ಯೆವರ್ಡ್‌ ಎಂಬುದು ಗೌಹರ್‌ ಜಾನ್‌ ಅವರ ಹುಟ್ಟು ಹೆಸರು. ಬನಾರಸ್‌ನಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರವಾದ ಬಳಿಕ ಅವರು ತಮ್ಮ ಹೆಸರನ್ನು ಬದಲಿಸಿಕೊಂಡರು. ಅವರ ತಾಯಿ ಪ್ರಸಿದ್ಧ ಕಥಕ್‌ ನೃತ್ಯಗಾರ್ತಿ ಹಾಗೂ ಗಾಯಕಿಯಾಗಿದ್ದ ವಿಕ್ಟೋರಿಯಾ ಹೆಮ್ಮಿಂಗ್ಸ್‌. ಅವರೂ ಸಹ ಭಾರತೀಯ ಹೆಸರಾದ ಮಾಲ್ಕ ಜಾನ್‌ ಎಂದು ಬದಲಿಸಿಕೊಂಡಿದ್ದರು.

ಕೋಲ್ಕತ್ತಾಕ್ಕೆ ತೆರಳಿದ ಇಬ್ಬರೂ ನವಾಬ್‌ ವಾಜಿದ್‌ ಅಲಿ ಶಾ ಅವರ ಆಸ್ಥಾನದಲ್ಲಿ ಸ್ಥಾನ ಪಡೆದರು. ಗೌಹರ್ ತಮ್ಮ ಮೊದಲ ನೃತ್ಯ ಪ್ರದರ್ಶನವನ್ನು 1887ರಲ್ಲಿ ದರ್ಬಾಂಗ್‌ ರಾಜ್‌ನ ರಾಯಲ್‌ ಆಸ್ಥಾನದಲ್ಲಿ ನೀಡಿದರು. ಬನಾರಸ್‌ನಲ್ಲಿ ವೃತ್ತಿಪರ ನೃತ್ಯಕಾರರಿಂದ ಪೂರ್ಣವಾಗಿ ಸಂಗೀತ ಮತ್ತು ನೃತ್ಯ ತರಬೇತಿ ಪಡೆದ ಬಳಿಕ ಆಸ್ಥಾನದ ಸಂಗೀತ ಮತ್ತು ನೃತ್ಯಗಾರ್ತಿಯಾಗಿ ನೇಮಕಗೊಂಡರು. ಈ ಮೂಲಕ ‘ಮೊದಲ ನೃತ್ಯ ಹುಡುಗಿ’ ಎಂದು ಕರೆಯಲ್ಪಟ್ಟರು.

ಗೌಹರ್‌ ಜಾನ್‌ ಅಂತಿಮ ದಿನಗಳು

ನಂತರದ ದಿನಗಳಲ್ಲಿ ಗೌಹರ್‌ ಜಾನ್‌ ಭಾರತದಾದ್ಯಂತ ಪ್ರವಾಸ ಮಾಡಿ ಹಲವಾರು ಪ್ರದರ್ಶನಗಳನ್ನು ನೀಡಿದರು. ಅವರ ಹಿಂದೂಸ್ತಾನಿ ಮತ್ತು ಉರ್ದು ಹಾಡುಗಳನ್ನು ವಿವಿಧ ಭಾಷೆಗಳಲ್ಲಿ ಪ್ರಕಟಿಸಲಾಯಿತು. ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣ ರಾಜ ಒಡೆಯರ್‌ ಅವರ ಆಮಂತ್ರಣದ ಮೇರೆಗೆ ಮೈಸೂರಿಗೆ ಗೌಹರ್ ಜಾನ್ ಬಂದಿದ್ದರು. 1928ರ ಆಗಸ್ಟ್‌ 1ರಂದು ಅವರಿಗೆ ‘ಅರಮನೆ ಗಾಯಕಿ’ಯ ಗೌರವ ಸಿಕ್ಕಿತು.

ಗೌಹರ್ ಜಾನ್‌ ಅವರು 1902ರಿಂದ 1920ರ ಮಧ್ಯೆ ಬಂಗಾಳಿ, ಗುಜರಾತಿ, ತಮಿಳು, ಮರಾಠಿ, ಅರೆಬಿಕ್‌, ಪರ್ಷಿಯನ್‌, ಫ್ರೆಂಚ್ ಮತ್ತು ಇಂಗ್ಲಿಷ್ ಸೇರಿದಂತೆ 10ಕ್ಕೂ ಹೆಚ್ಚು ಭಾಷೆಗಳಲ್ಲಿ 600ಕ್ಕಿಂತ ಹೆಚ್ಚಿನ ದಾಖಲೆಗಳನ್ನು ನಿರ್ಮಿಸಿದ್ದಾರೆ. ಠುಮ್ರಿ, ದಾದ್ರ, ಕಾಜ್ರಿ, ಛೈತ್, ಭಜನ್‌ ಮತ್ತು ತರಣ ಪ್ರದರ್ಶನಗಳೊಂದಿಗೆ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನು ಜನಪ್ರಿಯಗೊಳಿಸಿದರು. ಜತೆಗೆ, ವಿಸ್ತಾರವಾದ ಹಿಂದುಸ್ತಾನಿ ಶಾಸ್ತ್ರೀಯ ಶೈಲಿಯ ಸಂಗೀತ ಪ್ರದರ್ಶನವನ್ನು ಕೇವಲ ಮೂರುವರೆ ನಿಮಿಷಕ್ಕೆ ಧ್ವನಿ ಮುದ್ರಣ ಮಾಡುವ ತಂತ್ರವನ್ನು ಕರತಲಾಮಲಕ ಮಾಡಿಕೊಂಡಿದ್ದರು.

ಗೌಹರ್‌ ಜಾನ್‌ ಅವರು 1930ರ ಜನವರಿ 17ರಂದು ಮೈಸೂರಿನಲ್ಲಿ ನಿಧರಾದರು.

ಗೌಹರ್‌ ಜಾನ್‌ ಅವರ ಹಾಡುಗಾರಿಕೆಯ ಠುಮ್ರಿ ಸಂಗೀತ ಕೇಳಲು ಇಲ್ಲಿ ಕ್ಲಿಕ್ಕಿಸಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು